ಬೆಂಗಳೂರು: ಶುಗರ್ ಡೀಲರ್ ವ್ಯವಹಾರದಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಂಶ ನೀಡುವುದಾಗಿ ಹಾಗೂ ಉದ್ಯೋಗ ಕೊಡಿಸುವುದಾಗಿ ಮೂವರು ಯುವಕರಿಂದ 36 ಲಕ್ಷ ರೂ. ಪಡೆದು ವಾಪಸ್ ನೀಡದೆ ವಂಚಿಸಿದ್ದ ಮಹಿಳೆ ವಿರುದ್ಧ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾಲಕ್ಷ್ಮೀ ಎಂಟರ್ ಪ್ರೈಸಸ್ ಕಂಪನಿ ಮಾಲೀಕರಾದ ಮಹಾಲಕ್ಷ್ಮೀ (42) ವಿರುದ್ಧ ಪ್ರಕರಣ ದಾಖಲಾಗಿದೆ. ಎಫ್‌ಐಆರ್ ದಾಖಲಾಗುತ್ತಿದ್ದಂತೆ ತಲೆ ಮರೆಸಿಕೊಂಡಿರುವ ಈ ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಯಶವಂತಪುರ ಇಂಡಸ್ಟ್ರಿಯಲ್ ಸಬ್ ಹರ್ಬ್ ನಂ-3ಸಿ 3ನೇ ಮಹಡಿಯಲ್ಲಿ ಮಹಾಲಕ್ಷ್ಮೀ ಎಂಟರ್‌ಪ್ರೈಸಸ್ ಕಂಪನಿ ತೆರೆದಿದ್ದು, ಅವರು ಶುಗರ್ ಡೀಲರ್ ಆಗಿ ಕೆಲಸ ಮಾಡುತ್ತಿದ್ದರು. ಈ ವ್ಯವಹಾರಕ್ಕೆ ಹೂಡಿಕೆ ಮಾಡುವಂತೆ ಹೊಳೆನರಸೀಪುರದ ಲತಾ ಎಂಬುವವರಿಗೆ ಒತ್ತಾಯಿಸಿದ್ದರು. ಅಲ್ಲದೇ, ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಂಶ ನೀಡುವುದಾಗಿ ನಂಬಿಸಿ 2019ರಲ್ಲಿ ಲತಾ ಅವರಿಂದ 24 ಲಕ್ಷ ರೂ. ಹೂಡಿಕೆ ಮಾಡಿಸಿಕೊಂಡಿದ್ದರು. ಆದರೆ, ಇದುವರೆಗೂ ಹಣ ವಾಪಸ್ ನೀಡಿಲ್ಲ. ಇತ್ತ ಸುಧಾಕರ್ ಎಂಬುವವರಿಂದಲೂ ಇದೇ ರೀತಿ 14 ಲಕ್ಷ ರೂ. ಹೂಡಿಕೆ ಮಾಡಿಸಿಕೊಂಡು, 5 ಲಕ್ಷ ರೂ. ಮಾತ್ರ ವಾಪಸ್ ನೀಡಿದ್ದಾರೆ ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ:ಪಿಎಸ್ಐ ಹಗರಣದಲ್ಲಿ ಕೈ ಹಾಕಿರುವರು ಇನ್ನೊಮ್ಮೆ ಮುಟ್ಟಿ ನೋಡಬೇಕು: ಆರಗ ಜ್ಞಾನೇಂದ್ರ
ರಾಜ್ಯದ ಎಲ್ಲ ಪಕ್ಷದ ರಾಜಕೀಯ ನಾಯಕರು ತನಗೆ ಪರಿಚಯವಿದ್ದಾರೆ ಎಂದು ಹೇಳಿಕೊಂಡಿರುವ ಮಹಾಲಕ್ಷ್ಮೀ ಯಾವುದೇ ಕೆಲಸವಿದ್ದರೂ ಮಾಡಿಸಿಕೊಡುವುದಾಗಿ ನಂಬಿಸುತ್ತಿದ್ದರು. ಈ ಮಾತನ್ನು ನಂಬಿದ ಕಾಂತರಾಜು ಎಂಬಾತ ಕೂಡ ತಮ್ಮ ಸಂಬಂಧಿಕರ ಮಗನೊಬ್ಬನಿಗೆ ಸರ್ಕಾರಿ ಕೆಲಸ ಕೊಡಿಸುವಂತೆ ಕೇಳಿದ್ದರು. ಅದಕ್ಕಾಗಿಯೇ 3 ಲಕ್ಷ ರೂ. ಪಡೆದುಕೊಂಡಿದ್ದರು. ಆದರೆ, ಇದುವರೆಗೂ ಯಾವುದೇ ಕೆಲಸವನ್ನು ಕೊಡಿಸಿಲ್ಲ. ಹಣ ಕೇಳಿದರೆ ಸರಿಯಾಗಿ ಪ್ರತಿಕ್ರಿಯೆ ಇಲ್ಲ ಎಂದು ಮಹಾಲಕ್ಷ್ಮೀ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.