ಮೈಸೂರು: ರೋಹಿಣಿ ಸಿಂಧೂರಿ ಭೂ ಮಾಫಿಯಾ, ಮೆಡಿಕಲ್ ಮಾಫಿಯಾ ಹಗರಣ ಬಯಲಿಗೆಳೆಯುತ್ತಾರೆ ಎಂದು ವರ್ಗಾಯಿಸಲಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಒತ್ತಾಯಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಭೂಮಾಫಿಯಾ, ಮೆಡಿಕಲ್ ಮಾಫಿಯಾ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಶಿಲ್ಪಾನಾಗ್ ಅವರು ನನ್ನ ಪ್ರತಿಭಟನೆಗೆ ಫಲ ಸಿಕ್ಕಿದೆ ಎನ್ನುತ್ತಾರೆ ಹಾಗಿದ್ದರೆ, ಡೀಸಿವರನ್ನು ವರ್ಗಾವಣೆ ಮಾಡಿಸುವುದೇ ಅವರ ಉದ್ದೇಶವಾಗಿತ್ತಾ? ಅಥವಾ ಜನಪ್ರತಿನಿಧಿಗಳ ಕೈಗೊಂಬೆಯಾಗಿ ಈ ರೀತಿ ನಿರ್ಧಾರ ಕೈಗೊಂಡರಾ? ಎನ್ನುವ ಬಗ್ಗೆಯೂ ತನಿಖೆಯಾಗಬೇಕು ಎಂದರು.
ತಾಕತ್ತು ತೋರಿಸಿದ ಸಿಂಹ: ಈಚೆಗಷ್ಟೇ ಶಾಸಕ ಜಿ.ಟಿ.ದೇವೇಗೌಡರು ತಾಕತ್ತಿದ್ದರೆ ವರ್ಗಾವಣೆ ಮಾಡಿಸಲಿ ಎಂದು ಸಂಸದ ಪ್ರತಾಪ್‌ಸಿಂಹ ಅವರಿಗೆ ಸವಾಲ್ ಹಾಕಿದ್ದರು. ಅಂತೆಯೇ ಪ್ರತಾಪ್‌ಸಿಂಹ ಅವರು ವರ್ಗಾವಣೆ ಮಾಡಿಸಿ ತಮ್ಮ ತಾಕತ್ತನ್ನು ತೋರಿಸಿದ್ದಾರೆ.ಆದರೆ, ಶಾಸಕರು ಅರ್ಥ ಮಾಡಿಕೊಂಡಿಲ್ಲ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಕಡಿಮೆ ಆಗುತ್ತಿಲ್ಲ. ಮೊದಲು ಕೊರೊನಾ ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡಿ. ಆ ಮೇಲೆ ಬೇಕಿದ್ದರೆ ಯಾರನ್ನು ಬೇಕಿದ್ದರೂ ಬದಲಾವಣೆಮಾಡಿಕೊಳ್ಳಿ. ಜನರು ಸಾಯುವ ಸಂದರ್ಭದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಇವರಿಗೆ ಕೊರೊನಾ ಪರಿಸ್ಥಿತಿ ನಿರ್ವಹಣೆಗಿಂತ ಅಧಿಕಾರವೇ ಮುಖ್ಯ. ಕೊರೊನಾ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕಿಡಿಕಾರಿದರು.