Advertisement

ದಶಮುಖನ ದೇಶದೊಳಗೆ

10:00 AM Feb 16, 2020 | Lakshmi GovindaRaj |

ಬಹುತೇಕ ಭಾರತೀಯ ಸಂಸ್ಕೃತಿಗೆ ಹತ್ತಿರವಿರುವ ದೇಶ ಶ್ರೀಲಂಕಾ. ಈ ಸಾಂಸ್ಕೃತಿಕ ಬೆಸುಗೆಗೆ ಕಾರಣ, ರಾಮಾಯಣದ ಖಳನಾಯಕ ರಾವಣ. ರಾವಣನ ಆ ಸಾಮ್ರಾಜ್ಯ ಈಗ ಹೇಗಿದೆ ಎಂಬುದರ ನೋಟ ಇಲ್ಲಿದೆ…

Advertisement

ರಾಮಾಯಣದಲ್ಲಿ ಲಂಕಾಧಿಪತಿ ರಾವಣ ಖಳನಾಯಕ. ಇಂದಿನ ಶ್ರೀಲಂಕಾಕ್ಕೆ ಹೋಗಿ ನೋಡಿದರೆ, ಅಲ್ಲಿ ರಾವಣನ ಕುರಿತಾದ ಪ್ರಭಾವ, ಒಂದಿಷ್ಟು ಕುರುಹುಗಳು ರಾಮಾಯಣದ ಜೀವಂತಿಕೆ ಸಾಕ್ಷಿಯಂತಿವೆ. ಅಲ್ಲಿ ರಾವಣ ದುಷ್ಟನಲ್ಲ; ಅತ್ಯುತ್ತಮ ರಾಜ. ಅದ್ಭುತ ವೈಣಿಕ. ಮಹಾ ಶಿವಭಕ್ತ. ಪ್ರಸಿದ್ಧ ಪಂಡಿತ. ನುರಿತ ಆಯುರ್ವೇದ ವೈದ್ಯ- ಹೀಗೆ ಬಹುಮುಖ ಪ್ರತಿಭೆಯ ನಾಯಕ. ಲಕ್ಷ್ಮಣ, ಶೂರ್ಪನಖೀಯನ್ನು ವಿರೂಪಗೊಳಿಸಿದ. ತನ್ನ ಸಹೋದರಿಗಾದ ಅಪಮಾನ ತೀರಿಸಲು, ಆ ಮೂಲಕ ಪ್ರಜೆಗಳ ರಕ್ಷಣೆ ತನ್ನ ಕರ್ತವ್ಯ ಎಂದು ಭಾವಿಸಿದ ರಾಜ, ಪ್ರತೀಕಾರವಾಗಿ ಸೀತೆಯನ್ನು ಅಪಹರಿಸಿದ ಎನ್ನುತ್ತಾರೆ ಇಲ್ಲಿನವರು.

ಸೀತಾ ಕೊಥುವಾ: ಸೀತೆಯನ್ನು ಅಪಹರಿಸಿ, ಆಕಾಶಮಾರ್ಗವಾಗಿ ಪುಷ್ಪಕ ವಿಮಾನದ ಮೂಲಕ ಲಂಕೆಗೆ ಬಂದ ರಾವಣ ಇಳಿದದ್ದು ವೆರಗಂಟೋಟ ಎಂಬಲ್ಲಿ (ಸಿಂಹಳೀ; ವಿಮಾನ ಇಳಿಯುವ ಸ್ಥಳ). ಇಲ್ಲಿನ ಲಂಕಾಪುರದಲ್ಲಿ ರಾಣಿ ಮಂಡೋದರಿ ವಾಸವಾಗಿದ್ದಳು. ಜಲಪಾತ, ನದಿ-ಹಳ್ಳ, ಬಗೆಬಗೆಯ ಹೂವು, ಗಿಡ- ಮರಗಳ ಸುಂದರ ಸ್ಥಳದಲ್ಲಿ ಆಕೆಯ ಭವ್ಯ ಅರಮನೆಯಿತ್ತು. ಸೀತೆಯನ್ನು, ರಾವಣ ಮೊದಲು ಇಲ್ಲಿಯೇ ಬಚ್ಚಿಟ್ಟಿದ್ದನಂತೆ. ನಂತರ ಮಂಡೋದರಿ ಒಪ್ಪದ ಕಾರಣ ಅಶೋಕ ವಾಟಿಕಾಕ್ಕೆ ಸ್ಥಳಾಂತರಿಸಿದ ಎನ್ನಲಾಗುತ್ತದೆ. ಸೀತೆ ಇದ್ದುದ್ದರಿಂದ, ಸೀತೆಯ ಕೋಟೆ ಎಂಬ ಹೆಸರು. ಕ್ಯಾಂಡಿಯಿಂದ 66 ಕಿ.ಮೀ. ದೂರದಲ್ಲಿ ಗುರುಲುಪೋತಾ ಹಳ್ಳಿಯಿಂದ ಅಂಕುಡೊಂಕಿನ ತಿರುವಿನ ನಂತರ ಇರುವ ರಮ್ಯ ತಾಣವಿದು.

ಅಶೋಕ ವಾಟಿಕಾ: ನಂತರ, ರಾವಣ ಸೀತೆಯನ್ನು ಕರೆತಂದದ್ದು ಅಶೋಕವನಕ್ಕೆ ಅಥವಾ ಈಗಿನ ಹಕYಲ ಉದ್ಯಾನವನಕ್ಕೆ. ಇಲ್ಲಿಯೇ ಸೀತೆ ಬಂಧಿಯಾಗಿದ್ದಳು. ಇದೇ ವನದಲ್ಲಿ ಹನುಮಂತ, ರಾಮನ ಆಣತಿಯಂತೆ ಮೊದಲ ಬಾರಿ ಸೀತಾಮಾತೆಯನ್ನು ಭೇಟಿಮಾಡಿ, ಆಕೆಗೆ ರಾಮನ ಮುದ್ರಿಕೆಯನ್ನು ತಲುಪಿಸಿದ್ದು ಎನ್ನಲಾಗುತ್ತದೆ. ಈಗಿಲ್ಲಿ ಅಶೋಕ ಮರಗಳು ಅಷ್ಟೇನೂ ಇಲ್ಲ. ಆದರೆ, ನೂರಾರು ಬಗೆಯ ಗಿಡ ಪ್ರಬೇಧಗಳಿದ್ದು, ಹೂವು- ಚಿಟ್ಟೆಗಳಿಂದ ಕೂಡಿ ನಯನಮನೋಹರವಾಗಿದೆ. “ಬೆಳಕಿನ ನಗರ’ ಎಂದೇ ಪ್ರಸಿದ್ಧವಾದ ನುವಾರಾ ಎಲಿಯಾದಿಂದ 16 ಕಿ.ಮೀ. ದೂರದಲ್ಲಿದೆ.

ಸೀತಾ ಅಮ್ಮನ್‌ ದೇಗುಲಘಿ: ಈ ಉದ್ಯಾನವನದ ಎದುರಿನಲ್ಲೇ ಹೊಳೆಯೊಂದು ಹರಿಯುತ್ತಿದ್ದು ಇದು ಸೀತೆ ಸ್ನಾನ ಮಾಡುತ್ತಿದ್ದ ಸ್ಥಳ ಎಂದು ನಂಬಲಾಗಿದೆ. ಇಲ್ಲಿನ ದೇಗುಲ ಸೀತಾಮಾತೆಯನ್ನು ಪೂಜಿಸುವ ಜಗತ್ತಿನ ಕೆಲವೇ ಕೆಲವು ದೇಗುಲಗಳಲ್ಲಿ ಪ್ರಮುಖವಾದದ್ದು. ಈ ಹೊಳೆಯ ನೀರು ಕಂದುಬಣ್ಣದ್ದಾಗಿದ್ದು, ರಾಮನನ್ನು ಧ್ಯಾನಿಸುತ್ತಾ ಸೀತೆ ಸುರಿಸುತ್ತಿದ್ದ ಕಣ್ಣೀರು ಬೆರೆತು ಈ ಬಣ್ಣ ಬಂದಿದೆ ಎನ್ನುವುದು ಸ್ಥಳೀಯರ ನಂಬಿಕೆ. ಹೊಳೆಯ ಮೇಲಿರುವ ಬಂಡೆಯಲ್ಲಿ ಸಣ್ಣ- ದೊಡ್ಡ ಕುಳಿಗಳಿದ್ದು ಇವು ಹನುಮನ ಪಾದದ ಗುರುತು ಎಂದು ಪೂಜಿಸಲಾಗುತ್ತದೆ.

Advertisement

ಗಾವಗಲ: ರಾವಣನ ಕಾಲದಲ್ಲಿ ಅಪಾರ ಸಂಖ್ಯೆಯ ದನ- ಕರುಗಳಿದ್ದ ಮುಖ್ಯ ಹೈನುಗಾರಿಕಾ ಕೇಂದ್ರವಿದು. ಇಲ್ಲಿಂದ ಹಾಲನ್ನು ಸಂಗ್ರಹಿಸಿ ವಿಮಾನಗಳ ಮೂಲಕ ರಾಜಧಾನಿ ಲಂಕೆಗೆ ಕಳಿಸಲಾಗುತ್ತಿತ್ತು. ಗಾವಗಲದಲ್ಲಿರುವ ಕಲ್ಲಿನ ಕಂಬಗಳು ದಪ್ಪ ಹಗ್ಗಗಳನ್ನು ಕಟ್ಟಿರುವ ಗುರುತುಗಳನ್ನು ಹೊಂದಿದ್ದು, ಇದು ದೊಡ್ಡ ಕೊಟ್ಟಿಗೆಯಾಗಿತ್ತು ಎನ್ನಲಾಗುತ್ತದೆ. ನುವಾರಾ ಎಲಿಯಾದಿಂದ ವಲಪನೆಗೆ ಹೋಗುವ ಪೂರ್ವದಿಕ್ಕಿನ ರಸ್ತೆಯಲ್ಲಿ ಗಾವಗಲವಿದೆ.

ರಾವಣಹಸ್ತ ವೀಣಾ: ರಾಜಸ್ಥಾನ್‌ ಮತ್ತು ಗುಜರಾತ್‌ನ ಜನಪದ ಸಂಗೀತದಲ್ಲಿ ಬಳಕೆಯಾಗುವ ಸರಳ, ವಿಶಿಷ್ಟ ವಾದ್ಯ “ರಾವಣಹತ್ತ’. ಇದನ್ನು ಕಂಡುಹಿಡಿದವನು ಲಂಕಾಧೀಶ ರಾವಣ. “ರಾವಣಹಸ್ತ ವೀಣಾ’ ಎಂಬ ಮೂಲಹೆಸರು ರಾವಣಹತ್ತ ಎಂಬುದಾಗಿ ಬಳಕೆಯಲ್ಲಿದೆ. ಮಹಾಶಿವಭಕ್ತನಾಗಿದ್ದ ರಾವಣ, ಶಿವನನ್ನು ಮೆಚ್ಚಿಸಲು ಈ ವಾದ್ಯವನ್ನು ನುಡಿಸುತ್ತಿದ್ದ ಎನ್ನಲಾಗಿದೆ. ರಾವಣನ ಕಾಲದಲ್ಲಿ ಹೆಲಾ ಜನಾಂಗದವರಲ್ಲಿ ಇದು ಪ್ರಮುಖ ವಾದ್ಯವಾಗಿತ್ತು. ಸಂಗೀತ ವಾದ್ಯವನ್ನು ಆತನ ಮರಣಾನಂತರ ಉತ್ತರಭಾರತಕ್ಕೆ ಒಯ್ದವನು ಹನುಮ. ತೆಂಗಿನ ಚಿಪ್ಪು, ಬಿದಿರಿನಕೋಲು, ಕಮಾನು ಮತ್ತು ತಂತಿ ಹೊಂದಿದ ರಾವಣಹತ್ತ, ಇಂದಿನ ವಯಲಿನ್‌ಗೆ ಮೂಲ ಸ್ಫೂರ್ತಿ ಎಂದು ಊಹಿಸಲಾಗಿದೆ.

* ಡಾ. ಕೆ.ಎಸ್‌. ಚೈತ್ರಾ

Advertisement

Udayavani is now on Telegram. Click here to join our channel and stay updated with the latest news.

Next