Advertisement

2ನೇ ಹಂತದ ನಗರಗಳಲ್ಲಿ ಹೂಡಿಕೆ ಮಾಡಿ​​​​​​​

06:00 AM Aug 04, 2018 | Team Udayavani |

ಬೆಂಗಳೂರು: ರಾಜ್ಯದ ಎರಡನೇ ಹಂತದ ನಗರಗಳಲ್ಲಿ ಹೂಡಿಕೆ ಮಾಡುವಂತೆ ಉದ್ಯಮಿಗಳಿಗೆ ಆಹ್ವಾನ ನೀಡಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಕೈಗಾರಿಕಾ ಸ್ಥಾಪನೆಗಿರುವ ತೊಡಕುಗಳ ನಿವಾರಣೆಗೆ ಮುಖ್ಯಮಂತ್ರಿಗಳ ಕಚೇರಿಯಲ್ಲೇ ವಿಶೇಷ ಘಟಕ ಸ್ಥಾಪಿಸುವ ಭರವಸೆ ನೀಡಿದರು.

Advertisement

ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯು ನ.29ರಿಂದ ಡಿ.1ರವರೆಗೆ ಹಮ್ಮಿಕೊಳ್ಳಲಿರುವ “ಬೆಂಗಳೂರು ಟೆಕ್‌ ಸಮ್ಮಿಟ್‌- 2018’ರ ಪೂರ್ವಭಾವಿಯಾಗಿ ನಗರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಐಟಿ- ಬಿಟಿ ಕಂಪೆನಿಗಳ ಸಿಇಒಗಳೊಂದಿಗೆ ಸಭೆ ನಡೆಸಿದ ಅವರು, ರಾಜ್ಯದಲ್ಲಿ ಹೂಡಿಕೆಗೆ ಪೂರಕ ವಾತಾವರಣವಿದ್ದು, ಬೆಂಗಳೂರು ಮಾತ್ರವಲ್ಲದೇ ಎರಡನೇ ಹಂತದ ನಗರಗಳಲ್ಲೂ ಉದ್ಯಮ ಸ್ಥಾಪನೆಗೆ ಮುಂದಾಗಬೇಕು ಎಂದು ಉದ್ಯಮಿಗಳಿಗೆ ಕರೆ ನೀಡಿದರು.

ರಾಜ್ಯದ ಎರಡನೇ ಹಾಗೂ ಮೂರನೇ ಹಂತದ ನಗರಗಳಲ್ಲಿ ಉದ್ಯಮ ಸ್ಥಾಪಿಸುವ ಮೂಲಕ ಗ್ರಾಮೀಣ ಪ್ರದೇಶದ ಯುವಜನತೆಗೆ ಉದ್ಯೋಗಾವಕಾಶ ಕಲ್ಪಿಸಲು ಸರ್ಕಾರ ಉತ್ಸುಕವಾಗಿದೆ. ಈ ನಗರಗಳಲ್ಲಿ ಹೂಡಿಕೆ ಮಾಡುವ ಕಂಪೆನಿಗಳಿಗೆ ಅಗತ್ಯವಿರುವ ಎಲ್ಲ ರೀತಿಯ ನೆರವು ನೀಡಲು ಸಿದ್ಧವಿದೆ ಎಂದು ಹೇಳಿದರು.

ಕೈಗಾರಿಕೆಗಳಿಗೆ ಅಗತ್ಯವಿರುವ ಮಾನವ ಸಂಪನ್ಮೂಲ ಒದಗಿಸಲು ಕೌಶಲ್ಯ ತರಬೇತಿಗೂ ಆದ್ಯತೆ ನೀಡಲಾಗುತ್ತಿದೆ. ಪ್ರಸಕ್ತ ವರ್ಷದಲ್ಲಿ ಕೌಶಲ್ಯ ತರಬೇತಿಗೆಂದೇ 500 ಕೋಟಿ ರೂ. ಕಾಯ್ದಿರಿಸಲಾಗಿದೆ. ಹಾಗಾಗಿ ರಾಜ್ಯದ ಇತರೆ ನಗರಗಳಲ್ಲಿ ಉದ್ಯಮ ಸ್ಥಾಪಿಸುವ ಮೂಲಕ ಉದ್ಯೋಗ ಸೃಷ್ಟಿಗೆ ನೆರವಾಗಬೇಕು ಎಂದು ಮನವಿ ಮಾಡಿದರು.

ಚೀನಾದೊಂದಿಗೆ ಆರೋಗ್ಯಕರ ಸ್ಪರ್ಧೆ ಯೋಜನೆಯಡಿ ನಾನಾ ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಸ್ಟರ್‌ ಸ್ಥಾಪಿಸುವ ಉದ್ದೇಶವಿದೆ. ಬೀದರ್‌ನಲ್ಲಿ ಕೃಷಿಗೆ ಪೂರಕ ಯಂತ್ರೋಪಕರಣ ತಯಾರಿಕೆ, ಕಲಬುರಗಿಯಲ್ಲಿ ಸೌರ ವಿದ್ಯುತ್‌ ಉಪಕರಣ ತಯಾರಿಕೆ, ಕೊಪ್ಪಳದಲ್ಲಿ ಆಟಿಕೆಗಳ ತಯಾರಿಕೆ, ಬಳ್ಳಾರಿಯಲ್ಲಿ ವಸ್ತ್ರೋದ್ಯಮ, ಚಿತ್ರದುರ್ಗದಲ್ಲಿ ಎಲ್‌ಇಡಿ ತಯಾರಿಕೆ ಸೇರಿದಂತೆ ನಾನಾ ಜಿಲ್ಲೆಗಳಲ್ಲಿ ನಿರ್ದಿಷ್ಟ ಕೈಗಾರಿಕಾ ಕ್ಲಸ್ಟರ್‌ ಸ್ಥಾಪಿಸಲಾಗುತ್ತಿದೆ. ಇತರೆ ಉದ್ಯಮ ಸ್ಥಾಪನೆಗೂ ಪ್ರೋತ್ಸಾಹ ನೀಡಲಾಗುವುದು ಎಂದು ಭರವಸೆ ನೀಡಿದರು.

Advertisement

ವಿಶೇಷ ಘಟಕ ಸ್ಥಾಪನೆ
ನಾನಾ ಕಂಪೆನಿಗಳ ಪ್ರಮುಖರ ಸಲಹೆಗಳಿಗೆ ಸ್ಪಂದಿಸಿದ ಎಚ್‌.ಡಿ.ಕುಮಾರಸ್ವಾಮಿ, ಉದ್ಯಮಿಗಳ ಎಲ್ಲ ಸಮಸ್ಯೆ ನಿವಾರಿಸಲು ಸರ್ಕಾರ ಬದ್ಧವಾಗಿದೆ. ಉದ್ಯಮ ಸ್ಥಾಪನೆಗೆ ನಾನಾ ಇಲಾಖೆಗಳಿಂದ ತ್ವರಿತ ಅನುಮೋದನೆ, ಹೂಡಿಕೆ ಇತರೆ ಪ್ರಕ್ರಿಯೆಗಳಲ್ಲಿನ ಅಡೆತಡೆಗಳನ್ನು ನಿವಾರಿಸಿ ಸುಗಮವಾಗಿ ಉದ್ಯಮ ಆರಂಭಿಸಲು ಅನುಕೂಲವಾಗುವಂತೆ ಮುಖ್ಯಮಂತ್ರಿ ಕಚೇರಿಯಲ್ಲೇ ವಿಶೇಷ ಘಟಕ ಸ್ಥಾಪಿಸಲಾಗುವುದು. ಕಾರ್ಯದರ್ಶಿ ಶ್ರೇಣಿ ಅಧಿಕಾರಿಯನ್ನು ನಿಯೋಜಿಸಿ ತ್ವರಿತವಾಗಿ ಸ್ಪಂದಿಸುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಬೃಹತ್‌ ಕೈಗಾರಿಕೆ ಮತ್ತು ಐಟಿಬಿಟಿ ಸಚಿವ ಕೆ.ಜೆ.ಜಾರ್ಜ್‌, ಐಟಿ ಬಿಟಿ ಉದ್ಯಮಗಳ ಬೆಳವಣಿಗೆಗೆ ಅಗತ್ಯವಿರುವ ಎಲ್ಲ ರೀತಿಯ ಸಹಕಾರ, ಪ್ರೋತ್ಸಾಹವನ್ನು ಸರ್ಕಾರದಿಂದ ಒದಗಿಸಲಾಗುವುದು ಎಂದು ಹೇಳಿದರು.

ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ, ಗ್ರಾಮೀಣ ಉದ್ಯಮಶೀಲತೆ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಈ ಪ್ರಯತ್ನಕ್ಕೆ ಐಟಿ- ಬಿಟಿ ಕ್ಷೇತ್ರದ ದಿಗ್ಗಜ ಸಂಸ್ಥೆಗಳು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಸಣ್ಣ ಕೈಗಾರಿಕೆ ಸಚಿವ ಶ್ರೀನಿವಾಸ್‌, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಎಸ್‌.ಸೆಲ್ವಕುಮಾರ್‌, ಕರ್ನಾಟಕ ಐಟಿ ವಿಷನ್‌ ಗ್ರೂಪ್‌ ಅಧ್ಯಕ್ಷ ಕ್ರಿಸ್‌ ಗೋಪಾಲಕೃಷ್ಣ ಇತರರು ಉಪಸ್ಥಿತರಿದ್ದರು.

ಇನ್ನೋವೇಷನ್‌ ಅಥಾರಿಟಿ ಸ್ಥಾಪನೆ
ಕರ್ನಾಟಕ ಇನ್ನೋವೇಷನ್‌ ಹಬ್‌ ಎಂಬ ಖ್ಯಾತಿ ಗಳಿಸಿದೆ. ಈ ವಲಯಕ್ಕೆ ಅಗತ್ಯ ಪ್ರೋತ್ಸಾಹ ನೀಡಲು ಹಾಗೂ ಅಡೆತಡೆಗಳು, ಸಮಸ್ಯೆಗಳನ್ನು ನಿವಾರಿಸಲು ಇನ್ನೋವೇಷನ್‌ ಅಥಾರಿಟಿ ಸ್ಥಾಪಿಸುವ ಬಗ್ಗೆ ಮುಂದಿನ ಅಧಿವೇಶನದಲ್ಲಿ ವಿಧೇಯಕ ಮಂಡಿಸಲಾಗುವುದು.
– ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next