Advertisement

ರೈಲ್ವೇ ಗೇಟ್‌ ಬಳಿ ಅಡ್ಡಾದಿಡ್ಡಿ ಸಂಚರಿಸುವ ವಾಹನಗಳು

11:33 AM Oct 29, 2018 | |

ಹಳೆಯಂಗಡಿ: ಇಲ್ಲಿಂದ ಪಕ್ಷಿಕೆರೆಗೆ ತೆರಳುವ ರಸ್ತೆಯ ಇಂದಿರಾ ನಗರದ ರೈಲ್ವೇ ಗೇಟ್‌ನಲ್ಲಿ ವಾಹನಗಳು ಒಂದೊ ಕ್ಕೊಂದು ಪೈಪೋಟಿ ನಡೆಸಿ ಗೇಟಿಗೆ ಅಡ್ಡಾದಿಡ್ಡಿ ವಾಹನ ನಿಲ್ಲಿಸಿ ಸಂಚಾರ ನಿಯಮಗಳನ್ನು ಉಲ್ಲಂ ಸುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಗೇಟ್‌ ಹಾಕಿದ ತತ್‌ಕ್ಷಣ ವಾಹನಗಳೆಲ್ಲ ಎರಡೂ ಗೇಟಿನ ಮುಂಭಾಗದಲ್ಲಿ ನಿಂತು ಗೇಟನ್ನು ತೆಗೆಯುವ ಕ್ಷಣಕ್ಕಾಗಿ ನಾ ಮುಂದು ತಾ ಮುಂದು ಎಂದು ಚಲಿಸುವ ಭರದಲ್ಲಿ ಸಣ್ಣ ಪುಟ್ಟ ಅಪಘಾತಗಳು ಕೂಡ ನಡೆದಿವೆ.

Advertisement

ಕೋನ್‌ಗಳ ಮೇಲೆಯೇ ಸಂಚಾರ
ಇಲ್ಲಿ ಸುರಕ್ಷಿತ ವಾಹನ ಸಂಚಾರಕ್ಕಾಗಿ ಲಯನ್ಸ್‌ ಕ್ಲಬ್‌ ವತಿಯಿಂದ ರಸ್ತೆಗೆ ಪ್ಲಾಸ್ಟಿಕ್‌ ಕೋನ್‌ಗಳನ್ನು ಅಳವಡಿಸಲಾಗಿತ್ತು. ಆದರೆ ವೇಗವಾಗಿ ಪ್ರಯಾಣಿಸುವ ವಾಹನ ಸವಾರರು ಇದರ ಮೇಲೆ ವಾಹನಗಳನ್ನು ಕೊಂಡೊಯ್ಯುತ್ತಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಬಸ್‌ ಗಳಿಂದ ರಸ್ತೆ ಬ್ಲಾಕ್‌
ಕಿನ್ನಿಗೋಳಿಯಿಂದ ಹಳೆಯಂಗಡಿ ಮೂಲಕ ಮಂಗಳೂರಿಗೆ ಸಂಚರಿಸುವ ಬಸ್‌ಗಳಿಗೆ ಹಳೆಯಂಗಡಿ ಬಸ್‌ ನಿಲ್ದಾಣಕ್ಕೆ ನಿರ್ದಿಷ್ಟ ಸಮಯದಲ್ಲಿ ತಲುಪಬೇಕಾದ ಭರದಲ್ಲಿ ಬಸ್‌ಅನ್ನು ಗೇಟಿನ ಬಳಿ ಅಡ್ಡ ನಿಲ್ಲಿಸಿ ರಸ್ತೆ ಬ್ಲಾಕ್‌ ಮಾಡಿ ಇತರ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ತೊಂದರೆ ಕೊಡುತ್ತಿದ್ದಾರೆ ಎಂದು ನಿತ್ಯ ಪ್ರಯಾಣಿಕರು ಆರೋಪಿಸುತ್ತಾರೆ.

ಸಮಯದ ಹೊಂದಾಣಿಕೆ ತಪ್ಪಿದಲ್ಲಿ ರೈಲ್ವೇ ಗೇಟ್‌ನಿಂದ ಹಳೆಯಂಗಡಿವರೆಗೆ ಇರುವ ಕಿರಿದಾದ ರಸ್ತೆಯಲ್ಲಿಯೇ ಎರಡೆರಡು ಬಸ್‌ಗಳು ಪರಸ್ಪರ ಪೈಪೋಟಿಯಲ್ಲಿ ಒಂದೇ ಭಾರಿ ನುಗ್ಗುವಾಗ ಒಂದು ಕಡೆ ರಸ್ತೆ ಬ್ಲಾಕ್‌ ಆಗುತ್ತದೆ. ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದುಕೊಂಡೇ ನಡೆಯಬೇಕಾಗುತ್ತದೆ ಎನ್ನುತ್ತಾರೆ ಸ್ಥಳೀಯರು.

ಕ್ರಮ ಅಗತ್ಯ
ಇದರಿಂದ ಕೆಲವೊಮ್ಮೆ ಜಗಳಗಳೂ ನಡೆಯುತ್ತವೆ. ಹೀಗಾಗಿ ಸಂಚಾರಿ ಪೊಲೀಸರು ಇದನ್ನು ನಿಯಂತ್ರಿಸಬೇಕು. ವಾರದಲ್ಲಿ ಒಂದೆರಡು ದಿನವಾದರೂ ಪೊಲೀಸರು ಯಾವುದೇ ಮುನ್ಸೂಚನೆ ನೀಡದೆ ನಿಂತಲ್ಲಿ ಇಲ್ಲಿನ ಅವ್ಯವಸ್ಥೆಗೆ ಪರಿಹಾರ ಸಾಧ್ಯವಿದೆ. ಅಲ್ಲದೇ ನಿಯಮ ಉಲ್ಲಂಸುವವರ ವಿರುದ್ಧ ಕಠಿನ ಕ್ರಮಕೈಗೊಳ್ಳಬೇಕಿದೆ ಎನ್ನುತ್ತಾರೆ ಸ್ಥಳೀಯರು. 

Advertisement

ಕಾರ್ಯಾಚರಣೆ ನಡೆಸುತ್ತೇವೆ
ರೈಲ್ವೇ ಗೇಟ್‌ನಲ್ಲಿನ ಸಂಚಾರದ ಒತ್ತಡಕ್ಕೆ ಶೀಘ್ರದಲ್ಲಿಯೇ ವಿಶೇಷ ಕಾರ್ಯಾಚರಣೆ ನಡೆಸುತ್ತೇವೆ. ಈ ಬಗ್ಗೆ ಮಾಹಿತಿ ಪಡೆಯಲಾಗಿದೆ. ನಿಯಮಗಳನ್ನು ನಿರ್ಲಕ್ಷಿಸಿದಲ್ಲಿ ಪ್ರಕರಣ ದಾಖಲಿಸಲಾಗುವುದು.
– ಕಮಲಾ, ಇನ್‌ಸ್ಪೆಕ್ಟರ್‌,
ಉತ್ತರ ವಲಯ ಸಂಚಾರಿ ಠಾಣೆ,
ಬೈಕಂಪಾಡಿ.

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next