Advertisement
ಇಡೀ ದಿನ ನಡೆದ ಹೈಡ್ರಾಮಾಗಳ ಬಳಿಕ ಸಿಬಿಐ ತಂಡವು ಬುಧವಾರ ರಾತ್ರಿ ಸ್ವತಃ ಚಿದಂಬರಂ ಅವರ ಮನೆಯ ಗೋಡೆ ಹತ್ತಿ, ಒಳಕ್ಕೆ ನುಗ್ಗಿ ಅವರನ್ನು ಬಂಧಿಸಿದೆ. ಐಎನ್‌ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿ ಚಿದು ಅವರನ್ನು ಬಂಧಿಸಿದ ಸಿಬಿಐ ತಂಡ, ಅವರನ್ನು ತಮ್ಮ ಕಾರಿನಲ್ಲಿ ಜೋರ್ ಬಾಘ್ ನಿವಾಸದಿಂದ ನೇರವಾಗಿ ಸಿಬಿಐ ಪ್ರಧಾನ ಕಚೇರಿಗೆ ಕರೆದೊಯ್ದು ವಿಚಾರಣೆ ಶುರು ಮಾಡಿತು.
Related Articles
Advertisement
ಕಾಂಗ್ರೆಸ್ ಕಾರ್ಯಕರ್ತರು-ಪೊಲೀಸರ ಘರ್ಷಣೆ: ಈ ಎಲ್ಲ ನಾಟಕೀಯ ಬೆಳವಣಿಗೆಗಳು ನಡೆಯುತ್ತಿದ್ದಂತೆ, ಚಿದು ಮನೆಯ ಹೊರಗೆ ಮಾಧ್ಯಮ ಪ್ರತಿನಿಧಿಗಳು, ಪೊಲೀಸರ ಜತೆಗೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಕೂಡ ಜಮಾಯಿಸತೊಡಗಿದರು. ಒಂದು ಹಂತದಲ್ಲಿ ಇನ್ನೇನು ತಮ್ಮ ನಾಯಕನನ್ನು ಬಂಧಿಸಲಾಗುತ್ತದೆ ಎಂದು ಗೊತ್ತಾಗುತ್ತಿದ್ದಂತೆ ಅಲ್ಲಿ ಸೇರಿದ್ದ ಕಾರ್ಯಕರ್ತರು ಘೋಷಣೆ ಕೂಗ ತೊಡಗಿದರು. ಅವರನ್ನು ಚದುರಿಸಲು ಪೊಲೀಸರು ಮುಂದಾದಾಗ, ಪೊಲೀಸರೊಂದಿಗೆ ಕಾಂಗ್ರೆಸ್ ಕಾರ್ಯಕರ್ತರು ಘರ್ಷಣೆಗಿಳಿದಿದ್ದೂ ಕಂಡುಬಂತು.
ಕೊನೆಗೂ ಬಂಧನ: ಅಧಿಕಾರಿಗಳು ಚಿದು ಮನೆ ಪ್ರವೇಶಿಸಿದ ಬಳಿಕ, ಒಳಗೆ ಏನಾಗುತ್ತಿದೆ ಎಂಬುದು ಕೆಲ ಕಾಲ ಗೊತ್ತಾಗಲಿಲ್ಲ. 15ರಿಂದ 20 ನಿಮಿಷಗಳ ಕಾಲ ಒಳಗೇ ಇದ್ದ ಅಧಿಕಾರಿಗಳು, ನಂತರ ತಮ್ಮ ಕಾರಿನಲ್ಲಿ ಚಿದಂಬರಂರನ್ನು ಕೂರಿಸಿ ಕರೆದೊಯ್ದಿದ್ದು ಕಂಡುಬಂತು. ಒಟ್ಟಾರೆ 55 ನಿಮಿಷಗಳ ಹೈಡ್ರಾಮಾ ಬಳಿಕ ಚಿದಂಬರಂ ಬಂಧನವಾಯಿತು.
ಜೀವಕ್ಕಿಂತ ಸ್ವಾತಂತ್ರ್ಯವೇ ನನ್ನ ಆದ್ಯತೆ‘ನಾನು ನನ್ನ ಜೀವನಕ್ಕಿಂತ ಹೆಚ್ಚಾಗಿ ಸ್ವಾತಂತ್ರ್ಯವನ್ನು ಬಯಸುತ್ತೇನೆ. ಎಂಥ ಸಂದರ್ಭದಲ್ಲಿಯೂ ನನ್ನ ವೈಯಕ್ತಿಕ ಸ್ವಾತಂತ್ರ್ಯವೇ ನನ್ನ ಮೊದಲ ಆಯ್ಕೆಯಾಗಿ ರುತ್ತದೆ ಎಂದು ಬಂಧನಕ್ಕೂ ಮುನ್ನ ನಡೆಸಿದ ಸುದ್ದಿ ಗೋಷ್ಠಿಯಲ್ಲಿ ಪಿ. ಚಿದಂಬರಂ ಹೇಳಿದರು. ಬರೆದು ಕೊಂಡು ಬಂದಿದ್ದ ಹೇಳಿಕೆಯನ್ನು ಸುದ್ದಿಗೋಷ್ಠಿಯಲ್ಲಿ ಓದಿದ ಅವರು, ತನಿಖಾಧಿಕಾರಿಗಳಿಂದ ತಲೆತಪ್ಪಿಸಿ ಕೊಂಡು ಓಡಾಡುತ್ತಿರುವ ವಿಚಾರಗಳನ್ನು ನಿರಾಕರಿಸಿ ದರು. ಐಎನ್‌ಎಕ್ಸ್ ಪ್ರಕರಣದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಹೆಸರು ಚಾರ್ಜ್‌ಶೀಟ್‌ನಲ್ಲೂ ಇಲ್ಲ. ಯಾರಾದರೂ ನನ್ನಲ್ಲಿ ನಿಮಗೆ ಜೀವನ ಬೇಕೋ, ಸ್ವಾತಂತ್ರ್ಯ ಬೇಕೋ ಎಂದು ಕೇಳಿದರೆ ನಾನು ಹೆಚ್ಚು ಯೋಚಿಸದೇ ಸ್ವಾತಂತ್ರ್ಯವನ್ನೇ ಆರಿಸಿಕೊಳ್ಳುತ್ತೇನೆ ಎಂದು ಹೇಳಿದರು. ತನಿಖಾ ಸಂಸ್ಥೆಗಳು ನನ್ನ ವಿರುದ್ಧ ತಂತ್ರಗಾರಿಕೆ ರೂಪಿಸಿದ್ದರೂ, ನಾನು ಕಾನೂನನ್ನು ಗೌರವಿಸುತ್ತೇನೆ ಎಂದ ಅವರು, ನಿರೀಕ್ಷಣಾ ಜಾಮೀನು ಅರ್ಜಿಯು ಶುಕ್ರವಾರದಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಹಾಗಾಗಿ, ಅಲ್ಲಿಯವರೆಗೆ ತನಿಖಾ ಸಂಸ್ಥೆಗಳು ತಾಳ್ಮೆಯಿಂದ ಕಾಯಬೇಕು. ಶುಕ್ರವಾರದ ನಂತರ ಸುಪ್ರೀಂ ಕೋರ್ಟ್‌ನಲ್ಲಿ ಹಚ್ಚಲಾಗುವ ಸ್ವಾತಂತ್ರ್ಯದ ದೀಪ, ಇಡೀ ದೇಶವನ್ನೇ ಬೆಳಗುತ್ತದೆ ಎಂದರು.
ಮೊದಲ ಗೃಹ ಸಚಿವ
ಸ್ವತಂತ್ರ ಭಾರತದಲ್ಲಿ ಇದೇ ಮೊದಲ ಬಾರಿಗೆ ಮಾಜಿ ಗೃಹ ಸಚಿವರೊಬ್ಬರು ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನ ವಾದಂತಾಗಿದೆ. ಮಾಜಿ ಹಣಕಾಸು ಸಚಿವರೂ ಆಗಿರುವ ಚಿದಂಬರಂ, ಕಾಂಗ್ರೆಸ್‌ನಲ್ಲಿ ಹೈಪ್ರೊಫೈಲ್ ಸ್ಥಾನಮಾನ ಹೊಂದಿದ್ದಾರೆ. ಚಿದು ಅವರು ಭ್ರಷ್ಟಾಚಾರದ ಆರೋಪ ಹೊಂದಿದ್ದರೂ, ಇಡೀ ಕಾಂಗ್ರೆಸ್ ಅವರ ಬೆನ್ನಿಗೆ ನಿಂತಿದ್ದು ವಿಶೇಷ.
ಚಿದು ನಿವಾಸದ ಮುಂದೆ ಹೈಡ್ರಾಮಾ
ಚಿದು ನಿವಾಸದ ಎಲ್ಲ ಗೇಟುಗಳನ್ನೂ ಮುಚ್ಚಲಾಗಿತ್ತು. ಹೀಗಾಗಿ, ಅಲ್ಲಿಗೆ ಬಂದ ಸಿಬಿಐ ಅಧಿಕಾರಿಗಳು ಒಳಪ್ರವೇಶಿಸಲು ಸಾಧ್ಯವಾಗಲಿಲ್ಲ. ಆದರೆ, ಚಿದುರನ್ನು ಬಂಧಿಸಿಯೇ ತೀರುವುದಾಗಿ ಪಣತೊಟ್ಟು ಬಂದಿದ್ದ ಅಧಿಕಾರಿಗಳು, ಚಿದು ಮನೆಯ ಗೇಟ್ ಅನ್ನು ಹತ್ತಿ, ನಂತರ ಗೋಡೆಯನ್ನೇರಿ ಒಳಪ್ರವೇಶಿಸುವಲ್ಲಿ ಯಶಸ್ವಿಯಾದರು. ಸುಮಾರು 100ಕ್ಕೂ ಅಧಿಕ ಪೊಲೀಸರು ನಿವಾಸವನ್ನು ಸುತ್ತುವರಿದರು. ಸಿಬಿಐ ನಿರ್ದೇಶಕ ಆರ್‌ಕೆ ಶುಕ್ಲಾ ತಮ್ಮ ಭದ್ರತಾ ಅಧಿಕಾರಿಗಳೊಂದಿಗೆ ಚಿದು ಮನೆ ಪ್ರವೇಶಿಸಿದರು.
ಭ್ರಷ್ಟಾಚಾರಕ್ಕೆ ಚಿದಂಬರಂಕ್ರಾಂತಿಕಾರಿ ಸ್ಪರ್ಶ: ಬಿಜೆಪಿ
ಪಿ. ಚಿದಂಬರಂ ಅವರ ಪರಿಸ್ಥಿತಿ ‘ಮಾಡಿದ್ದುಣ್ಣೋ ಮಹರಾಯ’ ಎಂಬಂತಾಗಿದೆ ಎಂದು ಬಿಜೆಪಿ ಹೇಳಿದೆ. ಸಿಬಿಐ ನೋಟಿಸ್ ಅನ್ನೂ ಲೆಕ್ಕಿಸದೆ ವಶಕ್ಕೆ ಪಡೆಯಲಿರುವ ತನಿಖಾಧಿಕಾರಿಗಳ ಕೈಗೂ ಸಿಗದೆ ಓಡಾಡಿದ್ದ ಚಿದಂಬರಂ ಅವರ ಬಗ್ಗೆ ಬುಧವಾರ ರಾತ್ರಿ, ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಮುಖ್ತಾರ್ ಅಬ್ಟಾಸ್ ನಖ್ವೀ, ಚಿದಂಬರಂ ಅವರು, ಭ್ರಷ್ಟಾಚಾರಕ್ಕೆ ಕ್ರಾಂತಿಕಾರಿ ಸ್ಪರ್ಶ ಕೊಟ್ಟವರು ಎಂದು ಟೀಕಿಸಿದರು. ”ಅಧಿಕಾರದಲ್ಲಿದ್ದಾಗ ತಾವು ಮಾಡಿದ ಕುಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಅವರು ಈಗ ಅನುಭವಿಸುತ್ತಿದ್ದಾರೆ” ಎಂದರು. ”ಚಿದಂಬರಂ ವಿರುದ್ಧ ಬಂಧನ ವಾರಂಟ್ ಹೊರಬಿದ್ದಿರುವುದನ್ನು ರಾಜಕೀಯ ಸೇಡು ಎಂದು ಕಾಂಗ್ರೆಸ್ ಬಣ್ಣಿಸುತ್ತಿದೆ. ಕಾಂಗ್ರೆಸ್ ಪಕ್ಷವು ಹೀಗೆ ಬಡಬಡಾಯಿಸುವುದನ್ನು ನೋಡಿದರೆ ಭ್ರಷ್ಟಾಚಾರಕ್ಕೂ ಕಾಂಗ್ರೆಸ್ಸಿಗೂ ಭಾರೀ ನಂಟು ಇರುವಂತೆ ಕಾಣುತ್ತದೆ” ಎಂದು ಅವರು ಟೀಕಿಸಿದ್ದಾರೆ.
ಸಿಗದ ಸುಪ್ರೀಂ ಅಭಯ
ಚಿದಂಬರಂಗೆ ಬುಧವಾರ ಸುಪ್ರೀಂಕೋರ್ಟ್‌ನಲ್ಲೂ ರಕ್ಷಣೆ ಸಿಗಲಿಲ್ಲ. ಜಾಮೀನು ನಿರಾಕರಿಸಿ ಮಂಗಳವಾರ ದೆಹಲಿ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ತ್ವರಿತ ವಿಚಾರಣೆಗೆ ಬುಧವಾರ ನಿರಾಕರಿಸಿದ ಸುಪ್ರೀಂ ಕೋರ್ಟ್, ಅರ್ಜಿಯನ್ನು ಶುಕ್ರವಾರ ವಿಚಾರಣೆಗೆ ಪರಿಗಣಿಸುವುದಾಗಿ ಹೇಳಿತು. ಸುಪ್ರೀಂ ಮೆಟ್ಟಿಲೇರಿದ್ದ ಚಿದಂಬರಂ ಪರ ವಕೀಲರಾದ ಕಪಿಲ್ ಸಿಬಲ್, ಅಭಿಷೇಕ್ ಮನು ಸಿಂಘ್ವಿ ಹಾಗೂ ಸಲ್ಮಾನ್ ಖುರ್ಷಿದ್, ಅರ್ಜಿಯ ತ್ವರಿತ ವಿಚಾರಣೆಗಾಗಿ ಬುಧವಾರ ಬೆಳಗ್ಗಿನಿಂದ ಸಂಜೆಯವರೆಗೂ ಸತತ ಪ್ರಯತ್ನ ನಡೆಸಿದರು.
ಬೆಳಗ್ಗೆ ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಎಂ. ಶಾಂತನಗೌಡರ್ ಮತ್ತು ಅಜಯ್ ರಸ್ತೋಗಿ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ಅರ್ಜಿಯನ್ನು ವಕೀಲ ಸಿಬಲ್ ಪ್ರಸ್ತಾಪಿಸಿದರು. ಆದರೆ, ನ್ಯಾಯಪೀಠವು ಇದನ್ನು ತ್ವರಿತ ವಿಚಾರಣೆಗೆ ಪರಿಗಣಿಸಬೇಕೇ, ಬೇಡವೇ ಎಂಬ ಬಗ್ಗೆ ಸಿಜೆಐ ರಂಜನ್ ಗೊಗೋಯ್ ಅವರೇ ನಿರ್ಧರಿಸಬೇಕಾಗುತ್ತದೆ. ಹಾಗಾಗಿ ಅವರ ಪರಿಶೀಲನೆಗೆ ಒಪ್ಪಿಸುತ್ತೇವೆ ಎಂದು ಹೇಳಿತು. ಸ್ವಲ್ಪ ಹೊತ್ತು ಕಾದರೂ, ಸುಪ್ರೀಂ ರಿಜಿಸ್ಟ್ರಾರ್‌ರಿಂದ ತ್ವರಿತ ವಿಚಾರಣೆ ಕುರಿತು ಯಾವುದೇ ಮಾಹಿತಿ ಲಭ್ಯವಾ ಗದ ಕಾರಣ, ಮತ್ತೂಮ್ಮೆ ಸಿಬಲ್ ಇದೇ ನ್ಯಾಯಪೀಠದ ಮುಂದೆ ಅರ್ಜಿ ಕುರಿತು ಪ್ರಸ್ತಾಪಿಸಿದರು.
ನಾನು ಎಲ್ಲಿಗೂ ಓಡಿ ಹೋಗುವುದಿಲ್ಲ’ ಎಂದು ಸ್ವತಃ ಚಿದಂಬರಂ ಅವರೇ ಲಿಖೀತವಾಗಿ ಅರಿಕೆ ಮಾಡಲು ಸಿದ್ಧರಿದ್ದಾರೆ ಎಂದೂ ಸಿಬಲ್ ಹೇಳಿದರು. ಆದರೆ, ಅದಕ್ಕೆ ಕಿವಿಗೊಡದ ನ್ಯಾಯಪೀಠ, ವಿಚಾರಣೆಯನ್ನು ಅಂತ್ಯಗೊಳಿಸಿತು. ಅಷ್ಟರಲ್ಲಿ ರಿಜಿಸ್ಟ್ರಾರ್, ‘ನಿಮ್ಮ ಅರ್ಜಿಯಲ್ಲಿ ಲೋಪಗಳಿದ್ದವು. ಅವುಗಳನ್ನು ನೀವು ಈಗಷ್ಟೇ ಸರಿಪಡಿಸಿದ್ದೀರಿ. ಅದನ್ನು ಸಿಜೆಐಗೆ ಸಲ್ಲಿಸುತ್ತೇವೆ’ ಎಂದು ಹೇಳಿತು.
ಸಿಜೆಐ ಕೋರ್ಟ್‌ನತ್ತ: ಸಿಜೆಐ ಗೊಗೋಯ್ ಅವರು ಸಂವಿಧಾನ ಪೀಠದಲ್ಲಿದ್ದುಕೊಂಡು ಅಯೋಧ್ಯೆ ಭೂವಿವಾದ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಕಾರಣ, ಅರ್ಜಿಯ ತ್ವರಿತ ವಿಚಾರಣೆ ನಡೆಯುವುದು ಕಷ್ಟಸಾಧ್ಯ ಎಂದು ಅರಿತ ಸಿಬಲ್, ಕೂಡಲೇ ಅಲ್ಲಿಂದ ಸಿಜೆಐ ಇರುವ ಕೋರ್ಟ್‌ರೂಂಗೆ ಧಾವಿಸಿದರು. ಅಲ್ಲಿ ಅರ್ಜಿಗೆ ಕುರಿತು ಮನವಿ ಮಾಡಲು ಯತ್ನಿಸಿ ವಿಫಲರಾದರು. ಅರ್ಜಿಯನ್ನು ಶುಕ್ರವಾರ ವಿಚಾರಣೆಗೆ ಪರಿಗಣಿಸುವುದಾಗಿ ಕೋರ್ಟ್ ಹೇಳಿದ ಕಾರಣ, ಸಿಬಲ್ ಮತ್ತು ತಂಡ ನಿರಾಸೆಗೊಂಡು ವಾಪಸಾಯಿತು.
ಲುಕ್‌ಔಟ್ ನೋಟಿಸ್: ಚಿದಂಬರಂರನ್ನು ದೇಶಬಿಟ್ಟು ತೆರಳದಂತೆ ತಡೆಯುವ ಸಲುವಾಗಿ ಅವರ ವಿರುದ್ಧ ಬುಧವಾರ ಬೆಳಗ್ಗೆಯೇ ಜಾರಿ ನಿರ್ದೇಶನಾಲಾಯವು ಲುಕ್‌ಔಟ್ ನೋಟಿಸ್ ಜಾರಿ ಮಾಡಿತು. ದೇಶದ ಎಲ್ಲ ವಿಮಾನನಿಲ್ದಾಣಗಳಿಗೂ ಅಲರ್ಟ್ ಕಳುಹಿಸಿ, ಚಿದು ಅವರು ಯಾವುದೇ ವಿಮಾನ ಹತ್ತದಂತೆ ನೋಡಿಕೊಳ್ಳಿ ಎಂದು ಸೂಚಿಸಲಾಗಿತ್ತು.