Advertisement

50 ಕೋಟಿ ವೆಚ್ಚದಲ್ಲಿ ಪೈಪ್‌ಲೈನ್‌ ಜೋಡಣೆಗೆ ಪ್ರಸ್ತಾವನೆ

11:47 AM Dec 29, 2018 | Team Udayavani |

ನರಗುಂದ: ಬಹು ನಿರೀಕ್ಷೆಯ ಏಳು ಏತ ನೀರಾವರಿ ಯೋಜನೆಗಳ ಪೈಪ್‌ ಲೈನ್‌ ಸೋರಿಕೆಯಿಂದ ಈ ಯೋಜನೆ ದೀರ್ಘ‌ಕಾಲ ರೈತರಿಗೆ ತಲುಪಿಲ್ಲ. ಈ ಸಮಸ್ಯೆ ಗಮನದಲ್ಲಿಟ್ಟುಕೊಂಡು 50 ಕೋಟಿ ವೆಚ್ಚದಲ್ಲಿ ಪೈಪ್‌ಲೈನ್‌ ಜೋಡಣೆಗೆ ಪ್ರಸ್ತಾವನೆ ಸಲ್ಲಿಸಿ ನೀರಾವರಿ ಸಚಿವರಿಗೆ ಮನವರಿಕೆ ಮಾಡಲಾಗಿದೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

Advertisement

ಹದಲಿ ಕ್ರಾಸ್‌ ಬಳಿ ಲೋಕೋಪಯೋಗಿ ಇಲಾಖೆಯ 3054ರ ರಾಜ್ಯ ಹೆದ್ದಾರಿ ನಿರ್ವಹಣೆ ಯೋಜನೆಯಡಿ ಸಿಂಧನೂರ-ಹೆಮ್ಮಡಗಾ ರಾಜ್ಯ ಹೆದ್ದಾರಿ ಮರು ಡಾಂಬರೀಕರಣದ 60 ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಹದಲಿ ಗ್ರಾಪಂ ಆವರಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು. ಎಲ್ಲ ಏಳು ಏತ ನೀರಾವರಿ ಯೋಜನೆಗಳ ಸಂಪೂರ್ಣ ಪೈಪ್‌ಲೈನ್‌ ತೆಗೆದುಹಾಕಿ ಹೊಸ ಜೋಡಣೆಗೆ 50 ಕೋಟಿ ಅನುದಾನಕ್ಕೆ ಮನವಿ ಸಲ್ಲಿಸಿದ್ದು, ಈ ಬಗ್ಗೆ ಸಚಿವ ಡಿ.ಕೆ. ಶಿವಕುಮಾರ ಭರವಸೆ ನೀಡಿದ್ದಾರೆ. ಇದರಿಂದ ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಯೋಜನೆಗೆ ಕಾಯಕಲ್ಪ ನೀಡಲಾಗುತ್ತದೆ ಎಂದು ತಿಳಿಸಿದರು.

ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಸಮುದಾಯ ಭವನಕ್ಕೆ ಶಾಸಕರ ನಿಧಿಯಿಂದ 10 ಲಕ್ಷ ರೂ. ಅನುದಾನ ನೀಡುವ ಭರವಸೆ ನೀಡಿದ ಶಾಸಕರು ಕೂಡಲೇ ಪ್ರಾರಂಭದಲ್ಲಿ 5 ಲಕ್ಷ ರೂ.ಒದಗಿಸುವುದಾಗಿ ಭರವಸೆ ನೀಡಿದರು. ಮುಖಂಡ ಬಿ.ಜಿ. ಸುಂಕದ ಮಾತನಾಡಿ, ಗ್ರಾಮದ ಏತ ನೀರಾವರಿ ಯೋಜನೆ ಪೈಪ್‌ ಲೈನ್‌ ದುರಸ್ತಿಯಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ. ಪೈಪ್‌ಲೈನ್‌ ಬದಲಾವಣೆಗೆ ಶೀಘ್ರ ಚಾಲನೆ ನೀಡಬೇಕೆಂದು ಶಾಸಕರಿಗೆ ಮನವಿ ಮಾಡಿದರು.

ಹದಲಿ ಗ್ರಾಪಂ ಅಧ್ಯಕ್ಷೆ ಬಸಮ್ಮ ಹಲಗತ್ತಿ, ಉಪಾಧ್ಯಕ್ಷ ವೀರಣ್ಣ ಸಾಸಳ್ಳಿ, ಎಪಿಎಂಸಿ ಅಧ್ಯಕ್ಷ ಹನಮಂತಪ್ಪ ಹದಗಲ್ಲ, ಲೋಕೋಪಯೋಗಿ ಎಇಇ ಹಂಗರಗಿ, ಯಲ್ಲಪ್ಪಗೌಡ ಬನಹಟ್ಟಿ, ಬಸಮ್ಮ ಅಸುಂಡಿ, ನಿರ್ಮಲಾ ಹಲಗತ್ತಿ, ಯಲ್ಲವ್ವ ತಳವಾರ, ಅಜ್ಜಪ್ಪಗೌಡ ಅಲ್ಲಪ್ಪಗೌಡ್ರ, ಸುರೇಶಗೌಡ ತಮ್ಮನಗೌಡ್ರ, ರಾಮನಗೌಡ ಪಾಟೀಲ, ಗುತ್ತಿಗೆದಾರ ವಿಜಯ ಬೇಲೇರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next