ಬೆಳಗಾವಿ: ಹಳೆಯ ವೈಮನಸ್ಸಿನಿಂದಾಗಿ ಎರಡು ಕುಟುಂಬಗಳ ಮಧ್ಯೆ ಗ್ಯಾಂಗ್‌ವಾಡಿಯಲ್ಲಿ ನಡೆದ ಮಾರಾಮಾರಿಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳ ಪತ್ತೆಗೆ ಪೊಲೀಸರ ತಂಡ ಶನಿವಾರ ಮಹಾರಾಷ್ಟ್ರಕ್ಕೆ ತೆರಳಿದೆ.
ಮಾರಾಮಾರಿಯಲ್ಲಿ ರಾಹುಲ್ ಚೌಗುಲೆ(22), ಮೀನಾಕ್ಷಿ ಚೌಗುಲೆ(40), ವಿದುರ ಚೌಗುಲೆ(27), ಪ್ರಿತಮ್ ಲೋಂಡೆ(35). ಬಿನಾಬಾಯಿ ಚೌಗುಲೆ(55), ಅಜಯ ಲೋಂಡೆ(25) ಗಾಯಗೊಂಡಿದ್ದಾರೆ.
ಏನಾಗಿತ್ತು: ಗ್ಯಾಂಗ್‌ವಾಡಿಯಲ್ಲಿ ಲೋಂಡೆ ಹಾಗೂ ಚೌಗುಲೆ ಕುಟುಂಬಗಳ ಮಧ್ಯೆ 2-3 ವರ್ಷಗಳಿಂದ ವೈಮನಸ್ಸಿತ್ತು. 2015ರಲ್ಲಿಯೂ ಈ ಕುಟುಂಬಗಳ ಜಗಳವಾಡಿಕೊಂಡಿದ್ದವು. ಅದರಂತೆ ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಮತ್ತೆ ಎರಡೂ ಗುಂಪಿನವರು ತಲವಾರ್ ಹಾಗೂ ಕಟ್ಟಿಗೆಗಳಿಂದ ಹೊಡೆದಾಡಿಕೊಂಡಿದ್ದು, ಇದರಲ್ಲಿ ಐವರು ಗಾಯಗೊಂಡಿದ್ದಾರೆ. ಕಲ್ಲು ತೂರಾಟದಲ್ಲಿ ಎರಡು ಆಟೋ ರಿಕ್ಷಾ, ದ್ವಿಚಕ್ರ ವಾಹನ, ಕಾರು ಹಾಗೂ ಎರಡು ಮನೆಗಳ ಕಿಟಕಿ ಗಾಜುಗಳು ಜಖಂಗೊಂಡಿವೆ. ಈ ಕುರಿತು ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಬೆಳಗ್ಗೆ ಹಿಂಡಾಲ್ಕೋ ಕ್ರಾಸ್ ಬಳಿ ವಿದುರ್ ಚೌಗುಲೆಯನ್ನು ಹಿಡಿದು ಇನ್ನೊಂದು ಗುಂಪು ತಲೆಗೆ ಹಾಗೂ ಕೈ-ಕಾಲಿಗೆ ತಲವಾರ್‌ದಿಂದ ಹಲ್ಲೆ ಮಾಡಿ ಗಾಯಗೊಳಿಸಿದೆ. ಗಂಭೀರ ಗಾಯಗೊಂಡ ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ವಿದುರ ಚೌಗುಲೆ 15 ಜನರ ವಿರುದ್ಧ ಎಪಿಎಂಸಿ ಠಾಣೆಯಲ್ಲಿ ದೂರು ನೀಡಿದ್ದಾರೆ.
Advertisement
ಗ್ಯಾಂಗ್‌ವಾಡಿಯ ಕಿರಣ ಚೌಗುಲೆ ಎಂಬವನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಇನ್ನುಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದು, ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಆರೋಪಿಗಳು ಹೋಗಿರುವ ಸಾಧ್ಯತೆ ಇದ್ದು, ಈ ಬಗ್ಗೆ ಮಾಹಿತಿಗೆ ಪೊಲೀಸರು ಜಾಲ ಬೀಸಿದ್ದಾರೆ.
Related Articles
Advertisement