Advertisement

ಐ ಫೋನ್‌: ಮೇಡ್‌ ಇನ್‌ ಕರ್ನಾಟಕ: ಒಂದು ಲಕ್ಷ ಉದ್ಯೋಗ; 5,727 ಕೋ.ರೂ. ಹೂಡಿಕೆ

10:47 PM Mar 03, 2023 | Team Udayavani |

ಬೆಂಗಳೂರು: ಆ್ಯಪಲ್‌ನ ಐ ಫೋನ್‌ ಇನ್ನು ರಾಜ್ಯದ ದೊಡ್ಡಬಳ್ಳಾಪುರದ ಕೆಐಎಡಿಬಿ ಪ್ರದೇಶದಲ್ಲಿ ಉತ್ಪಾದನೆಯಾಗಲಿದೆ. ಅದಕ್ಕಾಗಿ ಜಗತ್ತಿನ ಮುಂಚೂಣಿ ಕಂಪೆನಿಗಳಲ್ಲಿ ಒಂದಾಗಿರುವ ತೈವಾನ್‌ನ ಫಾಕ್ಸ್‌ಕಾನ್‌ ಕಂಪೆನಿ ಘಟಕ ಸ್ಥಾಪಿಸಲಿದೆ. ದೇವನಹಳ್ಳಿಯಲ್ಲಿ ಇರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವೇ ಈ ಘಟಕ ಸ್ಥಾಪಿಸುವ ಸಾಧ್ಯತೆಗಳಿವೆ.

Advertisement

ಅದಕ್ಕಾಗಿ 300 ಎಕರೆ ಜಾಗ ಗುರುತಿಸಲಾಗಿದೆ. ಇದರಿಂದಾಗಿ ಒಂದು ಲಕ್ಷಕ್ಕೂ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿದೆ. ಫಾಕ್ಸ್‌ಕಾನ್‌ ಸಮೂಹದ ಸಿಇಒ ಮತ್ತು ಅಧ್ಯಕ್ಷ ಯಂಗ್‌ ಲಿಯು ನೇತೃತ್ವದ ಉನ್ನತ ಮಟ್ಟದ ನಿಯೋಗ ಸ್ಥಳ ವೀಕ್ಷಣೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಐ ಫೋನ್‌ “ಮೇಡ್‌ ಇನ್‌ ಕರ್ನಾಟಕ’ ಎಂಬ ಹೆಗ್ಗಳಿಕೆಯನ್ನೂ ಪಡೆದುಕೊಳ್ಳಲಿದೆ. ಅದಕ್ಕಾಗಿ ಕಂಪೆನಿ 5,727 ಕೋಟಿ ರೂ. ಹೂಡಿಕೆ ಮಾಡಲಿದೆ.

ನಿಯೋಗವನ್ನು ವಿಮಾನ ನಿಲ್ದಾಣದಲ್ಲಿ ಬರ ಮಾಡಿಕೊಂಡ ಐಟಿ, ಬಿಟಿ ಸಚಿವ ಡಾ| ಸಿ.ಎನ್‌.ಅಶ್ವತ್ಥನಾರಾಯಣ ಅವರು ರಾಜ್ಯದಲ್ಲಿ ಐಟಿ, ತಾಂತ್ರಿಕ ಶಿಕ್ಷಣ, ಕೌಶಲಾಭಿವೃದ್ಧಿ, ನುರಿತ ಮಾನವ ಸಂಪನ್ಮೂಲ, ಉದ್ಯಮಗಳು ನೀಡುತ್ತಿರುವ ಸಹಭಾಗಿತ್ವ ಮತ್ತು ಇಲ್ಲಿರುವ ಅತ್ಯುತ್ತಮ ಕಾರ್ಯ ಪರಿಸರ ಕುರಿತು ಮನದಟ್ಟು ಮಾಡಿಕೊಟ್ಟರು. ಇದೇ ನಿಯೋಗ ಅನಂತರ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದೆ.

ರಾಜ್ಯಕ್ಕೆ ಅವಕಾಶ
ಆ್ಯಪಲ್‌ ಮೊಬೈಲ್‌ ತಯಾರಿಕಾ ಸಂಸ್ಥೆ ಶೀಘ್ರದಲ್ಲೇ ಕರ್ನಾಟಕದಲ್ಲಿ ತಯಾರಿಕಾ ಘಟಕ ಸ್ಥಾಪನೆ ಮಾಡಲಿದೆ. ಇದರಿಂದ 1 ಲಕ್ಷ ಉದ್ಯೋಗ ಸೃಷ್ಟಿ ಜತೆ ರಾಜ್ಯಕ್ಕೆ ಹಲವು ಅವಕಾಶ ಒದಗಿ ಬರಲಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಈ ಕುರಿತ ಟ್ವೀಟ್‌ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ 2025ಕ್ಕೆ ಐದು ಟ್ರಿಲಿಯನ್‌ ಡಾಲರ್‌ ಆರ್ಥಿಕತೆ ಗುರಿ ಹೊಂದಲು ಇದು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ. ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಪ್ರತಿಕ್ರಿಯೆ ನೀಡಿ, “ಆ್ಯಪಲ್‌ ಸಂಸ್ಥೆ 300 ಎಕರೆ ಪ್ರದೇಶದಲ್ಲಿ ರಾಜ್ಯದಲ್ಲಿ ತಯಾರಿಕಾ ಘಟಕ ಸ್ಥಾಪನೆ ಮಾಡಲಿದೆ. ಇದು ನರೇಂದ್ರ ಮೋದಿ ಹಾಗೂ ಬೊಮ್ಮಾಯಿ ನೇತೃತ್ವದ ಡಬಲ್‌ ಎಂಜಿನ್‌ ಸರಕಾರದ ಸಾಧನೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next