Advertisement

ನೋಟು ಅಮಾನ್ಯದ ಬಳಿಕ ದಾಖಲೆ ಕರ ಸಂಗ್ರಹ

03:45 AM Feb 03, 2017 | Team Udayavani |

ಬೆಂಗಳೂರು: ನೋಟು ಅಮಾನ್ಯದ ನಡುವೆಯೂ ಡಿಸೆಂಬರ್‌ ಅಂತ್ಯದ ವೇಳೆಗೆ ತೆರಿಗೆ ಸಂಗ್ರಹದಲ್ಲಿ ರಾಜ್ಯ ಸರ್ಕಾರ ಉತ್ತಮ
ಸಾಧನೆ ತೋರಿಸಿದ್ದು, ಬಜೆಟ್‌ ಗುರಿಯ ಶೇ. 71.8ರಷ್ಟು ಸಾಧನೆಯಾಗಿದೆ. 2013ರಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದ ಈವರೆಗೆ
ಸಂಗ್ರಹವಾಗಿರುವ ಅತ್ಯಧಿಕ ಪ್ರಮಾಣದ ತೆರಿಗೆ ಇದಾಗಿದೆ.

Advertisement

ಇದರೊಂದಿಗೆ ನೋಟುಗಳ ಅಮಾನ್ಯ ದಿಂದಾಗಿ ತೆರಿಗೆ ಸಂಗ್ರಹದಲ್ಲಿ ಇಳಿಕೆಯಾಗಲಿದೆ ಎಂಬ ಆತಂಕ ದೂರವಾಗಿದ್ದು, ಮುದ್ರಾಂಕ
ಮತ್ತು ನೋಂದಣಿ ಶುಲ್ಕ ಹೊರತುಪಡಿಸಿ ಉಳಿದಂತೆ ವಾಣಿಜ್ಯ ತೆರಿಗೆ, ಅಬಕಾರಿ ಮತ್ತು ಸಾರಿಗೆ ಇಲಾಖೆ ತೆರಿಗೆ ಸಂಗ್ರಹದಲ್ಲಿ ಶೇ.70ಕ್ಕೂ ಹೆಚ್ಚು ಸಾಧನೆ ಮಾಡಿದೆ.

2016-17ನೇ ಸಾಲಿನಲ್ಲಿ ಡಿಸೆಂಬರ್‌ ಅಂತ್ಯದವರೆಗೆ ಬಜೆಟ್‌ ಗುರಿಯ ಶೇ. 71.8ರಷ್ಟು ಸಾಧನೆಯಾಗಿದೆ. 2011-12 ಮತ್ತು
2012-13ರ ನಂತರ ಇಷ್ಟು ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗಿರುವುದು ಇದೇ ಮೊದಲು. ಜನವರಿಯಿಂದ ತೆರಿಗೆ ಸಂಗ್ರಹದಲ್ಲಿ ಇನ್ನಷ್ಟು ಸುಧಾರಣೆ ಕಂಡುಬಂದಿದ್ದು, ಬಜೆಟ್‌ ಗುರಿಯ ಶೇ. 80ಕ್ಕಿಂತ ಹೆಚ್ಚು ಸಾಧನೆ ಮಾಡಲಾಗಿದೆ. ವರ್ಷಾಂತ್ಯದ ಫೆಬ್ರವರಿ ಮತ್ತು ಮಾಚ್‌ ìನಲ್ಲಿ ಮತ್ತಷ್ಟು ಹೆಚ್ಚಾಗಲಿದ್ದು, ಈ ಆರ್ಥಿಕ ವರ್ಷಾಂತ್ಯದ ವೇಳೆ ಗುರಿ ಮೀರಿದ ತೆರಿಗೆ ಸಂಗ್ರಹವಾಗಬಹುದು ಎನ್ನುತ್ತಾರೆ ಹಣಕಾಸು ಇಲಾಖೆ ಅಧಿಕಾರಿಗಳು. 

ತೆರಿಗೆ ಸಂಗ್ರಹ ಎಷ್ಟು?: ರಾಜ್ಯದ ಸ್ವಂತ ತೆರಿಗೆ ರಾಜಸ್ವಕ್ಕೆ ಸಂಬಂಧಿಸಿದಂತೆ ಬಜೆಟ್‌ ಗುರಿಯ 83,864 ಕೋಟಿ ರೂ. ಪೈಕಿ ಡಿಸೆಂಬರ್‌ ಅಂತ್ಯಕ್ಕೆ 60,210 ಕೋಟಿ ರೂ. (ಶೇ. 71.8) ಕೋಟಿ ರೂ. ಸಂಗ್ರಹವಾಗಿದೆ. ಅದರಲ್ಲಿ ವಾಣಿಜ್ಯ ತೆರಿಗೆಯಿಂದ 37,341 ಕೋಟಿ ರೂ. (ಶೇ. 72.7), ಅಬಕಾರಿ ತೆರಿಗೆಯಿಂದ 12,191 ಕೋಟಿ ರೂ. (ಶೇ. 73.8), ಮೋಟಾರು ವಾಹನ ತೆರಿಗೆಯಿಂದ 3,859 ಕೋಟಿ ರೂ. (ಶೇ. 74.8), ಮುದ್ರಾಂಕ ಮತ್ತು ನೋಂದಣಿ ಶುಲ್ಕದಿಂದ 5,904 (ಶೇ. 64.9), ಇತರೆ ತೆರಿಗೆ
ಮೂಲಗಳಿಂದ 915 ಕೋಟಿ ರೂ. (ಶೇ. 52.1) ಬಂದಿದೆ. ಅದೇ ರೀತಿ ಸ್ವಂತ ತೆರಿಗೆಯೇತರ ರಾಜಸ್ವದಡಿ 3,960 ಕೋಟಿ ರೂ. (ಶೇ. 63.7) ಸಂಗ್ರಹವಾಗಿದೆ.

ನೋಟು ಅಮಾನ್ಯದಿಂದ ಸಮಸ್ಯೆಯಾಗಿದ್ದು ಮುದ್ರಾಂಕ ಮತ್ತು ನೋಂದಣಿ ಶುಲ್ಕದಲ್ಲಿ ಮಾತ್ರ. 2015-16ರಲ್ಲಿ ಡಿಸೆಂಬರ್‌ ಅಂತ್ಯಕ್ಕೆ ಬಜೆಟ್‌ ಗುರಿಯ ಶೇ. 71.7 ಕೋಟಿ ರೂ. ಸಂಗ್ರಹವಾಗಿದ್ದರೆ, ಈ ಬಾರಿ 64.9ರಷ್ಟು ಮಾತ್ರ ಆಗಿದೆ. ಉಳಿದೆಲ್ಲಾ ವಿಭಾಗಗಳ ತೆರಿಗೆ ಸಂಗ್ರಹ ಬೆಳವಣಿಗೆ ಪ್ರಮಾಣ ಶೇ. 8.6ರಿಂದ ಶೇ. 13.8ರವರೆಗೆ ಹೆಚ್ಚಾಗಿದ್ದರೆ, ಮುದ್ರಾಂಕ, ನೋಂದಣಿ ಶುಲ್ಕದಲ್ಲಿ ಶೇ. 0.4ರಷ್ಟು ಏರಿಕೆ ಕಂಡುಬಂದಿದೆ.

Advertisement

ಕೇಂದ್ರದ ಅನುದಾನವೂ ಹೆಚ್ಚಳ
ಕೇಂದ್ರ ಸರ್ಕಾರವು ರಾಜ್ಯಗಳಿಗೆ ನೀಡುವ ಸಹಾಯಧನ ಕಡಿತಗೊಳಿಸಿ ತೆರಿಗೆ ಪ್ರಮಾಣ ಹೆಚ್ಚಿಸಿದ ಬಳಿಕ ರಾಜ್ಯಕ್ಕೆ ಬರುವ ಅನುದಾನ ಪ್ರಮಾಣವೂ ಹೆಚ್ಚಳವಾಗಿದೆ. 2016-17ನೇ ಸಾಲಿನಲ್ಲಿ ಡಿಸೆಂಬರ್‌ ಅಂತ್ಯದವರೆಗೆ ಕೇಂದ್ರದಿಂದ ಬಂದಿರುವ ಮೊತ್ತ ಇದುವರೆಗಿನ ಸಾರ್ವಕಾಲಿಕ ದಾಖಲೆ.2016-17ನೇ ಸಾಲಿನ ತೆರಿಗೆ ಹಂಚಿಕೆಯಲ್ಲಿ ವಾರ್ಷಿಕ ಗುರಿಯ ಶೇ. 67.7ರಷ್ಟು ಡಿಸೆಂಬರ್‌ ಅಂತ್ಯಕ್ಕೆ ಹಂಚಿಕೆಯಾಗಿದೆ. 2012-13ನೇ ಸಾಲಿನಿಂದ 2015-16ನೇ ಸಾಲಿನವರೆಗೆ ಈ ಪ್ರಮಾಣ ಶೇ. 64ರಿಂದ 64.6 ಮಧ್ಯೆ ಇತ್ತು. ಅದೇ ರೀತಿ ಸಹಾಯಧನ ಹಂಚಿಕೆಯಲ್ಲೂ ಉತ್ತಮ ಸಾಧನೆಯಾಗಿದೆ. 2016-17ನೇ ಸಾಲಿನಲ್ಲಿ ಡಿಸೆಂಬರ್‌ ಅಂತ್ಯಕ್ಕೆ 
ಒಟ್ಟಾರೆ ವಾರ್ಷಿಕ ಗುರಿಯ ಶೇ. 80.1ರಷ್ಟು ಮೊತ್ತ ಕೇಂದ್ರದಿಂದ ರಾಜ್ಯಕ್ಕೆ ಪಾವತಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next