ಚೆನ್ನೈ: ಈ ಐಪಿಎಲ್‌ನಲ್ಲಿ ಮೊದಲ ಸೋಲುಂಡ ಚೆನ್ನೈ ಎರಡೇ ದಿನದಲ್ಲಿ ಗೆಲುವಿನ ಹಳಿ ಏರುವಲ್ಲಿ ಯಶಸ್ವಿಯಾಗಿದೆ. ಶನಿವಾರ ತವರಿನ ಮುಖಾಮುಖೀಯಲ್ಲಿ ಪಂಜಾಬ್ ವಿರುದ್ಧ 22 ರನ್ನುಗಳ ಜಯ ಸಾಧಿಸಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ 3 ವಿಕೆಟಿಗೆ 160 ರನ್ ಗಳಿಸಿತು. ಜವಾಬಿತ್ತ ಪಂಜಾಬ್ 5 ವಿಕೆಟ್‌ಗಳನ್ನು ಕೈಲಿರಿಸಿಕೊಂಡೂ 138 ರನ್ ಮಾತ್ರ ಗಳಿಸಿತು. ಕೆ.ಎಲ್. ರಾಹುಲ್ (55) ಮತ್ತು ಸಫìರಾಜ್ ಖಾನ್ (67) 3ನೇ ವಿಕೆಟಿಗೆ 110 ರನ್ ಪೇರಿಸಿದರೂ ಪಂಜಾಬ್‌ಗ ಗೆಲುವು ಕೈಹಿಡಿಯಲಿಲ್ಲ. ಇಬ್ಬರೂ ನಿಧಾನ ಗತಿಯಲ್ಲಿ ಬ್ಯಾಟಿಂಗ್ ನಡೆಸಿದ್ದು ಪಂಜಾಬ್‌ಗ ಅಡ್ಡಿಯಾಗಿ ಪರಿಣಮಿಸಿತು. ಹರ್ಭಜನ್ ಸಿಂಗ್ ಬಿಗಿ ದಾಳಿ ಸಂಘಟಿಸಿ (4-1-17-2) ಚೆನ್ನೈ ಜಯದಲ್ಲಿ ಮಹತ್ವದ ಪಾತ್ರ ವಹಿಸಿದರು.
ಚೆನ್ನೈ ಪರ ಫಾ ಡು ಪ್ಲೆಸಿಸ್ ಬಿರುಸಿನ ಆಟವಾಡಿ 38 ಎಸೆತಗಳಿಂದ 54 ರನ್ ಸಿಡಿಸಿದರು (2 ಬೌಂಡರಿ, 4 ಸಿಕ್ಸರ್). ನಾಯಕ ಧೋನಿ (37) ಮತ್ತು ಅಂಬಾಟಿ ರಾಯುಡು (21) ಅವರದು ಅಏಜೇಯ ಆಟ.
ತವರಿನಂಗಳದಲ್ಲಿ ಆಡಿದ ಪಂಜಾಬ್ ನಾಯಕ ಆರ್. ಅಶ್ವಿನ್ ಬೌಲಿಂಗಿನಲ್ಲಿ ಮಿಂಚಿದರು. ಆದರೆ ಫಲಿತಾಂಶದ ವಿಷಯದಲ್ಲಿ ನತದೃಷ್ಟರೆನಿಸಿದರು.
ಸಂಕ್ಷಿಪ್ತ ಸ್ಕೋರ್: ಚೆನ್ನೈ-3 ವಿಕೆಟಿಗೆ 160 (ಡು ಪ್ಲೆಸಿಸ್ 54, ವಾಟ್ಸನ್ 26, ರೈನಾ 17, ಧೋನಿ ಔಟಾಗದೆ 37, ರಾಯುಡು ಔಟಾಗದೆ 21, ಆರ್. ಅಶ್ವಿನ್ 23ಕ್ಕೆ 3). ಪಂಜಾಬ್-5 ವಿಕೆಟಿಗೆ 138 (ಸಫìರಾಜ್ 67, ರಾಹುಲ್ 55, ಹರ್ಭಜನ್ 17ಕ್ಕೆ 2, ಕ್ಯುಗೆಲೀನ್ 37ಕ್ಕೆ 2). ಪಂದ್ಯಶ್ರೇಷ್ಠ: ಹರ್ಭಜನ್ ಸಿಂಗ್.