Advertisement

ಕೊರಲೆಯಲ್ಲಿ ಹೊಸ ತಳಿ ಪರಿಚಯ; ಸಿರಿಧಾನ್ಯಗಳ ವರ್ಷಕ್ಕೆ ಕೃಷಿ ವಿವಿ ಕೊಡುಗೆ

11:58 PM Nov 06, 2022 | Team Udayavani |

ಬೆಂಗಳೂರು: ಬರುವ ಇಡೀ ವರ್ಷ ಆಚರಣೆ ಆಗಲಿರುವ “ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ’ಕ್ಕೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಕೊರಲೆಯಲ್ಲಿ ಇದೇ ಮೊದಲ ಬಾರಿಗೆ ಹೊಸ ತಳಿಯನ್ನು ಅಭಿವೃದ್ಧಿಪಡಿಸುವ ಮೂಲಕ ಕೊಡುಗೆ ನೀಡಿದೆ.

Advertisement

ಸಿರಿಧಾನ್ಯಗಳಲ್ಲಿ ಸಾಮಾನ್ಯವಾಗಿ ದೇಶೀಯ ಸಿರಿಧಾನ್ಯಗಳ ತಳಿಗಳನ್ನು ಬಿತ್ತಿ-ಬೆಳೆಯಲಾಗುತ್ತದೆ. ಈಗ ಆ ಪೈಕಿ ಕೊರಲೆಯಲ್ಲಿ “ಜಿಪಿಯುಬಿಟಿ-2′ ಎಂಬ ತಳಿಯನ್ನು ಬೆಂಗಳೂರು ಕೃಷಿ ವಿವಿ ಅಭಿವೃದ್ಧಿಪಡಿಸಿದೆ. ಇದು ಸಾಮಾನ್ಯ ತಳಿಗಳಿಗೆ ಹೋಲಿಸಿದರೆ ಎರಡರಿಂದ ಮೂರುಪಟ್ಟು ಹೆಚ್ಚು ಇಳುವರಿ ನೀಡುತ್ತದೆ. ಇದು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷಕ್ಕೆ ವಿಶ್ವವಿದ್ಯಾಲಯದ ಕೊಡುಗೆ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.

ಪ್ರಸ್ತುತ ರೈತರು ಬೆಳೆಯುತ್ತಿರುವ ದೇಶೀಯ ಕೊರಲೆಯು ಎಕರೆಗೆ 3-4 ಕ್ವಿಂಟಲ್‌ ಇಳುವರಿ ಬರುತ್ತದೆ. ಜಿಪಿಯುಬಿಟಿ-2 ತಳಿಯು 8-9 ಕ್ವಿಂಟಲ್‌ ಇಳುವರಿ ಬರುತ್ತದೆ. ಅಷ್ಟೇ ಅಲ್ಲ, ದುಂಡು ಹೆಚ್ಚು ಇರುವುದರಿಂದ ಮೇವಿನ ಪ್ರಮಾಣ ಕೂಡ ಅಧಿಕ. ಪ್ರತಿ ಎಕರೆಗೆ ಕಾಲು ಕ್ವಿಂಟಲ್‌ ಹೆಚ್ಚು ಮೇವು ಬರುತ್ತದೆ. ಹಾಗಾಗಿ, ಜಾನುವಾರುಗಳಿಗೆ ಕೂಡ ಪೂರಕವಾಗುತ್ತದೆ. ಎಲ್ಲ ಖರ್ಚು-ವೆಚ್ಚ ಹೊರತುಪಡಿಸಿ ಈಗಿರುವ ಮಾರುಕಟ್ಟೆ ದರದ ಪ್ರಕಾರ ಎಕರೆಗೆ ರೈತರಿಗೆ ಸರಿಸುಮಾರು 20 ಸಾವಿರ ರೂ. ಆದಾಯ ಬರುತ್ತದೆ. ಒಂದು ವೇಳೆ ಇದನ್ನು ಮೌಲ್ಯವರ್ಧನೆ ಮಾಡಿದರೆ, ಈ ಆದಾಯ ದುಪ್ಪಟ್ಟು ಆಗಲಿದೆ ಎಂದು ಸಂಶೋಧಕ ಡಾ| ಟಿ.ಇ. ನಾಗರಾಜ “ಉದಯವಾಣಿ’ಗೆ ತಿಳಿಸಿದರು.

ಅಧಿಕ ನಾರಿನಾಂಶ
ಸಾಮಾನ್ಯವಾಗಿ ಸಿರಿಧಾನ್ಯಗಳಲ್ಲಿ ಲಘುಪೋಷಕಾಂಶಗಳು ಹೆಚ್ಚಿರುತ್ತವೆ. ರಾಗಿಯಲ್ಲಿ ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶ ಅಧಿಕವಾಗಿದ್ದರೆ, ಕೊರಲೆಯಲ್ಲಿ ಸತುವಿನ ಜತೆಗೆ ನಾರಿನಾಂಶ ಹೆಚ್ಚಿರುತ್ತದೆ. ಇದು ಜೀರ್ಣಶಕ್ತಿಗೆ ಪೂರಕವಾಗಿದೆ. ಚಪಾತಿ, ಪಾಯಸ, ಸಂಡಿಗೆ, ಹಪ್ಪಳ, ಕುರುಕಲು ತಿಂಡಿಗಳಂತಹ ಹಲವು ರೀತಿಯ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಬಹುದಾಗಿದೆ. ರಾಗಿಗೆ ಸಿಕ್ಕಷ್ಟು ಜನಪ್ರಿಯತೆ ಇದಕ್ಕೆ ಸಿಗದಿರುವುದು ಬೇಸರದ ಸಂಗತಿ ಎಂದು ಡಾ| ನಾಗರಾಜ ತಿಳಿಸಿದ್ದಾರೆ.

ಒಂದು ಕಾಲದಲ್ಲಿ ಸಿರಿಧಾನ್ಯಗಳು ಕಡುಬಡವರ ಆಹಾರವಾಗಿತ್ತು. ಈಗ ಅದಕ್ಕೆ ರತ್ನಗಂಬಳಿ ಹಾಸಿ ಸ್ವಾಗತಿಸಲಾಗುತ್ತಿದೆ. ಇದಕ್ಕೆ ಕಾರಣ ಅದರಲ್ಲಿರುವ ಆರೋಗ್ಯಕ್ಕೆ ಪೂರಕವಾದ ಲಘುಪೋಷಕಾಂಶಗಳು. ಈ ಮಧ್ಯೆ 2023 ಅನ್ನು “ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ’ವಾಗಿ ಆಚರಿಸುವುದಾಗಿ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಒಕ್ಕೂಟ (ಎಫ್ಎಒ) ಘೋಷಿಸಿದ್ದರಿಂದ ಜಾಗತಿಕ ಮನ್ನಣೆ ಕೂಡ ದೊರಕಿದೆ. ಈ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಸಿರಿಧಾನ್ಯಗಳು ಕೃಷಿಯಲ್ಲಿ ಬಹುತಮುಖ್ಯ ಪಾತ್ರ ವಹಿಸಲಿವೆ. ಇಂತಹ ಸಂದರ್ಭದಲ್ಲಿ ಹೊಸ ತಳಿಗಳ ಸಂಶೋಧನೆ ಔಚಿತ್ಯಪೂರ್ಣವಾಗಿದೆ. ಆದರೆ, ಇವುಗಳ ಸಂಸ್ಕರಣೆಯಲ್ಲಿ ಇನ್ನಷ್ಟು ಸುಧಾರಣೆಗಳಾಗಬೇಕಿದ್ದು, ಮಾರುಕಟ್ಟೆ ವಿಧಾನಗಳು ಕೂಡ ಬದಲಾಗಬೇಕಿದೆ ಎಂದು ಸಿರಿಧಾನ್ಯಗಳ ತಜ್ಞರು ಅಭಿಪ್ರಾಯಪಡುತ್ತಾರೆ.

Advertisement

ಎಲ್ಲೆಲ್ಲಿ ಬೆಳೆಯುತ್ತಾರೆ?
ತುಮಕೂರು, ತಿಪಟೂರು, ರಾಮನಗರ, ಹೊನ್ನಾಳಿ, ಉತ್ತರ ಕರ್ನಾಟಕದ ಹುಬ್ಬಳ್ಳಿ, ಬೆಳಗಾವಿ ಸುತ್ತಲಿನ ಪ್ರದೇಶಗಳ ರೈತರು ಕೊರಲೆ ಬೆಳೆಯುತ್ತಾರೆ. ಈ ಬೆಳೆ ತುಂಬಾ ಕಡಿಮೆ ನೀರಿನಲ್ಲಿ ತೆಂಗು, ಅಡಿಕೆಯಂತಹ ತೋಟಗಾರಿಕೆ ಬೆಳೆಗಳ ನಡುವೆ ಕೂಡ ಬೆಳೆಯಬಹುದಾಗಿದೆ. ನಿರ್ವಹಣೆ ತುಂಬಾ ಕಡಿಮೆ. 85ರಿಂದ 90 ದಿನಗಳಲ್ಲಿ ಕಟಾವಿಗೆ ಬರುತ್ತದೆ. ರಾಜ್ಯದಲ್ಲಿ ಖಾಸಗಿ ಸಂಸ್ಥೆಯಿಂದ ಸಿರಿಧಾನ್ಯದಲ್ಲಿ ಹೊಸ ತಳಿಯನ್ನು ಪರಿಚಯಿಸಲಾಗಿದೆ. ವಿವಿಯಿಂದ ಇದು ಮೊದಲ ಮತ್ತು ರಾಜ್ಯದಲ್ಲಿ ಎರಡನೇ ತಳಿ ಇದಾಗಿದೆ ಎಂದು ತಜ್ಞರು ಪ್ರತಿಕ್ರಿಯಿಸಿದರು.

-ವಿಜಯಕುಮಾರ ಚಂದರಗಿ

 

Advertisement

Udayavani is now on Telegram. Click here to join our channel and stay updated with the latest news.

Next