ಮುಂಬೈ: ಕೆಲವು ದಶಕಗಳ ಹಿಂದೆ ಭಾರತದ ಸುನೀಲ್ ಗಾವಸ್ಕರ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ ಗಳಿಸಿದ್ದ ಹತ್ತು ಸಾವಿರ ರನ್ ಇಂದಿನ ಆಟಗಾರರು ಗಳಿಸುವ 16 ಸಾವಿರ ರನ್ ಗೆ ಸಮಾನವಾಗಿದೆ ಎಂದು ಪಾಕಿಸ್ಥಾನದ ಮಾಜಿ ಆಟಗಾರ ಇಂಝಮಾಮ್ ಉಲ್ ಹಕ್ ಹೇಳಿದ್ದಾರೆ.’
ಸುನೀಲ್ ಗಾವಸ್ಕರ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ ಹತ್ತು ಸಾವಿರ ರನ್ ಗಳಿಸಿದ್ದು ಆ ಕಾಲದಲ್ಲಿ ಯೋಚನೆ ಮಾಡುವುದು ಕಷ್ಟವಾಗಿತ್ತು. ಗಾವಸ್ಕರ್ ಅವರಿಗಿಂತ ಮೊದಲು ದಿಗ್ಗಜ ಆಟಗಾರರಿದ್ದರು. ಜಾವೇದ್ ವಿಯಾಂದಾದ್, ವಿವಿಯನ್ ರಿಚರ್ಡ್, ಗ್ಯಾರಿ ಸೋಬರ್ಸ್, ಡಾನ್ ಬ್ರಾಡ್ಮನ್ ಮುಂತಾದ ಆಟಗಾರರು ಮಿಂಚಿದ್ದರು. ಆದರೆ ಅವರು ಯಾರಿಗೂ ಹತ್ತು ಸಾವಿರ ರನ್ ಗಳಿಸಲು ಸಾಧ್ಯವಾಗಿರಲಿಲ್ಲ ಎಂದಿದ್ದಾರೆ.
ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡುತ್ತಾ, ಈಗಿನ ಕಾಲದಲ್ಲಿ ಇಷ್ಟೊಂದು ಟೆಸ್ಟ್ ಪಂದ್ಯಗಳು ನಡೆಯುವಾಗಲೂ ಎಷ್ಟು ಜನರಿಗೆ ಈ ಸಾಧನೆ ಮಾಡಲು ಸಾಧ್ಯವಾಗುತ್ತಿದೆ ಎಂದಿದ್ದಾರೆ.
ಗಾವಸ್ಕರ್ ಆ ಕಾಲದಲ್ಲಿ ಗಳಿಸಿದ್ದ ಹತ್ತು ಸಾವಿರ ರನ್ ಮತ್ತು ಈಗಿನ 16 ಸಾವಿರ ರನ್ ಗಳು ಸಮಾನ ಎಂದು ಇಂಝಮಾಮ್ ಹೇಳಿದ್ದಾರೆ. ಸುನೀಲ್ ಗಾವಸ್ಕರ್ ಅವರು 1987ರ ಪಾಕ್ ವಿರುದ್ಧದ ಅಹಮದಾಬಾದ್ ಟೆಸ್ಟ್ ನಲ್ಲಿ ಹತ್ತು ಸಾವಿರ ರನ್ ಮೈಲಿಗಲ್ಲು ಸಾಧಿಸಿದ್ದರು. ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರನಾಗಿದ್ದರು.
ಇಂಝಮಾಮ್ ಉಲ್ ಹಕ್ ಅವರು 120 ಟೆಸ್ಟ್ ಪಂದ್ಯಗಳಿಂದ 8830 ರನ್ ಗಳಿಸಿದ್ದಾರೆ. 378 ಏಕದಿನ ಪಂದ್ಯವಾಡಿರುವ ಹಕ್ 11,739 ರನ್ ಗಳಿಸಿದ್ದಾರೆ.