ಬೆಂಗಳೂರು: ರಾಜ್ಯದ ಸಂಸದರಿಗೆ ಐಫೋನ್ ಗಿಫ್ಟ್ ಕೊಟ್ಟಿರುವ ವಿಷಯ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದು, ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ಮಾಹಿತಿ ಕೇಳಿರುವುದಾಗಿ ತಿಳಿದು ಬಂದಿದೆ.
ಸಂಸದರಿಗೆ ಐ ಫೋನ್ ನೀಡಿರುವುದು ವಿವಾದವಾಗುತ್ತಿದ್ದಂತೆ ತಾವೇ ಇದನ್ನು ಕೊಟ್ಟಿರುವುದಾಗಿ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದರು. ಇನ್ನೊಂದೆಡೆ ಬಿಜೆಪಿ ಸಂಸದರು ತಮಗೆ ನೀಡಿರುವ ಐಫೋನ್ ತಿರಸ್ಕರಿಸಿ, ರಾಜ್ಯ ಸರ್ಕಾರ ಸಂಕಷ್ಟದಲ್ಲಿರುವಾಗ ಈ ರೀತಿಯ ದುಂದುವೆಚ್ಚ ಮಾಡುವುದು ಸರಿಯಲ್ಲ ಎಂದು ಹೇಳಿದ್ದರು. ಇದು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿ ಕಾಂಗ್ರೆಸ್ ಮುಜುಗರ ಎದುರಿಸುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಕರಣ ಕುರಿತು ವರದಿ ಪಡೆಯುವಂತೆ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಂಸದರಿಗೆ ಐ ಫೋನ್ ವಿತರಿಸಿದ್ದು ಮತ್ತು ಹೈಕಮಾಂಡ್ ವರದಿ ಕೇಳಿದೆ ಎಂಬ ಕುರಿತು ನನಗೆ ಯಾವುದೇ ಮಾಹಿತಿಯಿಲ್ಲ. ಸರ್ಕಾರದ ವತಿಯಿಂದ ನೀಡಿದ್ದಾರೋ ಅಥವಾ ಡಿ.ಕೆ.ಶಿವಕುಮಾರ್ ವೈಯಕ್ತಿಕವಾಗಿ ನೀಡಿದ್ದಾರೆಯೋ ಗೊತ್ತಿಲ್ಲ. ಆದರೆ, ಇಂತಹಸಣ್ಣ ವಿಚಾರಗಳನ್ನು ಬಿಟ್ಟು ಬಿಜೆಪಿ ನಾಯಕರು ಕಾವೇರಿ ಸಮಸ್ಯೆಯಂತಹ ಗಂಭೀರ ವಿಚಾರಗಳ ಬಗ್ಗೆ ಮಾತನಾಡಿದರೆ ನಮಗೂ ಒಳ್ಳೆಯದು, ರಾಜ್ಯಕ್ಕೂ ಒಳ್ಳೆಯದಾಗುತ್ತದೆ ಎಂದು ಹೇಳಿದ್ದಾರೆ.
ಇದೇ ವೇಳೆ, ಕಾವೇರಿ ವಿವಾದ ಕುರಿತು ಚರ್ಚಿಸಲು ಸಂಸದರಿಗೆ ಮಾಹಿತಿ ನೀಡಿರಲಿಲ್ಲ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಎಲ್ಲ ಸಂಸದರಿಗೂ ಸರ್ಕಾರದಿಂದ ಮಾಹಿತಿ ನೀಡಲಾಗಿತ್ತು. ನಮ್ಮ ಅಣ್ಣನ ಆರೋಗ್ಯ ಗಂಭೀರವಾಗಿರುವುದರಿಂದ ನಾನು ದೆಹಲಿಗೆ ಹೋಗಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರಾಜ್ಯ ಸರಕಾರದಿಂದ ಸಂಸದರಿಗೆ ಐಫೋನ್ ನೀಡುತ್ತಿರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, ನಮ್ಮ ಸಂಸದರು ಗಿಫ್ಟ್ ಪಡೆಯುವುದಿಲ್ಲ.
– ಬಿ.ಎಸ್.ಯಡಿಯೂರಪ್ಪ, ವಿಧಾನಸಭೆ
ವಿರೋಧ ಪಕ್ಷದ ನಾಯಕ