Advertisement

ಕಾಸರಗೋಡಿನ ಶಾಲೆಯಲ್ಲಿ ನವಭಾಷೆಗಳ ಕಲರವ

10:19 AM Jan 11, 2020 | mahesh |

ಮಂಗಳೂರು: ಸರಕಾರಿ ಶಾಲೆಗಳಲ್ಲಿ ಮಾತೃಭಾಷೆಯ ಜತೆಗೆ ಹಿಂದಿ, ಇಂಗ್ಲಿಷ್‌ ಕಲಿಯುವುದು ಸಾಮಾನ್ಯ. ಆದರೆ ಕಾಸರಗೋಡು ಸಮೀಪದ ಪಾಂಡಿ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ, ತುಳು, ಕೊಂಕಣಿ, ಮರಾಠಿ ಸೇರಿದಂತೆ ಸುಮಾರು ಒಂಬತ್ತು ಭಾಷೆಗಳ ಪರಿಚಯ ಮಾಡಿಕೊಡಲಾಗುತ್ತಿದೆ.

Advertisement

ಹಳ್ಳಿ ಪ್ರದೇಶದಲ್ಲಿರುವ ಪಾಂಡಿ ಶಾಲೆಯಲ್ಲಿ ಅಸೆಂಬ್ಲಿ ವೇಳೆ ತುಳು, ಕನ್ನಡ, ಮರಾಠಿ, ಕೊಂಕಣಿ, ಅರೇಬಿಕ್‌, ಮಲಯಾಳ, ಹಿಂದಿ, ಇಂಗ್ಲಿಷ್‌, ಬ್ಯಾರಿ ಭಾಷೆಯ ಸೊಗಡು ಹರಿಯುತ್ತದೆ. ನಾರಾಯಣ ದೇಲಂಪಾಡಿ ಮುಖ್ಯ ಶಿಕ್ಷಕರಾಗಿದ್ದ ವೇಳೆ ವಿದ್ಯಾರ್ಥಿಗಳ ವಿಕಸನಕ್ಕಾಗಿ ಈ “ಕ್ಲಾಸ್‌ ಅಸೆಂಬ್ಲಿ’ ಎಂಬ ವಿನೂತನ ಯೋಜನೆ ಆರಂಭಿಸಿದ್ದರು.

ಈಗ ವಾರದಲ್ಲಿ ಎರಡು ದಿನ, ಸೋಮವಾರ ಮತ್ತು ಗುರುವಾರ ಶಾಲೆ ಯಲ್ಲಿ 9ಕ್ಕೂ ಹೆಚ್ಚು ಭಾಷೆ ಗಳನ್ನು ಪರಿಚಯ ಮಾಡಿಕೊಡ ಲಾಗು ತ್ತಿದೆ. ಇಲ್ಲಿ 12ರ ವರೆಗೆ ತರಗತಿ ಗಳು ಇವೆಯಾದರೂ ಈ ಚಟು ವಟಿಕೆ ಯನ್ನು 1-10ನೇ ತರಗತಿಯ ಮಕ್ಕಳಿಗೆ ಮಾತ್ರ ನಡೆಸಲಾಗುತ್ತಿದೆ. ಬೆಳಗ್ಗಿನ ಪ್ರಾರ್ಥನೆ ಸಮಯದಲ್ಲಿ ಸುಮಾರು 12 ವಿದ್ಯಾರ್ಥಿಗಳು ಎದುರು ನಿಂತು ಒಂದೊಂದು ಭಾಷೆಯಲ್ಲಿ ಗೀತಾ ವಾಚನ, ವಾರ್ತೆಗಳು, ಪುಸ್ತಕ ಪರಿಚಯ, ಚಿಂತನೆ, ದಿನ ವಿಶೇಷ ಇತ್ಯಾದಿ ನಡೆಸುತ್ತಾರೆ. ಸಾಮಾನ್ಯ ಜ್ಞಾನ ಪ್ರಶ್ನೆಗಳನ್ನು ಕೇಳಿ ಸರಿಯುತ್ತರ ನೀಡಿದವರಿಗೆ ಬಹುಮಾನ ನೀಡಲಾಗುತ್ತದೆ. ಪ್ರತೀ ಬಾರಿ ತರಗತಿ, ವಿದ್ಯಾರ್ಥಿಗಳು ಬದಲಾಗುತ್ತಾರೆ.

ಹಳ್ಳಿಗಾಡಿನ ಶಾಲೆ
ಪಾಂಡಿ ಪ್ರೌಢಶಾಲೆಯು ಕಾಸರಗೋಡಿನಿಂದ ಸುಮಾರು 40 ಕಿ.ಮೀ., ಅಡೂರಿನಿಂದ ಸುಮಾರು 6 ಕಿ.ಮೀ. ದೂರದಲ್ಲಿದೆ. ಮುಖ್ಯ ಶಿಕ್ಷಕರಾಗಿದ್ದ ನಾರಾಯಣ ದೇಲಂಪಾಡಿ ಆರಂಭಿಸಿದ ಚಟುವಟಿಕೆಗಳು ಶಾಲೆಯ ಸ್ವರೂಪವನ್ನೇ ಬದಲಾಯಿಸಿವೆ. ಈಗ 1ರಿಂದ 10ರ ವರೆಗೆ 350ಕ್ಕೂ ಮಿಕ್ಕಿ  ವಿದ್ಯಾರ್ಥಿಗಳಿದ್ದಾರೆ.  ಕನ್ನಡ ಮತ್ತು ಮಲೆಯಾಳ ಭಾಷೆಗಳಲ್ಲಿ ಶಿಕ್ಷಣ ನೀಡ ಲಾಗುತ್ತಿದೆ.

ಆಟಿ ಆಚರಣೆ ಇಲ್ಲಿ ವಿಶೇಷ
ತುಳುನಾಡಿನಲ್ಲಿ ಆಟಿ ತಿಂಗಳಿಗೆ ವಿಶೇಷ ಮಹತ್ವವಿದೆ. ಆ ವೇಳೆ ಪಾಂಡಿ ಶಾಲೆಯಲ್ಲೂ ಹಬ್ಬದ ಕಳೆ. ವಿದ್ಯಾರ್ಥಿಗಳು ತಂತಮ್ಮ ಮನೆಗಳಿಂದ ವಿವಿಧ ತಿನಿಸುಗಳನ್ನು ತಯಾರಿಸಿ ತರುತ್ತಾರೆ. ಸುಮಾರು 200ಕ್ಕೂ ಮಿಕ್ಕಿ ತಿನಿಸುಗಳಿರುವ ಸಹಭೋಜನವನ್ನು ಎಲ್ಲರೂ ಸೇರಿ ಸವಿಯುತ್ತಾರೆ. ಮಧ್ಯಾಹ್ನದ ಬಿಸಿಯೂಟದ ಜತೆಗೆ ಬೆಳಗ್ಗೆ ಉಪಾಹಾರವಿದೆ. ಇಡ್ಲಿ- ಸಾಂಬಾರ್‌, ವಡಾ, ಹೆಸುರುಕಾಳು ಒಗ್ಗರಣೆ ಇತ್ಯಾದಿ ದಿನಕ್ಕೊಂದರಂತೆ ವಿವಿಧ ಪೌಷ್ಟಿಕ ತಿನಿಸುಗಳು ಇರುತ್ತವೆ. ಸ್ಥಳೀಯ ದೇಲಂಪಾಡಿ ಗ್ರಾ.ಪಂ. ಇದಕ್ಕೆ ಕೈಜೋಡಿಸಿದೆ.

Advertisement

ನಾನು ಮುಖ್ಯ ಶಿಕ್ಷಕನಾಗಿದ್ದಾಗ ಸ್ಥಳೀಯರ ಸಹಕಾರದಿಂದ ವೇಳೆ ಶಾಲಾ ವಿದ್ಯಾರ್ಥಿಗಳಿಗೆ ಕ್ಲಾಸ್‌ ಅಸೆಂಬ್ಲಿ ಪರಿಚಯ ಮಾಡಿಕೊಡಲಾಯಿತು. ಇಲ್ಲಿ ವಿದ್ಯಾರ್ಥಿಗಳೇ ಸಹಪಾಠಿಗಳಿಗೆ ವಿವಿಧ ಭಾಷೆಗಳ ಪರಿಚಯ ಮಾಡಿಕೊಡುತ್ತಾರೆ.
– ನಾರಾಯಣ ದೇಲಂಪಾಡಿ, ಜಿಲ್ಲಾ ಕಾರ್ಯಕ್ರಮಾಧಿಕಾರಿ, ಸಮಗ್ರ ಶಿಕ್ಷಾ ಕೇರಳ

ಕರ್ನಾಟಕ- ಕಾಸರಗೋಡು ಗಡಿನಾಡಿನ ಶಾಲೆಗಳಲ್ಲಿ ಸಾಮಾನ್ಯವಾಗಿ ಕನ್ನಡ, ಹಿಂದಿ, ಮಲೆಯಾಳಂ ಭಾಷೆಗಳ ಪರಿಚಯ ಮಾಡಲಾಗುತ್ತದೆ. ಆದರೆ ಪಾಂಡಿ ಶಾಲೆಯಲ್ಲಿ ವಿಶೇಷ ಎಂಬಂತೆ ಏಳು ಭಾಷೆಗಳನ್ನು ಪರಿಚಯಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಮೂರು ವರ್ಷಗಳಿಂದ ಫಲಿತಾಂಶ ಮತ್ತು ವಿದ್ಯಾರ್ಥಿಗಳ ಸಾಧನೆಯ ದೃಷ್ಟಿಯಿಂದ ಶಾಲೆ ಪ್ರಗತಿ ಸಾಧಿಸಿದೆ.
– ನಂದಿಕೇಶ್‌, ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ

ವಿದ್ಯಾರ್ಥಿಗಳಿಗಾಗಿ ಸ್ಕೂಲ್‌ ರೇಡಿಯೋ
ಸ್ವಲ್ಪ ಸಮಯದಿಂದೀಚೆಗೆ ಸ್ಕೂಲ್‌ ರೇಡಿಯೋ “ಪಾಂಡಿ ಸ್ಪಂದನ್‌ 11032′ ಎಂಬ ಹೊಸ ಯೋಜನೆಯನ್ನು ಜಾರಿಗೆ ತರಲಾಗಿದೆ. ವಿದ್ಯಾರ್ಥಿಗಳು ಅಂಜಿಕೆಯಿಲ್ಲದೆ ಎಲ್ಲರ ಮುಂದೆ ಮಾತನಾಡಬೇಕು ಎಂಬುದು ಉದ್ದೇಶ. ಶಾಲೆಯಲ್ಲಿ ಸುಮಾರು 20ಕ್ಕೂ ಮಿಕ್ಕಿ ಕೊಠಡಿಗಳಿದ್ದು, ಎಲ್ಲ ಕೊಠಡಿಗಳಿಗೂ ಸೌಂಡ್‌ ಬಾಕ್ಸ್‌ ಅಳವಡಿಸಲಾಗಿದೆ. ವಿದ್ಯಾರ್ಥಿಗಳು ರೇಡಿಯೋ ಮಾದರಿಯಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಾರೆ.

- ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next