Advertisement

ಉಪವಲಯ ಅರಣ್ಯಾಧಿಕಾರಿಯಿಂದ ಹಲ್ಲೆ

05:22 PM Oct 01, 2017 | Team Udayavani |

ಬೆಳ್ತಂಗಡಿ: ಬೀಟೆ ಮರ ಕಳವು ಪ್ರಕರಣಕ್ಕೆ ಸಂಬಂಧಿಸಿ ಪುದುವೆಟ್ಟಿನ ಕಮಲ್‌ದಾಸ್‌ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆಪಾದನೆ ಹೊತ್ತ ಉಜಿರೆ ವಲಯ ಉಪ ವಲಯ ಅರಣ್ಯಾಧಿಕಾರಿ ಕೀರ್ತನ್‌ ಶೆಟ್ಟಿ ಅವರ ವಿರುದ್ಧ ಎಸಿಎಫ್‌ ಅವರಿಂದ ಶನಿವಾರ ತನಿಖೆ ಆರಂಭವಾಗಿದೆ.

Advertisement

ಕಮಲ್‌ದಾಸ್‌ ಅವರನ್ನು ಕೊಠಡಿಯಲ್ಲಿ ಕೂಡಿ ಹಾಕಿ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಅನಂತರ ಅವರು ಆರೋಪಿಯಲ್ಲ ಎಂದು ಮರಳಿ ಕಳುಹಿಸಿದ್ದಾರೆ ಎಂಬುದಾಗಿ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಾರ್ವಜನಿಕರು ಅಧಿಕಾರಿಯ ಅಮಾನತಿಗೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಮಂಗಳೂರು ಎಸಿಎಫ್‌ ಸುರೇಶ್‌ ಬಾಬು ಅವರು ತನಿಖೆ ಕೈಗೊಂಡಿದ್ದು ಶನಿವಾರ ಇಲ್ಲಿನ ಅರಣ್ಯ ಇಲಾಖೆ ಕಚೇರಿಗೆ ಆಗಮಿಸಿದರು. ಸಂಬಂಧಪಟ್ಟವರಿಂದ,ಪ್ರತಿಭಟನಕಾರರಿಂದ ಹೇಳಿಕೆ ಪಡೆದರು. ಇದನ್ನು ಡಿಸಿಎಫ್‌ ಅವರಿಗೆ ಒಪ್ಪಿಸುವುದಾಗಿ ಹೇಳಿದರು.

ಅ.2ರ ಒಳಗೆ ಅಧಿಕಾರಿಯ ಅಮಾನತು ನಡೆಯದಿದ್ದರೆ ಅ.3ರ ಅನಂತರ ಬೃಹತ್‌ ಪ್ರತಿಭಟನೆ ನಡೆಯಲಿದೆ ಎಂದು ಸಾರ್ವಜನಿಕರು ಎಚ್ಚರಿಸಿದರು.

ಮಲಯಾಳಿ ಕ್ರಿಶ್ಚಿಯನ್‌ ಅಸೋಸಿಯೇಶನ್‌ ರಾಜ್ಯಾಧ್ಯಕ್ಷ ಸೇವಿಯರ್‌ ಪಾಲೇಲಿ, ತಾಲೂಕು ಅಧ್ಯಕ್ಷ ಅಜಯ್‌,ಎಪಿಎಂಸಿ ಸದಸ್ಯ ಅಬ್ದುಲ್‌ ಗಫೂರ್‌, ಬಿಜೆಪಿ ಮುಖಂಡರಾದ ರಂಜನ್‌ ಜಿ. ಗೌಡ, ಪ್ರಭಾಕರ ಶೆಟ್ಟಿ ಉಪ್ಪಡ್ಕ, ಕಾಂಗ್ರೆಸ್‌ ಮುಖಂಡರಾದ ಅಭಿನಂದನ್‌, ಹರೀಶ್‌ ಕುಮಾರ್‌, ಕೇಶವ ಪಿ. ಬೆಳಾಲು, ಚಂದು ಎಲ್‌., ರಾಯ್‌ ಜೋಸೆಫ್‌, ಬಿ.ಕೆ. ವಸಂತ್‌, ವಸಂತ ಪುದುವೆಟ್ಟು, ವಿನ್ಸಿ ಬಂಗಾಡಿ, ಸಿಪಿಐಎಂ ಮುಖಂಡ ಶೇಖರ್‌ ಲಾೖಲ, ಮುಂಡಾಜೆ ಪಂಚಾಯತ್‌ ಸದಸ್ಯ ಅಬ್ದುಲ್‌ ಅಜೀಜ್‌, ದಲಿತ ಮುಖಂಡ ನಾಗರಾಜ್‌ ಲಾೖಲ, ರವಿ ಚಕ್ಕಿತ್ತಾಯ ಮೊದಲಾದವರು ಉಪಸ್ಥಿತರಿದ್ದರು.

ಖರ್ಚು ಭರಿಸಿ
ನಾಗರಿಕ ಹಕ್ಕುಗಳ ಹೋರಾಟ ಸಮಿತಿಯ ಶೇಖರ್‌ ಎಲ್‌. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಉಪ ವಲಯ ಅರಣ್ಯಾಧಿಕಾರಿಯವರನ್ನು ಅಮಾನತು ಮಾಡಬೇಕು. ತೀವ್ರ ಅಸ್ವಸ್ಥರಾದ ಕಮಲ್‌ದಾಸ್‌ ಅವರು ಇಲ್ಲಿನ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದರ ಖರ್ಚು ವೆಚ್ಚಗಳನ್ನು ಅರಣ್ಯ
ಇಲಾಖೆ ಭರಿಸಬೇಕು ಎಂದರು.

Advertisement

ಮಲಯಾಳಿ ಕ್ರಿಶ್ಚಿಯನ್‌ ಅಸೋಸಿಯೇಶನ್‌ ರಾಜ್ಯಾಧ್ಯಕ್ಷ ಸೇವಿಯರ್‌ ಪಾಲೇಲಿ ಅವರು ಈ ಹೋರಾಟಕ್ಕೆ ಎಲ್ಲ ಪಕ್ಷ, ಸಂಘಟನೆಗಳು ಬೆಂಬಲ ನೀಡಿವೆ. ಇಂತಹ ಅಮಾನವೀಯ ಘಟನೆ ನಡೆಯಬಾರದು ಎಂದವರು ತಿಳಿಸಿದರು.

ಎಪಿಎಂಸಿ ಸದಸ್ಯ ಅಬ್ದುಲ್‌ ಗಫೂರ್‌, ಮಲಯಾಳಿ ಕ್ರಿಶ್ಚಿಯನ್‌ ಅಸೋಸಿಯೇಶನ್‌ ತಾಲೂಕು ಅಧ್ಯಕ್ಷ ಅಜಯ್‌, ಗೇರು ಅಭಿವೃದ್ಧಿ ನಿಗಮ ನಿರ್ದೇಶಕ ಚಂದು ಎಲ್‌., ಪುದುವೆಟ್ಟು ಪಂಚಾಯತ್‌ ಸದಸ್ಯ ರಾಯ್‌ ಜೋಸೆಫ್‌, ಕಮಲದಾಸ್‌ ಅವರ ತಾಯಿ ಮರಿಯಮ್ಮ, ನಾದಿನಿ ಸಿಂಧು, ಸಹೋದರ ಡೆನ್ನಿಸ್‌ ಮತ್ತಿತರರು ಉಪಸ್ಥಿತರಿದ್ದರು.

ಅಮಾನತುಗೊಳಿಸದಿದ್ದರೆ ಪ್ರತಿಭಟನೆ 
ಬೀಟೆ ಮರ ಕಳವು ಪ್ರಕರಣಕ್ಕೆ ಸಂಬಂಧಿಸಿ ಅಮಾಯಕನ ಮೇಲೆ ಉಪ ವಲಯ ಅರಣ್ಯಾಧಿಕಾರಿ ಮಾರಣಾಂತಿಕ ಹಲ್ಲೆ ನಡೆಸಿದ್ದು ಅವರನ್ನು ಅಮಾನತುಗೊಳಿಸದಿದ್ದರೆ ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದು ನಾಗರಿಕ ಹಕ್ಕುಗಳ ಹೋರಾಟ ಸಮಿತಿಯ ಶೇಖರ್‌ ಎಲ್‌. ಹೇಳಿದ್ದಾರೆ.

ಹೋರಾಟಕ್ಕೆ ಬೆಂಬಲ 
ಉಪ ವಲಯ ಅರಣ್ಯಾಧಿಕಾರಿಯವರು ಕಮಲ್‌ದಾಸ್‌ ಅವರನ್ನು ಕೊಠಡಿಯಲ್ಲಿ ಕೂಡಿ ಹಾಕಿ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಅನಂತರ ಅವರು ಆರೋಪಿಯಲ್ಲ ಎಂದು ಮರಳಿ ಕಳುಹಿಸಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಸಾರ್ವಜನಿಕರು ಅಧಿಕಾರಿಯ ಅಮಾನತಿಗೆ ಒತ್ತಾಯಿಸಿದ್ದಾರೆ. ಮಾನವೀಯ ನೆಲೆಯಲ್ಲಿ ಪಕ್ಷ ಈ ಹೋರಾಟವನ್ನು ಬೆಂಬಲಿಸುತ್ತಿದೆ.
ರಂಜನ್‌ ಜಿ. ಗೌಡ, ಬಿಜೆಪಿ ಅಧ್ಯಕ್ಷ 

Advertisement

Udayavani is now on Telegram. Click here to join our channel and stay updated with the latest news.

Next