ಚನ್ನಪಟ್ಟಣ: ನವರಾತ್ರಿಯ ಪ್ರಮುಖ ಆಕರ್ಷಣೆಗಳಲ್ಲೊಂದಾದ “ಬೊಂಬೆ ಉತ್ಸವ’ ಕ್ಕೆ ಅಗತ್ಯವಾಗಿರುವ ತರೇಹವಾರಿ ಬೊಂಬೆಗಳು, ಬೊಂಬೆಯ ನಗರಿ ಎಂತಲೇ ಖ್ಯಾತಿ ಪಡೆದಿರುವ ಚನ್ನಪಟ್ಟಣದಲ್ಲಿ ಪ್ರದರ್ಶನ ಹಾಗೂ ಮಾರಾಟವಾಗುತ್ತಿವೆ.
ನವರಾತ್ರಿಯಲ್ಲಿ ಬೊಂಬೆಗಳನ್ನು ಕೂರಿಸುವ ಸಂಪ್ರದಾಯ ಪಾಲಿಸಿಕೊಂಡು ಬರುತ್ತಿರುವವರಿಗೆ ಈ ಬಾರಿ ಚನ್ನಪಟ್ಟಣದ ಬೊಂಬೆ ಮಾರಾಟಗಾರರು ಹೊಸ ಮಾದರಿಯ ಬೊಂಬೆಗಳನ್ನು ಪರಿಚಯಿಸುವ ಜತೆಗೆ ವಿಶೇಷ ರಿಯಾಯಿತಿ ಸಹ ನೀಡುತ್ತಿದ್ದಾರೆ. ಪ್ರದರ್ಶನ ಮಳಿಗೆ: ಬೆಂಗಳೂರು-ಮೈಸೂರು ಹೆದ್ದಾರಿಯುದ್ದಕ್ಕೂ ತಲೆಎತ್ತಿರುವ ಬೊಂಬೆಗಳ ಪ್ರದರ್ಶನ ಮಳಿಗೆಗಳಿಗೆ ಭೇಟಿ ನೀಡಿದರೆ, ತರೇಹವಾರಿ ಬೊಂಬೆಗಳ ಸಾಲು ಗ್ರಾಹಕರನ್ನು ಸೆಳೆಯುತ್ತಿವೆ. ವಾರದ ಹಿಂದೆಯೇ ಮಾರಾಟಗಾರರು ತಮ್ಮ ಮಳಿಗೆಗಳಲ್ಲಿ ಬೊಂಬೆಗಳನ್ನು ಕೂರಿಸಿ ಪ್ರದರ್ಶನಕ್ಕೆ ಸಿದ್ಧಗೊಳಿಸಿದ್ದಾರೆ.
ವಿವಿಧ ನಮೂನೆ ಬೊಂಬೆ: 10 ರೂ.ನಿಂದಆರಂಭವಾಗಿ ಸಾವಿರಾರು ರೂ. ಮುಖಬೆಲೆಯ ಬೊಂಬೆಗಳು ಪ್ರದರ್ಶನದಲ್ಲಿದ್ದು, ಪಟ್ಟದಬೊಂಬೆಗಳು, ವಧು-ವರರ, ರಾಮ, ಲಕ್ಷ್ಮಣ, ಸೀತೆ ಹಾಗೂ ಚಾಮುಂಡಿ-ಮಹಿಷಾಸುರಬೊಂಬೆಗಳು,ಜಂಬೂ ಸವಾರಿ ಪ್ರತಿರೂಪದ ಬೊಂಬೆಗಳು, ವರಪೂಜೆ, ಕ್ರಿಕೆಟ್, ಪ್ರಮುಖ ವ್ಯಕ್ತಿಗಳ ಬೊಂಬೆಗಳುಸೇರಿದಂತೆ ವಿವಿಧ ನಮೂನೆಯ ಬೊಂಬೆಗಳು, ಆನೆ, ಕುದುರೆ, ಹಸು, ಒಂಟೆ ಸೇರಿದಂತೆ ಪ್ರಾಣಿಗಳ ಬೊಂಬೆಗಳು ಮಳಿಗೆಯಲ್ಲಿ ಲಭ್ಯವಿದೆ. ಪ್ರತಿ ವರ್ಷಕ್ಕೊಂದು ವಿಷೇಶ ಬೊಂಬೆ ಪ್ರತಿಷ್ಠಾಪಿಸಿ ಗಮನ ಸೆಳೆಯುವ ಮಂದಿಗೂ, ಇಲ್ಲಿ ಅವರಿಗೆ ಅಗತ್ಯವಾಗಿರುವ ಬೊಂಬೆಗಳ ಮಾದರಿಗಳು ಸಹ ಲಭ್ಯವಿದೆ. ಇವುಗಳ ಜತೆಗೆ ಮಕ್ಕಳ ಆಟಿಕೆಗಳು, ಶಾಲಾ ಪರಿಕರಗಳು, ಅಲಂಕಾರಿಕ ವಸ್ತುಗಳು, ಉಡುಗೊರೆ ನೀಡಲು ದೊಡ್ಡ ದೊಡ್ಡ ಆನೆಗಳು, ಚಿತ್ರಪಟಗಳು ಕೂಡಾ ಮಾರಾಟಕ್ಕೆ ಲಭ್ಯವಿದೆ. ದಸರಾ ಬೊಂಬೆಗಳನ್ನು ಸ್ಥಳೀಯವಾಗಿ ತಯಾರಿಸಿ ಮಾರಾಟಕ್ಕೆ ಸಿದ್ಧಗೊಳಿಸಿದ್ದರೆ, ಅಲಂಕಾರಿಕ ವಸ್ತುಗಳನ್ನು ಬೇರೆಡೆಯಿಂದ ತರಿಸಿ ಮಾರಾಟ ಮಾಡಲಾಗುತ್ತಿದೆ.
ಮೂರು ಚಕ್ರದ ಮರದ ಗಾಡಿ: ಬೆಂಗಳೂರು- ಮೈಸೂರು ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರ ಆಕರ್ಷಣೆ ಹೆಚ್ಚಿಸಲು ಬೊಂಬೆಗಳ ಜತೆಗೆ ಬ್ಯಾಗ್‌ಗಳು, ಮಣಿಯಿಂದ ವಿನ್ಯಾಸಗೊಳಿಸಿರುವ ವಾಹನಗಳ ಸೀಟಿನ ಹೊದಿಕೆಗಳು, ಟೋಪಿಗಳು, ವಿವಿಧ ಮಾದರಿಯ ಕುದುರೆಗಳು, ಮಕ್ಕಳು ನಡೆಯಲು ಬಳಸುವ ಮೂರು ಚಕ್ರದ ಮರದ ಗಾಡಿಗಳನ್ನೂ ಸಹ ಮಳಿಗೆಗಳಲ್ಲಿ ಕಾಣಸಿಗುತ್ತಿವೆ. ಬೊಂಬೆಗಳ ಮೇಲೆ ಶೇ.20ರವರೆಗೂ ರಿಯಾಯಿತಿ ನೀಡಲು ಮುಂದಾಗಿದ್ದೇವೆ. ಎಲ್ಲ ಬೊಂಬೆಗಳ ಮಾದರಿಯೂ ಮಳಿಗೆಗಳಲ್ಲಿ ಲಭ್ಯವಿದ್ದು, ಗ್ರಾಹಕರು ಬೊಂಬೆಗಳನ್ನು ಕೊಂಡು ಪ್ರದರ್ಶನ ಮಾಡುವ ಮೂಲಕ ಬೊಂಬೆ ನಗರಿಯ ಖ್ಯಾತಿಯನ್ನು ಇನ್ನಷ್ಟು ಉತ್ತುಂಗಕ್ಕೇರಿಸಬೇಕೆಂದು ಮನವಿ ಮಾಡಿದ್ದಾರೆ.
ಹಿಂದಿಗಿಂತಲೂ ಆಕರ್ಷಣೀಯ : ಇತ್ತೀಚಿನ ದಿನಗಳಲ್ಲಿ ಪೈಪೋಟಿ ಮೇಲೆ ಬೊಂಬೆ ಪ್ರದರ್ಶನ ನಡೆಸಿ, ಬಹುಮಾನ ಗಿಟ್ಟಿಸಿಕೊಳ್ಳುವ ಧಾವಂತ ದಲ್ಲಿರುವವರಿಗೆ ಚನ್ನಪಟ್ಟಣದ ಮಳಿಗೆಗಳಲ್ಲಿ ಹೊಸದಾಗಿ ಆಗಮಿಸಿರುವ ಬೊಂಬೆಗಳು ಸಹಕಾರಿಯಾಗಲಿವೆ ಎಂಬುದು ಬೊಂಬೆ ತಯಾರಕರ ಅನಿಸಿಕೆಯಾಗಿದೆ. ಹೊಸ ಹೊಸ ಬಣ್ಣಗಳಲ್ಲಿ, ನುರಿತ ಕಲಾವಿದರ ಕೈಚಳಕದಿಂದ ಬೊಂಬೆಗಳು ಈ ಹಿಂದಿಗಿಂತಲೂ ಈ ಬಾರಿ ಇನ್ನಷ್ಟು ಆಕರ್ಷಣೀಯವಾಗಿ ಹೊರಬಂದಿದ್ದು, ಗ್ರಾಹಕರು ಖರೀದಿ ಮಾಡಿ ಮನೆಗಳಲ್ಲಿ ಪ್ರದರ್ಶನ ಮಾಡುತ್ತಿದ್ದಾರೆ.
ಬೇರೆಡೆಯಿಂದ ಅಲಂಕಾರಿಕ ಗೊಂಬೆ : ಪ್ರಮುಖವಾಗಿ ರೋಸ್‌ವುಡ್, ಟೀಕ್‌ವುಡ್ ಹಾಗೂ ಸ್ಥಳೀಯವಾಗಿ ದೊರೆಯುವ ಆಲೆಮರದ ಬೊಂಬೆಗಳು ಮಳಿಗೆಗಳಲ್ಲಿ ಹೆಚ್ಚಾಗಿ ಮಾರಾಟವಾಗುತ್ತಿದ್ದು, ಆಲೆಮರದ ಲಭ್ಯತೆ ಕಡಿಮೆಯಾಗಿರುವುದು ಹಾಗೂ ಉತ್ಪಾದನಾ ವೆಚ್ಚ ಹೆಚ್ಚಾಗಿರುವುದರಿಂದ ಕಲಾವಿದರು ಕಸುಬು ಬಿಟ್ಟಿದ್ದು, ಕೆಲವರು ಮಾತ್ರ ಕಾರ್ಖಾನೆ ನಡೆಸುತ್ತಿರುವುದರಿಂದ ತಯಾರಿಕೆ ಕಡಿಮೆಯಾಗಿ ಬೇರೆಡೆಯಿಂದ ಅಲಂಕಾರಿಕ ಬೊಂಬೆಗಳನ್ನು ತಂದು ಮಾರಾಟ ಮಾಡುತ್ತಿದ್ದೇವೆ ಎನ್ನುತ್ತಾರೆ ಬೊಂಬೆ ಅಂಗಡಿ ಮಾಲೀಕ ಶ್ರೀನಿವಾಸ್.
ಚನ್ನಪಟ್ಟಣದ ಗೊಂಬೆಗಳು ವಿದೇಶಿಗರ ಗಮನ ಸೆಳೆಯುವ ಮಟ್ಟಿಗೆ ಪ್ರಸಿದ್ಧಿ ಪಡೆದಿವೆ. ಬದಲಾದ ಸನ್ನಿವೇಶದಲ್ಲಿ ಪ್ಲಾಸ್ಟಿಕ್,ಚೀನಾ ನಿರ್ಮಿತ ಬೊಂಬೆಗಳು ಚನ್ನಪಟ್ಟಣದ ಬೊಂಬೆ ತಯಾರಕರು, ಕಲಾವಿದರಿಗೆ ಬಹುದೊಡ್ಡ ಹೊಡೆತ ನೀಡುತ್ತಿವೆ. ಗ್ರಾಹಕರು ಸ್ಥಳೀಯ ನಿರ್ಮಿತ ಬೊಂಬೆಗಳನ್ನು ಖರೀದಿಸುವ ಮೂಲಕ ತಯಾರಕರು ಹಾಗೂ ಕಲಾವಿದರನ್ನು ಉಳಿಸಬೇಕಿದೆ. -ಟಿ.ವಿ.ಭರತ್, ಚನ್ನಪಟ್ಟಣ
ಪ್ರತಿ ವರ್ಷವೂ ಬೊಂಬೆ ಪ್ರದರ್ಶನ ಮಾಡುವವರ ಜತೆಗೆ ಹೊಸದಾಗಿಯೂ ಹೆಚ್ಚಿನ ಮಂದಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡುತ್ತಿದ್ದಾರೆ. ಚನ್ನಪಟ್ಟಣದ ಬೊಂಬೆಗಳು ಎಲ್ಲ ಕಡೆಗಳಲ್ಲಿಯೂ ಹೆಸರು ಮಾಡುತ್ತಿರುವುದು ಹೆಮ್ಮೆಯ ಸಂಗತಿ. -ನಂದಿನಿ, ಗೃಹಿಣಿ, ಚನ್ನಪಟ್ಟಣ
-ಎಂ.ಶಿವಮಾದು