ತುಮಕೂರು: ಟ್ರ್ಯಾಕ್ಟರ್, ಟೆಂಪೋ, ಲಗೇಜು ಆಟೋಗಳು ಸೇರಿದಂತೆ ಸರಕು ಸಾಗಿಸುವ ವಾಹನಗಳಲ್ಲಿ ಜನರನ್ನು ಸಾಗಸಿಬಾರದು. ಒಂದು ಪಕ್ಷ ಜನರು ಅಂತಹ ವಾಹನಗಳಲ್ಲಿ ಸಂಚಾರ ಮಾಡುತ್ತಿದ್ದರೆ ಅಂತಹ ವಾಹನಗಳನ್ನು ವಶಕ್ಕೆ ಪಡೆದು ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಸೂಚಿಸಿದೆ. ಆದರೂ, ಸ್ಥಳೀಯ ಅಧಿಕಾರಸ್ಥರ ನಿರ್ಲಕ್ಷ್ಯದಿಂದ ಕಡುಬಡ ಕುಟುಂಬದ 5 ಜೀವಗಳು ಹೋಗಿದ್ದು, ಇನ್ನು ಹಲವರ ಬದುಕು ಅತಂತ್ರ ಸ್ಥಿತಿಯಲ್ಲಿವೆ.
ಕಲ್ಪತರು ನಾಡಿನ ಪ್ರಸಿದ್ಧ ಶ್ರೀಕ್ಷೇತ್ರ ಹತ್ಯಾಳು ನರಸಿಂಹಸ್ವಾಮಿ ಬೆಟ್ಟದಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ 5 ಜನ ಮೃತಪಟ್ಟು, 15ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಾಗಳಾಗಿರುವುದು ಈ ವರ್ಷದ ಅತೀ ದೊಡ್ಡ ದುರಂತವಾಗಿದೆ.
ಬೆಟ್ಟಕ್ಕೆ ಕಿರಿದಾದ ರಸ್ತೆ: ನಾಡಿನ ಪ್ರಸಿದ್ಧ ನರಸಿಂಹ ದೇವಾಲಯಗಳಲ್ಲಿ ಹತ್ಯಾಳು ನರಸಿಂಹಸ್ವಾಮಿ ದೇವಾಲಯವೂ ಒಂದು. ಈ ದೇವಾಲಯಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಬರುತ್ತಾರೆ. ವಿಶೇಷವಾಗಿ ಶನಿವಾರ, ಭಾನುವಾರ ಇಲ್ಲಿ ದೇವರಿಗೆ ಹರಿ ಸೇವೆ ಮಾಡುವುದು ವಿಶೇಷ. ಈ ಬೆಟ್ಟಕ್ಕೆ ಹೋಗಲು ರಸ್ತೆ ಅತ್ಯಂತ ಕಿರಿದಾಗಿದೆ. ಜೊತೆಗೆ ಹೆಚ್ಚು ಇಳಿಜಾರಾಗಿದೆ. ಮೇಲಿನಿಂದ ಬರುವ ವಾಹನಗಳನ್ನು ನಿಯಂತ್ರಣ ಮಾಡುವುದು ಬಹಳ ಕಷ್ಟ. ಈ ಬೆಟ್ಟಕ್ಕೆ ಟ್ರ್ಯಾಕ್ಟರ್‌ನಲ್ಲಿ 20ಜನ ಹೋಗಿ ದೇವರ ಪೂಜೆ ಮುಗಿಸಿಕೊಂಡು ವಾಪಸ್ ಬರುವಾಗ ಟ್ರ್ಯಾಕ್ಟರ್ ಪಲ್ಟಿಯಾಗಿ ಅದರಲ್ಲಿದ್ದ 5ಜನ ಮೃತಪಟ್ಟಿದ್ದಾರೆ.
ಟ್ರ್ಯಾಕ್ಟರ್ ಪಲ್ಟಿಯಾಗಿ ಅವಘಡ: ಜಿಲ್ಲೆಯ ತಿಪಟೂರು ತಾಲೂಕು ಹತ್ಯಾಳು ನರಸಿಂಹಸ್ವಾಮಿ ಬೆಟ್ಟದ ರಸ್ತೆ ಕಡಿದಾದ ಇಳಿಜಾರು ಆಗಿರುವುದರಿಂದ ನಿಯಂತ್ರಣಕ್ಕೆ ಬಾರದ ಟ್ರ್ಯಾಕ್ಟರ್ ಪಲ್ಟಿಯಾಗಿ ಅವಘಡ ಸಂಭವಿಸಿದೆ. ಇದೇ ವೇಳೆ ಟ್ರ್ಯಾಕ್ಟರ್ ಅಡಿ ಸಿಲುಕಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಇನ್ನೋರ್ವ ಸಾವನ್ನಪ್ಪಿ ದ್ದಾನೆ. ಮತ್ತೂಬ್ಬರು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಅಸುನಿಗಿದ್ದಾರೆ. ಎಲ್ಲರೂ ಕೂಡ ಚಿಕ್ಕನಾಯಕನಹಳ್ಳಿ ತಾಲೂಕಿನ ಮಾದಾಪುರ ಗ್ರಾಮದ ವರು. ತಿಪಟೂರು ತಾಲೂಕಿನ ಕೆಬಿ ಕ್ರಾಸ್ ಬಳಿಯ ಹತ್ಯಾಳು ನರಸಿಂಹ ಸ್ವಾಮಿ ದೇವಾಲಯಕ್ಕೆ ಬೆಳಗ್ಗೆ 7ಗಂಟೆಗೆ ಬಂದು ದೇವರಿಗೆ ಹರಕೆ ಹೊತ್ತಿದ್ದ ಹರಿ ಸೇವೆ ಮುಗಿಸಿಕೊಂಡು ವಾಪಸ್ ಹೋಗುವಾಗ ಶನಿವಾರ ಸಂಜೆ ಈ ಘಟನೆ ಸಂಭವಿಸಿದ್ದು, ಒಂದೇ ಕುಟುಂಬದ 3ಜನ ಮೃತಪಟ್ಟಿರುವುದು ಇಡೀ ಗ್ರಾಮದಲ್ಲಿ ದುಃಖ ಮಡುಗಟ್ಟಿದೆ.
ಘಟನೆಯಲ್ಲಿ ಟ್ರ್ಯಾಕ್ಟರ್ ಚಾಲಕ ಶಿವಲಿಂಗಪ್ಪ(45), ಶಂಕರಮ್ಮ(45), ದೊಡ್ಡಲಿಂಗಯ್ಯ(40)ಸ್ಥಳದಲ್ಲೇ ಮೃತಪಟ್ಟಿದ್ದರು. 7 ವರ್ಷದ ಭುವನ್ ಆಸ್ಪತ್ರೆಗೆ ತೆರಳುವಾಗ ಮಾರ್ಗ ಮಧ್ಯೆದಲ್ಲಿ ಸಾವನ್ನಪ್ಪಿದರೆ, ಮತ್ತೂಬ್ಬ ನಾಗರಾಜ್ ಎನ್ನುವವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇನ್ನು ಟ್ರ್ಯಾಕ್ಟರ್‌ನಲ್ಲಿದ್ದ ಸುಮಾರು 15ಮಂದಿ ಗಾಯಾಳುಗಳು ತಿಪಟೂರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು, ಸದ್ಯ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ಇದರಲ್ಲಿ ನಾಲ್ವರು ಮಕ್ಕಳಿದ್ದು, ಅವರ ಸ್ಥಿತಿಯೂ ಗಂಭೀರ ಎನ್ನಲಾಗಿದೆ. ತುಮಕೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ದ್ರಾಕ್ಷಾಯಿಣಿ(60), ಸುಧಾ(25), ಅನಿತಾ(16), ಗಂಗಮ್ಮ(35), ಪದ್ಮಾ(38), ಲಾವಣ್ಯ (13), ದೀಕ್ಷಾ(5), ಲೋಹಿತ್(8), ನಯನ(7)ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಲ್ಲಿ ಮೂರು ಮಕ್ಕಳ ಸ್ಥಿತಿ ಗಂಭೀರವಾಗಿದೆ. ಒಂದೇ ಕುಟುಂಬದ ದೊಡ್ಡ ಲಿಂಗಪ್ಪ, ಶಂಕರಮ್ಮ, ಈ ಇಬ್ಬರು ಗಂಡ ಹೆಂಡತಿ ಮೃತಪಟ್ಟರೆ ಅವರ ಮಗಳು ಸುಧಾ ಸ್ಥಿತಿ ಗಂಭೀರವಾಗಿದೆ. ಶಿವಲಿಂಗಯ್ಯ ಕುಟುಂಬದ ಅನಿತಾ ದೀಕ್ಷಾ ಅವರು ಒಂದೇ ಕುಟುಂಬದವರಾಗಿದ್ದಾರೆ. ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯಲ್ಲಿ ಗೌರಮ್ಮ, ಭುವನ್ ಈ ಇಬ್ಬರನ್ನೂ ದಾಖಲಿಸಲಾಗಿದ್ದು, ಸ್ಥಿತಿ ಗಂಭೀರವಾಗಿದೆ.
ಜಿಲ್ಲಾಡಳಿತ ಸರಕು ಸಾಗಾಣಿಕೆ ಸಾಗಿಸುವ ವಾಹನಗಳಲ್ಲಿ ಜನರ ಸಂಚಾರವನ್ನು ನಿಷೇಧಿಸಿದೆ. ಆದರೆ, ಟ್ರ್ಯಾಕ್ಟರ್‌ನಲ್ಲಿ ಹೆಚ್ಚು ಜನ ಬರುತ್ತಿದ್ದರಿಂದ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಇಂತಹ ಘಟನೆಗಳು ಹತ್ಯಾಳು ನರಸಿಂಹಸ್ವಾಮಿ ಬೆಟ್ಟದಲ್ಲಿ ಹೊಸದಲ್ಲ. ಆಗಿಂದಾಗ್ಗೆ ಸಂಭವಿಸುತ್ತವೆ. ಸರ್ಕಾರ ಈ ಬೆಟ್ಟಕ್ಕೆ ಹೋಗುವ ರಸ್ತೆ ಅಗಲೀಕರಣ ಮಾಡಿಲ್ಲ. ಬೆಟ್ಟದ ಮೇಲೆ ವಾಹನ ನಿಲುಗಡೆಗೆ ಹೆಚ್ಚು ಅವಕಾಶ ಮಾಡಿಲ್ಲ. ಸಾವಿರಾರು ಜನ ಭಕ್ತರು ಬರುವ ಇಂತಹ ಜಾಗದಲ್ಲಿ ಸರಿಯಾದ ವ್ಯವಸ್ಥೆ ಮಾಡದಿರುವುದು ವಿಪರ್ಯಾಸ. ಜಿಲ್ಲಾಡಳಿತ ಈ ಬಗ್ಗೆ ಹೆಚ್ಚು ಗಮನ ಹರಿಸಿ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯದಲ್ಲಿ ಇಂತಹ ದುರಂತಗಳು ಮುಂದೆ ಆಗದಂತೆ ಜಾಗೃತಿ ವಹಿಸುವುದು ತೀರಾ ಅಗತ್ಯ.
● ಚಿ.ನಿ.ಪುರುಷೋತ್ತಮ್