Advertisement

ಪುಣೆ –ಕೋಲ್ಕತಾ: ದೊಡ್ಡ ಕಾದಾಟ?

02:34 PM Apr 26, 2017 | Karthik A |

ಪುಣೆ: ರೈಸಿಂಗ್‌ ಪುಣೆ ಸೂಪರ್‌ಜೈಂಟ್‌ ಮತ್ತು ಕೋಲ್ಕತಾ ನೈಟ್‌ರೈಡರ್ಸ್ ತಂಡಗಳು 10ನೇ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಮುಖಾಮುಖೀಯಾಗಲಿವೆ. ಇತ್ತಂಡಗಳೂ ಚೇತೋಹಾರಿ ಪ್ರದರ್ಶನದೊಂದಿಗೆ ಟಾಪ್‌- 4 ಸ್ಥಾನದಲ್ಲಿರುವುದರಿಂದ ಇದನ್ನೊಂದು ಬಿಗ್‌ ಫೈಟ್‌ ಎಂದೇ ತೀರ್ಮಾನಿಸಬೇಕಾಗುತ್ತದೆ. ಬುಧವಾರದ ಈ ಪಂದ್ಯ ಪುಣೆಯಲ್ಲಿ ನಡೆಯಲಿರುವುದರಿಂದ ಸ್ಟೀವನ್‌ ಸ್ಮಿತ್‌ ಬಳಗವನ್ನು ಫೇವರಿಟ್‌ ಎಂದು ತೀರ್ಮಾನಿಸಲಡ್ಡಿಯಿಲ್ಲ.

Advertisement

ಪುಣೆ ಪಾಲಿನ ಹೆಗ್ಗಳಿಕೆಯೆಂದರೆ ಹ್ಯಾಟ್ರಿಕ್‌ ಗೆಲುವಿನೊಂದಿಗೆ ಒಂದೊಂದೇ ಮೆಟ್ಟಿಲನ್ನು ಏರುತ್ತ ಹೋದದ್ದು. ಅದರಲ್ಲೂ ಹಿಂದಿನೆರಡು ಜಯವನ್ನು ಅಮೋಘವೆಂದೇ ಬಣ್ಣಿಸಬೇಕಾಗುತ್ತದೆ. ಶನಿವಾರ ಚಾಂಪಿಯನ್‌ ಹೈದರಾಬಾದ್‌ ವಿರುದ್ಧ ಧೋನಿ ಸಾಹಸದಿಂದ ಗೆದ್ದ  ಬಳಿಕ ಸೋಮವಾರ ರಾತ್ರಿ ಮುಂಬೈಯನ್ನು ಅವರದೇ ವಾಂಖೇಡೆ ಸ್ಟೇಡಿಯಂನಲ್ಲಿ 3 ರನ್ನಿನಿಂದ ರೋಮಾಂಚಕಾರಿಯಾಗಿ ಬಗ್ಗುಬಡಿದ ಪುಣೆ ಈಗ ಭರಪೂರ ಆತ್ಮವಿಶ್ವಾಸದಲ್ಲಿದೆ. ಯಾವುದೇ ತಂಡದ ಸವಾಲನ್ನು ಎದುರಿಸುವ ಛಲದಲ್ಲಿದೆ.

ಇನ್ನೊಂದೆಡೆ ಕೋಲ್ಕತಾ ತನ್ನದೇ ಅಂಗಳದಲ್ಲಿ ಗುಜರಾತ್‌ ಲಯನ್ಸ್‌ಗೆ ಶರಣಾದ ಬಳಿಕ ರವಿವಾರ ರಾತ್ರಿ ಆರ್‌ಸಿಬಿ ವಿರುದ್ಧ ಬೊಂಬಾಟ್‌ ಪ್ರದರ್ಶನ ನೀಡಿದೆ. ಕೊಹ್ಲಿ ಪಡೆಯನ್ನು ಐಪಿಎಲ್‌ನಲ್ಲೇ ಕನಿಷ್ಠವೆನಿಸಿದ 49 ರನ್ನಿಗೆ ಉಡಾಯಿಸಿ ಮೆರೆದಿದೆ. ಇದು ಗಂಭೀರ್‌ ಪಡೆಗೊಂದು ಪ್ಲಸ್‌ ಪಾಯಿಂಟ್‌.

ಪುಣೆ ಗೆಲುವಿನ ಹ್ಯಾಟ್ರಿಕ್‌
ಮುಂಬೈ ಎದುರಿನ ಆರಂಭಿಕ ಪಂದ್ಯವನ್ನು ಗೆದ್ದ ಬಳಿಕ ಪುಣೆ ಸತತ 3 ಪಂದ್ಯಗಳಲ್ಲಿ ಸೋಲುತ್ತ ಹೋಯಿತು. ಆದರೆ ಇಲ್ಲಿಂದ ಮುಂದೆ ಗೆಲುವಿನ ಲಯ ಕಂಡುಕೊಂಡು ಹ್ಯಾಟ್ರಿಕ್‌ ಸಾಧಿಸಿತು. ಆದರೆ ತವರಿನ ಅಂಗಳದಲ್ಲಿ ಪುಣೆ ಅಜೇಯ ತಂಡವೇನಲ್ಲ. ಆಡಿದ ಮೂರರಲ್ಲಿ ಎರಡನ್ನು ಜಯಿಸಿದೆ. ಉಳಿದೊಂದು ಪಂದ್ಯದಲ್ಲಿ ಡೆಲ್ಲಿಗೆ ಶರಣಾಗಿದೆ. ಇದು ಕೆಕೆಆರ್‌ ಆತ್ಮವಿಶ್ವಾಸವನ್ನು ಹೆಚ್ಚಿಸಲೂಬಹುದು.

ಮುಂಬೈಯನ್ನು ಮಣಿಸುವ ಮೂಲಕ ತವರಿನಾಚೆಯೂ ಗೆಲ್ಲುವ ತಾಕತ್ತಿದೆ ಎಂಬುದನ್ನು ಸಾಬೀತುಪಡಿಸಿದ್ದು ಪುಣೆ ಪಾಲಿನ ಹೆಚ್ಚುಗಾರಿಕೆ. ಈ ರೋಚಕ ಗೆಲುವನ್ನು ಸಾಧಿಸಿ ಕೆಲವೇ ಗಂಟೆಗಳಾಗಿವೆ. ಪುಣೆ ಗೆಲುವಿನ ಹಸಿವಿನಲ್ಲಿದೆ! ಅಜಿಂಕ್ಯ ರಹಾನೆ ಮುಂಬೈ ವಿರುದ್ಧ 38 ರನ್‌ ಬಾರಿಸುವ ಮೂಲಕ ಫಾರ್ಮ್ ಹೊರಟು ಹೋಗಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇವರ ಜತೆಗಾರ ರಾಹುಲ್‌ ತ್ರಿಪಾಠಿ ಅವರದಂತೂ ಪ್ರಚಂಡ ಪ್ರದರ್ಶನ. ಮಹಾರಾಷ್ಟ್ರದವರೇ ಆದ ತ್ರಿಪಾಠಿ ಕಳೆದ 3 ಪಂದ್ಯಗಳಲ್ಲಿ ಕ್ರಮವಾಗಿ 31, 59 ಹಾಗೂ 45 ರನ್‌ ಬಾರಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದನ್ನು ಮರೆಯುವಂತಿಲ್ಲ. ಸ್ಮಿತ್‌, ಧೋನಿ, ಸ್ಟೋಕ್ಸ್‌ ಯಾವುದೇ ಹೊತ್ತಿನಲ್ಲಿ ಸಿಡಿಯಬಲ್ಲರು. ಬೌಲಿಂಗ್‌ ವಿಭಾಗದಲ್ಲಿ ಇಮ್ರಾನ್‌ ತಾಹಿರ್‌, ಉನಾದ್ಕತ್‌, ಸುಂದರ್‌, ಕ್ರಿಸ್ಟಿಯನ್‌ ಭರವಸೆ ಮೂಡಿಸಿದ್ದಾರೆ.

Advertisement

ಕೋಲ್ಕತಾ ಸ್ಥಿರ ಪ್ರದರ್ಶನ
ಈ ಐಪಿಎಲ್‌ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡಿದ ತಂಡವೆಂದರೆ ಕೆಕೆಆರ್‌. ಏಳರಲ್ಲಿ 5 ಗೆಲುವು ಸಾಧಿಸಿದ ಹೆಗ್ಗಳಿಕೆ ಕೋಲ್ಕತಾ ತಂಡದ್ದು. ನಾಯಕ ಗಂಭೀರ್‌ ಸ್ವತಃ ಮುಂಚೂಣಿಯಲ್ಲಿ ನಿಂತು ತಂಡಕ್ಕೆ ಸ್ಫೂರ್ತಿ ತುಂಬುತ್ತಿದ್ದಾರೆ. ಸುನೀಲ್‌ ನಾರಾಯಣ್‌ ಅವರ ಬ್ಯಾಟಿಂಗ್‌ ಕೆಕೆಆರ್‌ ಪಾಲಿಗೊಂದು ಬೋನಸ್‌. ಉತ್ತಪ್ಪ, ಪಾಂಡೆ, ಪಠಾಣ್‌ ತಂಡದ ಗೆಲುವಿನಲ್ಲಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಕೋಲ್ಕತಾದ ಬೌಲಿಂಗ್‌ ಎಷ್ಟು ಘಾತಕ ಎಂಬುದು ರವಿವಾರ ರಾತ್ರಿ ಆರ್‌ಸಿಬಿ ವಿರುದ್ಧ ಸಾಬೀತಾಗಿದೆ. ಕೋಲ್ಟರ್‌ ನೈಲ್‌, ವೋಕ್ಸ್‌, ಗ್ರ್ಯಾಂಡ್‌ಹೋಮ್‌, ಉಮೇಶ್‌ ಯಾದವ್‌ ಅವರೆಲ್ಲ ಗಂಭೀರ್‌ ಬತ್ತಳಿಕೆಯ ಅಪಾಯಕಾರಿ ಬೌಲಿಂಗ್‌ ಅಸ್ತ್ರಗಳು.

Advertisement

Udayavani is now on Telegram. Click here to join our channel and stay updated with the latest news.

Next