Advertisement

ಹೂಡಿಕೆ ಕಾರ್ಯಯೋಜನೆ ಅನುಷ್ಠಾನ ಅಗತ್ಯ

11:46 PM Sep 07, 2019 | Sriram |

ಪ್ರಸ್ತುತ ಜಾರಿಯಲ್ಲಿರುವ 2014-19ನೇ ಅವಧಿಯ ಕೈಗಾರಿಕೆ ನೀತಿ ಸೆಪ್ಟಂಬರ್‌ನಲ್ಲಿ ಕೊನೆಗೊಳ್ಳುತ್ತದೆ. ಇದರ ಲಾಭ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪೂರ್ಣವಾಗಿ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಮಂಗಳೂರಿಗೆ ಹೂಡಿಕೆಗಳನ್ನು ಆಕರ್ಷಿಸಲು ಹೊಸ ಕೈಗಾರಿಕಾ ನೀತಿಯ ಅಗತ್ಯವಿದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಈ ನಿಟ್ಟಿನಲ್ಲಿ ಗಮನಹರಿಸಬೇಕು.

Advertisement

ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವ 2014-19ನೇ ಅವಧಿಯ ಕೈಗಾರಿಕ ನೀತಿ ಈ ವರ್ಷದ ಸೆಪ್ಟಂಬರ್‌ಗೆ ಕೊನೆಗೊಳ್ಳುತ್ತದೆ. ಈ ಕೈಗಾರಿಕಾ ನೀತಿಯಲ್ಲಿ ಕೈಗಾರಿಕೆಗಳಿಗೆ ಬಹಳಷ್ಟು ಉತ್ತೇಜನಕಾರಿ ಕ್ರಮಗಳಿದ್ದರೂ ಅದರ ಪೂರ್ಣ ಲಾಭ ಮಂಗಳೂರಿಗೆ, ದಕ್ಷಿಣ ಕನ್ನಡ ಜಿಲ್ಲೆಗೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಹೂಡಿಕೆಗಳಿಗೆ ವಿಪುಲ ಅವಕಾಶಗಳಿರುವ ನಗರ ಎಂಬುದಾಗಿ ಪರಿಗಣಿಸಲ್ಪಟ್ಟಿರುವ ಮಂಗಳೂರನ್ನು ಬೆಂಗಳೂರು ಅನಂತರದ ಎರಡನೇ ಪ್ರಮುಖ ನಗರವನ್ನಾಗಿ ಅಭಿವೃದ್ದಿ ಪಡಿಸುವ ಆಶಯ ಕಳೆದ ಹಲವಾರು ವರ್ಷಗಳಿಂದ ಕೇಳಿ ಬರುತ್ತಿದೆಯಾದರೂ ಈ ದಿಕ್ಕಿನಲ್ಲಿ ಹೇಳಿಕೊಳ್ಳುವಂತಹ ಪ್ರಗತಿ ಆಗಿಲ್ಲ ಎಂಬುದು ವಾಸ್ತವಿಕತೆ.

ಬಹಳಷ್ಟು ಯೋಜನೆಗಳು, ಪ್ರಸ್ತಾವನೆಗಳು ಕೇಳಿಬಂದರೂ ಕಾರ್ಯರೂಪಕ್ಕೆ ಬರುವಲ್ಲಿ ಯಶಸ್ವಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹೂಡಿಕೆಗಳು ಹರಿದು ಬರುವ ನಿಟ್ಟಿನಲ್ಲಿ ಈ ಹಿಂದೆ ಆಗಿರುವ ಪ್ರಯತ್ನಗಳಿಗೆ ಮರುಜೀವ ನೀಡುವುದರ ಜತೆಗೆ ಹೊಸದಾಗಿ ಕಾರ್ಯಯೋಜನೆಗಳು ರೂಪುಗೊಳ್ಳುವುದು ಮಂಗಳೂರು ನಗರದ ಸುಸ್ಥಿರ ಅಭಿವೃದ್ದಿಗೆ ಅತ್ಯಂತ ಅವಶ್ಯವಾಗಬಹುದು.

ಹಿಂದಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರ ಸ್ವಾಮಿ ಅವರು ತನ್ನ ಸರಕಾರದ ಅವಧಿಯ ಬಜೆಟ್‌ ಮಂಡನೆ ವೇಳೆ 2014-19 ನೇ ಅವಧಿಯ ಕೈಗಾರಿಕಾ ನೀತಿ ಈ ವರ್ಷ ಕೊನೆಗೊಳ್ಳುವ ಹಿನ್ನೆಲೆಯಲ್ಲಿ ಹೊಸ ಕೈಗಾರಿಕಾ ನೀತಿಯನ್ನು ರೂಪಿಸುವುದಾಗಿ ಘೋಷಿಸಿದ್ದರು. ಹೊಸ ಕೈಗಾರಿಕಾ ನೀತಿಯಲ್ಲಿ ರಾಜ್ಯದ ದ್ವಿತೀಯ ಹಂತ ಮತ್ತು ತೃತೀಯ ಹಂತದ ನಗರಗಳು ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಬಂಡವಾಳ ಆಕರ್ಷಣೆ, ಹೂಡಿಕೆಗೆ ಉತ್ತೇಜನ, ಕೈಗಾರಿಕೆಗಳ ಸ್ಥಾಪನೆಗೆ ಪ್ರೋತ್ಸಾಹ , ತಂತ್ರಜ್ಞಾನ, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವುದಾಗಿ ಹೇಳಿದ್ದರು.

ಹೂಡಿಕೆಗಳಿಗೆ ಗುರುತಿಸಲಾಗಿರುವ ನಗರಗಳಲ್ಲಿ ಮಂಗಳೂರು ಮುಂಚೂಣಿಯಲ್ಲಿ ಸ್ಥಾನ ಪಡೆದಿತ್ತು. ಈ ಹಿನ್ನೆಲೆಯಲ್ಲಿ ಒಂದಷ್ಟು ಹೂಡಿಕೆ ಪ್ರಸ್ತಾವನೆಗಳು ಕೂಡ ಈ ಹಿಂದೆ ರೂಪುಗೊಂಡಿದ್ದವು. ಹೂಡಿಕೆದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಸಭೆಗಳು ಆಯೋಜನೆಗೊಂಡಿದ್ದವು. ಆದರೆ ಇವುಗಳು ಕಾರ್ಯರೂಪಕ್ಕೆ ಬರುವಲ್ಲಿ ಯಶಸ್ವಿಯಾಗಲಿಲ್ಲ. ಇದೀಗ ಹೊಸದಾಗಿ ಕೈಗಾರಿಕಾ ನೀತಿ ರೂಪುಗೊಳ್ಳಬೇಕಾಗಿದೆ. ಈ ಕಾಲಘಟ್ಟದಲ್ಲಿ ಮಂಗಳೂರಿಗೆ ಹೂಡಿಕೆಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಒಂದಷ್ಟು ಪೂರಕ ಯೋಜನೆಗಳು ಸಿದ್ದಗೊಳ್ಳಬೇಕಾಗಿದೆ.

Advertisement

ಹೂಡಿಕೆ ಪ್ರಯತ್ನಗಳು
ಜಿಲ್ಲೆಗೆ ಹೂಡಿಕೆದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿತ್ತಾದರೂ ಅದು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಂಡಿಲ್ಲ. ಹೂಡಿಕೆ ಮತ್ತು ಉದ್ಯಮಕ್ಕೆ ಇರುವ ಅವಕಾಶ ಅದರಲ್ಲೂ ಐಟಿ ಕ್ಷೇತ್ರದಲ್ಲಿ ಇರುವ ಅವಕಾಶಗಳ ಬಗ್ಗೆ ಬೆಂಗಳೂರಿನಲ್ಲಿ ಹೂಡಿಕೆದಾರರ ಸಮಾವೇಶ ನಡೆದಿದೆ. ಮಂಗಳೂರಿನಲ್ಲೂ ಐಟಿ ಕ್ಷೇತ್ರದಲ್ಲಿ ಹೂಡಿಕೆ ಬಗ್ಗೆ ಸಮಾವೇಶಗಳನ್ನು ಆಯೋಜಿಸಲು ಈ ಹಿಂದೆ ಉದ್ದೇಶಿಸಲಾಗಿತ್ತಾದರೂ ಅದು ಮುಂದೆ ಕಾರ್ಯರೂಪಕ್ಕೆ ಬಂದಿಲ್ಲ. ಕೊಲ್ಲಿ ರಾಷ್ಟ್ರಗಳಲ್ಲೂ ಮಂಗಳೂರಿನಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಸಭೆ ಆಯೋಜಿಸಿ ಚರ್ಚೆಗಳು ನಡೆದಿದ್ದವು. ಈ ಪ್ರಯತ್ನಗಳು ನಿಂತ ನೀರಾಗದೆ ಮುಂದಕ್ಕೆ ಕೊಂಡೊಯ್ಯಬೇಕಾಗಿದೆ. ಇವುಗಳಿಗೆ ರಾಜ್ಯ, ಕೇಂದ್ರ ಸರಕಾರಗಳಿಂದ ಹೆಚ್ಚಿನ ಒತ್ತಾಸೆ ದೊರಕಿದರೆ ಮಂಗಳೂರು ಉದ್ಯಮ ಕ್ಷೇತ್ರದಲ್ಲಿ ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಔದ್ಯೋಗಿಕವಾಗಿ ತೆರೆದುಕೊಳ್ಳಲು ಸಾಧ್ಯವಿದೆ.

ಮೂಲ ಸೌಕರ್ಯಗಳು
ಐಟಿ, ಆಹಾರ ಸಂಸ್ಕರಣೆ ಹಾಗೂ ವಸ್ತ್ರೋದ್ಯಮ, ಪ್ರವಾಸೋದ್ಯಮಗಳಿಗೆ ದ.ಕನ್ನಡ ಜಿಲ್ಲೆಯ ಪರಿಸರ ಮತ್ತು ಭೌಗೋಳಿಕ ಸನ್ನಿವೇಶ ಹೆಚ್ಚು ಸೂಕ್ತವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಮಂಗಳೂರು ವಿಮಾನ, ಬಂದರು ಮತ್ತು 3 ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿರುವ ನಗರ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಆದರೆ ಇದನ್ನು ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಪರಿಣಾಮಕಾರಿ ರೀತಿಯಲ್ಲಿ ಬಳಕೆ ಮಾಡುವಲ್ಲಿ ವಿಫ‌ಲ ಆಗಿದೆ ಎಂಬುದು ಸತ್ಯ. ಮುಡಿಪುನಲ್ಲಿ ಸುಮಾರು 600 ಎಕ್ರೆ ವಿಸ್ತೀರ್ಣದಲ್ಲಿ ಈಗಾಗಲೇ ಕೆನರಾ ಕೈಗಾರಿಕೆ ಪ್ರದೇಶ ಅಭಿವೃದ್ದಿಪಡಿಸಲಾಗಿದೆ. ಆದರೆ ಪ್ರಸ್ತುತ ಅಲ್ಲಿ ಸುವ್ಯವಸ್ಥಿತ ರಸ್ತೆ, ನೀರು ಸೇರಿದಂತೆ ಮೂಲ ಸೌಲಭ್ಯಗಳು ಸಮರ್ಪಕ ರೀತಿಯಲ್ಲಿ ಅಭಿವೃದ್ದಿಯಾಗದ ಹಿನ್ನಲೆಯಲ್ಲಿ ಕೈಗಾರಿಕೆಗಳ ಬರಲು ಹಿನ್ನಡೆಯಾಗಿವೆ.

ಭರವಸೆಯಾಗಿ ಉಳಿದ ಮೂಲಸೌಕರ್ಯ ಅಭಿವೃದ್ಧಿ
ಮೂಲ ಸೌಲಭ್ಯಗಳ ಅಭಿವೃದ್ದಿ ಪಡಿಸಿ ಕೈಗಾರಿಕೆಗಳನ್ನು ಆಕರ್ಷಿಸಲು ಪ್ರಯತ್ನಗಳನ್ನು ನಡೆಸಲಾಗುವುದು ಎಂಬುದು ಭರವಸೆಯಾಗಿಯೇ ಉಳಿದುಕೊಂಡಿದೆ. ಎಂಎಸ್‌ಇಝಡ್‌ನ‌ಲ್ಲಿ ಉದ್ದಿಮೆಗಳು, ಕೈಗಾರಿಕೆಗಳನ್ನು ಸ್ಥಾಪಿಸಲು ಅವಕಾಶವಿದೆ. ದೇರಳಕಟ್ಟೆಯಲ್ಲಿರುವ ಐಟಿ ಎಸ್‌ಇಝಡ್‌ನ‌ಲ್ಲಿ ಐಟಿ ಉದ್ಯಮಗಳ ಸ್ಥಾಪನೆಗೆ ಅವಕಾಶಗಳಿದ್ದು ಹೂಡಿಕೆದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕ್ರಮಗಳಾಗಬೇಕಾಗಿದೆ. ಬೈಕಂಪಾಡಿ, ಯೆಯ್ನಾಡಿ, ಕಾರ್ನಾಡ್‌ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 15 ಕೈಗಾರಿಕಾ ಪ್ರದೇಶಗಳಿವೆ. ಬೆಂಗಳೂರಿಗೆ ಹೋಲಿಸಿದರೆ ಮಂಗಳೂರಿನಲ್ಲಿ ಮಾನವ ಸಂಪನ್ಮೂಲ ವೆಚ್ಚ ( ವೇತನ ಹಾಗೂ ಇತರ ಸವಲತ್ತುಗಳು) ಶೇ.30ರಷ್ಟು ಕಡಿಮೆ.

ಹೂಡಿಕೆಗೆ ಪೂರಕ ಪ್ರಯತ್ನ ಅಗತ್ಯ
ಜಿಲ್ಲೆಯಲ್ಲಿ ಹೊಡಿಕೆಗೆ ಇರುವ ಅವಕಾಶಗಳ ಬಗ್ಗೆ ಗಮನಹರಿಸುವ ಕಾರ್ಯ ನಡೆಯಬೇಕಾಗಿದೆ. ಹೂಡಿಕೆದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಈ ಭಾಗದ ಜನಪ್ರತಿನಿಧಿಗಳು, ಹೊರಜಿಲ್ಲೆಗಳಲ್ಲಿ ನೆಲೆಸಿರುವ ಜಿಲ್ಲೆಯ ಉದ್ಯಮಿಗಳಿಂದ ಪೂರಕ ಪ್ರಯತ್ನಗಳು, ಅವಕಾಶ ಸಿಕ್ಕಿದಾಗ‌ಲೆಲ್ಲ ಜಿಲ್ಲೆಯಲ್ಲಿರುವ ಅವಕಾಶಗಳ ಬಗ್ಗೆ ಪ್ರಮುಖ ವೇದಿಕೆಗಳಲ್ಲಿ ಪ್ರಚುರಪಡಿಸುವುದು ಅವಶ್ಯ. ಜತೆಗೆ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಿಂದ ಜಿಲ್ಲೆಯಲ್ಲಿ ಕೈಗಾರಿಕೆಗಳು ಮತ್ತು ಉದ್ದಿಮೆಗಳ ಸ್ಥಾಪನೆಗೆ ಲಭ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸುವ ಕಾರ್ಯವೂ ನಡೆಯಬೇಕಾಗಿದೆ.

-   ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next