ಕರ್ನಾಟಕದ ರಾಜಧಾನಿ “ಸಿಲಿಕಾನ್ ಸಿಟಿ’ ಎಂದೇ ಖ್ಯಾತವಾಗಿರುವ ಬೆಂಗಳೂರಿನಲ್ಲಿ ಸದ್ಯ ನೀರಿನ ಸಮಸ್ಯೆ ಉಲ್ಬಣಿಸಿದೆ. ಕಳೆದ ಮಳೆಗಾಲದಲ್ಲಿ ವಾಡಿಕೆಯಷ್ಟು ಮಳೆ ಸುರಿಯದ್ದರಿಂದಾಗಿ ರಾಜ್ಯದ ಬಹುತೇಕ ಭಾಗಗಳಲ್ಲಿ ಬರದ ಪರಿಸ್ಥಿತಿ ತಲೆದೋರಿದೆ. ಇದರ ಪರಿಣಾಮ ನೈಸರ್ಗಿಕ ಜಲಮೂಲಗಳು ಬತ್ತಿ ಹೋಗಿದ್ದು ಹಲವೆಡೆ ಕುಡಿಯುವ ನೀರಿಗೂ ತತ್ವಾರ ಬಂದೊದಗಿದೆ. ಇದೇ ವೇಳೆ ಕಳೆದೊಂದು ತಿಂಗಳಿಂದೀಚೆಗೆ ಬಿಸಿಲಿನ ಝಳ ವಿಪರೀತ ಹೆಚ್ಚಿದ್ದು ನದಿ, ಜಲಾಶಯಗಳಲ್ಲಿನ ನೀರಿನ ಪ್ರಮಾಣ ದಿನೇ ದಿನೆ ಕಡಿಮೆಯಾಗುತ್ತಿದೆ. ಇದರ ಪರಿಣಾಮವಾಗಿ ನಗರ ಪ್ರದೇಶಗಳಲ್ಲಿ ಸಮರ್ಪಕವಾಗಿ ನೀರು ಪೂರೈಸಲು ನಗರಾಡಳಿತ ಸಂಸ್ಥೆಗಳು ಹರಸಾಹಸ ಪಡುತ್ತಿವೆ. ನೀರಿನ ತೀವ್ರ ಅಭಾವ ನಗರದ ಜನರನ್ನು ಹೈರಾಣಾಗಿಸಿದೆ. ನೆರೆಯ ಕೇರಳ ಸರಕಾರ ಇದನ್ನೇ ಬಂಡವಾಳ ಮಾಡಿಕೊಳ್ಳಲು ಮುಂದಾಗಿದ್ದು, ಮಾಹಿತಿ ತಂತ್ರಜ್ಞಾನ ಕಂಪೆನಿಗಳಿಗೆ ರಾಜ್ಯಕ್ಕೆ ಬರುವಂತೆ ಬಹಿರಂಗ ಆಹ್ವಾನ ನೀಡಿದೆ. ನೈಸರ್ಗಿಕ ವಿಪತ್ತನ್ನು ದಾಳವನ್ನಾಗಿಸಿಕೊಳ್ಳ ಹೊರಟ ಕೇರಳ ಸರಕಾರದ ಈ ನಡೆ ಬಾಲಿಶತನದ ಪರಮಾವಧಿಯೇ ಸರಿ.
ಮಳೆ ಕೊರತೆಯಿಂದಾಗಿ ಕರ್ನಾಟಕದಲ್ಲಿ ನೀರಿನ ಅಭಾವ ತಲೆದೋರಿದ್ದು ಇದು ಕೇವಲ ರಾಜ್ಯಕ್ಕೆ ಮಾತ್ರ ಸೀಮಿತವಾಗಿರದೆ ದೇಶದ ವಿವಿಧೆಡೆಗಳಲ್ಲಿ ಬರ ಕಾಣಿಸಿಕೊಂಡಿದೆ. ನೀರಿನ ಅಭಾವ ತೀವ್ರವಾಗಿರುವ ಈ ಸಂದರ್ಭದಲ್ಲಿ ಬೆಂಗಳೂರು ಆದಿಯಾಗಿ ಮಹಾನಗರಗಳಲ್ಲಿ ಸಮರ್ಪಕವಾಗಿ ನೀರು ಪೂರೈಸುವುದು ಹರಸಾಹಸವೇ ಸರಿ. ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುವ ಪ್ರಯತ್ನ ಸಾಗಿದ್ದರೂ ಪೂರ್ಣ ಪ್ರಮಾಣದಲ್ಲಿ ನೀರು ಪೂರೈಸುವುದು ಅಸಾಧ್ಯದ ಮಾತೇ ಸರಿ. ಸದ್ಯದ ವಾಸ್ತವ ಸ್ಥಿತಿಯಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುವುದು ಕಷ್ಟಸಾಧ್ಯವೇ. ಇದರ ಹೊರತಾಗಿಯೂ ಸರಕಾರ ಮತ್ತು ಪಾಲಿಕೆ ನಗರದ ಜನತೆಗೆ ನೀರು ಪೂರೈಸಲು ತನ್ನ ಕೈಲಾದಷ್ಟು ಪ್ರಯತ್ನವನ್ನು ಮಾಡುತ್ತಿದೆ.
ಇಂತಹ ಪರಿಸ್ಥಿತಿಯಲ್ಲಿ ನೆರೆಯ ರಾಜ್ಯವೊಂದು ನೀರಿನ ಅಭಾವವನ್ನು ಮುಂದಿಟ್ಟು ಐಟಿ ಕಂಪೆನಿಗಳನ್ನು ತನ್ನತ್ತ ಸೆಳೆಯುವ ಪ್ರಯತ್ನಕ್ಕೆ ಕೈಹಾಕಿರುವುದು ವಿವೇಚನಾರಹಿತ ನಡೆಯಾಗಿದೆ. ಐಟಿ ಕಂಪೆನಿಗಳಾದಿಯಾಗಿ ಕೈಗಾರಿಕೆಗಳಿಗೆ ಅತ್ಯವಶ್ಯವಾಗಿರುವ ಮೂಲಸೌಕರ್ಯಗಳನ್ನು ಒದಗಿಸಿಕೊಟ್ಟು, ಒಂದಿಷ್ಟು ಪ್ರೋತ್ಸಾಹದಾಯಕ ಯೋಜನೆಗಳನ್ನು ಘೋಷಿಸುವ ಮೂಲಕ ರಾಜ್ಯ ಸರಕಾರಗಳು ಕೈಗಾರಿಕೋದ್ಯಮಿಗಳನ್ನು ಆಹ್ವಾನಿಸುವುದು ಹೊಸದೇನಲ್ಲ. ಆದರೆ ಅಚ್ಚರಿ ಎಂದರೆ ರಾಜ್ಯ ಸರಕಾರವೊಂದು ಬೆಂಗಳೂರಿನಲ್ಲಿನ ಸದ್ಯ ತಲೆದೋರಿರುವ ನೀರಿನ ಅಭಾವವನ್ನೇ ನೆಪವಾಗಿಸಿ, “ನಾವು ನೀರಿನ ಸಹಿತ ಎಲ್ಲ ಮೂಲಸೌಕರ್ಯಗಳನ್ನು ಒದಗಿಸುತ್ತೇವೆ, ರಾಜ್ಯದಲ್ಲಿ ನಿಮ್ಮ ಕಂಪೆನಿಗಳನ್ನು ತೆರೆಯಿರಿ’ ಎಂದು ಐಟಿ ಕಂಪೆನಿಗಳಿಗೆ ಆಹ್ವಾನ ನೀಡುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಕೇರಳದ ಕೈಗಾರಿಕ ಸಚಿವರು ಸ್ವತಃ ಐಟಿ ಕಂಪೆನಿಗಳಿಗೆ ಪತ್ರ ಬರೆದು ಇಂತಹ ಆಹ್ವಾನ ನೀಡಿರುವುದು ವಿರೋಧಾಭಾಸ ಮಾತ್ರವಲ್ಲದೆ ಹಾಸ್ಯಾಸ್ಪದ ಕೂಡ.
ಬೆಂಗಳೂರಿನಂತೆ ಕೇರಳವನ್ನು ಐಟಿ ಕೇಂದ್ರವನ್ನಾಗಿಸುವ ಅಲ್ಲಿನ ಸರಕಾರ ಉದ್ದೇಶ ಉತ್ತಮವಾದುದೆ. ಆದರೆ ಬೆಂಗಳೂರಿನಲ್ಲಿ ನೀರಿನ ಅಭಾವವಿದೆ. ನಮ್ಮಲ್ಲಿ 44 ನದಿಗಳಿವೆ, ನೀರಿನ ಸಮಸ್ಯೆಯೇ ಇಲ್ಲ ಎಂಬ ಉಲ್ಲೇಖವೇ ಕೇರಳದ ಸಚಿವರ ನೈಜ ಕಳಕಳಿ ಏನು ಎಂಬ ಪ್ರಶ್ನೆ ಮೂಡಿಸುತ್ತದೆ. ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ನೆರೆಯ ರಾಜ್ಯಗಳು ಸಂಕಷ್ಟಪೀಡಿತ ರಾಜ್ಯಗಳಿಗೆ ನೆರವಿನ ಹಸ್ತ ಚಾಚಬೇಕಿರುವುದು ಒಕ್ಕೂಟ ವ್ಯವಸ್ಥೆಯ ಮೂಲಧರ್ಮ. ಇದನ್ನು ಬಿಟ್ಟು ಸಂಕಷ್ಟದ ಸಂದರ್ಭದಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳುವ ಮನೋಧರ್ಮ ಸರಿಯಲ್ಲ.