ಅಹ್ಮದಾಬಾದ್: ಗುಜರಾತ್ ವಿರುದ್ಧ ಗೆಲ್ಲಬಹುದಾಗಿದ್ದ ಪಂದ್ಯವನ್ನು 6 ರನ್ ಅಂತರದಿಂದ ಕಳೆದುಕೊಂಡ ಬಳಿಕ ಪ್ರತಿಕ್ರಿಯಿಸಿರುವ ಮುಂಬೈ ತಂಡದ ನೂತನ ನಾಯಕ ಹಾರ್ದಿಕ್ ಪಾಂಡ್ಯ, ಇದೊಂದು ದೊಡ್ಡ ಸಂಗತಿ ಅಲ್ಲ, ಇನ್ನೂ 13 ಪಂದ್ಯಗಳಿವೆ ಎಂದಿದ್ದಾರೆ.
“ಕೊನೆಯ 5 ಓವರ್‌ಗಳಲ್ಲಿ 42 ರನ್ ಗಳಿಸಬೇಕಾದ ಸವಾಲು ನಮ್ಮ ಮುಂದಿತ್ತು. ಇದೇನೂ ಸಾಧಿಸಲಾಗದ ಮೊತ್ತವಾಗಿರಲಿಲ್ಲ. ಆದರೆ ಬ್ಯಾಟಿಂಗ್ ಲಯ ತಪ್ಪಿದ ಕಾರಣ ಸೋಲು ಕಾಣಬೇಕಾಯಿತು. ಇದು ಆರಂಭ ಮಾತ್ರ. ಇನ್ನೂ 13 ಪಂದ್ಯಗಳಿವೆ. ತಪ್ಪುಗಳನ್ನು ತಿದ್ದಿಕೊಂಡು ಮುಂದೆ ಸಾಗಬೇಕಿದೆ’ ಎಂಬುದಾಗಿ ಪಾಂಡ್ಯ ಹೇಳಿದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 6 ವಿಕೆಟಿಗೆ 168 ರನ್ ಗಳಿಸಿದರೆ, ಮುಂಬೈ 9 ವಿಕೆಟಿಗೆ 162 ರನ್ ಮಾಡಿ ಸೋಲನುಭವಿಸಿತು.
ಒಂದು ಹಂತದಲ್ಲಿ ಮುಂಬೈ ಸುಲಭ ಜಯದ ನಿರೀಕ್ಷೆ ಮೂಡಿಸಿತ್ತು. 13ನೇ ಓವರ್ ಆರಂಭದ ವೇಳೆ ಎರಡೇ ವಿಕೆಟಿಗೆ 107 ರನ್ ಮಾಡಿ ಮುನ್ನುಗ್ಗುತ್ತಿತ್ತು. ಆದರೆ ಈ ಹಂತದಲ್ಲಿ ರೋಹಿತ್ ಶರ್ಮ ಔಟಾದದ್ದೇ ಸೈ, ಮುಂಬೈ ಊಹಿಸಲೂ ಆಗದ ರೀತಿಯಲ್ಲಿ ಕುಸಿತ ಕಂಡಿತು. ಕೊನೆಯ 5 ಓವರ್‌ಗಳಲ್ಲಿ 6 ವಿಕೆಟ್ ಉಡಾಯಿಸಿದ ಗುಜರಾತ್, ಮುಂಬೈ ಪಾಳೆಯದಲ್ಲಿ ಸುತ್ತಾಡುತ್ತಿದ್ದ ಗೆಲುವನ್ನು ಕಸಿದೇ ಬಿಟ್ಟಿತು. ಇದರೊಂದಿಗೆ ಗಿಲ್ ತಮ್ಮ ಮೊದಲ ನಾಯಕತ್ವದಲ್ಲೇ ಗೆಲುವಿನ ಸಂಭ್ರಮ ಆಚ ರಿಸಿ ದರೆ, ಮುಂಬೈಗೆ ನಾಯಕ ರಾಗಿ ಮರಳಿದ ಪಾಂಡ್ಯ ಸೋಲನು ಭವಿಸಿದರು.