Advertisement

ಕಿಡ್ನಿ ಮಾರಾಟ ಮಾಡಿ ಬಂದ ಹಣ ಹೂಡಿಕೆ

01:23 AM Jun 13, 2019 | Lakshmi GovindaRaj |

ಬೆಂಗಳೂರು: ಐಎಂಎ ಕಂಪನಿಯಲ್ಲಿ ಲಕ್ಷಾಂತರ ರೂ. ಹೂಡಿಕೆ ಮಾಡಿ, ವಂಚನೆಗೊಳಗಾಗಿರುವ ಪ್ರತಿಯೊಬ್ಬರದ್ದು ಒಂದೊಂದು ಕರುಣಾಜನಕ ಕಥೆಯಿದೆ. ಮಹಿಳೆಯೊಬ್ಬರು ಅಂಗಾಂಗ ಮಾರಾಟ ಮಾಡಿ ಹಣ ಹೂಡಿಕೆ ಮಾಡಿದರೆ, ಕೆಲವರು ಮನೆ, ಜಮೀನು, ಚಿನ್ನಾಭರಣ ಅಡಮಾನ ಇಟ್ಟು ಸಂದಾಯ ಮಾಡಿದ್ದಾರೆ. ಇನ್ನು ಕೆಲವರು ಬ್ಯಾಂಕ್‌ಗಳಲ್ಲಿ ಸಾಲ ಪಡೆದು ವಂಚಕ ಕಂಪನಿಯಲ್ಲಿ ಲಕ್ಷ ಲಕ್ಷ ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ.

Advertisement

ಕಿಡ್ನಿ ದಾನ ಮಾಡಿದ ಹಣ ಹಾಕಿದ್ದೇನೆ ಸರ್‌! ಕಣ್ಣೀರಾಕುತ್ತಾ, ಹೂಡಿಕೆ ಮಾಡಿದ ಮೂರು ಲಕ್ಷ ರೂ. ಸಂಪಾದನೆ ಹಿಂದಿನ ಕಥೆ ಬಿಚ್ಚಿಟ್ಟ ಆರ್‌.ಟಿ.ನಗರದ 49 ವರ್ಷದ ಫ‌ರಿದಾ ಬೇಗ್‌, “ನನಗೆ ಪತಿ ಇಲ್ಲ. ಇಬ್ಬರು ಹೆಣ್ಣು ಮಕ್ಕಳು. ಒಬ್ಬ ಗಂಡು ಮಗನ ಜತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇನೆ. ನನ್ನ ಮಗ ಗ್ಯಾರೆಜ್‌ನಲ್ಲಿ ಕೆಲಸ ಮಾಡುತ್ತಾನೆ. ನಾನು ಮನೆಗಳಲ್ಲಿ ಕೆಲಸ ಮಾಡಿಕೊಂಡಿದ್ದೇನೆ. ಇಬ್ಬರು ಹೆಣ್ಣು ಮಕ್ಕಳು ಓದುತ್ತಿದ್ದಾರೆ.

ಮೂರು ವರ್ಷಗಳ ಹಿಂದೆ ನಮ್ಮ ಕುಟುಂಬಕ್ಕೆ ಸಹಾಯ ಮಾಡಿದ 35 ವರ್ಷದ ಮಹಿಳೆಯೊಬ್ಬರಿಗೆ ಕಿಡ್ನಿ ಸಮಸ್ಯೆ ಉಂಟಾಗಿತ್ತು. ಅವರ ಮನೆಯವರ ಕೋರಿಕೆ ಮೇರೆಗೆ ತನ್ನ ಒಂದು ಕಿಡ್ನಿಯನ್ನು ಕೊಟ್ಟಿದ್ದೆ. ಅದಕ್ಕೆ ಪ್ರತಿಯಾಗಿ ಅವರು ಮೂರು ಲಕ್ಷ ರೂ. ಕೊಟ್ಟು, ಹೆಚ್ಚುವರಿಯಾಗಿ ಸಹಾಯ ಕೂಡ ಮಾಡಿದ್ದರು. ಆ ಹಣವನ್ನು ಇಬ್ಬರು ಪುತ್ರಿಯರ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಡೆಪಾಸಿಟ್‌ ಮಾಡಿದ್ದೆ. ಈ ಮಧ್ಯೆ ಒಂದೂವರೆ ವರ್ಷದ ಹಿಂದೆ ಪರಿಚಿತ ವ್ಯಕ್ತಿಯೊಬ್ಬರು ಐಎಂಎ ಕಂಪನಿ ಬಗ್ಗೆ ಹೇಳಿ, ಮಾಸಿಕ ಹತ್ತು ಸಾವಿರ ರೂ. ಬರುತ್ತದೆ ಎಂದು ಆಮಿಷವೊಡ್ಡಿದರು.

ಅದನ್ನು ನಂಬಿ ಅಲ್ಲಿದ್ದ ಸಂಪೂರ್ಣ ಹಣವನ್ನು ತೆಗೆದು ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡಿದ್ದೇನೆ. ಹಣ ಹೂಡಿಕೆ ಮಾಡುವ ವೇಳೆ ನನ್ನ ಕಿಡ್ನಿ ಪಡೆದ ಮಹಿಳೆ ಆ ರೀತಿ ದುಡ್ಡು ಹಾಕಿ ಕಳೆದುಕೊಳ್ಳಬೇಡಿ ಎಂದು ಕಿವಿಮಾತು ಹೇಳಿದ್ದರು. ಆದರೂ, ಮೋಸ ಹೋಗಿದ್ದೇನೆ. ಅದೇ ಹಣದಲ್ಲಿ ಮುಂದಿನ ವರ್ಷ ಹಿರಿಯ ಪುತ್ರಿಗೆ ಮದುವೆ ಮಾಡಲು ತೀರ್ಮಾನಿಸಿದೆ. ಇದೀಗ ಯಾವ ಹಣವೂ ಇಲ್ಲ .ಮಗಳ ಮದುವೆ ಹೇಗೆ ಮಾಡಲಿ ಎಂದು ಕಣ್ಣೀರಾಕಿದರು.

ಭಿಕ್ಷೆ ಬೇಡಿ ಜೀವನ ನಡೆಸುವಂತಾಗಿದೆ: “ವೆಲ್ಡಿಂಗ್‌ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದು, ನಾಲ್ಕು ವರ್ಷಗಳಿಂದ ಗಂಟಲು ಕ್ಯಾನ್ಸ್‌ರ್‌ನಿಂದ ಬಳಲುತ್ತಿದ್ದೇನೆ. ಪ್ರತಿ ತಿಂಗಳು ಮಾತ್ರೆಗೆ 8-10 ಸಾವಿರ ರೂ. ಬೇಕಿದೆ. ಎರಡು ವರ್ಷಗಳ ಹಿಂದೆ ಸ್ನೇಹಿತ ಸೈಯದ್‌ ಸಲಹೆ ಮೇರೆಗೆ ಮೂರು ಲಕ್ಷ ರೂ. ಹಾಕಿದ್ದೇನೆ. ಆರಂಭದಲ್ಲಿ ಸರಿಯಾದ ಸಮಯಕ್ಕೆ ಲಾಭಾಂಶ ಖಾತೆಗೆ ಹಾಕುತ್ತಿದ್ದ. ಆದರೆ, ಐದು ತಿಂಗಳಿಂದ ಒಂದು ರೂ. ಕೊಟ್ಟಿಲ್ಲ.

Advertisement

ಕೇಳಿದರೆ ಇಲ್ಲದ ಸಬೂಬು ಹೇಳುತ್ತಿದ್ದ. ಮಕ್ಕಳು ಇನ್ನು ಚಿಕ್ಕವರು. ಈಗ ಮಾತ್ರೆಗಾಗಲಿ, ಮನೆಯ ನಿರ್ವಹಣೆಗಾಗಲಿ ಹಣವಿಲ್ಲ. ಕೆಲ ಸಂದರ್ಭದಲ್ಲಿ ಸ್ನೇಹಿತರು ಕೊಟ್ಟ ಸಾಲದಿಂದ ಕಾಲ ಕಳೆದಿದ್ದೇನೆ. ಅದಕ್ಕೂ ಮೀರಿ ಶಿವಾಜಿನಗರ, ಸಂಜಯನಗರದ ವಿವಿಧೆಡೆ ಭೀಕ್ಷೆ ಬೇಡಿ ಮನೆ ನಿರ್ವಹಿಸಿದ್ದೇನೆ. ನಮ್ಮಂತವರ ಹಣ ಕದೊಯ್ದವನಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು ಆರ್‌.ಟಿ.ನಗರದ ಮೊಹಮ್ಮದ್‌ ರಫೀಕ್‌.

ಮನೆ ಖರೀದಿ ಹಣ: “ಕೆಲ ವರ್ಷಗಳ ಹಿಂದೆಯೇ ಪತಿ ನಿಧನರಾದರು. ಹೀಗಾಗಿ ಮೂವರು ಗಂಡು ಮಕ್ಕಳನ್ನು ಸಾಕಲು, ಮನೆಯಲ್ಲೇ ಮಕ್ಕಳಿಗೆ ಮನೆ ಪಾಠ ಮಾಡಿ ಹಣ ಸಂಪಾದಿಸಿ, ತನ್ನ ಮಕ್ಕಳನ್ನು ವಿದ್ಯಾವಂತರನಾಗಿ ಮಾಡಿದ್ದೇನೆ. ಒಬ್ಬ ಸರ್ಕಾರಿ ನೌಕರ. ಮತ್ತೂಬ್ಬ ಖಾಸಗಿ ಕಂಪನಿ ಉದ್ಯೋಗಿ. ಹಿರಿಯವನು ಮನೆಯಲ್ಲೇ ಇರುತ್ತಾನೆ. ಬಹಳ ವರ್ಷಗಳಿಂದ ಸ್ವಂತ ಮನೆ ಖರೀದಿ ಮಾಡಬೇಕೆಂಬ ಆಸೆ ಇತ್ತು.

ಹೀಗಾಗಿ ಮಕ್ಕಳು ದುಡಿದ ಹಣವನ್ನು ಜೋಪಾನವಾಗಿ ಬ್ಯಾಂಕ್‌ನಲ್ಲಿ ಹಾಕಿದ್ದೆ. ಎರಡು ವರ್ಷದ ಹಿಂದೆ ಐಎಂಎ ಬಗ್ಗೆ ತಿಳಿದು ಮಕ್ಕಳು ಹಾಗೂ ತನ್ನ ಬಳಿಯಿದ್ದ 25 ಲಕ್ಷ ರೂ. ಕಂಪನಿಗೆ ಹಾಕಿದ್ದೇನೆ. ಪ್ರತಿ ತಿಂಗಳು ತಪ್ಪದೇ ಹಣ ಕೊಡುತ್ತಿದ್ದ ಮನ್ಸೂರ್‌, ನಾಲ್ಕು ತಿಂಗಳಿಂದ ಒಂದು ರೂ. ಕೊಟ್ಟಿಲ್ಲ. ಜೂ. 15ರಂದು ಕೊಡುವುದಾಗಿ ಹೇಳಿದ್ದ. ಆತ ಹಣ ಕೊಟ್ಟರೆ, ಹೆಗಡೆ ನಗರದಲ್ಲಿ ಸ್ವಂತ ಮನೆ ಖರೀದಿ ಮುಂದಾಗಿದ್ದೆ ಎಂದು ತಮ್ಮ ಅಳಲು ತೋಡಿಕೊಂಡರು’ ಹೆಗಡೆನಗರದ ನಿವಾಸಿ ಕಮರ್‌ ಜಾನು.

ಅಡಿಕೆ ಮಾರಾಟದ ಹಣ ಹಾಕಿದ್ದೇನೆ: “ದಾವಣಗೆರೆಯಲ್ಲಿ ತಮ್ಮದು 10 ಎಕರೆ ಅಡಿಕೆ ತೋಟವಿದೆ. ಮಂಡಿಯಲ್ಲಿ ಪರಿಚಯವಾದ ಮೊಹಮ್ಮದ್‌ ಅಬ್ದುಲ್‌ ಎಂಬಾತನ ಐಎಂಎ ಕಂಪನಿ ಬಗ್ಗೆ ಹೇಳಿ, ಪ್ರತಿ ತಿಂಗಳು ಬಡ್ಡಿ ರೂಪದಲ್ಲಿ ಹಣ ಕೊಡುತ್ತಾರೆ. ಇಲ್ಲವಾದರೆ ಚಿನ್ನಾಭರಣ ಖರೀದಿ ಮಾಡಬಹುದು ಅಂತೆಲ್ಲ ಹೇಳಿ ನಂಬಿಸಿದ. ಆತನ ಮಾತು ಕೇಳಿ 2018ರ ಮೇ ನಲ್ಲಿ ಅಡಕೆ ಮಾರಾಟ ಮಾಡಿ ಬಂದ 14 ಲಕ್ಷ ರೂ.ಅನ್ನು ಹೂಡಿಕೆ ಮಾಡಿದ್ದೇನೆ. ಪ್ರತಿ ತಿಂಗಳು ಲಕ್ಷಕ್ಕೆ 13 ಸಾವಿರದಂತೆ 1,82 ಲಕ್ಷ ರೂ. ಕೊಡುತ್ತಿದ್ದ. ಜನವರಿಯಿಂದ ಕೊಟ್ಟಿಲ್ಲ. ಮನೆಯವರಿಗೆ ಗೊತ್ತಾಗದಂತೆ ಹಣ ಹಾಕಿದಕ್ಕೆ ಸರಿಯಾಗೆ ಆಗಿದೆ ಎಂದು ತಮ್ಮನ್ನು ತಾವೇ ಶಪಿಸಿಕೊಂಡರು ಎನ್ನುತ್ತಾರೆ ದಾವಣಗೆರೆಯ ಅಡಕೆ ತೋಟದ ಮಾಲೀಕ ಚಂದ್ರಪ್ಪಗೌಡ.

ಮನೆ, ಚಿನ್ನಾಭರಣ ಅಡಮಾನ, ಬ್ಯಾಂಕ್‌ನಲ್ಲಿ ಸಾಲ: “ಬೆಳ್ಳಂದೂರಿನಲ್ಲಿರುವ ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್‌ ಎಂಜಿನಿಯರ್‌ ಆಗಿದ್ದೇನೆ. ಪ್ರತಿ ತಿಂಗಳ ಎರಡೂವರೆ ಲಕ್ಷ ರೂ. ಸಂಬಳ. ಆ್ಯಪ್‌ ಆಧರಿತ ಹಣಕಾಸಿನ ವ್ಯವಹಾರ ಮಾಡುತ್ತಾರೆ ಎಂದು ತಿಳಿದು, ನಾನೇ ಕಂಪನಿಗೆ ಬಂದು ವಿಚಾರಿಸಿ, ಮನೆ, ಒಂದು ಸೈಟ್‌, ಚಿನ್ನಾಭರಣ ಅಡಮಾನ ಹಾಗೂ ಬ್ಯಾಂಕ್‌ನಲ್ಲಿ ಲೋನ್‌ ಪಡೆದು ಮೂರು ವರ್ಷಗಳಿಂದ ಹಂತ ಹಂತವಾಗಿ ಬರೋಬ್ಬರಿ 45 ಲಕ್ಷ ರೂ.ಹೂಡಿಕೆ ಮಾಡಿ, ನಾನು ಕೂಡ ಶೇರುದಾರನಾಗಿದ್ದೇನೆ. ಐದು ತಿಂಗಳಿಂದ ಹಣ ಕೊಟ್ಟಿಲ್ಲ ಎನ್ನುತ್ತಾರೆ’ ಬೇಗೂರು ನಿವಾಸಿ ಸೈಯದ್‌ ಅಲಿ.

Advertisement

Udayavani is now on Telegram. Click here to join our channel and stay updated with the latest news.

Next