Advertisement

ಉತ್ತಮ ನಿರ್ವಹಣೆಗೆ ಲೆವಿಸ್‌ ನೆರವು: ರೋಹಿತ್‌

06:00 AM Apr 19, 2018 | Team Udayavani |

ಮುಂಬಯಿ: ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಉತ್ತಮ ನಿರ್ವಹಣೆ ನೀಡಲು ವೆಸ್ಟ್‌ ಇಂಡೀಸ್‌ನ ಎವಿನ್‌ ಲೆವಿಸ್‌ ನೆರವಾದರು ಎಂದು ಮುಂಬೈ ಇಂಡಿಯನ್ಸ್‌ ನಾಯಕ ರೋಹಿತ್‌ ಶರ್ಮ ಹೇಳಿದ್ದಾರೆ. ಸತತ ಮೂರು ಸೋಲಿನ ಬಳಿಕ ಮುಂಬೈ ಮಂಗಳವಾರ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡವನ್ನು 46 ರನ್ನುಗಳಿಂದ ಸೋಲಿಸುವ ಮೂಲಕ ತನ್ನ ಮೊದಲ ಗೆಲುವು ದಾಖಲಿಸಿತ್ತು. ರೋಹಿತ್‌ ಮತ್ತು ಲೆವಿಸ್‌ ಅವರ ಉತ್ತಮ ಆಟದಿಂದಾಗಿ ಮುಂಬೈ ಜಯಭೇರಿ ಬಾರಿಸುವಂತಾಯಿತು. ಮುಂಬೈ 6 ವಿಕೆಟಿಗೆ 213 ರನ್‌  ಪೇರಿಸಿದ್ದರೆ ಬೆಂಗಳೂರು 8 ವಿಕೆಟಿಗೆ 167 ರನ್‌ ಗಳಿಸಲಷ್ಟೇ ಶಕ್ತವಾಯಿತು.

Advertisement

ಎವಿನ್‌ ಲೆವಿಸ್‌ ಬ್ಯಾಟಿಂಗ್‌ ಮಾಡುವ ವೇಳೆ ಏನು ಬೇಕಾದರೂ ಸಂಭವಿಸ ಬಹುದು. ಅವರೊಬ್ಬ ಚೆಂಡನ್ನು ಶಕ್ತಿಶಾಲಿ ಯಾಗಿ ಹೊಡೆಯಬಲ್ಲ ಶ್ರೇಷ್ಠ ಆಟಗಾರ. ಎಂತಹ ಎಸೆತವನ್ನು ಕೂಡ ಅವರು ಬಲವಾಗಿ ಹೊಡೆಯಬಲ್ಲರು. ಅವರ ಈ ಆಟದಿಂದ ಪ್ರೇರಣೆಗೊಂಡ ನಾನು ಹೊಡೆಯಲು ಆರಂಭಿಸಿದೆ ಮಾತ್ರವಲ್ಲದೇ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಲು ಸಾಧ್ಯವಾಯಿತು ಎಂದು ರೋಹಿತ್‌ ವಿವರಿಸಿದರು.

ಓರ್ವ ಆಟಗಾರ ದೀರ್ಘ‌ ಸಮಯದ ವರೆಗೆ ಬ್ಯಾಟಿಂಗ್‌ ಪ್ರದರ್ಶಿಸಿದರೆ ಪಂದ್ಯದ ಚಿತ್ರಣವನ್ನೇ ಬದಲಿಸಬಹುದು. ಲೆವಿಸ್‌ ಮತ್ತು ನನ್ನ ಸೊಗಸಾದ ಆಟದಿಂದಾಗಿ ನಾವು ಬೃಹತ್‌ ಮೊತ್ತ ಪೇರಿಸುವಂತಾಯಿತು ಎಂದರು ರೋಹಿತ್‌. ನಮ್ಮ ಆರಂಭ ಹೀನಾಯವಾಗಿತ್ತು. ರನ್‌ ಖಾತೆ ತೆರೆಯುವ ಮೊದಲೇ ನಾವು ಎರಡು ವಿಕೆಟನ್ನು ಕಳೆದುಕೊಂಡಿದ್ದೆವು. ಆದರೂ ನಾವು ಭಾರೀ ಅಂತರದಿಂದ ಗೆದ್ದಿದ್ದೇವೆ ಎಂದರು ರೋಹಿತ್‌ ತಿಳಿಸಿದರು.

ಕಳೆದ ಮೂರು ಪಂದ್ಯಗಳಲ್ಲಿ ನಾವು ಒಂದು ತಂಡವಾಗಿ ಮಾಡದ ಕೆಲಸವೆಂದರೆ ಚೆನ್ನಾಗಿ ಬ್ಯಾಟಿಂಗ್‌ ಮಾಡಿದ ವೇಳೆ ನಮ್ಮ ಬೌಲಿಂಗ್‌ ಚೆನ್ನಾಗಿಲ್ಲದಿರುವುದು ಆಗಿದೆ. ಉತ್ತಮ ಬೌಲಿಂಗ್‌ ವೇಳೆ ನಮ್ಮ ಬ್ಯಾಟಿಂಗ್‌ ವೈಫ‌ಲ್ಯ ಕಂಡಿರುವುದು ಆಗಿದೆ. ನಮ್ಮ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಉತ್ತಮವಾಗಿದ್ದರೆ ಮತ್ತು ಸ್ಥಿರ ನಿರ್ವಹಣೆ ನೀಡುತ್ತಿದ್ದರೆ ಗೆಲುವು ಸುಲಭವಾಗಿ ಒಲಿಯಬಹುದು ಎಂದು ರೋಹಿತ್‌ ಹೇಳಿದರು.

ಮೂರನೇ ಕ್ರಮಾಂಕ
ಬ್ಯಾಟಿಂಗ್‌ ಕ್ರಮಾಂಕದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರೋಹಿತ್‌ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮುಂದುವರಿಸುವೆ ಈ ಮೂಲಕ ಹೊಸ ಆಟಗಾರರಿಗೆ ಕ್ರೀಸ್‌ನಲ್ಲಿ ನಿಲ್ಲಲು ಅವಕಾಶ ನೀಡುವೆ ಎಂದರು. ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬದಲಾವಣೆ ಮಾಡುವ ಯಾವುದೇ ಆಲೋಚನೆಯಿಲ್ಲ. ಆಟಗಾರರಿಗೆ ಆರಾಮವಾಗಿ ಆಡುವ ಅವಕಾಶ ಕಲ್ಪಿಸುವುದು ಅತೀಮುಖ್ಯ. ಮುಂದಿನ ಪಂದ್ಯಗಳಲ್ಲಿ ಯಾವ ಕ್ರಮಾಂಕದಲ್ಲಿ ಆಡಬೇಕೆಂದು ಅವರಿಗೆ ತಿಳಿದಿದೆ. ಅದರಂತೆ ಯೋಜನೆ ರೂಪಿಸಿಕೊಂಡು ಆಡಲಿದ್ದೇವೆ. ಆಗಾಗ್ಗೆ ಬದಲಾವಣೆ ಮಾಡುತ್ತಿದ್ದರೆ ಯಾವುದೇ ಪ್ರಯೋಜನ ಸಿಗುವುದಿಲ್ಲ ಎಂದು ರೋಹಿತ್‌ ವಿವರಿಸಿದರು.

Advertisement

ರೋಹಿತ್‌ 50ನೇ ಟಿ20 ಅರ್ಧಶತಕ
ಮುಂಬಯಿ: ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್‌ ಶರ್ಮ ಟಿ20 ಕ್ರಿಕೆಟ್‌ನಲ್ಲಿ 50ನೇ ಅರ್ಧಶತಕ ಬಾರಿಸಿದ್ದಾರೆ. ಇದು  ಎರಡನೇ ಶ್ರೇಷ್ಠ ಸಾಧನೆ. ವಿರಾಟ್‌ ಕೊಹ್ಲಿ, ಗೌತಮ್‌ ಗಂಭೀರ್‌ ತಲಾ 53 ಅರ್ಧಶತಕ ಬಾರಿಸಿರುವುದು ಶ್ರೇಷ್ಠ ಸಾಧನೆಯಾಗಿದೆ. ಇದೇ ವೇಳೆ ಐಪಿಎಲ್‌ನಲ್ಲಿ ಎರಡನೇ ಗರಿಷ್ಠ ಸಿಕ್ಸರ್‌ ಬಾರಿಸಿದ ದಾಖಲೆಯನ್ನು ರೋಹಿತ್‌ ಶರ್ಮ ಸಾಧಿಸಿದರು. 175 ಸಿಕ್ಸರ್‌ ಬಾರಿಸಿರುವ ರೋಹಿತ್‌ ಶರ್ಮ, ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಅನಂತರದ ಸ್ಥಾನ ಪಡೆದರು. ಗೇಲ್‌ ಒಟ್ಟು 269 ಸಿಕ್ಸರ್‌ ಬಾರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next