Advertisement

ದೊಡ್ಡ ಪಂದ್ಯದಲ್ಲಿ ದೊಡ್ಡ ಸಾಧನೆ;  ಸುಂದರ್‌ ಸಂಭ್ರಮ

03:45 AM May 18, 2017 | |

ಮುಂಬಯಿ: “ದೊಡ್ಡ ಪಂದ್ಯದಲ್ಲಿ ತೋರ್ಪಡಿಸಿದ ದೊಡ್ಡ ಸಾಧನೆ ಸದಾ ಸ್ಮರಣೀಯ. ನನ್ನ ಪಾಲಿಗೆ ಮುಂಬೈ ಎದುರಿನ ಪಂದ್ಯ ಇಂಥದೇ ಅನುಭವ ನೀಡಿದೆ…’ ಎಂದಿದ್ದಾರೆ ಪುಣೆ ತಂಡದ ಆಫ್ಬ್ರೇಕ್‌ ಬೌಲರ್‌, ತಮಿಳುನಾಡಿನ ವಾಷಿಂಗ್ಟನ್‌ ಸುಂದರ್‌. ಮಂಗಳವಾರ ರಾತ್ರಿ ನಡೆದ 10ನೇ ಐಪಿಎಲ್‌ನ ಮೊದಲ ಕ್ವಾಲಿಫ‌ಯರ್‌ ಪಂದ್ಯದಲ್ಲಿ ಕೇವಲ 16 ರನ್ನಿಗೆ ಮುಂಬೈ ಇಂಡಿಯನ್ಸ್‌ನ 3 ವಿಕೆಟ್‌ ಉಡಾಯಿಸುವ ಮೂಲಕ ಅವರು ಪರಾಕ್ರಮ ಮೆರೆದಿದ್ದರು.

Advertisement

“ಇದೊಂದು ಮಹತ್ವದ ಮುಖಾಮುಖೀ, ಬಿಗ್‌ ಗೇಮ್‌. ಮುಂಬೈ ಅಭಿಮಾನಿಗಳಿಂದಲೇ ಕಿಕ್ಕಿರಿದು ನೆರೆದ ವೀಕ್ಷರೆದುರು ಅವರದೇ ತಂಡದ ಪ್ರಮುಖ ಆಟಗಾರರ ವಿಕೆಟ್‌ ಹಾರಿಸಿದ್ದು ನಿಜಕ್ಕೂ ಅದ್ಭುತ ಅನುಭವ. ನಾಯಕ ಸ್ಮಿತ್‌ ನೀಡಿದ ಬೆಂಬಲವನ್ನು ಮರೆಯುವಂತಿಲ್ಲ. ಅವರಿಗೆ ನನ್ನ ಕೃತಜ್ಞತೆಗಳು. ಇದು ನನ್ನ ಮೊದಲ ಐಪಿಎಲ್‌ ಋತು. ಸ್ಮಿತ್‌ ನನಗೆ ಈವರೆಗೆ 10 ಪಂದ್ಯಗಳಲ್ಲಿ ಆಡುವ ಅವಕಾಶ ನೀಡಿದ್ದಾರೆ. ಬೇರೆ ಯಾವುದೇ ತಂಡದಲ್ಲಿದ್ದರೂ ನನಗೆ ಇಷ್ಟೊಂದು ಅವಕಾಶ ಲಭಿಸುತ್ತಿತ್ತು ಎಂದು ಹೇಳಲಾರೆ…’ ಎಂಬುದಾಗಿ ವಾಷಿಂಗ್ಟನ್‌ ಸುಂದರ್‌ ಬಹಳ ಖುಷಿಯಿಂದ ಹೇಳಿದರು.

“ವಾಂಖೇಡೆ ಸ್ಟೇಡಿಯಂ’ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಪುಣೆ ಅಂತಿಮ 3 ಓವರ್‌ಗಳಲ್ಲಿ ಬಿರುಸಿನ ಆಟಕ್ಕಿಳಿದು 4 ವಿಕೆಟಿಗೆ 162 ರನ್‌ ಪೇರಿಸಿದರೆ, ಮುಂಬೈಗೆ ಗಳಿಸಲು ಸಾಧ್ಯವಾದದ್ದು 9 ವಿಕೆಟಿಗೆ 142 ರನ್‌ ಮಾತ್ರ. ಇದು ಪ್ರಸಕ್ತ ಐಪಿಎಲ್‌ನಲ್ಲಿ ಮುಂಬೈ ವಿರುದ್ಧ ಪುಣೆಗೆ ಒಲಿದ ಹ್ಯಾಟ್ರಿಕ್‌ ಗೆಲುವೆಂಬುದನ್ನು ಮರೆಯುವಂತಿಲ್ಲ.

5ನೇ ಓವರಿನಲ್ಲಿ ಲೆಂಡ್ಲ್ ಸಿಮನ್ಸ್‌ ರನೌಟಾಗುವುದರೊಂದಿಗೆ ಮುಂಬೈ ಕುಸಿತ ಮೊದಲ್ಗೊಂಡಿತು. 10 ರನ್‌ ಅಂತರದಲ್ಲಿ ನಾಯಕ ರೋಹಿತ್‌ ಶರ್ಮ (1), ಅಂಬಾಟಿ ರಾಯುಡು (0) ಮತ್ತು ಅಪಾಯಕಾರಿ ಕೈರನ್‌ ಪೊಲಾರ್ಡ್‌ (7) ವಿಕೆಟ್‌ ಹಾರಿಸಿದ ಸುಂದರ್‌, ಮುಂಬೈಗೆ ಏಳYತಿ ಇಲ್ಲದಂತೆ ಮಾಡಿದರು. ಇದರೊಂದಿಗೆ ಅವರು ಐಪಿಎಲ್‌ ಪಂದ್ಯವೊಂದರಲ್ಲಿ ಅತೀ ಕಿರಿಯ ವಯಸ್ಸಿನಲ್ಲೇ 3 ವಿಕೆಟ್‌ ಕಿತ್ತ ಬೌಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಪಾರ್ಥಿವ್‌ ಏಕಾಂಗಿ ಹೋರಾಟ
ಒಂದೆಡೆ ಪಾರ್ಥಿವ್‌ ಪಟೇಲ್‌ ಕ್ರೀಸ್‌ ಆಕ್ರಮಿಸಿಕೊಂಡರೂ ಅವರಿಗೆ ಇನ್ನೊಂದು ತುದಿಯಿಂದ ಬೆಂಬಲ ಸಿಗದಂತೆ ಮಾಡಿದ್ದು ಪುಣೆ ಬೌಲಿಂಗ್‌ ಕಾರ್ಯತಂತ್ರಕ್ಕೆ ಸಾಕ್ಷಿ. ಮುಂಬಯಿಯವರೇ ಆದ ಶಾದೂìಲ್‌ ಠಾಕೂರ್‌ ತವರಿನಂಗಳದ ಸಂಪೂರ್ಣ ಲಾಭವನ್ನೆತ್ತಿ 3 ವಿಕೆಟ್‌ ಹಾರಿಸಿದರು. ಉನಾದ್ಕತ್‌, ಫ‌ರ್ಗ್ಯುಸನ್‌ ಕೂಡ ಬಿಗು ಬೌಲಿಂಗ್‌ ಸಂಘಟಿಸಿ ಒಂದೊಂದು ವಿಕೆಟ್‌ ಕಿತ್ತರು. ಪಾರ್ಥಿವ್‌ ಅವರ 52 ರನ್‌ ಹೊರತುಪಡಿಸಿದರೆ, ಅಜೇಯ 16 ರನ್‌ ಮಾಡಿದ ಜಸ್‌ಪ್ರೀತ್‌ ಬುಮ್ರಾ ಅವರದೇ ಹೆಚ್ಚಿನ ಗಳಿಕೆ ಎಂಬುದು ಮುಂಬೈ ಬ್ಯಾಟಿಂಗ್‌ ವೈಫ‌ಲ್ಯಕ್ಕೆ ಕನ್ನಡಿ ಹಿಡಿಯುತ್ತದೆ.

Advertisement

“ಪವರ್‌ ಪ್ಲೇ ಅವಧಿಯಲ್ಲಿ ಬೌಲಿಂಗ್‌ ನಡೆಸುವ ಸವಾಲನ್ನು ನಾನು ಯಾವತ್ತೂ ಖುಷಿಪಡುತ್ತೇನೆ. ಆಗ ಸರ್ಕಲ್‌ನ ಹೊರಗಡೆ ಕೇವಲ ಇಬ್ಬರು ಕ್ಷೇತ್ರರಕ್ಷಕರಷ್ಟೇ ಇರುತ್ತಾರೆ. ನನಗೆ ನನ್ನ ಸಾಮರ್ಥ್ಯದಲ್ಲಿ ನಂಬಿಕೆ ಇದ್ದ ಕಾರಣ ಇದು ಸಾಧ್ಯವಾಯಿತು. ಹೈದರಾಬಾದ್‌ ಫೈನಲ್‌ನಲ್ಲೂ ಇದೇ ಸಾಧನೆಯನ್ನು ಪುನರಾವರ್ತಿಸುವ ವಿಶ್ವಾಸವಿದೆ…’ ಎಂದು ಸುಂದರ್‌ ಹೇಳಿದರು.

ಅಸಾಮಾನ್ಯ ಸಾಧನೆ: ಸ್ಮಿತ್‌
17ರ ಹರೆಯದ ಹುಡುಗನ ಅಸಮಾನ್ಯ ಸಾಧನೆ ಎಂದು ಸುಂದರ್‌ ಸಾಧನೆಯನ್ನು ಪ್ರಶಂಸಿಸಿದ್ದಾರೆ ಪುಣೆ ನಾಯಕ ಸ್ಟೀವನ್‌ ಸ್ಮಿತ್‌.ಸುಂದರ್‌ ಬೌಲಿಂಗ್‌ ಸಾಧನೆಯಿಂದ ಅತೀವ ಹೆಮ್ಮೆಯಾಗಿದೆ. ನಾವು ಇನ್ನೂ ಒಂದು ಬಿಗ್‌ ಗೇಮ್‌ ಆಡಲಿಕ್ಕಿದೆ. ಫೈನಲ್‌ನಲ್ಲಿ ಇಂಥದೇ ಪ್ರದರ್ಶನ ನೀಡಿ ಟ್ರೋಫಿಯನ್ನೆತ್ತುವುದು ನಮ್ಮ ಗುರಿ…’ ಎಂದು ಸ್ಮಿತ್‌ ಹೇಳಿದರು.

ಸಂಕ್ಷಿಪ್ತ ಸ್ಕೋರ್‌: ಪುಣೆ-4 ವಿಕೆಟಿಗೆ 162. ಮುಂಬೈ-9 ವಿಕೆಟಿಗೆ 142 (ಪಾರ್ಥಿವ್‌ 52, ಬುಮ್ರಾ ಔಟಾಗದೆ 16, ಕೃಣಾಲ್‌ 15, ಹಾರ್ದಿಕ್‌ 14, ಸುಂದರ್‌ 16ಕ್ಕೆ 3, ಠಾಕೂರ್‌ 37ಕ್ಕೆ 3). ಪಂದ್ಯಶ್ರೇಷ್ಠ: ವಾಷಿಂಗ್ಟನ್‌ ಸುಂದರ್‌.

10ನೇ ಐಪಿಎಲ್‌ ಫೈನಲ್‌ ಪಂದ್ಯ ಮೇ 21ರಂದು (ರವಿವಾರ) ಹೈದರಾಬಾದ್‌ನಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next