Advertisement

UV Fusion: ಸ್ವಅವಲೋಕನ ಅತೀ ಮುಖ್ಯ

04:30 PM Dec 04, 2023 | Team Udayavani |

ಜನರು ಕ್ಷಣಕ್ಷಣಕ್ಕೂ ಬದಲಾಗುತ್ತಿರುತ್ತಾರೆ. ನೆನಪಿನ ಶಕ್ತಿ ಎಲ್ಲರಲ್ಲೂ ಇದೆಯಾದರೂ ಒಳ್ಳೆಯ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳುವಷ್ಟು ಸಮಯ ಇಲ್ಲದಾಗಿದೆ. ಸದಾ ಜೀವನದ ಜಂಜಾಟದಲ್ಲಿ ಸಿಲುಕಿ ಒದ್ದಾಡುತ್ತಿರುವ ಮಾನವ ಮೂಕ ಪ್ರಾಣಿಗಳನ್ನು ನೋಡಿ ಕಲಿಯಬೇಕಾದ ಅದೆಷ್ಟೋ ಪಾಠಗಳಿವೆ. ಸ್ವತಃ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವ ಮನುಷ್ಯನ ಬುದ್ಧಿಮತ್ತೆಯು ಪ್ರಾಣಿ ಪಕ್ಷಿಗಳಿಗಿಂತ ಕಡಿಮೆ ಇದೆ ಎಂದರೂ ತಪ್ಪಾಗಲಾರದು. ಪ್ರಾಣಿಗಳು ಸಹ ತಾನು ನಡೆದು ಬಂದಂತಹ ಹಾದಿಯನ್ನು ತಿರುಗಿ ನೋಡಿ ಒಮ್ಮೆ ಅವಲೋಕನ ಮಾಡಿಕೊಳ್ಳುತ್ತವೆ. ಆದರೆ ಮಾನವನಲ್ಲಿ ಇಂತಹ ಗುಣ ಅತೀ ವಿರಳ.

Advertisement

ಸ್ವಅವಲೋಕನ ಎಂಬ ಪದವೇ ಹೇಳುವಂತೆ ನಮ್ಮನ್ನು ನಾವು ಅವಲೋಕನ ಮಾಡುವುದು. ತಪ್ಪು ಯಾವುದು, ಒಳಿತಾವುದು ಎಂದು ಕೇಳಿಕೊಳ್ಳುವುದು. ನಾವು ನಡೆದು ಬಂದಂತಹ ಹಾದಿಯನ್ನು ಒಂದೊಮ್ಮೆ ತಿರುಗಿ ನೋಡುವುದು, ಹೀಗೆ ಹಿಂತಿರುಗಿ ನೋಡಿದಾಗ ಮಾತ್ರ ನಡೆದ ಹಾದಿಯಲ್ಲಿ ಸಾಗುವಾಗ ಚುಚ್ಚಿದಂತಹ ಮುಳ್ಳು, ದಾಟಿದ ಅಡೆತಡೆಗಳೆಲ್ಲವೂ ಕಣ್ಣೆದುರಿಗೊಮ್ಮೆ ಬರಲು ಸಾಧ್ಯವಾಗುತ್ತದೆ.

ಸ್ವಅವಲೋಕನ ಎಂಬುದು ನಮ್ಮಲ್ಲಿ ನಮಗೆ ಸ್ಪರ್ಧೆಯನ್ನು ಏರ್ಪಡಿಸುತ್ತದೆ. ಒಮ್ಮೆ ಸ್ವಅವಲೋಕನ ಮಾಡಿಕೊಂಡಾಗ ಹಿಂದೆ ನಾವು ಮಾಡಿದ ಕೆಲಸ ಕಾರ್ಯಗಳು, ಈಗ ಮಾಡುತ್ತಿರುವ ಕೆಲಸಗಳು, ಮುಂದೆ ಮಾಡಬೇಕಾಗಿರುವ ಕೆಲಸಗಳ ಬಗ್ಗೆ ಅರಿವು ಮೂಡುತ್ತದೆ.

ಈ ಅವಲೋಕನವನ್ನು ಪ್ರತಿಯೊಬ್ಬ ಮನುಷ್ಯನು ಬೆಳೆಸಿಕೊಳ್ಳಬೇಕು. ತಪ್ಪನ್ನು ತಿದ್ದಿ ಸರಿದಾರಿಯಲ್ಲಿ ನಡೆಯಲು ಇದು ಸಹಕರಿಸುತ್ತದೆ. ಒಮ್ಮೆ ಮಾಡಿದ ತಪ್ಪನ್ನೇ ಪುನಃ ಮಾಡದಂತೆ ಹೊಸತನವನ್ನು ರೂಪಿಸುತ್ತದೆ.

ಮುಖ್ಯವಾಗಿ ವಿದ್ಯಾರ್ಥಿಗಳು ತಮ್ಮನ್ನು ತಾವು ಸ್ವಅವಲೋಕನವನ್ನು ಮಾಡಿಕೊಳ್ಳುವುದು ಉತ್ತಮ. ತಮ್ಮ ಜೀವನವನ್ನು ರೂಪಿಸಿಕೊಳ್ಳುವ ಹೆಜ್ಜೆಯಲ್ಲಿ ಇಂತಹ ಅವಲೋಕನ ಅವರನ್ನು ಯಶಸ್ಸಿನ ಹಾದಿಗೆ ಬಹು ಬೇಗನೆ ಕೊಂಡೊಯ್ಯುವುದು ಖಂಡಿತ.

Advertisement

ಈ ಅದ್ಭುತವಾದ ಅವಲೋಕನದ ಮಂತ್ರ ಎಲ್ಲ ಕ್ಷೇತ್ರದಲ್ಲಿಯೂ ಪ್ರಭಾವ ಬೀರುತ್ತದೆ. ಉದ್ಯಮಿಗಳಾಗಿದ್ದರೂ ಸರಿ, ಶಿಕ್ಷಕರಾಗಿದ್ದರೂ ಸರಿ, ವ್ಯಾಪಾರಿಗಳಾಗಿದ್ದರೂ ಸರಿಯೇ ಅವರು ತಮ್ಮ ವೃತ್ತಿಯಲ್ಲಿ ಇನ್ನೂ ಹೆಚ್ಚಿನ ಯಶಸ್ಸನ್ನು ಕಾಣಲು ಇದು ಸಹಕರಿಸುತ್ತದೆ.

ಕಾಡಿನ ರಾಜನೆಂಬ ಹೆಗ್ಗಳಿಕೆಗೆ ಪಾತ್ರನಾದ ಸಿಂಹವೇ ತಾನು ನಡೆದು ಬಂದಂತಹ ಹಾದಿಯನ್ನೊಮ್ಮೆ ಅವಲೋಕನ ಮಾಡುತ್ತದೆ. ಮಾನವರಾದ ನಾವು ನಮ್ಮ ಜೀವನದ ಹಾದಿಯನ್ನೊಮ್ಮೆ ಅವಲೋಕನ ಮಾಡಿದರೆ ತಪ್ಪೇನಿದೆ? ನಮ್ಮ ಕಷ್ಟಕ್ಕೆ ನೆರವಾದ ಅದೆಷ್ಟೋ ಜನರನ್ನು ಮರೆತಿರುತ್ತೇವೆ. ಶ್ರೀಮಂತಿಕೆಯ ಅಮಲಿನಲ್ಲಿ ತೇಲಾಡುತ್ತಾ ಬಡವರಾಗಿದ್ದಾಗ ಅನುಭವಿಸಿದ ಯಾತನೆಯನ್ನು ಜೀವನದಿಂದ ಅಳಿಸಿರುತ್ತೇವೆ. ಆದರೆ ಅದನ್ನೆಲ್ಲ ಒಮ್ಮೆ ನೆನೆಸಿಕೊಂಡಾಗ ಬಡವರಾಗಿ ಬದುಕುತ್ತಿರುವ ಅದೆಷ್ಟೋ ಜನರಿಗೆ ನೆರವಾಗುವ ಮನಸ್ಥಿತಿ ಮೂಡಬಹುದು. ಮನಸ್ಸು ಬದಲಾವಣೆಯತ್ತ ಜಾರಬಹುದು.

-ಭಾವನಾ ಪ್ರಭಾಕರ್‌

ಶಿರಸಿ

 

Advertisement

Udayavani is now on Telegram. Click here to join our channel and stay updated with the latest news.

Next