Advertisement

 ಅಪಾಯ ಆಹ್ವಾನಿಸುತ್ತಿದೆ ವಸತಿಗೃಹಗಳ ಶೌಚಗುಂಡಿ

04:53 PM Jan 26, 2018 | |

ಉಪ್ಪಿನಂಗಡಿ: 34ನೇ ನೆಕ್ಕಿಲಾಡಿ ಗ್ರಾ.ಪಂ.ನ ಆದರ್ಶ ನಗರದಲ್ಲಿ ಪಂಚಾಯತ್‌ನ ವಸತಿ ಗೃಹಗಳ ಆಳವಾದ ಶೌಚಗುಂಡಿ ಬಾಯ್ತೆರೆದು ನಿಂತಿದ್ದು, ಮೃತ್ಯುಕೂಪವಾಗಿ ಗೋಚರಿಸುತ್ತಿದೆ. ಶೌಚ ಗುಂಡಿಯ ಸ್ಲ್ಯಾಬ್ ಗಳು ಒಡೆದು ಒಂದು ವಾರವಾದರೂ ಗ್ರಾ.ಪಂ. ಮಾತ್ರ ಇದನ್ನು ಸರಿಪಡಿಸಿಲ್ಲ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬರುತ್ತಿದೆ.

Advertisement

ಆದರ್ಶನಗರದಲ್ಲಿ 34ನೇ ನೆಕ್ಕಿಲಾಡಿ ಗ್ರಾಮ ಪಂಚಾಯತ್‌ಗೆ ಸೇರಿದ ವಸತಿ ಗೃಹವಿದ್ದು, ಅಲ್ಲಿ ಸುಮಾರು ಏಳು ಮನೆಗಳಿವೆ. ಇದರ ಶೌಚ ಗುಂಡಿಯ ಮೇಲಿನ ಸ್ಲ್ಯಾಬ್ ಒಡೆದು ಹೋಗಿದ್ದು, ಅದೀಗ ಬಾಯ್ದೆರೆದು ನಿಂತು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.

ಈ ಶೌಚ ಗುಂಡಿ ಬಳಿಯೇ ಮುಈನುಲ್ಲ್ ಇಸ್ಲಾಂ ಮದ್ರಸವಿದ್ದು, ಅಲ್ಲಿ ಧಾರ್ಮಿಕ ವಿದ್ಯಾಭ್ಯಾಸಕ್ಕಾಗಿ ಬೆಳಗ್ಗಿನ ಜಾವ ಹಾಗೂ ರಾತ್ರಿ ವಿದ್ಯಾರ್ಥಿಗಳು ಬರುತ್ತಾರೆ. ದಾರಿಯ ಬದಿಯೇ ಇರುವುದರಿಂದ ಸ್ವಲ್ಪ ಎಡವಿದರೂ ಆಳವಾದ ಶೌಚ ಗುಂಡಿಗೆ ಬಿದ್ದು ಅಪಾಯವಾಗುವ ಸಾಧ್ಯತೆ ಇದೆ. ವಸತಿ ಗೃಹದಲ್ಲಿ ಹಲವು ಕುಟುಂಬಗಳು ವಾಸವಿದ್ದು, ಇದೇ ಪರಿಸರದಲ್ಲಿ 75ರಷ್ಟು ಮನೆಗಳಿವೆ. ಜನವಸತಿ ಪ್ರದೇಶವಾಗಿರುವ ಇಲ್ಲಿ ಮಕ್ಕಳು ಹಾಗೂ ಜನರ ಓಡಾಟ ಹೆಚ್ಚಾಗಿದ್ದು, ಅಪಾಯದ ಸಾಧ್ಯತೆ ನಿಚ್ಚಳವಾಗಿದೆ.

ದುರ್ವಾಸನೆ, ಸೊಳ್ಳೆ ಕಾಟ
ಶೌಚ ಗುಂಡಿ ತೆರೆದುಕೊಂಡಿರುವುದರಿಂದ ಪರಿಸರವಿಡೀ ದುರ್ವಾಸನೆ ಬೀರುತ್ತಿದ್ದು, ಸೊಳ್ಳೆಗಳ ಕಾಟ ಅಧಿಕವಾಗಿದೆ. ಇದರಿಂದ ಅಪಾಯ ಸಂಭವಿಸುವ ಸಾಧ್ಯತೆ ಕುರಿತು ಗಮನಕ್ಕೆ ತಂದರೂ ಸರಿಪಡಿಸಲು ಪಂಚಾಯತ್‌ ಆಡಳಿತ ನಿರ್ಲಕ್ಷ್ಯ ತಾಳಿದೆ. ಅಲ್ಲದೆ, ಇದರ ದುರಸ್ತಿಗೆ ಪಂಚಾಯತ್‌ ನಲ್ಲಿ ಹಣವಿಲ್ಲ ಎಂಬ ಉತ್ತರ ದೊರಕುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಇನ್ನಾದರೂ 34ನೇ ನೆಕ್ಕಿಲಾಡಿ ಪಂಚಾಯತ್‌ ಎಚ್ಚೆತ್ತುಕೊಂಡು ಅಪಾಯ ಸಂಭವಿಸುವ ಮೊದಲು ತನ್ನದೇ ವಸತಿ ಗೃಹದ ಶೌಚ ಗುಂಡಿಯನ್ನು ದುರಸ್ತಿಪಡಿಸುವುದು ಒಳಿತು. 

ಪಂಚಾಯತ್‌ ನಿರ್ಲಕ್ಷ್ಯ 
ಆದರ್ಶ ನಗರದ ವಸತಿ ಗೃಹದ ಶೌಚಗುಂಡಿಯ ಸ್ಲ್ಯಾಬ್ ಕುಸಿದಿರುವುದರಿಂದ ಅದು ಬಾಯ್ದೆರೆದು ನಿಂತಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಈ ಗುಂಡಿ ಸುಮಾರು 9 ಅಡಿ ಆಳವಿದ್ದು, ಮದ್ರಸ ಹಾಗೂ ಜನವಸತಿ ಪ್ರದೇಶವಾಗಿರುವುದರಿಂದ ಪರಿಸರದಲ್ಲಿ ಮಕ್ಕಳು, ಜನರ ಓಡಾಟ ಸಾಮಾನ್ಯ. ಸ್ವಲ್ಪ ಎಚ್ಚರ ತಪ್ಪಿದರೂ ಗುಂಡಿಗೆ ಬೀಳುವುದು ನಿಶ್ಚಿತ. ಈ ಬಗ್ಗೆ ಪಂಚಾಯತ್‌ ಗಮನಕ್ಕೆ ತಂದರೂ ಇದನ್ನು ಸರಿಪಡಿಸುವಲ್ಲಿ ಪಂಚಾಯತ್‌ ನಿರ್ಲಕ್ಷ್ಯ ತಾಳಿದೆ. ಕೇಳಿದಾಗ ದುರಸ್ತಿಗೆ ನಮ್ಮಲ್ಲಿ ಹಣವಿಲ್ಲ ಎಂಬ ಸಬೂಬು ನೀಡುತ್ತಿದೆ ಎಂದು ಸ್ಥಳೀಯರೇ ಹೇಳುತ್ತಾರೆ. ಇದು ಗ್ರಾ.ಪಂ.ನ ಆಸ್ತಿ. ವಸತಿ ಗೃಹಗಳ ಬಾಡಿಗೆಯೂ ಬರುತ್ತಿದೆ. ಹೀಗಾಗಿ, ಅದನ್ನು ತತ್‌ಕ್ಷಣ ಸರಿಪಡಿಸಬೇಕು. ನಿರ್ಲಕ್ಷ್ಯವಹಿಸಿದರೆ ಸಾರ್ವಜನಿಕರಿಗೆ ತೊಂದರೆ. ಅಪಾಯ ಸಂಭವಿಸುವ ಭೀತಿಯಿದೆ. ದುರ್ವಾಸನೆ ಹಾಗೂ ಸೊಳ್ಳೆಕಾಟ ಬೇರೆ. ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದ್ದು, ತತ್‌ಕ್ಷಣ 34ನೇ ನೆಕ್ಕಿಲಾಡಿ ಗ್ರಾ.ಪಂ. ಸಮಸ್ಯೆ ಪರಿಹರಿಸಬೇಕು ಎಂದು ಜೆಡಿಎಸ್‌ ಪುತ್ತೂರು ವಿಧಾನಸಭಾ ಕ್ಷೇತ್ರ ಕಾರ್ಯಾಧ್ಯಕ್ಷ ಅಬ್ದುರ್ರಹ್ಮಾನ್‌ ಯುನಿಕ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next