ಬೆಂಗಳೂರು: ರಾತ್ರಿ ವೇಳೆ ದಂಪತಿಗಳ ಕೊಠಡಿ ಬಳಿ ಬಂದು ಇಣುಕಿ ನೋಡುತ್ತಿರುವ ವ್ಯಕ್ತಿಯ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸ್ಥಳೀಯ ನಿವಾಸಿಗಳು ಫೇಸ್‌ಬುಕ್ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲದೇ ಈ ಸಂಬಂಧ ರಾಜರಾಜೇಶ್ವರಿನಗರ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಿಸಿದ್ದಾರೆ.
ಕೆಲ ದಿನಗಳ ಹಿಂದೆ ರಾಜರಾಜೇಶ್ವರಿ ನಗರದಲ್ಲಿ ತಡರಾತ್ರಿ ಕಾಣಿಸಿಕೊಳ್ಳುತ್ತಿದ್ದ ವ್ಯಕ್ತಿ, ಅಪಾರ್ಟಮೆಂಟ್, ಮನೆಗಳ ಬಾತ್‌ರೂಂ, ಬೆಡ್‌ರೂಂಗಳ ಕಿಟಕಿಗಳ ಬಳಿ ಧಿಡೀರ್ ಪ್ರತ್ಯಕ್ಷನಾಗುತ್ತಿದ್ದ. ಈ ಸಂಬಂಧ ಕೆಲ ಸ್ಥಳೀಯರು ಫೇಸ್‌ಬುಕ್‌ನಲ್ಲಿ ಗ್ರೂಪ್ ಸೃಷ್ಟಿಸಿ, ತಮಗಾದ ಅನುಭವಗಳನ್ನು ಹಂಚಿಕೊಂಡು, ಇತರರಿಗೂ ಎಚ್ಚರಿಕೆ ನೀಡಿದ್ದರು.
ಜತೆಗೆ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಅಪರಿಚಿತ ವ್ಯಕ್ತಿಯ ಮುಖ ಚಹರೆಯನ್ನು ಪ್ರಕಟಿಸಿದ್ದರು. ಇದೇ ಪೋಸ್ಟನ್ನು ಸಾರ್ವಜನಿಕರೊಬ್ಬರು ಇದೀಗ ಮತ್ತೆ ಶೇರ್ ಮಾಡಿದ್ದು, ರಾಜರಾಜೇಶ್ವರಿ ನಗರದ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.
ಫೇಸ್‌ಬುಕ್‌ನಲ್ಲಿ ಏನಿದೆ?: “ರಾಜರಾಜೇಶ್ವರಿ ನಗರದ ನಿವಾಸಿಗಳೇ ಎಚ್ಚರಿಕೆಯಿಂದ ಇರಿ. ಬಿಇಎಂಎಲ್ ಬಡಾವಣೆಯ ನ್ಯೂ ಹಾರಿಜಾನ್ ಶಾಲೆಯ ಬಳಿ ಒಬ್ಬ ವಿಚಿತ್ರ ವ್ಯಕ್ತಿ ರಾತ್ರಿ ಹೊತ್ತು ಸಂಚರಿಸುತ್ತಿದ್ದು, ಮನೆಗಳ ಬೆಡ್ ರೂಂ ಮತ್ತು ಶೌಚಾಲಯಗಳನ್ನು ಇಣುಕಿ ನೋಡುತ್ತಾನೆ. ಮಹಿಳೆಯರನ್ನೇ ಈತ ಗುರಿಯಾಗಿರಿಸಿಕೊಂಡು ರಾತ್ರಿ 11 ರಿಂದ 2 ಗಂಟೆವರೆಗೆ ಸುತ್ತಾಡುತ್ತಿದ್ದಾನೆ’.
“ಈ ವ್ಯಕ್ತಿಯನ್ನು ನಾವು ನೋಡಿದ್ದೇವೆ. ಹಿಡಿಯಲು ಹಲವು ಬಾರಿ ಯತ್ನಿಸಿದ್ದರೂ, ಆತ ತಪ್ಪಿಸಿಕೊಳ್ಳುತ್ತಿದ್ದಾನೆ. ಸುಲಭವಾಗಿ ಮನೆಗಳ ಕಾಂಪೌಂಡ್, ಗೋಡೆ ಮತ್ತು ನೀರಿನ ಪೈಪ್‌ಗ್ಳನ್ನು ಹತ್ತಿ ಇಳಿದು ಪರಾರಿಯಾಗುತ್ತಾನೆ. ಆತ ಬಹಳ ಅಪಾಯಕಾರಿ ವ್ಯಕ್ತಿಯಾಗಿದ್ದು, ಹಿಡಿಯಲು ಎಲ್ಲರ ಸಹಾಯಬೇಕಿದೆ. ನಿಮ್ಮ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿ ಎಚ್ಚರಿಕೆಯಿಂದ ಇರುವಂತೆ ತಿಳಿಸಿ, ಒಂದು ವೇಳೆ ಆತ ಪತ್ತೆಯಾದರೆ ಹಿಡಿಯಲು ಸಹಾಯ ಮಾಡಿ’ ಎಂದು ಪೋಸ್ಟ್ ಮಾಡಿದ್ದರು.
ಪೊಲೀಸರ ರಾತ್ರಿ ಗಸ್ತು ಹೆಚ್ಚಳ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಆರು ತಿಂಗಳ ಹಿಂದಿನ ಪೋಸ್ಟ್‌ನ್ನು ಇದೀಗ ಮತ್ತೆ ರಿಪೋಸ್ಟ್ ಮಾಡಿದ್ದಾರೆ. ಈ ರೀತಿ ರಾತ್ರಿ ಹೊತ್ತು ಸಂಚಾರ ಮಾಡುವ ವ್ಯಕ್ತಿಯ ಬಗ್ಗೆ ದೂರು ಬಂದಿದ್ದು, ಆರೋಪಿಯ ಪತ್ತೆ ಕಾರ್ಯ ಕೂಡ ನಡೆಸಲಾಗಿತ್ತು. ಸ್ಥಳೀಯರ ಮಾಹಿತಿ ಹಿನ್ನೆಲೆಯಲ್ಲಿ ನಾಕಾ ಬಂದಿ ಹಾಕಿ ತಪಾಸಣೆ ನಡೆಸಲಾಗಿತ್ತು.
ಸುಮಾರು ಒಂದು ತಿಂಗಳ ಕಾಲ ಹುಡುಕಾಟ ನಡೆಸಲಾಗಿದೆ. ಆದರೆ, ಆರೋಪಿಯ ಸುಳಿವು ಸಿಕ್ಕಿಲ್ಲ. ಇದೀಗ ಆತ ಮತ್ತೆ ಕಾಣಿಸಿಕೊಂಡಿದ್ದಾನೆ ಎಂಬ ಬಗ್ಗೆ ಯಾರೂ ಮಾಹಿತಿ ನೀಡಿಲ್ಲ. ಆದರೂ ರಾಜರಾಜೇಶ್ವರಿನಗರ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರ ರಾತ್ರಿ ಗಸ್ತು ಹೆಚ್ಚಿಸಲಾಗುತ್ತದೆ ಎಂದು
“ಉದಯವಾಣಿ’ಗೆ ತಿಳಿಸಿದರು.