Advertisement

ಅರ್ಜಿಗಾಗಿ ಅತಿಕ್ರಮಣದಾರರ ಅಲೆದಾಟ

12:18 PM Jul 28, 2019 | Team Udayavani |

ಶಿರಸಿ: ಒಂದು ಕಡೆ ಆರ್ಭಟ ಮಳೆ, ಇನ್ನೊಂದು ಕಡೆ ಬೆಳೆ ನಾಶ, ಮತ್ತೂಂದೆಡೆ ಅತಿಕ್ರಮಣ ಭೂಮಿ ಮಂಜೂರಿಗೆ ಹೆಚ್ಚಿನ ದಾಖಲೆ ಒದಗಿಸಿ ನೋಟಿಸ್‌. ಜೀವನಪೂರ್ತಿ ಅತಿಕ್ರಮಣ ಮಂಜೂರಿಗೆ ದಾಖಲೆ ಕೊಡುವುದು ಅರ್ಜಿ ಹಿಡಿದು ಅಲೆದಾಟ ಸಾಕಪ್ಪಾ ಸಾಕು ಅತಿಕ್ರಮಣ ಭೂಮಿಯು ಬೇಡಾ, ಪಟ್ಟವೂ ಬೇಡಾ ಎಂದು ಅಲವತ್ತುಕೊಳ್ಳುವಂತಾಗಿದೆ. ಇದು ಅರಣ್ಯ ಹಕ್ಕು ಕಾಯಿದೆ ಅಡಿ ಅರ್ಜಿ ಪುನರ್‌ ಪರಿಶೀಲನೆಗೆ ಯಲ್ಲಾಪುರ ತಾಲೂಕಿನಿಂದ ಶಿರಸಿ ಉಪವಿಭಾಗ ಕಚೇರಿಗೆ ಬಂದ ಅತಿಕ್ರಮಣದಾರರ ಅಳಲಾಗಿದೆ.

Advertisement

ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಕೇಂದ್ರ ಸರ್ಕಾರ ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯದ ಸೂಚನೆ ಮೇರೆಗೆ ತಿರಸ್ಕಾರಗೊಂಡ ಅತಿಕ್ರಮಣ ಅರ್ಜಿಗಳಿಗೆ ಪುನರ್‌ ಪರಿಶೀಲನೆಗೆ ಉಪವಿಭಾಗ ಸಮಿತಿ ಅಧ್ಯಕ್ಷರು ಹಾಗೂ ಉಪವಿಭಾಗ ಅಧಿಕಾರಿ ಕಚೇರಿಗೆ ಸಮಿತಿ ನೋಟಿಸ್‌ ನೀಡಿದೆ. ಉಪವಿಭಾಗ ವ್ಯಾಪ್ತಿಯ ಯಲ್ಲಾಪುರ, ಮುಂಡಗೋಡ, ಶಿರಸಿ ಮತ್ತು ಸಿದ್ದಾಪುರ ತಾಲೂಕು ವ್ಯಾಪ್ತಿಯ ಅತಿಕ್ರಮಣದಾರರಿಗೆ ಪುನರ್‌ ಪರಿಶೀಲನೆ ಕಾರ್ಯ ನಡೆಸಲಾಗಿದೆ. ಈ ಸಮಯದಲ್ಲಿ ಖುದ್ದಾಗಿ ಹಾಜರಿದ್ದು ಅರ್ಜಿದಾರರು ಕಾಯಿದೆಯಂತೆ 2005 ಡಿ.13 ಕ್ಕಿಂತಲೂ ಮುಂಚಿತವಾಗಿ ಕೊನೆ ಪಕ್ಷ 3 ತಲೆ ಮಾರಿನವರೆಗೆ ಪ್ರಧಾನವಾಗಿ ಅರಣ್ಯಗಳಲ್ಲಿ ವಾಸಿಸಿದ ಮತ್ತು ವಾಸ್ತವಿಕ ಜೀವನೋಪಾಯದ ಅವಶ್ಯಕತೆಗಳಿಗಾಗಿ ಅರಣ್ಯ ಅಥವಾ ಅರಣ್ಯ ಜಮೀನಿನ ಮೇಲೆ ಅವಲಂಬಿತವಾಗಿರುವ ಬಗ್ಗೆ ದೃಢೀಕೃತ ದಾಖಲೆಗಳನ್ನು ಹಾಜರು ಪಡಿಸಬೇಕಿದೆ. ಅತಿಕ್ರಮಣದಾರರು ಇದ್ದಂತಹ ದಾಖಲೆಗಳನ್ನೆಲ್ಲಾ 70, 80 ಕಿಮೀ ದಿಂದ ಶಿರಸಿಗೆ ಬಂದು ಸಮಿತಿ ಮುಂದೆ ಹಾಜರಾಗುತ್ತಿದ್ದಾರೆ. ಈ ವೇಳೆ ಇಂಥ ಅಭಿಪ್ರಾಯ ವ್ಯಕ್ತವಾಗಿದೆ.

ಪುನರ್‌ ಪರಿಶೀಲನೆ ಅರ್ಜಿ ತಾಲೂಕು ಕೇಂದ್ರದಲ್ಲಿ ವಿಚಾರಣೆ ಆಗಬೇಕಿದ್ದು ಕೇಂದ್ರ ಸರ್ಕಾರದ ನಿರ್ದೇಶನದಂತೆ ಅರ್ಜಿದಾರರ ಹಕ್ಕುಗಳು ಮತ್ತು ಪರಿಗಣಿಸಬಹುದಾದ ಸಾಕ್ಷಿಗಳ ಬಗ್ಗೆ ಕಂದಾಯ ಮತ್ತು ಅರಣ್ಯ ಇಲಾಖೆಯೇ ಅತಿಕ್ರಮಣದಾರರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.

ಇರುವ ಎಲ್ಲಾ ದಾಖಲೆ ಈಗಾಗಲೇ ನೀಡಿದ್ದು ಮತ್ತೆ ದಾಖಲೆ ಒದಗಿಸಿ ಎಂದು ನೋಟಿಸ್‌ ಬಂದಿದೆ. ಇಲ್ಲದ ದಾಖಲೆ ಎಲ್ಲಿಂದ ತರುವುದು. 30-35 ವರ್ಷದಿಂದ ಅತಿಕ್ರಮಣ ಮಂಜೂರಿಗೆ ಅರ್ಜಿ ದಾಖಲೆ ನೀಡುವುದರಲ್ಲಿ ಜೀವನ ಮುಗಿದು ಹೋಗಿದೆ. ಈಗ ಮತ್ತೆ 3 ತಲೆಮಾರಿನ ದಾಖಲೆ ಕೊಡಿ ಅಂತ ನೋಟಿಸ್‌ ಬಂದಿದೆ ಎಂದು ಶಿರಸಿ ಉಪವಿಭಾಗ ಸಮಿತಿ ಪುನರ್‌ ಪರಿಶೀಲನೆ ವಿಚಾರಣೆಗೆ ಹಾಜರಾದ ಯಲ್ಲಾಪುರ ತಾಲೂಕು ಕುಂದರಗಿ ಗ್ರಾಪಂ ವ್ಯಾಪ್ತಿಯ ಅರ್ಜಿದಾರರಾದ ಬಾಲು ಗೌಳಿ, ಸಾಧು ದೇವಾಡಿಗ, ಗೋಪಾಲ ನಾಯ್ಕ, ಗೋಪಾಲ ಪೂಜಾರಿ, ಲಲಿತಾ ಭಟ್ಟ ಆನೆಗುಂಡಿ ನೋವು ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next