ಹುಬ್ಬಳ್ಳಿ: ಕೇಂದ್ರ ಸರ್ಕಾರ ನೋಟು ಅಮಾನ್ಯಗೊಳಿಸಿದ ನಂತರದ ಸ್ಥಿತಿ-ಗತಿ ಕುರಿತ ಚರ್ಚಾಗೋಷ್ಠಿ ಚೇತನ ಬ್ಯುಸಿನೆಸ್ ಸ್ಕೂಲ್ ನಲ್ಲಿ ಸೋಮವಾರ ನಡೆಯಿತು. ಗೋಗಟೆ ಕಾಲೇಜು ಪ್ರಾಚಾರ್ಯ ಡಾ| ಎ.ಬಿ. ಕಲಕುಂದ್ರಿಕರ ಮಾತನಾಡಿ, ದೇಶದಲ್ಲಿ ನಡೆಯುವ ವಹಿವಾಟಿನಲ್ಲಿ ಶೇ.96ರಷ್ಟು ನಗದು ವ್ಯವಹಾರ ನಡೆಯುತ್ತದೆ.
ಇದರಲ್ಲಿ ಶೇ.86ರಷ್ಟು 500 ಹಾಗೂ 1000 ರೂ. ನೋಟುಗಳ ವಹಿವಾಟು ಜರುಗುವುದು. ಇದರಲ್ಲಿ ಶೇ.60ರಷ್ಟು ಕಪ್ಪುಹಣ ವ್ಯವಹಾರ, ನೋಟು ಅಮಾನ್ಯಗೊಳಿಸಿರುವುದರಿಂದ ಕಾಳಧನದ ಮೇಲೆ ನಿಯಂತ್ರಣ ಸಾಧಿಸಲು ಧ್ಯವಾಗಲಿದೆ ಎಂದರು.
ಚೇತನ ಬ್ಯುಸಿನೆಸ್ ಸ್ಕೂಲ್ ಮೆಂಟರ್ ಡಾ| ಎ.ಎಚ್. ಚಚಡಿ ಮಾತನಾಡಿ, ಕ್ಯಾಶ್ ಲೆಸ್ ಪ್ರಕ್ರಿಯೆ ಮಾಡುವ ನಿಟ್ಟಿನಲ್ಲಿ ನೋಟು ಅಮಾನ್ಯಗೊಳಿಸುವುದು ಪ್ರಮುಖ ರಣತಂತ್ರವಾಗಿದೆ ಎಂದು ಹೇಳಿದರು. ಕೃಷಿಕ ಜಯಧರ ಏಕಬೋಟೆ ಮಾತನಾಡಿ, ಅಸಂಘಟಿತ ವಲಯದ ಜನರು ಕೂಡ ಕ್ಯಾಶ್ ಲೆಸ್ ವಹಿವಾಟು ಕಲಿಯುವ ದಿಸೆಯಲ್ಲಿ ಭೀಮಾ ಆ್ಯಪ್ ಬಗ್ಗೆ ತಿಳಿಯಲು ಆಸಕ್ತಿ ತೋರುತ್ತಿದ್ದಾರೆ ಎಂದರು.
ಕಾಮತ ಗ್ರೂಪ್ಸ್ ಆಫ್ ಹೊಟೇಲ್ಸ್‌ನ ಸದಾನಂದ ಕಾಮತ ಮಾತನಾಡಿ, ಭಾರತದಲ್ಲಿ ಆದಾಯ ಕರ ಪಾವತಿಸುವವರ ಸಂಖ್ಯೆ ಅತೀ ಕಡಿಮೆಯಿದೆ. ವಿಶ್ವದ ಅತೀ ಭ್ರಷ್ಟ ದೇಶಗಳ ಪಟ್ಟಿಯಲ್ಲಿ ಭಾರತ 94ನೇ ಸ್ಥಾನದಲ್ಲಿದ್ದು, ನೋಟು ಅಮಾನ್ಯಗೊಳಿಸಿರುವುದು ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೆ ಸೂಕ್ತ ಫಲ ನೀಡಲಿದೆ ಎಂದು ತಿಳಿಸಿದರು.
ರವೀಂದ್ರ ಧೂಳಖೇಡ, ಗುರುರಾಜ ಕುಲಕರ್ಣಿ, ಎ.ಎ. ಥೋಮಾಚನ್ ಅಭಿಪ್ರಾಯ ಹಂಚಿಕೊಂಡರು. ಡಾ| ವಿ.ಎಂ. ಕೊರವಿ, ಪ್ರೊ| ರಮಾಕಾಂತ ಕುಲಕರ್ಣಿ, ನಾಗರಾಜ ಗೌಡರ, ಶ್ವೇತಾ, ಡಾ| ವೇದಾ, ನವೀನ್ ಇದ್ದರು. ಪ್ರೊ| ಮೃತ್ಯುಂಜಯ ಸ್ವಾಗತಿಸಿದರು. ಶ್ವೇತಾ ವಂದಿಸಿದರು.