Advertisement
ಮುಸ್ಲಿಂ ದೇಶಗಳ ಸಂಘಟನೆಯೊಂದರಿಂದ ಆಹ್ವಾನ ಬಂದಿರುವುದು ಇದೇ ಮೊದಲಾಗಿದ್ದು, ಪುಲ್ವಾಮಾ ಘಟನೆ ನಂತರ ಪಾಕಿಸ್ಥಾನವನ್ನು ಮೂಲೆ ಗುಂಪು ಮಾಡಲು ಭಾರತ ಪ್ರಯತ್ನಿಸುತ್ತಿರುವ ಈ ಹೊತ್ತಿನಲ್ಲೇ ಮುಸ್ಲಿಂ ರಾಷ್ಟ್ರಗಳ ಒಕ್ಕೂಟದಿಂದ ಬಂದಿರುವ ಆಮಂತ್ರಣ ರಾಜಕೀಯವಾಗಿ ಭಾರೀ ಮಹತ್ವ ಪಡೆದುಕೊಂಡಿದೆ. ಅಬುಧಾಬಿಯಲ್ಲಿ ಮಾ.1 ಮತ್ತು 2ರಂದು ನಡೆಯಲಿರುವ ಈ ಸಮ್ಮೇಳನದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪಾಲ್ಗೊಳ್ಳಲಿದ್ದಾರೆ.ಭಾರತದ ಸಂತಸ: ಆಹ್ವಾನ ಅಂಗೀಕರಿಸಿರುವ ಭಾರತದ ವಿದೇಶಾಂಗ ಇಲಾಖೆ, 18.5 ಕೋಟಿಯಷ್ಟು ಮುಸ್ಲಿಮರ ಪ್ರತಿನಿಧಿಯಾಗಿ ಭಾರತ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದೆ ಎಂದಿದೆ.
1969ರಲ್ಲಿ ಒಐಸಿ ಸ್ಥಾಪನೆಯಾದಾಗಲೇ, ಕೆಲ ಮುಸ್ಲಿಮೇತರ ರಾಷ್ಟ್ರ ಗಳನ್ನೂ ಪರಿವೀಕ್ಷಣಾ ಸದಸ್ಯರೆಂಬ ಪರಿಕಲ್ಪನೆಯಲ್ಲಿ ಒಕ್ಕೂಟದೊಳಗೆ ಸೇರಿಸಿಕೊಳ್ಳಬೇಕೆಂಬ ಪ್ರಸ್ತಾವನೆಯಿತ್ತು. ಆಗಲೇ ಭಾರತದ ಹೆಸರು ಪ್ರಸ್ತಾಪವಾಗಿತ್ತು. ಆದರೆ ಇದನ್ನು ಪಾಕ್ ವಿರೋಧಿಸಿತ್ತು. ಒಕ್ಕೂಟದ ಸಂಸ್ಥಾಪನೆ ವೇಳೆ ಕ್ಯಾತೆ ತೆಗೆದಿದ್ದ ಪಾಕ್ ಅಂದಿನ ಅಧ್ಯಕ್ಷ ಯಾಹ್ಯಾ ಖಾನ್, ಐಒಸಿಯಲ್ಲಿ ಭಾರತ ಕಾಲಿಡುವಂತಿಲ್ಲ ಎಂದು ಪಟ್ಟು ಹಿಡಿದಿದ್ದರಿಂದ ಭಾರತಕ್ಕೆ ಒಐಸಿ ಗೌರವ ಸದಸ್ಯತ್ವ ಸಿಕ್ಕಿರಲಿಲ್ಲ. ಅಲ್ಲಿಂದ ಈವರೆಗೂ ಒಐಸಿಯ ಪ್ರತಿ ವಾರ್ಷಿಕ ಸಮ್ಮೇಳನದಲ್ಲೂ ಪಾಕಿಸ್ಥಾನ, ಕಾಶ್ಮೀರ ವಿಚಾರ ಮುಂದಿಟ್ಟುಕೊಂಡು ಭಾರತದ ವಿರುದ್ಧ ಅಪಪ್ರಚಾರ ಮಾಡುತ್ತಲೇ ಬಂದಿತ್ತು. ಅದರ ಪರಿಣಾಮ, ಕಳೆದ ವರ್ಷ ಒಐಸಿಯು ಕಾಶ್ಮೀರದಲ್ಲಿ ಭಾರತದ ಸಶಸ್ತ್ರ ಪಡೆಗಳು ಸ್ಥಳೀಯರನ್ನು ಹತ್ಯೆಗೈದಿದ್ದು ಭಯೋತ್ಪಾದಕ ಕೃತ್ಯ ಎಂದು ಘೋಷಿಸಿತ್ತು. ಆದರೆ, ಈಗ ತಾವು ಪಾಕಿಸ್ಥಾನದ ಪರವಾಗಿಯೇ ಇದ್ದಲ್ಲಿ ಮುಸ್ಲಿಂ ರಾಷ್ಟ್ರಗಳ ಭವಿಷ್ಯ ಡೋಲಾಯಮಾನವಾಗಲಿದೆ ಎಂಬುದನ್ನು ಅರ್ಥ ಮಾಡಿಕೊಂಡಿರುವ ಒಐಸಿ ಈಗ ಭಾರತದ ಕಡೆಗೆ ಸ್ನೇಹ ಹಸ್ತ ಚಾಚಿದೆ. ಇದು ಖಂಡಿತವಾಗಿಯೂ ಪಾಕಿಸ್ಥಾನಕ್ಕಾದ ಮುಖಭಂಗ ಎಂದು ರಾಜತಂತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.