ಮುಂಬಯಿ: ಇಂಡಿಯನ್ ಪ್ರಿಮಿಯರ್ ಲೀಗ್ ಫೈನಲ್ ಜಿದ್ದಾಜಿದ್ದಿನ ಹೋರಾಟದಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿಗೆ 179 ರನ್ನುಗಳ ಗುರಿ ನಿಗದಿಯಾಗಿದೆ. ಮುಂಬಯಿಯ ವಾಂಖೇಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂದಿನ ಹೈ ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಟಾಸ್ ಗೆಲ್ಲುವ ಅದೃಷ್ಟ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್.ಧೋನಿ ಪಾಲಿಗಾಯಿತು. ಟಾಸ್ ಗೆದ್ದ ಧೋನಿ ಸನ್ ರೈಸರ್ಸ್ ಹೈದ್ರಾಬಾದ್ ಗೆ ಬ್ಯಾಟಿಂಗ್ ಬಿಟ್ಟುಕೊಟ್ಟರು. ಕೇನ್ ವಿಲಿಯಮ್ಸ್ ನೇತೃತ್ವದ ಹೈದ್ರಾಬಾದ್ ತಂಡವು ನಿಗದಿತ 20 ಓವರುಗಳಲ್ಲಿ 6 ವಿಕೆಟುಗಳ ನಷ್ಟಕ್ಕೆ 178 ರನ್ನುಗಳನ್ನು ಕಲೆ ಹಾಕಿತು.
ಪ್ರಾರಂಭದಲ್ಲಿ ಚೆನ್ನೈ ಬೌಲರ್ ಗಳ ದಾಳಿಯೆದುರು ರನ್ ಗಳಿಸಲು ಹೈದ್ರಾಬಾದ್ ದಾಂಢಿಗರು ಪರದಾಡಿದರು. ಆರಂಭಿಕನಾಗಿ ಆಡುವ ಅವಕಾಶ ಪಡೆದಿದ್ದ ಗೋಸ್ವಾಮಿ (5) ಸಿಡಿಯಲು ವಿಫಲರಾದರು. ಅನುಭವಿ ಧವನ್ (26) ಎಚ್ಚರಿಕೆಯ ಆಟಕ್ಕೆ ಮೊರೆಹೋದರು. ಆದರೆ ಬಳಿಕ ನಾಯಕ ಕೇನ್ ವಿಲಿಯಮ್ಸ್ (47), ಶಕಿಬ್ ಹಸನ್ (23), ಯೂಸುಫ್ ಪಠಾಣ್ (ಅಜೇಯ 45) ಮತ್ತು ಬ್ರಾತ್ ವೈಟ್ (21) ಸೇರಿಕೊಂಡು 20 ಓವರುಗಳಲ್ಲಿ ತಂಡವು 178 ರನ್ನುಗಳ ಸ್ಪರ್ಧಾತ್ಮಕ ಮೊತ್ತವನ್ನು ಕೂಡಿಹಾಕುವಲ್ಲಿ ಸಫಲರಾದರು.
ಹೈದ್ರಾಬಾದ್ ಪರವಾಗಿ ಕೊನೆಯ ಹಂತದಲ್ಲಿ ಬಿರುಸಿನ ಆಟವಾಡಿದ ಯೂಸುಫ್ ಪಠಾಣ್ 2 ಭರ್ಜರಿ ಸಿಕ್ಸರ್ ಮತ್ತು 4 ಬೌಂಡರಿಗಳನ್ನು ಸಿಡಿಸಿ 45 ರನ್ನು ಗಳಿಸಿ ಅಜೇಯರಾಗಿ ಉಳಿದರು. ಇವರಿಗೆ ಉತ್ತಮ ಬೆಂಬಲ ನೀಡಿದ ಕ್ರೆಗ್ ಬ್ರಾತ್ ವೈಟ್ 3 ಸಿಕ್ಸರ್ ಸಹಿತ 11 ಎಸೆತಗಳಲ್ಲಿ 21 ರನ್ನು ಗಳಿಸಿದರು.