ಬಾಗಲಕೋಟೆ: ಮುಂಬರುವ ಲೋಕಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಬಾಗಲಕೋಟೆ ಕ್ಷೇತ್ರದಿಂದ ಸ್ಪರ್ಧಿಸುವಂತೆ ಆಹ್ವಾನ ನೀಡಲಾಗಿದೆ. ಹೌದು. ಇದು ಬಿಜೆಪಿಯ ಅಧಿಕೃತ ಆಹ್ವಾನವಲ್ಲ. ಆದರೆ, ಪ್ರಧಾನಿ ಕಚೇರಿಗೆ ಹಾಗೂ ಅವರ ವೈಯಕ್ತಿಕ ಟ್ವೀಟರ್‌ಗೆ ಜಿಲ್ಲೆಯ ಯುವಕರೊಬ್ಬರು ಆಹ್ವಾನ ನೀಡಿ ಗಮನ ಸೆಳೆದಿದ್ದಾರೆ.
ವೃತ್ತಿಯಿಂದ ವ್ಯಾಪಾರಸ್ಥ ಹಾಗೂ ಬಿಜೆಪಿ ಯುವ ಕಾರ್ಯಕರ್ತನೂ ಆಗಿರುವ ಮುಧೋಳದ ವಿಠ್ಠಲ ಪರೀಟ ಎಂಬುವರು ಪ್ರಧಾನಿ ಮೋದಿ ಕಚೇರಿಗೆ ಪತ್ರ ಬರೆದಿದ್ದು ಜತೆಗೆ ಟ್ವೀಟರ್ ಮೂಲಕ ಒತ್ತಾಯಿಸಿದ್ದಾರೆ. ಅಲ್ಲದೇ ಈ ಹಿಂದೆ ಎರಡು ಬಾರಿ ಇಂತಹ ಒತ್ತಾಯಿಸಿದ್ದನ್ನು ಪತ್ರದಲ್ಲಿ ಸ್ಮರಿಸಲಾಗಿದೆ.
ಪತ್ರದಲ್ಲಿ ಏನಿದೆ ?: ಪ್ರಧಾನಿ ಹೆಸರಿಗೆ ಪತ್ರ ಬರೆದು, ಈಗಾಗಲೇ ಎರಡು ಬಾರಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರ ಬಗ್ಗೆ ಅನೇಕ ಸಂಗತಿಗಳನ್ನು ತಮ್ಮ ಗಮನಕ್ಕೆ ತರಲಾಗಿದೆ. ಹಾಲಿ ಸಂಸದರ ಕ್ಷೇತ್ರ ವ್ಯಾಪ್ತಿ ದೊಡ್ಡದಾಗಿದ್ದು, ಓಡಾಡುವ ಇಚ್ಛಾಶಕ್ತಿ ಅವರಲ್ಲಿದ್ದರೂ ಶರೀರ ಸ್ಪಂದಿಸುವಂತೆ ಕಾಣುತ್ತಿಲ್ಲ. ಬಿಜೆಪಿ ಭದ್ರಕೋಟೆ ಎಂದೇ ಖ್ಯಾತಿ ಪಡೆದಿರುವ ಕಲ್ಯಾಣ ಚಾಲುಕ್ಯರು ಆಳಿದ ಈ ನಾಡಿಗೆ ಸಮರ್ಥ ದೊರೆಯ ಅವಶ್ಯಕತೆ ಇದೆ. ಅದು ಕೌಶಲ್ಯ ವೃದ್ಧಿಯಿಂದ ಯುವಕರಿಗೆ ಸೂಕ್ತ ನಿದರ್ಶನ ಆಗಬಲ್ಲ ಉತ್ಸಾಹ ಸಂಸದರ ಅವಶ್ಯಕತೆ ಇದೆ. ತಾವು ಜಾರಿಗೆ ತಂದಿರುವ ಗ್ಯಾಸ್ ಯೋಜನೆಯನ್ನು ಮನೆಗೆ ತಲುಪಿಸದ ಸಂಸದರಿಂದ ಪರಿವರ್ತನೆ ತರಲು ಸಾಧ್ಯವಿಲ್ಲ. ತಮ್ಮಲ್ಲಿ ಕಳಕಳಿ ವಿನಂತಿ ಏನೆಂದರೆ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕೇಸರಿ ನಾಡು, ಮುಳುಗಡೆ ನಗರಿ, ಚಾಲುಕ್ಯ ನಗರಿ, ಜಗತ್ಪ್ರಸಿದ್ಧ ನೂಲಿನ ಕೇಂದ್ರ ಬಾಗಲಕೋಟೆಯಿಂದ ಸ್ಪರ್ಧಿಸಿ, ಅಭಿವೃದ್ಧಿ ದಾಪುಗಾಲನ್ನಿಡಲು ಸಹಕರಿಸಬೇಕಿದೆ. ನಮ್ಮ ಜಿಲ್ಲೆಯಿಂದ ಸ್ಪರ್ಧೆ ಮಾಡಿ ಎಂದು ಪತ್ರದಲ್ಲಿ ಬರೆಯಲಾಗಿದೆ. ಈ ಪತ್ರಕ್ಕೆ ಪ್ರಧಾನಿ ಕಚೇರಿಯಿಂದ ಉತ್ತರ ಬಂದಿಲ್ಲ.