Advertisement

ಧೋನಿ ಪಡೆಗೆ ಕಾದಿದೆ “ಕ್ಯಾಪಿಟಲ್‌ ಟೆಸ್ಟ್‌’

09:33 AM Mar 29, 2019 | Team Udayavani |

ಹೊಸದಿಲ್ಲಿ: ಉದ್ಘಾಟನಾ ಐಪಿಎಲ್‌ ಪಂದ್ಯದಲ್ಲಿ ಆರ್‌ಸಿಬಿಯನ್ನು ಸಣ್ಣ ಮೊತ್ತಕ್ಕೆ ಉದುರಿಸಿ ಗೆಲುವಿನ ಸಂಭ್ರಮ ಆಚರಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಮಂಗಳವಾರ ನಿಜವಾದ ಸವಾಲು ಎದುರಾಗಲಿದೆ.

Advertisement

ಹಾಲಿ ಚಾಂಪಿಯನ್ನರು ಕೋಟ್ಲಾ ಅಂಗಳದಲ್ಲಿ “ಕ್ಯಾಪಿಟಲ್‌ ಟೆಸ್ಟ್‌’ಗೆ ಅಣಿಯಾಗಬೇಕಿದೆ. ರವಿವಾರವಷ್ಟೇ ಮುಂಬೈಯನ್ನು ಅವರದೇ ಅಂಗಳದಲ್ಲಿ ಉರುಳಿಸಿದ ಉತ್ಸಾಹ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ್ದು.

ಧೋನಿ ಪಡೆ ಹೆಚ್ಚು ಅನುಭವಿಗಳಿಂದ ಕೂಡಿದ್ದರೆ, ಹೆಸರು ಬದಲಾಯಿಸಿಕೊಂಡಿರುವ ಡೆಲ್ಲಿ ಯುವ ಪಡೆಯನ್ನು ನೆಚ್ಚಿಕೊಂಡಿದೆ. ಅದರಲ್ಲೂ 21ರ ಹರೆಯದ ರಿಷಬ್‌ ಪಂತ್‌ ಅವರ ಘಾತಕ ಫಾರ್ಮ್ ಮೊದಲ ಪಂದ್ಯದಲ್ಲೇ ಅನಾವರಣಗೊಂಡಿದ್ದು, ತವರಲ್ಲೂ ಅವರಿಂದ ಇಂಥದೇ ಇನ್ನಿಂಗ್ಸ್‌ ಪುನರಾವರ್ತನೆಗೊಳ್ಳಲಿ ಎಂಬುದು ಅಭಿಮಾನಿಗಳ ಹಾರೈಕೆ. ಮುಂಬೈ ಎದುರಿನ 37 ರನ್‌ ಗೆಲುವಿನ ವೇಳೆ ಪಂತ್‌ 27 ಎಸೆತಗಳಿಂದ 78 ರನ್‌ ಸಿಡಿಸಿದ್ದರು.

ಎಡಗೈ ಆರಂಭಕಾರ ಶಿಖರ್‌ ಧವನ್‌ ಕೂಡ ತವರಿನಲ್ಲಿ ಆಡಲಿದ್ದು, ಮುಂಬೈ ವಿರುದ್ಧ 43 ರನ್‌ ಬಾರಿಸಿ ಉತ್ತಮ ಫಾರ್ಮ್ ಪ್ರದರ್ಶಿಸಿದ್ದರು. ಪೃಥ್ವಿ ಶಾ, ನಾಯಕ ಶ್ರೇಯಸ್‌ ಅಯ್ಯರ್‌, ಕಾಲಿನ್‌ ಇನ್‌ಗಾಮ್‌ ಅವರೆಲ್ಲ ಡೆಲ್ಲಿ ತಂಡದ ಇತರ ಪ್ರಮುಖ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ದಕ್ಷಿಣ ಆಫ್ರಿಕಾದ ಆಲ್‌ರೌಂಡರ್‌ ಕ್ರಿಸ್‌ ಮಾರಿಸ್‌ ಸೇರ್ಪಡೆಗೊಂಡರೆ ತಂಡ ಹೆಚ್ಚು ಸಮತೋಲನವಾಗಿ ಗೋಚರಿಸಲಿದೆ.

ಡೆಲ್ಲಿ ಬೌಲಿಂಗ್‌ ವಿಭಾಗ ಕೂಡ ಹೆಚ್ಚು ವೈವಿಧ್ಯಮಯವಾಗಿದೆ. ವೇಗಿಗಳಾದ ಟ್ರೆಂಟ್‌ ಬೌಲ್ಟ್, ಕಾಗಿಸೊ ರಬಾಡ, ಇಶಾಂತ್‌ ಶರ್ಮ, ಕೀಮೊ ಪೌಲ್‌ ಅಪಾಯಕಾರಿ ಬೌಲರ್‌ಗಳಾಗಿದ್ದಾರೆ. ಅಕ್ಷರ್‌ ಪಟೇಲ್‌, ಅಮಿತ್‌ ಮಿಶ್ರಾ ಪ್ರಮುಖ ಸ್ಪಿನ್‌ ಅಸ್ತ್ರವಾಗಿದ್ದಾರೆ.

Advertisement

ಹಾಲಿ ಚಾಂಪಿಯನ್‌ ಚೆನ್ನೈ ಬ್ಯಾಟಿಂಗ್‌ ವಿಭಾಗ ಬಲಿಷ್ಠವಾಗಿದ್ದರೂ ಆರ್‌ಸಿಬಿ ವಿರುದ್ಧ 71 ರನ್‌ ಚೇಸ್‌ ಮಾಡಲು 17.4 ಓವರ್‌ ತೆಗೆದುಕೊಂಡಿತ್ತು. ಅಲ್ಲಿ 10 ಎಸೆತ ಎದುರಿಸಿದ ವಾಟ್ಸನ್‌ ಖಾತೆಯನ್ನೇ ತೆರೆದಿರಲಿಲ್ಲ. ಉಳಿದಂತೆ ಅಂಬಾಟಿ ರಾಯುಡು, ಸುರೇಶ್‌ ರೈನಾ, ಕೇದಾರ್‌ ಜಾಧವ್‌, ರವೀಂದ್ರ ಜಡೇಜ ಟಿ20 ಜೋಶ್‌ ತೋರಿರಲಿಲ್ಲ. ನಾಯಕ ಧೋನಿ, ಆಲ್‌ರೌಂಡರ್‌ ಬ್ರಾವೋಗೆ ಕ್ರೀಸ್‌ ಇಳಿಯುವ ಅವಕಾಶ ಲಭಿಸಿರಲಿಲ್ಲ. ಚೆನ್ನೈಯಂತೆ ದಿಲ್ಲಿ ಪಿಚ್‌ ಕೂಡ ನಿಧಾನ ಗತಿಯಿಂದ ಕೂಡಿದ್ದರೆ ಹೊಡಿಬಡಿ ಆಟ ಕಂಡುಬರುವ ಸಾಧ್ಯತೆ ಕಡಿಮೆ.

ಸ್ಪಿನ್ನಿಗೆ ತಿರುಗೀತೇ ಕೋಟ್ಲಾ?
ಫಿರೋಜ್‌ ಶಾ ಕೋಟ್ಲಾ ಟ್ರ್ಯಾಕ್‌ ಸ್ಪಿನ್ನಿಗೆ ನೆರವು ನೀಡುವ ಸಾಧ್ಯತೆ ಇರುವುದರಿಂದ ಇದು ಚೆನ್ನೈಗೆ ಹೆಚ್ಚು ಲಾಭ ತಂದೀತು ಎಂಬುದೊಂದು ನಿರೀಕ್ಷೆ. ಕಾರಣ, ಚೆನ್ನೈ ಸ್ಪಿನ್‌ ವಿಭಾಗ ಹೆಚ್ಚು ಬಲಿಷ್ಠವಾಗಿದೆ. ಹರ್ಭಜನ್‌ ಸಿಂಗ್‌, ಇಮ್ರಾನ್‌ ತಾಹಿರ್‌ ಮತ್ತು ರವೀಂದ್ರ ಜಡೇಜ ಅವರ ತ್ರಿವಳಿ ದಾಳಿ ಯಶಸ್ಸು ಕಂಡರೆ ಡೆಲ್ಲಿ ತವರಲ್ಲೇ ರನ್ನಿಗಾಗಿ ಪರದಾಡಬೇಕಾದೀತು. ಈ ಮೂವರೇ ಸೇರಿಕೊಂಡು ಉದ್ಘಾಟನಾ ಪಂದ್ಯದಲ್ಲಿ ಕೊಹ್ಲಿ ಪಡೆಯ ಕತೆ ಮುಗಿಸಿದ ನಿದರ್ಶನ ಎದುರಿಗಿದೆ.

Advertisement

Udayavani is now on Telegram. Click here to join our channel and stay updated with the latest news.

Next