ಬೆಳ್ಮಣ್: ಕೋವಿಡ್ 19 ನಿಯಂತ್ರಣದಲ್ಲಿ ಉಡುಪಿ ಜಿಲ್ಲೆ ಹಸಿರು ವಲಯದಲ್ಲಿ ಗುರುತಿಸಿಕೊಂಡ ಬೆನ್ನಲ್ಲೇ ಜಿಲ್ಲೆಯ ಗಡಿಭಾಗಗಳ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆಯ ಪ್ರಕ್ರಿಯೆ ಇನ್ನಷ್ಟು ಬಿಗಿಗೊಂಡಿದೆ.
ಮಂಗಳವಾರ ಕಾರ್ಕಳ ಡಿವೈಎಸ್‌ಪಿ ಭರತ್ ರೆಡ್ಡಿ ಕಾರ್ಕಳದ ಗಡಿಭಾಗಗಳಾದ ಜಾರಿಗೆಕಟ್ಟೆ, ಸಚ್ಚೇರಿಪೇಟೆಯ ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿ ಈ ಭಾಗದ ಒಳ ಮಾರ್ಗಗಳಲ್ಲಿ ವಾಹನ ಸಂಚಾರ ಅಧಿಕವಾಗಿರುವ ಹಿನ್ನೆಲೆಯಲ್ಲಿ ಭದ್ರತೆಯ ದೃಷ್ಠಿಯಿಂದ ಜಾರಿಗೆಕಟ್ಟೆಯ ಚೆಕ್‌ಪೋಸ್ಟ್ ಸಂಕಲಕರಿಯಕ್ಕೂ ಕಡಂದಲೆ ನದಿ ಬದಿಯ ಚೆಕ್‌ಪೋಸ್ಟ್ ಸಚ್ಚೇರಿಪೇಟೆ ರೈಸ್‌ಮಿಲ್ ಬಳಿಗೆ ಸ್ಥಳಾಂತರಿಸುವಂತೆ ಮುಂಡ್ಕೂರು ಗ್ರಾಮ ಪಂಚಾಯತ್ ಪಿಡಿಒ ರವಿರಾಜ್‌ರವರಿಗೆ ಆದೇಶ ತಿಳಿಸಿದರು.
ಈಗಾಗಲೇ ಮುಂಡ್ಕೂರು ಭಾಗದಲ್ಲಿ ಜನ ಸಂಚರಿಸುತ್ತಿರುವ ಹಲವು ವಾಮ ಮಾರ್ಗಗಳ ಸಂಪರ್ಕ ಕಡಿತಗೊಳಿಸಲಾಗಿದ್ದು ಭದ್ರತೆಯ ದೃಷ್ಠಿಯಿಂದ ಉಳಿದ ಸಣ್ಣ ಅಡ್ಡ ರಸ್ತೆಗಳ ಸಂಪರ್ಕಗಳನ್ನೂ ಕಡಿತಗೊಳಿಸುವಂತೆ ತಿಳಿಸಿದರು.
ಪೊಸ್ರಾಲು -ಮುಕ್ಕಡಪ್ಪು ರಸ್ತೆಯ ಸಂಪರ್ಕ ಕಡಿತಗೊಳಿಸಿದ ಬಗ್ಗೆ ಸ್ಥಳೀಯರ ಆಕ್ಷೇಪವಿದ್ದ ಹಿನ್ನೆಲೆಯಲ್ಲಿ ಆ ಸ್ಥಳಕ್ಕೂ ಭೇಟಿ ನೀಡಿದ ಭರತ್ ರೆಡ್ಡಿ ಸಾಮಾಜಿಕ ಹಿತದೃಷ್ಠಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು ವೃದ್ಧರಿಗೆ ತೊಂದರೆಯಾದಲ್ಲಿ, ಅಗತ್ಯ ಬಿದ್ದಲ್ಲಿ ಸಹಕರಿಸುವುದಾಗಿ ತಿಳಿಸಿದರು.
ಮುಂಡ್ಕೂರು ಗ್ರಾಮ ಪಂಚಾಯತ್ ಪಿಡಿಒ ರವಿರಾಜ್, ಗ್ರಾಮಕರಣಿಕ ಸುಖೇಶ್,ಸಿಬ್ಬಂದಿ ಪುರುಷೋತ್ತಮ ಇದ್ದರು.