ಉಡುಪಿ: ಸುಮಾರು 25 ವರ್ಷಗಳಿಂದ ವಿದ್ಯುತ್ ಸಂಪರ್ಕವಿಲ್ಲದ ಉಡುಪಿ ಚಿಟಾ³ಡಿ ಕಸ್ತೂರ್ಬಾ ನಗರ ನಿವಾಸಿ, ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ರಮಾನಂದ ಮತ್ತು ಸುಶೀಲಾ ದಂಪತಿಯ ಮನೆಗೆ ಇದೀಗ ವಿದ್ಯುತ್ ಸಂಪರ್ಕವಾದ ಕಾರಣ ಇದುವರೆಗೆ ಚಿಮಣಿ, ಟಾರ್ಚ್ ಬೆಳಕಿನಿಂದ ಓದುತ್ತಿದ್ದ ಮಕ್ಕಳ ಓದಿಗೆ ಅನುಕೂಲವಾಗಿದೆ.
ರಮಾನಂದರು ಪೈಂಟರ್ ಆಗಿದ್ದಾರೆ. ಸುಶೀಲಾ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಕ್ಯಾಂಟೀನ್‌ನಲ್ಲಿ ಶುಚಿತ್ವದ ಕೆಲಸ ಮಾಡುತ್ತಾರೆ. ಹಿಂದೆ ಚಿಕ್ಕ ಹೆಂಚಿನ ಮನೆ ಇದ್ದರೆ, ಸುಶೀಲಾ ಮದುವೆಯಾಗಿ ಬಂದ ಬಳಿಕ ಸ್ವಲ್ಪ ವಿಸ್ತರಿಸಿದ್ದರು. ಆದರೆ ಬಡತನದ ಕಾರಣದಿಂದ ವಿದ್ಯುತ್ ಸಂಪರ್ಕ ಮರೀಚಿಕೆಯಾಗಿಯೇ ಉಳಿದಿತ್ತು.
ಇದರ ಪರಿಣಾಮವೆಂದರೆ ಮಕ್ಕಳಾದ ರಮ್ಯಾ, ರಾಕೇಶರು ಓದಲು ಬಳಸುತ್ತಿದ್ದುದು ಬ್ಯಾಟರಿಯ ಟಾರ್ಚ್ ಬೆಳಕು, ಚಿಮಣಿ ದೀಪ. ಟಾರ್ಚ್‌ನ್ನು ಸಮೀಪದಲ್ಲಿದ್ದ ದೊಡ್ಡಮ್ಮನ ಮನೆಯಲ್ಲಿ ಚಾರ್ಜ್‌ಗೆ ಇಡುತ್ತಿದ್ದರು. ಬೆಳಗ್ಗೆ ಇಟ್ಟರೆ ಮಧ್ಯಾಹ್ನದ ವರೆಗೆ ಚಾರ್ಜ್ ಮಾಡುತ್ತಿದ್ದರು. ಇದು ರಾತ್ರಿ ಕೆಲವು ಹೊತ್ತು ಓದಲು ಆಗುತ್ತಿತ್ತು, ಚಾರ್ಜ್ ಖಾಲಿಯಾದರೆ ಚಿಮಣಿ ದೀಪಕ್ಕೆ ಮೊರೆ ಹೋಗುತ್ತಿದ್ದರು. ಇದರಲ್ಲಿಯೇ ಓದಿದ ರಮ್ಯಾ ಇಂದಿರಾನಗರದ ಹಿ.ಪ್ರಾ. ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದು ಮುಗಿಸಿದಳು. ಈಗ ಉಡುಪಿಯ ಬಾಲಕಿಯರ ಸರಕಾರಿ ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಎಂಟನೆಯ ತರಗತಿ (ಆಂಗ್ಲ ಮಾಧ್ಯಮ) ಓದುತ್ತಿದ್ದರೆ, ರಾಕೇಶ ಇಂದಿರಾನಗರದ ಹಿ. ಪ್ರಾಥಮಿಕ ಶಾಲೆಯಲ್ಲಿ ಏಳನೆಯ ತರಗತಿ ಓದುತ್ತಿದ್ದಾನೆ. ರಮ್ಯಾ ಏಳನೆಯ ತರಗತಿಯಲ್ಲಿ ಮೊದಲ ಮೂರು ಸ್ಥಾನಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದರು. ರಾಕೇಶನೂ ಅಕ್ಕನಿಗೆ ಹಿಂದಿಲ್ಲವೆಂಬಂತೆ ಓದುತ್ತಿದ್ದಾನೆ.
ಉಡುಪಿ ನಗರದಲ್ಲಿ ಯಾರ್ಯಾರಿಗೆ ಆರ್ಥಿಕ ತೊಂದರೆಯಿಂದ ವಿದ್ಯುತ್ ಸಂಪರ್ಕವಾಗಲಿಲ್ಲವೋ ಅಂತಹವರನ್ನು ಹುಡುಕಿ ವಿದ್ಯುತ್ ಸಂಪರ್ಕ ಕಲ್ಪಿಸುವ ಅಭಿಯಾನ್ನ ಕಡಿಯಾಳಿ ಗಣೇಶೋತ್ಸವ ಸಮಿತಿಯ ಆಸರೆ ಚಾರಿಟೆಬಲ್ ಟ್ರಸ್ಟ್ ಮಾಡುತ್ತಿರುವಾಗ ರಮ್ಯಾಳ ಮನೆಗೂ ವಿದ್ಯುತ್ ಸಂಪರ್ಕ ಡಿಸೆಂಬರ್‌ನಲ್ಲಿ ಸಾಧ್ಯವಾಯಿತು. ಈಗ ಓದಲು ವಿದ್ಯುತ್ ಬೆಳಕಿದೆ ಎಂಬ ಕಾರಣಕ್ಕೆ ರಮ್ಯಾ, ರಾಕೇಶರಿಗೆ ಖುಷಿ ಇದೆ.