Advertisement
ಇದು ರಾಯಲ್ ಚಾಲೆಂಜರ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ಸದ್ಯದ ಸ್ಥಿತಿ. 2018ರ ಐಪಿಎಲ್ ಅರ್ಧ ಹಾದಿ ಕ್ರಮಿಸಿದ್ದು, ಸಮಾನ ದುಃಖೀಗಳಾಗಿರುವ ಎರಡೂ ತಂಡಗಳು ಮುಂದಿನ ಹಾದಿ ಏನು ಎತ್ತ ಎಂಬ ಬೃಹದಾಕಾರದ ಪ್ರಶ್ನೆಯೊಂದಿಗೆ ಮಂಗಳವಾರ ರಾತ್ರಿ 2ನೇ ಸುತ್ತಿನ ಪಂದ್ಯ ದಲ್ಲಿ ಪರಸ್ಪರ ಮುಖಾಮುಖೀಯಾಗಲು ಅಣಿಯಾಗಿವೆ. ಗೆದ್ದ ತಂಡ ಒಂದಿಷ್ಟು ಉಸಿರಾಡಲಾರಂಭಿಸಿದರೆ, ಸೋತ ತಂಡದ ಸ್ಥಿತಿ ಚಿಂತಾಜನಕವಾಗುವುದರಲ್ಲಿ ಅನುಮಾನವಿಲ್ಲ.
ಅನುಮಾನವೇ ಇಲ್ಲ, ಆರ್‌ಸಿಬಿ ಕ್ರಿಕೆಟ್ ವಿಶ್ವದ ಖ್ಯಾತ ಬಿಗ್‌ಹಿಟ್ಟರ್‌ಗಳನ್ನು ಹೊಂದಿರುವ ತಂಡ. ಮೆಕಲಮ್, ಡಿ ಕಾಕ್, ಎಬಿಡಿ, ಕೊಹ್ಲಿ, ಆ್ಯಂಡರ್ಸನ್, ಮನ್‌ದೀಪ್… ಹೀಗೆ ಸಾಗುತ್ತದೆ ಇವರ ಬ್ಯಾಟಿಂಗ್ ಲೈನ್‌ಅಪ್. ಇವರಲ್ಲಿ ಇಬ್ಬರು ಸಿಡಿದು ನಿಂತರೂ ಸ್ಕೋರ್‌ಬೋರ್ಡ್ ನಲ್ಲಿ 200 ರನ್ ಗ್ಯಾರಂಟಿ. ಆದರೆ ಇಷ್ಟು ರನ್ ಪೇರಿಸಿದರೂ ಇದನ್ನು ಉಳಿಸಿಕೊಡಬೇಕಾದ ಸಾಮರ್ಥ್ಯ ಆರ್‌ಸಿಬಿ ಬೌಲಿಂಗ್ ವಿಭಾಗದಲ್ಲಿ ಇಲ್ಲ ಎನ್ನುವುದೇ ದೊಡ್ಡ ದುರಂತ!
Related Articles
Advertisement
ಮುಂಬೈ ವಿರುದ್ಧ “ವಾಂಖೇಡೆ’ಯಲ್ಲಿ ಆಡಿದ ಮೊದಲ ಸುತ್ತಿನ ಪಂದ್ಯದಲ್ಲಿ ಆರ್‌ಸಿಬಿ ಬೌಲರ್‌ಗಳು ಸಿಕ್ಕಾಪಟ್ಟೆ ದುಬಾರಿಯಾಗಿದ್ದರು. ಮುಂಬೈ 6 ವಿಕೆಟಿಗೆ 213 ರನ್ ಪೇರಿಸಿ ಸವಾಲೊಡ್ಡಿತ್ತು. ಜವಾಬಿತ್ತ ಬೆಂಗಳೂರು 8ಕ್ಕೆ 167 ರನ್ ಮಾಡಿ 46 ರನ್ನುಗಳ ಸೋಲುಂಡಿತ್ತು.
ಬೌಲಿಂಗ್ ವೈಫಲ್ಯದಿಂದ ಹೊರಬಂದರಷ್ಟೇ ರಾಯಲ್ ಚಾಲೆಂಜರ್ ಮೇಲೆ ಭರವಸೆ ಇರಿಸಬಹುದು. ಯಾದವ್, ಚಾಹಲ್, ಎಂ. ಅಶ್ವಿನ್, ಸೌಥಿ, ಸಿರಾಜ್, ವಾಷಿಂಗ್ಟನ್ ಅವರೆಲ್ಲ ಹೆಚ್ಚು ಘಾತಕವಾಗಬೇಕಿದೆ.
ಮುಂಬೈ ಆಟ ಮುಗಿದಿಲ್ಲ!ಮುಂಬೈ ಇಂಡಿಯನ್ಸ್‌ಗೆ ಆರಂಭಿಕ ಸೋಲು ಗಳು ಹೊಸತೇನಲ್ಲ. ಈ ಸೋಲುಗಳನ್ನು ಮೀರಿಯೂ ರೋಹಿತ್ ಪಡೆ ಕಪ್ ಎತ್ತಿದ ದೃಷ್ಟಾಂತ ಕಣ್ಣಮುಂದಿದೆ. ಹೀಗಾಗಿ ಮುಂಬೈ ಆಟ ಮುಗಿಯಿತು ಎಂದು ಹೇಳುವಂತಿಲ್ಲ. ಚೆನ್ನೈ ವಿರುದ್ಧ 170 ರನ್ ಬೆನ್ನಟ್ಟುವಾಗ ಮುಂಬೈಯ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳೆಲ್ಲರೂ ಕ್ಲಿಕ್ ಆಗಿದ್ದರು. ಕೇವಲ 2 ವಿಕೆಟ್ ನಷ್ಟದಲ್ಲಿ ಮುಂಬೈ ಈ ಮೊತ್ತವನ್ನು ಹಿಂದಿಕ್ಕಿತ್ತು. ಅಜೇಯ 56 ರನ್ ಬಾರಿಸಿದ ರೋಹಿತ್ ಶರ್ಮ ಫಾರ್ಮ್ ಕಂಡುಕೊಂಡದ್ದೊಂದು ಹೆಚ್ಚುಗಾರಿಕೆ. ಮೆಕ್ಲೆನಗನ್, ಬುಮ್ರಾ, ಮಾರ್ಕಂಡೆ, ಪಾಂಡ್ಯಾಸ್ ಅವರನ್ನು ಒಳಗೊಂಡ ಮುಂಬೈ ಬೌಲಿಂಗ್ ವಿಭಾಗವೂ ವೈವಿಧ್ಯಮಯವಾಗಿದೆ. ಸೋತವರು
ಆರ್‌ಸಿಬಿ, ಮುಂಬೈಗೆ ತವರು ನೆಲವೆನ್ನುವುದು ಇನ್ನೂ ಅದೃಷ್ಟದ ತಾಣವಾಗಿ ಗೋಚರಿಸದಿರು ವುದು ಮತ್ತೂಂದು ದುರಂತ. ಹೀಗಾಗಿ ಈ ಮರು ಪಂದ್ಯ ಬೆಂಗಳೂರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ನಡೆಯಲಿದೆಯಾದರೂ ಇಲ್ಲಿ ಆರ್‌ಸಿಬಿ ಗೆಲ್ಲುತ್ತದೆಂದು ಹೇಳಲು ಧೈರ್ಯ ಸಾಲದು. ರವಿವಾರ ರಾತ್ರಿಯಷ್ಟೇ ಇದೇ ಅಂಗಳದಲ್ಲಿ ಕೆಕೆಆರ್ ಕೈಯಲ್ಲಿ ಹೊಡೆತ ತಿಂದ ನೋವು ಇನ್ನೂ ಗುಣಮುಖವಾಗಿಲ್ಲ. ಇನ್ನೊಂದೆಡೆ ಮುಂಬೈ ತನ್ನೆರಡು ಗೆಲುವುಗಳಲ್ಲಿ ಒಂದನ್ನು ಹಿಂದಿನ ಪಂದ್ಯದಲ್ಲಷ್ಟೇ ಒಲಿಸಿಕೊಂಡ ಸಮಾಧಾನದಲ್ಲಿದೆ. ಎ. 28ರಂದು ಚೆನ್ನೈ ವಿರುದ್ಧ ಪುಣೆಯಲ್ಲಿ ನಡೆದ ಮುಖಾಮುಖೀಯಲ್ಲಿ ರೋಹಿತ್ ಪಡೆ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು.