ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 3,386.60 ಕೋ.ರೂ. ಮೊತ್ತದ 12 ಯೋಜನೆಗಳು ಅನುಷ್ಠಾನದ ಹಂತದಲ್ಲಿದ್ದು, ಒಟ್ಟು 5,775 ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ. ಕೊರೊನಾ ಕಾಲಘಟ್ಟದಲ್ಲಿ ಇಷ್ಟು ಪ್ರಮಾಣದ ಬಂಡವಾಳ ಹೂಡಿಕೆ ಕರಾವಳಿಯ ಆರ್ಥಿಕತೆಗೆ ಚೈತನ್ಯ ತುಂಬುವ ನಿರೀಕ್ಷೆ ಮೂಡಿಸಿದೆ.
ದ.ಕ. ಜಿಲ್ಲೆಯಲ್ಲಿ ಪ್ಯಾಕೇಜಿಂಗ್ ಮತ್ತು ಪ್ರಿಂಟಿಂಗ್, ಶಿಪ್ಪಿಂಗ್ ಕಂಟೈನರ್, ಐಟಿ, ಲಾಜಿಸ್ಟಿಕ್, ಗಾಜಿನ ಉದ್ದಿಮೆ ಮುಂತಾದ ಕ್ಷೇತ್ರಗಳಲ್ಲಿ ಒಟ್ಟು 8 ಕಂಪೆನಿಗಳು ಬಂಡವಾಳ ಹೂಡಿಕೆ ಮಾಡುತ್ತಿವೆ. ಒಟ್ಟು 3,129.37 ಕೋ.ರೂ. ಹೂಡಿಕೆಯಾಗುತ್ತಿದ್ದು, 5,513 ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.
ಉಡುಪಿ ಜಿಲ್ಲೆಯಲ್ಲಿ ಫುಡ್ ಪಾರ್ಕ್, ಪೇಪರ್‌ಮಿಲ್, ಸೂರ್ಯಕಾಂತಿ ಮತ್ತು ತಾಳೆ ಎಣ್ಣೆ ಹಾಗೂ ಬಯೋಡೀಸೆಲ್ ಕ್ಷೇತ್ರಗಳಲ್ಲಿ 4 ಕಂಪೆನಿಗಳು ಹೂಡಿಕೆ ಮಾಡುತ್ತಿದ್ದು, 157.23 ಕೋ.ರೂ. ಬಂಡವಾಳ ಹೂಡಿಕೆಯಾಗುತ್ತಿದೆ. 276 ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ.
ದಕ್ಷಿಣ ಕನ್ನಡದಲ್ಲಿ ಹೂಡಿಕೆ :
ಮಂಗಳೂರು ಮೂಲದ ಸಂಸ್ಥೆ ಯಿಂದ ಕಾರ್ನಾಡು ಕೈಗಾರಿಕಾ ಪ್ರದೇಶದಲ್ಲಿ 17.25 ಕೋ.ರೂ. ವೆಚ್ಚದಲ್ಲಿ ಪ್ಯಾಕೇಜಿಂಗ್ ಮತ್ತು ಪ್ರಿಂಟಿಂಗ್ ಉದ್ದಿಮೆ (ಉದ್ಯೋ ಗಾವಕಾಶ-35) ಬೆಂಗಳೂರು ಮೂಲದ ಕಂಪೆನಿಯಿಂದ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ 20.02 ಕೋ.ರೂ. ವೆಚ್ಚದಲ್ಲಿ ಶಿಪ್ಪಿಂಗ್ ಕಂಟೈನರ್ ಯಾರ್ಡ್, ದುರಸ್ತಿ ಮತ್ತು ಸೇವಾ ಉದ್ದಿಮೆ (ಉ.-155), ಮಂಗಳೂರು ಮೂಲದ ಉದ್ದಿಮೆಯಿಂದ ಗಂಜೀಮಠ ಕೈಗಾರಿಕಾ ಪ್ರದೇಶದಲ್ಲಿ 17.35 ಕೋ.ರೂ. ವೆಚ್ಚದಲ್ಲಿ ಏರ್‌ಕಂಡಿಶನಿಂಗ್ ಉದ್ದಿಮೆ (ಉ-120), ಬೆಂಗಳೂರಿನ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ವತಿಯಿಂದ ಕಾರ್ನಾಡ್‌ನಲ್ಲಿ 495 ಕೋ.ರೂ. ವೆಚ್ಚದಲ್ಲಿ ಐಟಿ ಸಂಬಂಧಿತ ಸೇವಾ ಘಟಕ (ಉ-4010), ಮುಡಿಪು ಮೂಲದ ಉದ್ದಿಮೆಯಿಂದ ಕೈರಂಗಳದಲ್ಲಿ 17.25 ಕೋ.ರೂ. ವೆಚ್ಚದಲ್ಲಿ ಸಾಲಿಡ್ ಬ್ಲಾಕ್ಸ್, ಹೋಲೋ ಬ್ಲಾಕ್ಸ್ ತಯಾರಿ ಉದ್ದಿಮೆ (ಉ-68), ಮಂಗಳೂರಿನ ಲಾಜಿಸ್ಟಿಕ್ ಕಂಪೆನಿಯೊಂದರಿಂದ ತಣ್ಣೀರುಬಾವಿಯಲ್ಲಿ 15 ಕೋ.ರೂ. ವೆಚ್ಚದಲ್ಲಿ ಲಾಜಿಸ್ಟಿಕ್ ಪಾರ್ಕ್ (ಉ-125), ಮಂಗಳೂರಿನ ಉದ್ದಿಮೆಯೊಂದರಿಂದ ಗಂಜೀಮಠ ದಲ್ಲಿ 15.20 ಕೋ.ರೂ. ವೆಚ್ಚದಲ್ಲಿ ಪ್ರಿಸೆಸನ್ ಕಂಪೋನೆಂಟ್, ಸ್ಟ್ರಕ್ಚರಲ್ ಮೆಟಲ್ ಎಂಜಿನಿಯರಿಂಗ್ ಉದ್ದಿಮೆ (ಉ-44)ಹಾಗೂ ಉತ್ತರಾಖಂಡದ ಗೋಲ್ಡ್‌ಪ್ಲಸ್ ಗ್ಲಾಸ್ ಇಂಡಸ್ಟ್ರೀಸ್ ಕಂಪೆನಿಯಿಂದ 2527 ಕೋ.ರೂ. ವೆಚ್ಚದಲ್ಲಿ ಗ್ಲಾಸ್ ಹಾಗೂ ಗ್ಲಾಸ್ ಉತ್ಪನ್ನಗಳು ತಯಾರಿ ಘಟಕ (ಉ-956) ಸ್ಥಾಪನೆಯಾಗಲಿದೆ.
ಉಡುಪಿಯಲ್ಲಿ ಹೂಡಿಕೆ :
ಉಡುಪಿಯ ನಂದಿಕೂರು ಕೈಗಾರಿಕಾ ಪ್ರದೇಶದಲ್ಲಿ ಕೊಯಮುತ್ತೂರು ಮೂಲದ ಕಂಪೆನಿಯೊಂದರಿಂದ 15.50 ಕೋ.ರೂ. ವೆಚ್ಚದಲ್ಲಿ ಪೇಪರ್ ಮಿಲ್ ಉದ್ದಿಮೆ (ಉ-66) ಶ್ರೀರಂಗಪಟ್ಟಣ ಮೂಲದ ಕಂಪೆನಿಯೊಂದರಿಂದ ನಂದಿಕೂರಿನಲ್ಲಿ 96 ಕೋ.ರೂ. ವೆಚ್ಚದಲ್ಲಿ ಪಾಮ್ ಆಯಿಲ್, ಸನ್‌ಫ್ಲವರ್ ಆಯಿಲ್ ಹಾಗೂ ಬಯೋಡೀಸೆಲ್ ಘಟಕ (ಉ-100) ಹಾಗೂ ಪಡುಬಿದ್ರಿ ಮೂಲದ ಕಂಪೆನಿಯೊಂದರಿಂದ ನಂದಿಕೂರಿನಲ್ಲಿ 18.95 ಕೋ.ರೂ. ವೆಚ್ಚದಲ್ಲಿ ಪಿಪಿ ವೊವೆನ್ ಫ್ಯಾಬ್ರಿಕ್ಸ್ (ಉ-102)ಉದ್ದಿಮೆಗಳು ಸ್ಥಾಪನೆಯಾಗಲಿದೆ. ಇದಲ್ಲದೆ ಕಾರ್ಕಳದ ಉದ್ದಿಮೆಯೊಂದರಿಂದ ಕಾರ್ಕಳದ ಮುಡಾರಿನಲ್ಲಿ 26.78 ಕೋ.ರೂ. ವೆಚ್ಚದಲ್ಲಿ ಪುಡ್ ಪಾರ್ಕ್ ಉದ್ದಿಮೆ ಪ್ರಸ್ತಾವನೆ ಬಹುತೇಕ ಅಂತಿಮಗೊಂಡಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಕೆಲವು ಉದ್ದಿಮೆಗಳು ಸಲ್ಲಿಸಿದ್ದ ಹೊಸ ಹೂಡಿಕೆ ಯೋಜನೆಗಳು ಅನುಮೋದನೆಗೊಂಡು ಅನುಷ್ಠಾನ ಪ್ರಗತಿಯಲ್ಲಿದೆ. ಪ್ರಸ್ತುತ ಕಾರ್ಯಾನು ಷ್ಠಾನದಲ್ಲಿರುವ ಯೋಜನೆಗಳಿಂದ ಎರಡು ಜಿಲ್ಲೆಗಳಲ್ಲಿ 5 ಸಾವಿರಕ್ಕೂ ಹೆಚ್ಚು ಉದ್ಯೋಗಾವ ಕಾಶಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ.
– ಗೋಕುಲ್‌ದಾಸ್ ನಾಯಕ್,ಕೈಗಾರಿಕಾ ಜಂಟಿ ನಿರ್ದೇಶಕರು ದ.,ಕ., ಉಡುಪಿ
-ಕೇಶವ ಕುಂದರ್