Advertisement
ಟೆಕ್ನಾಲಜಿ ಎಂಬುದು ಇತ್ತೀಚಿನ ದಿನಗಳಲ್ಲಿ ಎರಡು ಅಲಗಿನ ಕತ್ತಿಯಾಗಿದೆ. ನಮ್ಮನ್ನು ಸ್ಮಾರ್ಟ್ ಆಗಿಸಿದ, ಜಗತ್ತನ್ನೇ ಕನೆಕ್ಟ್ ಆಗಿಸಿದ ಟೆಕ್ನಾಲಜಿ ನಮ್ಮನ್ನು ಬಯಲಿನಲ್ಲಿ ಬೆತ್ತಲಾಗಿಸುತ್ತಲೂ ಇರುತ್ತದೆ. ಗೂಗಲ್ ನಮ್ಮ ಎಲ್ಲ ಮಾಹಿತಿಯನ್ನು ಸಂಗ್ರಹಿ ಸಿಕೊಳ್ಳುತ್ತದೆ, ನಾವು ಎಲ್ಲಿ ಹೋಗುತ್ತೇವೆ, ಏನು ಮಾಡುತ್ತೇವೆ ಎಂಬುದರಿಂದ ಹಿಡಿದು ಎಲ್ಲವನ್ನೂ ಸಂಗ್ರಹಿಸಿರುತ್ತದೆ. ಗೂಗಲ್‌ಗೆ ನಮ್ಮ ಜೀವನವನ್ನೇ ನಾವು ಮಾರಿಕೊಳ್ಳುತ್ತಿದ್ದೇವೆ ಎಂದು ನಾವು ಅಲವತ್ತುಕೊಳ್ಳುತ್ತೇವೆ. ಆಧಾರ್ ಕಾರ್ಡ್‌ನಲ್ಲಿ ನಮ್ಮೆಲ್ಲ ಮಾಹಿ ತಿಯೂ ಬಟಾಬಯಲಾಗುತ್ತದೆ ಎಂದು ಆತಂಕಪಡುತ್ತೇವೆ. ಆದರೆ ಪ್ರತಿ ದಿನವೂ ಹೊಸ ಹೊಸ ಟೆಕ್ನಾಲಜಿ ನಮ್ಮ ಒಂದೊಂದೇ ಅಂಗದ ಮೇಲೆ ಸ್ವಾವಲಂಬನೆ ಸಾಧಿಸುತ್ತಿದೆ. ಭಾರತದಲ್ಲಿ ಸದ್ಯ ಆಧಾರ್ ಕಾರ್ಡ್‌ನ ಬೆರಳಚ್ಚು ಹಾಗೂ ಫೇಸ್‌ಬುಕ್ ಅಕೌಂಟ್‌ನಲ್ಲಿರುವ ನಮ್ಮ ವಿವರಗಳು ಸದ್ದು ಮಾಡುತ್ತಿವೆ.
Related Articles
Advertisement
ಹಾಗಂತ ಈ ಫೇಸ್ ರಿಕಗ್ನಿಶನ್ ಸೌಲಭ್ಯ ಹೊಸದೇನಲ್ಲ. ಫೇಸ್‌ಬುಕ್ ಇದನ್ನು 2016ರಲ್ಲೇ ಅಳವಡಿಸಿಕೊಂಡಿದೆ. ನಾವು ನಮ್ಮ ಸ್ನೇಹಿತರೊಂದಿಗಿದ್ದ ಫೋಟೋವನ್ನು ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡುತ್ತಿದ್ದಂತೆಯೇ ಆ ಸ್ನೇಹಿತನನ್ನು ನಾವು ಟ್ಯಾಗ್ ಮಾಡದಿದ್ದರೂ, ಫೇಸ್ ರಿಕಗ್ನಿಶನ್ ಸೌಲಭ್ಯದಿಂದ ಮುಖ ಗುರುತಿಸಿ ಫೇಸ್‌ಬುಕ್ ಸ್ವತಃ ಟ್ಯಾಗ್ ಮಾಡುತ್ತದೆ. ಅದೇ ರೀತಿ ಮುಖವನ್ನು ಬ್ಯೂಟಿಫೈ ಮಾಡುವ ಹಾಗೂ ಮುಖಕ್ಕೆ ಮೀಸೆ ಇಡುವ ಆ್ಯಪ್‌ಗ್ಳೂ ಹಲವಾರಿದ್ದು, ಇವು ಕೂಡ ಫೇಸ್ ರಿಕಗ್ನಿಶನ್ ಸೌಲಭ್ಯವನ್ನು ಬಳಸುತ್ತಿವೆ. ಆದರೆ ಇಲ್ಲಿಯ ವಿಷಯವೆಂದರೆ ನಾವು ಫೇಸ್ ರಿಕಗ್ನಿಶನ್ ಅನ್ನು ಯಾವ ಉದ್ದೇಶಕ್ಕೆ ಬಳಸುತ್ತೇವೆ ಎಂಬುದಷ್ಟೇ. ಈ ತಂತ್ರಜ್ಞಾನವನ್ನು ಅಪರಾಧಿಗಳನ್ನು ಪತ್ತೆ ಮಾಡುವಂಥ ಉತ್ತಮ ಕೆಲಸಕ್ಕೆ ಬಳಸಿದರೆ ಅದು ಅನುಕೂಲ. ಬದಲಿಗೆ ಜನರ ಮೇಲೆ ಕಣ್ಣಿಡಲು, ಅವರ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಬಳಸಿದರೆ…?
ಚೀನಾದಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿನ ಸಿಸಿಟಿವಿಗಳಿಗೂ ಫೇಸ್ ರಿಕಗ್ನಿಶನ್ ಸೌಲಭ್ಯ ಕಲ್ಪಿಸಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದನ್ನು ರಾಜಕೀಯ ಕಾರಣಗಳಿಗೆ ಹಾಗೂ ಅಪರಾಧ ಹೊರತಾದ ಇತರ ಕಾರಣಗಳಿಗೆ ಬಳಸಿಕೊಳ್ಳಬಹುದಾದ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಹಾಗೊಂದು ಅಪಾಯವನ್ನು ತಳ್ಳಿ ಹಾಕಲೂ ಸಾಧ್ಯವಿಲ್ಲ. ಇದು ಜನರ ಗೌಪ್ಯತೆಯ ಮೇಲಿನ ಪ್ರಹಾರ ಎಂದು ಕೂಗೆಬ್ಬಿಸಲಾಯಿತು. ಆದರೆ ಆ ದೇಶದಲ್ಲಿ ಅದೇನೂ ಸದ್ದಾಗಿಲ್ಲ.
ಈ ಹಿಂದೆಯೂ ಫೇಸ್ ರಿಕಗ್ನಿಶನ್ ಸೌಲಭ್ಯವನ್ನು ಬಳಸಿ ಅಮೆರಿಕ ಸೇರಿದಂತೆ ಹಲವು ದೇಶಗಳು ಅಪರಾಧಿಗಳನ್ನು ಪತ್ತೆ ಮಾಡಿವೆ. ಅಪರಾಧಿಗಳ ಚಿತ್ರಗಳ ಡೇಟಾಬೇಸ್ ಬಳಸಿಕೊಂಡು ಎಫ್ಬಿಐನ ನೆಕ್ಸ್ಟ್ ಜನರೇಶನ್ ಐಡೆಂಟಿಫಿಕೇಶನ್ ಸಿಸ್ಟಂ ರೂಪಿಸ ಲಾಗಿದ್ದು, ಇದು ಕೂಡ ಫೇಸ್ ರಿಕಗ್ನಿಶನ್ ಬಳಸುತ್ತದೆ. 2014ರಲೇ ಶಿಕಾಗೋ ಪೊಲೀಸರು ಫೇಸ್ ರಿಕಗ್ನಿಶನ್ ಬಳಸಿ ಅಪರಾಧಿಯೊಬ್ಬ ನನ್ನು ಬಂಧಿಸಿದ್ದರು. ಇದನ್ನು ಕೋರ್ಟ್ ಕೂಡ ಆಗ ಅನು ಮೋದಿಸಿದ್ದು, ಆ ವ್ಯಕ್ತಿಗೆ ಜೈಲು ಶಿಕ್ಷೆಯೂ ಆಗಿತ್ತು. ಇನ್ನು ಬ್ರಿಟನ್ ಪೊಲೀಸರು ಜಪಾನ್‌ನ ನಿಯೋಫೇಸ್‌ಅನ್ನು ಬಳಸುತ್ತಾರೆ. ಇದು ಸಂತೆಯಲ್ಲೂ ಅಪರಾಧಿಯನ್ನು ಗುರುತಿಸಬಹುದಾದ ಸೌಲಭ್ಯ ಹೊಂದಿದೆ. ಇನ್ನೊಂದೆಡೆ 2016ರಲ್ಲೇ 6 ಕೋಟಿ ಸರ್ವೇಯಲನ್ಸ್ ಕ್ಯಾಮೆರಾಗಳನ್ನು ಅಮೆರಿಕ ವಿವಿಧ ಪ್ರದೇಶಗಳಲ್ಲಿ ಅಳವಡಿಸಿತ್ತು.
ಆದರೆ ಇವುಗಳ ಬಳಕೆ ಸೀಮಿತವಾಗಿತ್ತು. ಅಷ್ಟೇ ಅಲ್ಲ, ಅವು ಸಾರ್ವಜನಿಕರನ್ನು ನಿಯಂತ್ರಿಸುವ ಗುಪ್ತ ಉದ್ದೇಶವನ್ನು ಹೊಂದಿರಲಿಲ್ಲ. ಚೀನಾದಲ್ಲಿ ಹೀಗಾಗುತ್ತಿಲ್ಲ. ಅಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿರುವ ಸಿಸಿಟಿವಿಗಳಿಂದಲೂ ಸಾರ್ವಜನಿಕರ ಮೇಲೆ ಕಣ್ಣಿಡಲಾಗುತ್ತದೆ. ಅಷ್ಟೇ ಅಲ್ಲ, ಖಾಸಗಿ ಹಾಗೂ ಸರ್ಕಾರಿ ಸಿಸಿಟಿವಿಗಳೆಲ್ಲವನ್ನೂ ಸಂಪರ್ಕಿಸಿ ಒಂದು ದೊಡ್ಡ ಸಿಸಿಟಿವಿ ಜಾಲವನ್ನು ರೂಪಿಸುವ ಸನ್ನಾಹದ ಮೊದಲ ಹಂತವೂ ಇದಾಗಿದೆ.
ಚೀನಾ ಸರ್ಕಾರದ ಈ ಬೆಳವಣಿಗೆ ಎಷ್ಟು ಕೆಟ್ಟದ್ದನ್ನು ಮಾಡು ತ್ತದೆಯೋ ಗೊತ್ತಿಲ್ಲ. ಆದರೆ ಅಲ್ಲಿ ಫೇಸ್ ರಿಕಗ್ನಿಶನ್ ತಂತ್ರಜ್ಞಾನ ಅದೆಷ್ಟರ ಮಟ್ಟಿಗೆ ಬೆಳವಣಿಗೆ ಕಾಣಿಸುತ್ತಿದೆಯೆಂದರೆ ಗಲ್ಲಿಗಲ್ಲಿಗೂ ಫೇಸ್ ರಿಕಗ್ನಿಶನ್ ಬಗ್ಗೆ ಸಂಶೋಧನೆ ನಡೆಸುವ ಹೊಸ ಹೊಸ ಸ್ಟಾರ್ಟಪ್‌ಗ್ಳು ಹುಟ್ಟಿಕೊಳ್ಳುತ್ತವೆ. ಅವು ಒಂದೊಂದೂ ಹೊಸ ಹೊಸ ಸೌಲಭ್ಯವನ್ನು ಅದರಲ್ಲಿ ಕಂಡುಕೊಳ್ಳಲು ಹೊರಟಿವೆ. ಅಮೆರಿಕದ ಉನ್ನತ ವಿಶ್ವವಿದ್ಯಾಲಯಗಳಲ್ಲಿ ಓದಿಕೊಂಡು ಬಂದವರು ಹಾಗೂ ದೊಡ್ಡ ದೊಡ್ಡ ತಂತ್ರಜ್ಞಾನ ಕಂಪನಿಗಳಲ್ಲಿ ಕೆಲಸ ಮಾಡಿಕೊಂಡು ಬಂದವರು ಚೀನಾದಲ್ಲಿ ಕುಳಿತು ಫೇಸ್ ರಿಕಗ್ನಿಶನ್‌ನಂತಹ ವ್ಯಾಪಕ ಸಾಧ್ಯತೆಗಳನ್ನು ಹೊಂದಿರುವ ತಂತ್ರಜ್ಞಾನಕ್ಕೆ ಕೋಡಿಂಗ್ ಬರೆಯಲು ಕುಳಿತಿದ್ದಾರೆ. ಇವರಿಗೆ ಚೀನಾ ಸರ್ಕಾರ ನೆರವೂ ನೀಡುತ್ತಿದೆ. ಇದು ನಿಜವಾಗಿ ಒಂದು ತಂತ್ರಜ್ಞಾನ ಅಭಿವೃದ್ಧಿಗೊಳ್ಳುವ ಪರಿ ಮತ್ತು ವಿಧಾನವೂ ಆದೀತು.
ಚೀನಾದ ಬಹುತೇಕ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳು ಗ್ರಾಹಕರನ್ನು ಗುರುತು ಖಚಿತಪಡಿಸಿಕೊಳ್ಳಲು ಈ ತಂತ್ರಜ್ಞಾನ ಬಳಸುತ್ತವೆ. ಏರ್‌ಪೋರ್ಟ್‌ಗಳ ಸೆಕ್ಯುರಿಟಿ ಚೆಕ್‌ಗಳಲ್ಲಿ, ಹೋಟೆಲ್‌ಗಳ ಚೆಕ್ ಇನ್‌ನಲ್ಲೂ ಇದನ್ನು ಬಳಸಲಾಗುತ್ತಿದೆ. ಏರ್‌ಬಿಎನ್‌ಬಿ ಎಂಬ ಹೋಟೆಲ್‌ಗಳ ಚೈನ್‌ನ ಚೀನಾ ಆವೃತ್ತಿಯಲ್ಲಿ ಅತಿಥಿಗಳ ಗುರುತು ಪರಿಶೀಲಿಸಲು ಫೇಸ್ ರಿಕಗ್ನಿಶನ್ ಬಳಸಲಾಗುತ್ತಿದೆ. ಅಷ್ಟೇ ಅಲ್ಲ, ಉಬರ್ ಕೂಡ ತನ್ನ ಚಾಲಕರನ್ನು ಗುರುತಿಸಲು ಈ ತಂತ್ರಜ್ಞಾನವನ್ನು ಬಳಸುತ್ತಿದೆ.
ಬೀಜಿಂಗ್ ವಿಶ್ವವಿದ್ಯಾಲಯದ ಉಪನ್ಯಾಸಕರೊಬ್ಬರು ತರಗತಿಯಲ್ಲಿ ತನ್ನ ಪಾಠ ವಿದ್ಯಾರ್ಥಿಗಳಿಗೆ ಬೇಸರ ತರಿಸಿದೆಯೇ ಎಂಬುದನ್ನು ಪತ್ತೆ ಮಾಡಲು ಫೇಸ್ ಸ್ಕ್ಯಾನರ್ ಬಳಸುತ್ತಿದ್ದಾರಂತೆ. ಅಷ್ಟೇ ಏಕೆ, ಚೀನಾದ ಹಾಂಗ್‌ಝೌನಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ ಹೊಟ್ಟೆ ಬಿರಿ ತಿಂದು ರಿಸೆಪ್ಷನ್‌ಗೆ ಬಂದು ನಕ್ಕು ಹೊರಬಂದರೆ ಸಾಕು. ನಿಮ್ಮ ಅಕೌಂಟಿಂದ ದುಡ್ಡು ಕಟ್ಟಾಗಿರುತ್ತದೆ. ಇದು ಸೆ¾„ಲ್ ಟು ಪೇ ಎಂಬ ವಿಶಿಷ್ಟ ತಂತ್ರಜ್ಞಾನವನ್ನು ಬಳಸುತ್ತಿದೆ. ಇದು ಕೂಡ ಫೇಸ್ ರಿಕಾಗ್ನಿಶನ್ ಬಳಸಿಯೇ ಕೆಲಸ ಮಾಡುತ್ತಿದೆ. ಇನ್ನು ಮನೆಯ ಗೇಟ್ ತೆಗೆಯಲು ಫೇಸ್ ರಿಕಗ್ನಿಶನ್ ಬಳಕೆಯಂತೂ ಹೊಸದೇನಲ್ಲ.
ಫೇಸ್ ರಿಕಗ್ನಿಶನ್ ಎಂಬುದು ಈಗ ಡೇಟಾ ಆಧರಿತ ಸೌಲಭ್ಯವಾಗಿ ಮಾರ್ಪಟ್ಟಿದೆ. ಇದರಲ್ಲಿ ಚೀನಾ ಎಲ್ಲ ದೇಶಗಳಿಗಿಂತ ಹಲವು ಹೆಜ್ಜೆ ಮುಂದೆ ಸಾಗಿದೆ. ಯಾವ ದೇಶಗಳಲ್ಲೂ ಇಲ್ಲದಷ್ಟು ಪ್ರಮಾಣದ ಡೇಟಾ ಚೀನಾದಲ್ಲಿದೆ. ವಿವಿಧ ಸೌಲಭ್ಯವನ್ನು ಬಳಸಿಕೊಳ್ಳಲು ವ್ಯಾಪಕ ಡೇಟಾ ಅಗತ್ಯವಿದೆ. ಹೆಚ್ಚು ಡೇಟಾ ಇದ್ದಷ್ಟೂ ಫೇಸ್ ರಿಕಗ್ನಿಶನ್‌ನ ಫಲಿತಾಂಶದ ನಿಖರತೆಯೂ ಹೆಚ್ಚು. ಈಗ ಅಭಿವೃದ್ಧಿಗೊಳ್ಳುತ್ತಿರುವ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕೂಡ ಫೇಸ್ ರಿಕಗ್ನಿಶನ್‌ಅನ್ನು ಇನ್ನಷ್ಟು ಸಶಕ್ತಗೊಳಿಸುತ್ತಿದೆ.
ಚೀನಾ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲೂ ಸಿಸಿಟಿವಿಗಳ ಮೂಲಕ ಜನರ ಮೇಲೆ ನಿಗಾ ವಹಿಸಲು ನಿರ್ಧರಿಸಿರುವ ಉದಾ ಹರಣೆಯು, ನಾವು ತಂತ್ರಜ್ಞಾನವನ್ನಿಟ್ಟುಕೊಂಡು ಯಾವ ಕಡೆ ಸಾಗುತ್ತಿದ್ದೇವೆ ಎಂಬುದನ್ನು ತೋರಿಸುತ್ತಿದೆ. ತಂತ್ರಜ್ಞಾನ ಹಾಗೂ ಗೌಪ್ಯತೆಯ ಮಧ್ಯೆ ಸಮತೋಲನ ಸಾಧಿಸುವುದು ಅತ್ಯಂತ ಸೂಕ್ಷ್ಮ. ಒಮ್ಮೆ ನಮ್ಮ ಡೇಟಾ ನಮ್ಮ ಕೈ ತಪ್ಪಿದರೆ ಅದು ನೀರಿನ ಹಾಗೆ. ಯಾವ ರೂಪವನ್ನು ಬೇಕಾದರೂ ಅದು ಪಡೆಯಬಹುದು. ಎಲ್ಲಿ ಬೇಕಾದರೂ ತಲುಪಬಹುದು. ಸದ್ಯದ ಪರಿಸ್ಥಿತಿ ಯಂತೂ ಹಾಗೆಯೇ ಇದೆ. ಯಾವ ಮನುಷ್ಯನೂ ಜೀವನ ಪೂರ್ತಿ ಬಿಗ್‌ಬಾಸ್ ರಿಯಾ ಲಿಟಿ ಶೋದಲ್ಲಿನ ಮನೆಯಂಥ ವಾತಾವರಣದಲ್ಲಿ ಇರಲು ಬಯಸುವುದಿಲ್ಲ. ನಾನು ಎಲ್ಲಿ ಹೋಗುತ್ತೇನೆ, ಏನು ಮಾಡುತ್ತೇನೆ ಎಂಬುದರ ಇಂಚಿಂಚನ್ನೂ ಹದ್ದಿನ ಕಣ್ಣಿಟ್ಟು ನೋಡುವುದು ಸರಿಯೇ? ಇದರ ಬಳಕೆ ಔಚಿತ್ಯ ಮೀರಿ ನಡೆಯದಿದ್ದರೆ ಅದು ಸಮಾಜಕ್ಕೆ ದೊಡ್ಡ ಕೊಡುಗೆಯಾದೀತು. – ಕೃಷ್ಣ ಭಟ್