ಹಾಸನ: ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿ ಚೌಡೇನಹಳ್ಳಿ ಬಳಿ ಮಂಗಗಳ ಕಳೇಬರ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಹಾಸನ ಜಿಲ್ಲಾಡಳಿತ ತನಿಖೆ ತೀವ್ರಗೊಳಿಸಿದೆ.
ಗುರುವಾರ ರಾತ್ರಿ 35ರಿಂದ 40 ಮಂಗಗಳ ಕಳೇಬರ ಚೌಡೇನಹಳ್ಳಿ ಬಳಿ ಪತ್ತೆಯಾಗಿದ್ದವು. ಈ ಸಂಬಂಧ ಹೈಕೋರ್ಟ್ ಸ್ವಯಂ
ಪ್ರೇರಿತ ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸಿ ಆ.4ರೊಳಗೆ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಆರ್. ಶ್ರೀನಿವಾಸ ಗೌಡ ಅವರು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.
ತ್ವರಿತ ಪತ್ತೆಗೆ ಕ್ರಮ:
ಮಂಗಗಳ ಮೃತದೇಹಗಳ ಮಾದರಿಯನ್ನು ಎಫ್ಎಸ್‌ಎಲ್‌ಗೆ ಕಳುಹಿಸಲಾಗಿದೆ. ಪೊಲೀಸ್ ಮತ್ತು ಅರಣ್ಯ ಇಲಾಖೆ ಈಗಾಗಲೇ ಜಂಟಿ ತನಿಖೆ ಆರಂಭಿಸಿವೆ. ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳುವಂತೆ ತನಿಖಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಜಿಲ್ಲಾಧಿಕಾರಿ ತಿಳಿಸಿದರು.
ಆಸ್ಪತ್ರೆ ಸಮೀಪ ಕೋತಿಗಳು ಕಣ್ಮರೆ :
ಬೇಲೂರಿನ ಸಾರ್ವಜನಿಕ ಆಸ್ಪತ್ರೆ ಸಮೀಪ ಕಂಡು ಬರುತ್ತಿದ್ದ ಕೋತಿಗಳು ಕೆಲವು ದಿನಗಳಿಂದ ಕಣ್ಮರೆಯಾಗಿವೆ ಎಂದು ಕೆಲವರು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು. ಅಲ್ಲಿಗೆ ಹೋಗಿ ಮಾಹಿತಿ ಸಂಗ್ರಹಿಸುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.