Advertisement

ಐಪಿಎಲ್‌ಗ‌ೂ ಮುನ್ನ ರಾಯಲ್ಸ್‌, ಸನ್‌ಗೆ ಸಂಕಟ

06:35 AM Mar 26, 2018 | |

ಕೇಪ್‌ಟೌನ್‌: ಎರಡು ವರ್ಷ ನಿಷೇಧ ಮುಗಿಸಿ 11ನೇ ಆವೃತ್ತಿ ಐಪಿಎಲ್‌ (ಇಂಡಿಯನ್‌ ಪ್ರೀಮಿಯರ್‌ ಲೀಗ್‌)ಗೆ ವಾಪಸ್‌
ಆಗುತ್ತಿರುವ ರಾಜಸ್ಥಾನ್‌ ರಾಯಲ್ಸ್‌ಗೆ ಕೂಟ ಆರಂಭಕ್ಕೂ ಮೊದಲೇ ಆಘಾತ ಎದುರಾಗಿದೆ.

Advertisement

ರಾಯಲ್ಸ್‌ ನಾಯಕ ಸ್ಟೀವನ್‌ ಸ್ಮಿತ್‌ ಸಹ ಆಟಗಾರ ಕ್ಯಾಮರೂನ್‌ ಬ್ಯಾನ್‌ಕ್ರಾಫ್ಟ್ ಅವರು ನಡೆಸಿದ ಚೆಂಡು ವಿರೂಪದಿಂದಾಗಿ ಆಸ್ಟ್ರೇಲಿಯಾ ತಂಡದ ನಾಯಕತ್ವ ಕಳೆದುಕೊಂಡರು. ಜತೆಗೆ ಒಂದು ಪಂದ್ಯದ ನಿಷೇಧ,ಶೇ.100ರಷ್ಟು ದಂಡಕ್ಕೆ ತುತ್ತಾಗಿದ್ದಾರೆ. ಇದೀಗ ರಾಜಸ್ಥಾನ್‌ ರಾಯಲ್ಸ್‌ ತಂಡದಿಂದ ಅವರು ಹೊರಬೀಳುವ ಅಥವಾ ನಾಯಕತ್ವದಿಂದ ಕೆಳಕ್ಕೆ ಇಳಿಯುವ ಎಲ್ಲ ಸಾಧ್ಯತೆಗಳು ಕಂಡು ಬರುತ್ತಿವೆ. ಜತೆಗೆ ಸನ್‌ರೈಸರ್ ಹೈದರಾಬಾದ್‌ ತಂಡದ ಪ್ರಮುಖ ಆಟಗಾರ ಡೇವಿಡ್‌ ವಾರ್ನರ್‌ ಐಪಿಎಲ್‌ ಭವಿಷ್ಯ ಕೂಡ ತೂಗುಯ್ನಾಲೆಯಲ್ಲಿದೆ. ಇದು ಐಪಿಎಲ್‌ ಫ್ರಾ.ಚೈಸಿಗಳ ತಲೆ ನೋವಿಗೆ ಕಾರಣವಾಗಿದೆ.

ರಹಾನೆಗೆ ನಾಯಕತ್ವ?: ಒಂದು ವೇಳೆ ಸ್ಮಿತ್‌ ಅವರನ್ನು ರಾಜಸ್ಥಾನ್‌ ರಾಯಲ್ಸ್‌ನಿಂದ ಕೆಳಕ್ಕೆ ಇಳಿಸಿದರೆ ಅಜಿಂಕ್ಯ ರಹಾನೆ ತಂಡದ ನಾಯಕನಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ರಾಜಸ್ಥಾನ್‌ ಕಾದು ನಿರ್ಧಾರ: ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾದು ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಐಪಿಎಲ್‌ ಮುಖ್ಯಸ್ಥ ರಾಜೀವ್‌ ಶುಕ್ಲಾ ತಿಳಿಸಿದ್ದಾರೆ. ರಾಜಸ್ಥಾನ ರಾಯಲ್ಸ್‌ ಫ್ರಾಂಚೈಸಿ ಕೂಡ ಕಾದು ಮುಂದಿನ ನಿರ್ಧಾರ ಬರಲು ನಿರ್ಧರಿಸಿದೆ.ಸ್ಟೀವನ್‌ ಸ್ಮಿತ್‌ ಅವರನ್ನು ರಾಯಲ್ಸ್‌ 12 ಕೋಟಿ ರೂ.ವಿಗೆ ತಂಡದಲ್ಲೇ ಉಳಿಸಿಕೊಂಡಿತ್ತು.

2ನೇ ಸಲ ಸ್ಮಿತ್‌ ವಿವಾದ: ಕಳೆದ ವರ್ಷ ಭಾರತ ಆತಿಥ್ಯದಲ್ಲಿ ನಡೆದ ಟೆಸ್ಟ್‌ ಪಂದ್ಯದ ವೇಳೆ ಸ್ಟೀವನ್‌ ಸ್ಮಿತ್‌ ಡಿಆರ್‌ಎಸ್‌ ವಿವಾದಕ್ಕೆ ಸಿಕ್ಕಿಕೊಂಡಿದ್ದರು. ಸ್ಮಿತ್‌ ವರ್ತನೆಯನ್ನು ಭಾರತ ನಾಯಕ ಕೊಹ್ಲಿ ಕ್ರೀಡಾಂಗಣದಲ್ಲಿ ಖಂಡಿಸಿದ್ದರು.

Advertisement

ಮೌನಕ್ಕೆ ಶರಣಾದ ಸನ್‌ರೈಸರ್: ಐಪಿಎಲ್‌ನ ಪ್ರಮುಖ ತಂಡವಾದ ಸನ್‌ರೈಸರ್ ಹೈದರಾಬಾದ್‌ ತಂಡದ ತಾರಾ ಆಟಗಾರ ವಾರ್ನರ್‌ ಅವರು ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆಸೀಸ್‌ ತಂಡದ ಉಪನಾಯಕನ ಹುದ್ದೆಯಿಂದ ಕೆಳಕ್ಕೆ ಇಳಿದಿದ್ದಾರೆ. ಈ ಬಗ್ಗೆ ಯಾವುದೇ ಹೇಳಿಕೆ ನೀಡಲು ಹೈದರಾಬಾದ್‌ ತಂಡದ ಫ್ರಾಂಚೈಸಿ ನಿರಾಕರಿಸಿದೆ. ಮೌನಕ್ಕೆ ಶರಣಾಗಿದೆ.

ತನಿಖೆಗೆ ಆದೇಶಿಸಿದ
ಕ್ರಿಕೆಟ್‌ ಆಸ್ಟ್ರೇಲಿಯಾ

ಘಟನೆ ಕುರಿತಂತೆ ಕ್ರಿಕೆಟ್‌ ಆಸ್ಟ್ರೇಲಿಯಾ ತನಿಖೆಗೆ ನಿರ್ಧರಿಸಿದೆ. ವರದಿ ಬಂದ ಬಳಿಕ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಿದೆ ಎಂದು ತಿಳಿಸಿದೆ.

ಮೈಕಲ್‌ ಕ್ಲಾರ್ಕ್‌ಗೆ ಮತ್ತೆ
ನಾಯಕತ್ವ ಸಾಧ್ಯತೆ

ನಿವೃತ್ತಿ ಹೇಳಿರುವ ಮೈಕಲ್‌ ಕ್ಲಾರ್ಕ್‌ ತಂಡಕ್ಕೆ ಮತ್ತೆ ನಾಯಕರಾಗಿ ಆಸೀಸ್‌ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಇನ್ನಷ್ಟೆ ಖಚಿತಗೊಳ್ಳಬೇಕಿದೆ.

2 ಸಲ ಸಿಕ್ಕಿಬಿದ್ದ ಪ್ಲೆಸಿಸ್‌
ಈಗಲೂ ನಾಯಕ!

ದಕ್ಷಿಣ ಆಫ್ರಿಕಾ ತಂಡದ ನಾಯಕ ಡು ಪ್ಲೆಸಿಸ್‌ 2 ಬಾರಿ ಚೆಂಡನ್ನು ವಿರೂಪಗೊಳಿಸಿ ಸಿಕ್ಕಿ ಬಿದ್ದಿದ್ದಾರೆ. ಇದರಿಂದ ಪಂದ್ಯದ ಶುಲ್ಕದಲ್ಲಿ ದಂಡ ಮತ್ತು ಪಂದ್ಯವೊಂದರ ನಿಷೇಧಕ್ಕೂ ತುತ್ತಾಗಿದ್ದರು. ಆದರೂ ತಂಡದ ನಾಯಕತ್ವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 

ಪ್ರಸ್ತುತ ಅವರ ಆಫ್ರಿಕಾ ತಂಡದ ನಾಯಕರಾಗಿದ್ದಾರೆ. ಈ ಪ್ರಕರಣವನ್ನು ನೋಡಿದರೆ ಆಸ್ಟ್ರೇಲಿಯಾದ ಸ್ಟೀವನ್‌ ಸ್ಮಿತ್‌ ನಾಯಕತ್ವದಿಂದ ಪೂರ್ಣಪ್ರಾಮಾಣದಲ್ಲಿ ಹೊರಬೀಳುವ ಸಾಧ್ಯತೆ ಇಲ್ಲ. ಮುಂದೆ ನಾಯಕರಾಗಿ ಮತ್ತೆ ಆಸೀಸ್‌ ತಂಡಕ್ಕೆ ಆಯ್ಕೆಯಾದರೂ ಅಚ್ಚರಿಯಿಲ್ಲ.

ಚೆಂಡು ವಿರೂಪದ ಅಗ್ರ 5 ಪ್ರಕರಣಗಳು
2016
ಎರಡನೇ ಸಲ ಸಿಕ್ಕಿಬಿದ್ದ ಪ್ಲೆಸಿಸ್‌

ದಕ್ಷಿಣ ಆಫ್ರಿಕಾದ ಡು ಪ್ಲೆಸಿಸ್‌ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ನಲ್ಲಿ ಚೆಂಡು ವಿರೂಪಗೊಳಿಸಿ 1 ಟೆಸ್ಟ್‌ಗೆ ನಿಷೇಧ, ಪಂದ್ಯದ ಶುಲ್ಕದಲ್ಲಿ ಶೇ.100 ದಂಡಕ್ಕೆ ತುತ್ತಾಗಿದ್ದರು.

2013
ಮೊದಲ ಸಲ ಡು ಪ್ಲೆಸಿಸ್‌ ಬಲೆಗೆ

ದುಬೈನಲ್ಲಿ ನಡೆದ ಪಾಕ್‌ ವಿರುದ್ಧದ ಟೆಸ್ಟ್‌ ಪಂದ್ಯದ ವೇಳೆ ಆಫ್ರಿಕಾದ ಡು ಪ್ಲೆಸಿಸ್‌ ಚೆಂಡು ವಿರೂಪಗೊಳಿಸಿದ್ದರು. ಪಂದ್ಯದ ಶುಲ್ಕದಲ್ಲಿ ಶೇ.50 ದಂಡ ವಿಧಿಸಲಾಗಿತ್ತು.

2006
ಪಾಕ್‌ ಬೌಲರ್‌ಗಳ ಕಳ್ಳಾಟ

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಪಂದ್ಯದ ವೇಳೆ ಪಾಕ್‌ ಬೌಲರ್‌ಗಳು ಚೆಂಡು ವಿರೂಪಗೊಳಿಸಿದ್ದರು. ನಂತರ ಈ ಪಂದ್ಯದಲ್ಲಿ ಇಂಗ್ಲೆಂಡ್‌ಗೆ 5 ರನ್‌ ಪೆನಾಲ್ಟಿ ರನ್‌ ನೀಡಿಲಾಗಿತ್ತು.

2001
ಸಚಿನ್‌ಗೂ ಬಿಡಲಿಲ್ಲ ವಿವಾದ

ದ. ಆಫ್ರಿಕಾ ವಿರುದ್ಧದ ಟೆಸ್ಟ್‌ನಲ್ಲಿ ಭಾರತದ ದಿಗ್ಗಜ ಸಚಿನ್‌ ಚೆಂಡು ವಿರೂಪಗೊಳಿಸಿದ ಆರೋಪಕ್ಕೆ ತುತ್ತಾಗಿದ್ದರು. ಹೀಗಾಗಿ ರೆಫ‌ರಿ 1 ಪಂದ್ಯದ ನಿಷೇಧ ಹೇರಿದ್ದರು.

1994
ಇಂಗ್ಲೆಂಡ್‌ನ‌ ಮೈಕ್‌ಗೆ ಕಳಂಕ

ಇಂಗ್ಲೆಂಡ್‌ ತಂಡದ ನಾಯಕನಾಗಿದ್ದ ಮೈಕ್‌ ಅಥರ್ಟನ್‌ ದ.ಆಫ್ರಿಕಾ ವಿರುದ್ಧ ಟೆಸ್ಟ್‌ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ್ದರು. ಇದರಿಂದ ಮೈಕ್‌ಗೆ ಭಾರೀ ಮೊತ್ತದ ದಂಡ ವಿಧಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next