Advertisement

ಬ್ಯಾಟಿಂಗ್‌ ವೈಫ‌ಲ್ಯದಿಂದ ಸೋತೆವು: ರಹಾನೆ

06:00 AM May 17, 2018 | Team Udayavani |

ಕೋಲ್ಕತಾ: ಒಂದು ಹಂತದಲ್ಲಿ ನೋಲಾಸ್‌ 63 ರನ್‌, ಸತತ 10 ಎಸೆತಗಳಲ್ಲಿ ಆರಂಭಿಕರಾದ ಬಟ್ಲರ್‌-ತ್ರಿಪಾಠಿ ಜೋಡಿಯಿಂದ ಬೌಂಡರಿ, ಸಿಕ್ಸರ್‌ಗಳ ಸುರಿಮಳೆ… ಸ್ಕೋರ್‌ಬೋರ್ಡ್‌ ನಲ್ಲಿ 180-200 ರನ್ನಿಗೇನೂ ಕೊರತೆ ಇಲ್ಲ ಎಂಬಂಥ ಸನ್ನಿವೇಶ. ಆದರೆ ಕೊನೆಯಲ್ಲಿ 19 ಓವರ್‌ಗಳಲ್ಲಿ 142ಕ್ಕೆ ಆಲೌಟ್‌!

Advertisement

ಇಂಥದೊಂದು ಬ್ಯಾಟಿಂಗ್‌ ವೈಫ‌ಲ್ಯ ಹಾಗೂ ನಾಟಕೀಯ ಕುಸಿತವೇ ರಾಜಸ್ಥಾನ್‌ ರಾಯಲ್ಸ್‌ ತಂಡದ ಸೋಲಿಗೆ ಕಾರಣ ಎಂದಿದ್ದಾರೆ ನಾಯಕ ಅಜಿಂಕ್ಯ ರಹಾನೆ. ಕೋಲ್ಕತಾ “ಈಡನ್‌ ಗಾರ್ಡನ್ಸ್‌’ನಲ್ಲಿ ಮಂಗಳವಾರ ರಾತ್ರಿ ನಡೆದ ಈ ಪಂದ್ಯವನ್ನು ಆತಿಥೇಯ ಕೆಕೆಆರ್‌ 6 ವಿಕೆಟ್‌ಗಳಿಂದ ಗೆದ್ದು ಪ್ಲೇ-ಆಫ್ಗೆ ಹತ್ತಿರವಾಯಿತು.

4 ತಂಡಗಳಿಗಿವೆ ಅವಕಾಶ
ಕೆಕೆಆರ್‌ ಈಗ 13 ಪಂದ್ಯಗಳಿಂದ 14 ಅಂಕ ಸಂಪಾದಿಸಿ 3ನೇ ಸ್ಥಾನದಲ್ಲಿದೆ. ಪ್ಲೇ-ಆಫ್ ಅಧಿಕೃತ ಗೊಳ್ಳಬೇಕಾದರೆ ಅಂತಿಮ ಲೀಗ್‌ ಪಂದ್ಯವನ್ನು ಗೆಲ್ಲುವುದು ಮುಖ್ಯ. ಏಕೆಂದರೆ 14 ಅಂಕ ಸಂಪಾದಿಸುವ ಅವಕಾಶ ಇನ್ನೂ 4 ತಂಡಗಳ ಮುಂದಿದೆ. ಆಗ ಏನು ಬೇಕಾದರೂ ಆಗಬಹುದು, ಯಾವುದೇ 2 ತಂಡಗಳು ಮುಂದಿನ ಸುತ್ತು ಮುಟ್ಟಬಹುದು!

ರನ್‌ ಕಡಿಮೆ ಆಯ್ತು
“ಒಮ್ಮೆ ಬ್ಯಾಟಿಂಗ್‌ ಮುಗಿದ ಬಳಿಕ ನಮ್ಮ ಗುರಿ ವಿಕೆಟ್‌ ಕೀಳುವುದು. ಬೌಲಿಂಗ್‌ ಏನೋ ಉತ್ತಮವಾಗಿಯೇ ಇತ್ತು. ಆದರೆ ಕೇವಲ 142 ಕಟ್ಟಿಕೊಂಡು ಮಾಡುವುದಾದರೂ ಏನು? ನಮಗೆ 170-180ರಷ್ಟು ರನ್ನಿನ ಅಗತ್ಯವಿತ್ತು. ಆದರೆ ಪ್ಲೇ-ಆಫ್ ತಲುಪಲು ನಮಗಿನ್ನೂ ಅವಕಾಶವಿದೆ. ಆದರೆ ಇಂಗ್ಲೆಂಡ್‌ ತಂಡಕ್ಕೆ ಆಯ್ಕೆಯಾದ ಕಾರಣ ಬಟ್ಲರ್‌ ಮತ್ತು ಸ್ಟೋಕ್ಸ್‌ ನಮಗಿನ್ನು ಸಿಗುವುದಿಲ್ಲ. ಇವರೆಷ್ಟು ಅಪಾಯಕಾರಿಗಳು ಎಂಬುದನ್ನು ಎಲ್ಲರೂ ಬಲ್ಲರು…’ ಎಂಬುದಾಗಿ ಅಜಿಂಕ್ಯ ರಹಾನೆ ಹೇಳಿದರು.

ಸೂಕ್ತ ಪ್ಲ್ರಾನ್‌ ಅಗತ್ಯ: ಕುಲದೀಪ್‌
ಪ್ರತಿಯೊಬ್ಬ ಬ್ಯಾಟ್ಸ್‌ಮನ್‌ಗೂ ಸೂಕ್ತ ಬೌಲಿಂಗ್‌ ಯೋಜನೆ ರೂಪಿಸಬೇಕಾಗುತ್ತದೆ ಎಂಬುದು 20ಕ್ಕೆ 4 ವಿಕೆಟ್‌ ಕಿತ್ತು ಪಂದ್ಯಶ್ರೇಷ್ಠರಾದ ಕುಲದೀಪ್‌ ಯಾದವ್‌ ಅಭಿಪ್ರಾಯವಾಗಿತ್ತು.

Advertisement

ದೊಡ್ಡ ಮೊತ್ತದ ನಿರೀಕ್ಷೆ ಠುಸ್‌!
“ಬಟ್ಲರ್‌ ಮತ್ತು ತ್ರಿಪಾಠಿ ಆಡಿದ ರೀತಿ ಕಂಡಾಗ ದೊಡ್ಡ ಮೊತ್ತದ ಭಾರೀ ನಿರೀಕ್ಷೆ ಇತ್ತು. ನಾನು ಕ್ರೀಸ್‌ ಇಳಿದಾಗ ಇದೇ ರಭಸವನ್ನು ಮುಂದುವರಿಸಿಕೊಂಡು ಹೋಗುವ ಅವಕಾಶವಿತ್ತು. ಆಗ ಬಟ್ಲರ್‌ ಉತ್ತಮ ಲಯದಲ್ಲಿದ್ದರು. ಆದರೆ ಪ್ರತಿ ಸಲವೂ ಬಟ್ಲರ್‌ ಮೇಲೆಯೇ ಭಾರ ಹಾಕುವುದು ಸರಿಯಲ್ಲ. ಮಧ್ಯಮ ಕ್ರಮಾಂಕ ಕೈಕೊಟ್ಟಿತು. ಕೊನೆಯಲ್ಲಿ ಉನಾದ್ಕತ್‌ ಉತ್ತಮ ಪ್ರದರ್ಶನವಿತ್ತರು’ ಎಂದು ಅಜಿಂಕ್ಯ ರಹಾನೆ ಹೇಳಿದರು.

ಸ್ಕೋರ್‌ಪಟ್ಟಿ
ರಾಜಸ್ಥಾನ್‌ ರಾಯಲ್ಸ್‌    (19 ಓವರ್‌ಗಳಲ್ಲಿ) 142
ಕೋಲ್ಕತಾ ನೈಟ್‌ರೈಡರ್
ಸುನೀಲ್‌ ನಾರಾಯಣ್‌    ಸಿ ಗೌತಮ್‌ ಬಿ ಸ್ಟೋಕ್ಸ್‌    21
ಕ್ರಿಸ್‌ ಲಿನ್‌    ಸಿ ಅನುರೀತ್‌ ಬಿ ಸ್ಟೋಕ್ಸ್‌    45
ರಾಬಿನ್‌ ಉತ್ತಪ್ಪ    ಸಿ ತ್ರಿಪಾಠಿ ಬಿ ಸ್ಟೋಕ್ಸ್‌    4
ನಿತಿನ್‌ ರಾಣ    ಎಲ್‌ಬಿಡಬ್ಲ್ಯು ಸೋಧಿ    21
ದಿನೇಶ್‌ ಕಾರ್ತಿಕ್‌    ಔಟಾಗದೆ    41
ಆ್ಯಂಡ್ರೆ ರಸೆಲ್‌    ಔಟಾಗದೆ    11

ಇತರ        2
ಒಟ್ಟು  (18 ಓವರ್‌ಗಳಲ್ಲಿ 4 ವಿಕೆಟಿಗೆ)    145
ವಿಕೆಟ್‌ ಪತನ: 1-21, 2-36, 3-69, 4-117.

ಬೌಲಿಂಗ್‌:
ಕೃಷ್ಣಪ್ಪ ಗೌತಮ್‌        2-0-32-0
ಬೆನ್‌ ಸ್ಟೋಕ್ಸ್‌        4-1-15-3
ಜೋಫ‌ ಆರ್ಚರ್‌        4-0-43-0
ಐಶ್‌ ಸೋಧಿ        4-0-21-1
ಜೈದೇವ್‌ ಉನಾದ್ಕತ್‌        3-0-23-0
ಅನುರೀತ್‌ ಸಿಂಗ್‌        1-0-10-0
ಪಂದ್ಯಶ್ರೇಷ್ಠ: ಕುಲದೀಪ್‌ ಯಾದವ್‌

ಎಕ್ಸ್‌ಟ್ರಾ  ಇನ್ನಿಂಗ್ಸ್‌
ದಿನೇಶ್‌ ಕಾರ್ತಿಕ್‌ 4 ವಿಕೆಟ್‌ ಪತನಕ್ಕೆ ಕಾರಣರಾದರು (3 ಕ್ಯಾಚ್‌, 1 ಸ್ಟಂಪ್‌). ಇದು ಐಪಿಎಲ್‌ ಪಂದ್ಯವೊಂದರಲ್ಲಿ ವಿಕೆಟ್‌ ಕೀಪರ್‌ ಓರ್ವನ ಜಂಟಿ 2ನೇ ಅತ್ಯುತ್ತಮ ಸಾಧನೆ. 2011ರ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಡೆಕ್ಕನ್‌ ಚಾರ್ಜರ್ನ ಕುಮಾರ ಸಂಗಕ್ಕರ 5 ವಿಕೆಟ್‌ ಉರುಳಲು ಕಾರಣರಾದದ್ದು ದಾಖಲೆ.

ದಿನೇಶ್‌ ಕಾರ್ತಿಕ್‌ 2 ಸಲ ಐಪಿಎಲ್‌ ಪಂದ್ಯವೊಂದರಲ್ಲಿ 4 ಕ್ಯಾಚ್‌/ಸ್ಟಂಪಿಂಗ್‌ ನಡೆಸಿದ ಕೇವಲ 2ನೇ ಕೀಪರ್‌ ಎನಿಸಿದದರು. ವೃದ್ಧಿಮಾನ್‌ ಸಾಹಾ ಮೊದಲಿಗ. 2009ರ ರಾಜಸ್ಥಾನ್‌ ಎದುರಿನ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ ಪರವೂ ಕಾರ್ತಿಕ್‌ ಈ ಸಾಧನೆ ಮಾಡಿದ್ದರು.

ಕುಲದೀಪ್‌ ಯಾದವ್‌ ಐಪಿಎಲ್‌ನಲ್ಲಿ ಮೊದಲ ಸಲ 4 ವಿಕೆಟ್‌ ಉರುಳಿಸಿದರು. ಅವರು ಟಿ20 ಪಂದ್ಯಗಳಲ್ಲಿ 4 ಪ್ಲಸ್‌ ವಿಕೆಟ್‌ ಉರುಳಿಸಿದ್ದು ಇದು 3ನೇ ಸಲ. ಇದಕ್ಕೂ ಮುನ್ನ ಉತ್ತರಪ್ರದೇಶ ಪರ ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ ವಿದರ್ಭ ವಿರುದ್ಧ 17ಕ್ಕೆ 5, ಬಂಗಾಲ ವಿರುದ್ಧ 26ಕ್ಕೆ 4 ವಿಕೆಟ್‌ ಕೆಡವಿದ್ದರು.

ಕುಲದೀಪ್‌ ಯಾದವ್‌ ಐಪಿಎಲ್‌ನಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶಿಸಿದ ಚೈನಾಮನ್‌ ಬೌಲರ್‌ ಎನಿಸಿದರು (20ಕ್ಕೆ 4). 2015ರಲ್ಲಿ ಚೆನ್ನೈ ವಿರುದ್ಧ ಕೆಕೆಆರ್‌ನ ಬ್ರಾಡ್‌ ಹಾಗ್‌ 29ಕ್ಕೆ 4 ವಿಕೆಟ್‌ ಕಿತ್ತದ್ದು ಈವರೆಗಿನ ದಾಖಲೆಯಾಗಿತ್ತು. ಐಪಿಎಲ್‌ ಪಂದ್ಯದಲ್ಲಿ 4 ವಿಕೆಟ್‌ ಉರುಳಿಸಿದ ಚೈನಾಮನ್‌ ಬೌಲರ್‌ಗಳು ಇವರಿಬ್ಬರು ಮಾತ್ರ. 

ಕೆ. ಗೌತಮ್‌ ಅವರ ಇನ್ನಿಂಗ್ಸಿನ ಮೊದಲ ಓವರಿನಲ್ಲೇ ಸುನೀಲ್‌ ನಾರಾಯಣ್‌ 21 ರನ್‌ ಬಾರಿಸಿದರು. ಇದು ಐಪಿಎಲ್‌ ಇನ್ನಿಂಗ್ಸಿನ ಪ್ರಥಮ ಓವರಿನಲ್ಲಿ ಬ್ಯಾಟ್ಸ್‌ ಮನ್‌ ಓರ್ವನಿಂದ ದಾಖಲಾದ ಅತ್ಯಧಿಕ ರನ್ನಿನ ಜಂಟಿ ದಾಖಲೆ. 2009ರಲ್ಲಿ ಕೆಕೆಆರ್‌ ವಿರುದ್ಧ ಬ್ರಾಡ್‌ ಹಾಜ್‌ ಓವರಿನಲ್ಲಿ ರಾಜಸ್ಥಾನ್‌ನ ನಮನ್‌ ಓಜಾ ಕೂಡ 21 ರನ್‌ ಹೊಡೆದಿದ್ದರು.

ರಾಜಸ್ಥಾನ್‌ ರಾಯಲ್ಸ್‌ ಮೊದಲ ವಿಕೆಟಿಗೆ 50 ಪ್ಲಸ್‌ ರನ್‌ ಬಾರಿಸಿದ ಬಳಿಕ 2ನೇ ಅತೀ ಕಡಿಮೆ ಮೊತ್ತಕ್ಕೆ ಆಲೌಟ್‌ ಆದ ತಂಡವೆನಿಸಿತು (142). ಜಾಸ್‌ ಬಟ್ಲರ್‌-ರಾಹುಲ್‌ ತ್ರಿಪಾಠಿ ಮೊದಲ ವಿಕೆಟಿಗೆ 63 ರನ್‌ ಪೇರಿಸಿದ್ದರು. ಇದೇ ಋತುವಿನ ಹೈದರಾಬಾದ್‌ ಎದುರಿನ ಪಂದ್ಯದಲ್ಲಿ ಪಂಜಾಬ್‌ನ ರಾಹುಲ್‌-ಗೇಲ್‌ ಮೊದಲ ವಿಕೆಟಿಗೆ 55 ರನ್‌ ಒಟ್ಟುಗೂಡಿಸಿದ ಬಳಿಕ ತಂಡ 119ಕ್ಕೆ ಆಲೌಟ್‌ ಆಗಿತ್ತು. 

ಜಾಸ್‌ ಬಟ್ಲರ್‌ ಈ ಐಪಿಎಲ್‌ನಲ್ಲಿ 548 ರನ್‌ ಪೇರಿಸಿದರು (13 ಇನ್ನಿಂಗ್ಸ್‌). ಇದು ರಾಜಸ್ಥಾನ್‌ ರಾಯಲ್ಸ್‌ ಪರ ದಾಖಲಾದ 2ನೇ ಸರ್ವಾಧಿಕ ಮೊತ್ತ. 2012ರಲ್ಲಿ ಅಜಿಂಕ್ಯ ರಹಾನೆ 16 ಇನ್ನಿಂಗ್ಸ್‌ಗಳಿಂದ 560 ರನ್‌ ಮಾಡಿದ್ದು ದಾಖಲೆ. ಈ ದಾಖಲೆ ಮುರಿಯುವ ಅವಕಾಶ ಬಟ್ಲರ್‌ ಪಾಲಿಗಿಲ್ಲ. ಅವರು ಇಂಗ್ಲೆಂಡ್‌ ಟೆಸ್ಟ್‌ ತಂಡಕ್ಕೆ ಆಯ್ಕೆಯಾದ್ದರಿಂದ ಕೊನೆಯ ಲೀಗ್‌ ಪಂದ್ಯಕ್ಕೆ ಲಭ್ಯರಿರುವುದಿಲ್ಲ.

ದಿನೇಶ್‌ ಕಾರ್ತಿಕ್‌ ಯಶಸ್ವೀ ರನ್‌ ಚೇಸಿಂಗ್‌ ವೇಳೆ ಈ ವರ್ಷ ಅತ್ಯಧಿಕ ಬ್ಯಾಟಿಂಗ್‌ ಸರಾಸರಿ ದಾಖಲಿಸಿದರು (156.5). 9 ಚೇಸಿಂಗ್‌ ವೇಳೆ ಅವರು ಕೇವಲ 2 ಸಲ ಔಟಾಗಿದ್ದು, 313 ರನ್‌ ಬಾರಿಸಿದ್ದಾರೆ. ಸ್ಟ್ರೈಕ್‌ರೇಟ್‌ 179.9.

“ನನ್ನ ಪಾಲಿಗೆ ಇದೊಂದು ಭಾರೀ ಒತ್ತಡದ ಸಮಯವಾಗಿತ್ತು. ಟಿ20 ಪಂದ್ಯವಾದ್ದರಿಂದ ಕೆಲವು ಸಂಗತಿಗಳನ್ನು ನಾವು ಬದಲಾಯಿಸಿಕೊಳ್ಳಬೇಕಾಗುತ್ತದೆ. ಹಾಗೆಯೇ ಪ್ರತಿಯೊಬ್ಬ ಆಟಗಾರನಿಗೂ ವಿಭಿನ್ನ ಯೋಜನೆಯನ್ನು ರೂಪಿಸಬೇಕಾಗುತ್ತದೆ. ಆದರೆ ಇದು ಎಲ್ಲ ಸಲವೂ ಯಶಸ್ವಿಯಾಗುತ್ತದೆ ಎಂದಲ್ಲ. ಬಟ್ಲರ್‌ ಆಗಲೇ ಕ್ರೀಸ್‌ ಆಕ್ರಮಿಸಿಕೊಂಡಿದ್ದರು. ಅವರು ರಿವರ್ಸ್‌ ಸ್ವೀಪ್‌ಗೆ ಮುಂದಾಗುತ್ತಾರೆ ಎಂಬುದು ಗೊತ್ತಿತ್ತು. ಹೀಗಾಗಿ ಒಂದು “ಕ್ವಿಕರ್‌’ ಎಸೆತವನ್ನಿಕ್ಕಿದೆ. ಬಟ್ಲರ್‌ ಬುಟ್ಟಿಗೆ ಬಿದ್ದರು…’ 
ಕುಲದೀಪ್‌ ಯಾದವ್‌

Advertisement

Udayavani is now on Telegram. Click here to join our channel and stay updated with the latest news.

Next