ಬೆಂಗಳೂರು: ಕಾರಾಗೃಹ ಡಿಜಿಪಿ ಸತ್ಯನಾರಾಯಣ ರಾವ್ ವಿರುದ್ಧ ಡಿಐಜಿ ರೂಪಾ ಮಾಡಿರುವ ಆರೋಪ ಪೊಲೀಸ್ ಇಲಾಖೆಯಷ್ಟೇ ಅಲ್ಲದೆ ಸರಕಾರದ ಮಟ್ಟದಲ್ಲೂ ಸಂಚಲನ ಮೂಡಿಸಿದೆ. ನಿವೃತ್ತಿಗೆ 18 ದಿನ ಬಾಕಿ ಇರುವಾಗ ಸತ್ಯನಾರಾಯಣ ರಾವ್ ವಿರುದ್ಧ ಕೇಳಿ ಬಂದಿರುವ ಆರೋಪ ಹಲವು ಅನುಮಾನಗಳಿಗೂ ಕಾರಣವಾಗಿದೆ.
ಗುರುವಾರ ಗೃಹ ಇಲಾಖೆ ಅಧಿ ಕಾರಿಗಳ ಜತೆ ತುರ್ತು ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಡಿಐಜಿ ರೂಪಾ ವರದಿ ಆಧಾರದ ಮೇಲೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ಉನ್ನತ ಮಟ್ಟದ ವಿಚಾರಣೆ ನಡೆಸುವಂತೆ ಆದೇಶ ನೀಡಿದರು.
ಇದೇ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ವಿದ್ಯಮಾನಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ಮುಖ್ಯಮಂತ್ರಿ, ಒಟ್ಟಾರೆ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ಆದಷ್ಟು ಶೀಘ್ರ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.
ಪರಪ್ಪನ ಅಗ್ರಹಾರದಲ್ಲಿ ಸೆರೆವಾಸ ಅನುಭವಿಸುತ್ತಿರುವ ಎಐಎಡಿಎಂಕೆ (ಅಮ್ಮ ಬಣ) ಪ್ರಧಾನ ಕಾರ್ಯ ದರ್ಶಿ ವಿ.ಕೆ. ಶಶಿಕಲಾಗೆ ವಿಶೇಷ ಆತಿಥ್ಯ ನೀಡಲು ಕಾರಾಗೃಹ ಡಿಜಿಪಿ ಸತ್ಯನಾರಾಯಣ 2 ಕೋಟಿ ರೂ. ಲಂಚ ಪಡೆದಿದ್ದಾರೆ. ಛಾಪಾ ಕಾಗದ ಆರೋಪಿ ತೆಲಗಿಗೆ ಕಾರಾಗೃಹ ನಿಯಮ ಉಲ್ಲಂ ಸಿ ಆತಿಥ್ಯ ನೀಡ ಲಾಗುತ್ತಿದೆ ಎಂಬ ಅಂಶ ಸಹಿತ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದ್ದು ಕ್ರಮ ಕೈಗೊಳ್ಳಬೇಕು ಎಂದು ಡಿಐಜಿ ಡಿ. ರೂಪಾ ವರದಿ ನೀಡಿದ್ದರು. ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿಗೆ ವರದಿ ರವಾನಿಸಿ ಪ್ರತಿಯನ್ನು ಡಿಜಿಪಿ ಸತ್ಯನಾರಾಯಣ ರಾವ್ ಅವರಿಗೂ ಕಳುಹಿಸಿದ್ದರು.
ಸತ್ಯನಾರಾಯಣ ರಾವ್ ಲೋಕಾಯುಕ್ತ ಎಡಿಜಿಪಿಯಾಗಿ ಕಾರ್ಯ ನಿರ್ವಹಿಸಿದ ಸಂದರ್ಭ ಸರಕಾರ ಮತ್ತು ಅವರ ನಡುವೆ ಆಂತರಿಕವಾಗಿ ಉಂಟಾಗಿದ್ದ ಸಂಘರ್ಷಕ್ಕೂ ಈಗಿನ ಪ್ರಕರಣಕ್ಕೂ ತಳುಕು ಹಾಕಲಾಗುತ್ತಿದೆ ಎಂದು ಹೇಳಲಾಗಿದೆ.
ಡಿಐಜಿ ರೂಪಾ ನೀಡಿರುವ ವರದಿಯಲ್ಲಿ ಉಲ್ಲೇಖವಾದ ಎರಡು ಕೋಟಿ ರೂ. ಲಂಚ ಪಡೆದ ಆರೋಪ ನಿರಾಧಾರ. ಇನ್ನು 18 ದಿನಗಳಲ್ಲಿ ಸೇವೆಯಿಂದ ನಿವೃತ್ತಿಯಾಗಲಿದ್ದೇನೆ. ನನ್ನ ವೃತ್ತಿ ಜೀವನದಲ್ಲಿ ಬಿಸ್ಕೇಟ್ ಕೂಡ ಮುಟ್ಟಿದವನಲ್ಲ. ಪ್ರಚಾರ ಪಡೆಯಲು ನಿರಾಧಾರ ಆರೋಪ ಮಾಡಬಾರದು. ಸೂಕ್ತ ದಾಖಲೆ ಗಳಿದ್ದರೆ ಬಹಿರಂಗಪಡಿಸಲಿ.
– ಸತ್ಯನಾರಾಯಣ ರಾವ್, ಡಿಜಿಪಿ
ಸತ್ಯನಾರಾಯಣ ರಾವ್ ಸವಾಲಿಗೆ ತನಿಖೆ ಆಗಲಿ. ನಾನು ಕಾರಾಗೃಹಕ್ಕೆ ಭೇಟಿ ನೀಡಿ ದಾಗ ತೆಲಗಿಯ ಅನಾಯಾಸ ಓಡಾಟ, ಶಶಿಕಲಾರಿಗೆ ಪ್ರತ್ಯೇಕ ಅಡುಗೆ ಕೋಣೆ ಮಾಡಿಕೊಟ್ಟಿರು ವುದನ್ನು ನೋಡಿದ್ದೇನೆ. ಶಶಿಕಲಾ ಅವರಿಗೆ ವಿಐಪಿ ಆತಿಥ್ಯ ನೀಡುವ ಸಲುವಾಗಿ 2 ಕೋಟಿ ರೂ. ಲಂಚ ಪಡೆದಿರುವ ಆರೋಪದ ಬಗ್ಗೆ ಖುದ್ದು ಡಿಜಿಪಿ ಅವರಿಗೆ ವರದಿ ನೀಡಿದ್ದೇನೆ.
– ರೂಪಾ, ಡಿಐಜಿ