Advertisement

ಐಫೋನ್‌ ತಯಾರಿಕಾ ಘಟಕ ಧ್ವಂಸ ಪ್ರಕರಣ : ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು

09:39 PM Mar 18, 2021 | Team Udayavani |

ಬೆಂಗಳೂರು: ಕೋಲಾರ ತಾಲೂಕಿನ ವಿಸ್ಟ್ರಾನ್‌ ಇನ್ಫೋಕಾಂ ಕಂಪನಿ ನಡೆಸುತ್ತಿದ್ದ ಐಫೋನ್‌ ತಯಾರಿಕಾ ಘಟಕದ ಆವರಣಕ್ಕೆ ನುಗ್ಗಿ ಸಲಕರಣೆ ಹಾಗೂ ಪೀಠೊಪಕರಣ ಧ್ವಂಸಗೊಳಿಸಿದ ಪ್ರಕರಣದ ಇಬ್ಬರು ಆರೋಪಿಗಳಿಗೆ ಹೈಕೋರ್ಟ್‌ ಜಾಮೀನು ನೀಡಿದೆ.

Advertisement

ಪ್ರಕರಣ ಸಂಬಂಧ ಜಾಮೀನು ಕೋರಿ ಮೂರು ಮತ್ತು ನಾಲ್ಕನೇ ಆರೋಪಿಯಾದ ಉದಯ ಭಾನು ಸಿಂಗ್‌ ಮತ್ತು ಎಚ್‌.ವಿನೋದ್‌ ಕುಮಾರ್‌ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಕೆ.ನಟರಾಜನ್‌ ಅವರು ಈ ಆದೇಶ ಮಾಡಿದರು.

ಇದರೊಂದಿಗೆ ಕಳೆದ ಮೂರು ತಿಂಗಳಿಂದ ಜೈಲಿನಲಿದ್ದ ಈ ಇಬ್ಬರು ಆರೋಪಿಗಳಿಗೆ ಬಿಡುಗಡೆ ಭಾಗ್ಯ ಸಿಕ್ಕಂತಾಗಿದೆ.
ಘಟನೆಗೆ ಸಂಬಂಧಿಸಿದ ದಾಖಲೆ ಗಮನಿಸಿದರೆ ಕಂಪನಿಯ ಕಾರ್ಮಿಕರು ಎನ್ನಲಾದ ಏಳು ಸಾವಿರಕ್ಕೂ ಅಧಿಕ ಅನಾಮಧೇಯ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಬಾಕಿ ವೇತನ ಪಾವತಿಗೆ ಆಗ್ರಹಿಸಿ ಅವರು ಪ್ರತಿಭಟನೆ ನಡೆಸಿದ್ದಾರೆ. ಇದೇ ಪ್ರಕರಣದ ಸಹ ಆರೋಪಿಗಳಿಗೆ ಈಗಾಗಲೇ ಜಾಮೀನು ದೊರೆತಿದೆ. ಅರ್ಜಿದಾರರು ಮೂರು ತಿಂಗಳಿಗೂ ಹೆಚ್ಚು ಸಮಯದಿಂದ ಜೈಲಿನಲ್ಲಿರುವ ಕಾರಣ ಜಾಮೀನು ಪಡೆಯಲು ಅರ್ಹರಾಗಿದ್ದಾರೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ :ರಾಜ್ಯದ ಮೂರು ವಿಧಾನಸಭೆ ಉಪ ಚುನಾವಣೆಗೆ ‘ಕೈ’ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಅಲ್ಲದೆ, ಒಂದು ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್‌, ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ನೀಡಬೇಕು. ಸಾಕ್ಷ್ಯ ನಾಶಪಡಿಸಬಾರದು ಹಾಗೂ ವಿಚಾರಣೆ ನ್ಯಾಯಾಲಯಕ್ಕೆ ತಪ್ಪದೆ ಹಾಜರಾಗಬೇಕು ಎಂದು ಷರತ್ತು ವಿಧಿಸಿದ ನ್ಯಾಯಪೀಠ ಆರೋಪಿಗಳಿಗೆ ಜಾಮೀನು ನೀಡಿದೆ.

Advertisement

ಅರ್ಜಿದಾರರು ಇತರೆ ಗುತ್ತಿಗೆ ನೌಕರರೊಂದಿಗೆ ಶಾಮೀಲಾಗಿ ಹಾಗೂ ಅಕ್ರಮ ಕೂಟ ರಚಿಸಿಕೊಂಡು 2020ರ ಡಿ.12ರಂದು ಕೋಲಾರ ತಾಲೂಕಿನ ವಿಸ್ಟ್ರಾನ್‌ ಇನ್ಫೋಕಾಂ ಕಂಪನಿಯ ಆವರಣದೊಳಗೆ ಅತಿಕ್ರಮ ಪ್ರವೇಶ ಮಾಡಿದ್ದಾರೆ. ಕಂಪನಿಯ ವಿರುದ್ಧ ಘೋಷಣೆ ಕೂಗುತ್ತಾ, ಅಲ್ಲಿದ್ದ ಸಲಕರಣೆಗಳು ಮತ್ತು ಪೀಠೊಪಕರಣ ಧ್ವಂಸಗೊಳಿಸಿದ್ದಾರೆ. ಜತೆಗೆ, ಲ್ಯಾಪ್‌ಟಾಪ್‌ಗಳನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿ ಕಂಪನಿಯ ಕಾರ್ಯಕಾರಿ ಅಧಿಕಾರಿ ಟಿ.ವಿ.ಪ್ರಶಾಂತ್‌ ದೂರು ನೀಡಿದ್ದರು.

ಅದನ್ನು ಆಧರಿಸಿ ಕೋಲಾರದ ವೇಮಗಲ್‌ ಠಾಣಾ ಪೊಲೀಸರು 7000ಕ್ಕೂ ಅಧಿಕ ಜನರ ವಿರುದ್ಧ ಎಫ್ಐಆರ್‌ ದಾಖಲಿಸಿದ್ದರು. ತನಿಖೆ ವೇಳೆ ಅರ್ಜಿದಾರರನ್ನು ಬಂಧಿಸಿದ್ದ ಪೊಲೀಸರು, ಅವರಿಂದ ಐದು ಲ್ಯಾಪ್‌ಟಾಪ್‌ ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದರು. ವಿಚಾರಣಾ ನ್ಯಾಯಾಲಯವು ಅರ್ಜಿದಾರರಿಗೆ ಜಾಮೀನು ನಿರಾಕರಿಸಿ ನ್ಯಾಯಾಂಗ ಬಂಧನದ ವಶಕ್ಕೆ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next