Advertisement

ಹಿರಿಯ ಸಾಹಿತಿಯೊಂದಿಗೆ ವಿದ್ಯಾರ್ಥಿಗಳ ಸಂದರ್ಶನ

08:15 PM Oct 31, 2019 | mahesh |

ಉಡುಪಿ ಜಿಲ್ಲೆಯ ಹೆಬ್ರಿಯ ಸಮೀಪದ ಮುದ್ರಾಡಿ ಎಂಬ ಊರಿನ ಅಂಬಾತನಯರು ಕೈಯಾಡಿಸದ ಸಾಹಿತ್ಯ ಪ್ರಕಾರವೇ ಇಲ್ಲವೆಂದರೆ ಅಪರಾಧವಾಗದು! ನಾಟಕ, ಶಿಶುಗೀತೆ, ಭಕ್ತಿಗೀತೆ, ಕವನ ಸಂಕಲನ, ಯಕ್ಷಗಾನ ಪ್ರಸಂಗ, ವಿಡಂಬನೆ, ಲೇಖನ ಸಂಕಲನ, ವ್ಯಕ್ತಿ ಪರಿಚಯ, ಪ್ರೇಮಗೀತೆ, ಪೌರಾಣಿಕ, ನೃತ್ಯರೂಪಕ ಇನ್ನಿತರ ತರಹೇವಾರಿ ಬರಹಗಳು ಅವರ ಲೇಖನಿಯಿಂದ ಹೊಮ್ಮಿವೆ. ವೃತ್ತಿಯಲ್ಲಿ ಶಿಕ್ಷಕನಾಗಿ 36 ವರ್ಷಗಳ ಸೇವಾನುಭವ ಪಡೆದ ನಿವೃತ್ತಿಯ ಬಳಿಕವೂ ಸಾಹಿತ್ಯಸೇವೆಯಲ್ಲಿ ತೊಡಗಿಸಿಕೊಂಡವರು. ಇಂಥ ಸಾಧಕರನ್ನು ಹೆಬ್ರಿಯ ಅಮೃತಭಾರತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಹರ್ಷಿಣಿ, ಪೂಜಾ, ಅಪೇಕ್ಷಾ, ಕೌಶಿಕ್‌, ಓಂಕಾರ್‌, ಪೃಥ್ವಿ ಸಂದರ್ಶಿಸಿದರು.

Advertisement

ಪೃಥ್ವಿ : ನಿಮ್ಮ ತಂದೆ – ತಾಯಿಯರ ಬಗ್ಗೆ.
-ನಮ್ಮ ತಂದೆ ಸಮಾಜಮುಖೀ ವ್ಯಕ್ತಿ. ಹರಿಕಥೆ, ಯಕ್ಷಗಾನಗಳಲ್ಲಿ ಅಪಾರ ಆಸಕ್ತಿ ಇದ್ದವರು. ತಾಯಿಗೆ ಹೊರಪ್ರಪಂಚದ ಆಸಕ್ತಿ ತೀರಾ ಕಮ್ಮಿ. ತಂದೆಯಿಂದಲೇ ನನಗೆ ತುಸು ಸಾಹಿತ್ಯಿಕ ವಿಚಾರದ ಬಗ್ಗೆ ಪ್ರೀತಿ ಮೊಳೆಯಲು ಶುರುವಾಗಿದ್ದು. ಆ ನಿಮಿತ್ತ ಅವರ ಪ್ರಭಾವ ನನ್ನ ಬದುಕಿನಲ್ಲಿ ಅಪಾರ.

ಓಂಕಾರ್‌: ನಿಮ್ಮ ವಿದ್ಯಾಭ್ಯಾಸ ಹೇಗಿತ್ತು?
-ನಾನು ಓದಿದ್ದು ಕೇವಲ ಎಂಟನೆಯ ಕ್ಲಾಸು. ಉನ್ನತ ವ್ಯಾಸಂಗಕ್ಕಾಗಿ ಕಾರ್ಕಳ ಅಥವಾ ಕುಂದಾಪುರಕ್ಕೆ ತೆರಳಬೇಕಿತ್ತು. ಒಂದೆಡೆ ಬಡತನ ಸಮಸ್ಯೆಯಾಗಿದ್ದರೆ ಇನ್ನೊಂದೆಡೆ ಆ ಕಾಲದಲ್ಲಿ ಎಂಟನೆಯ ಕ್ಲಾಸು ಪಾಸಾದವರು ಟೀಚರ್ ಟ್ರೈನಿಂಗ್‌ ಮುಗಿಸಿದರೆ ಮಾಸ್ತರಿಕೆ ಮಾಡಬಹುದಾದ ಅವಕಾಶವಿತ್ತು. ಆದ್ದರಿಂದ ಅದನ್ನೇ ಆಯ್ಕೆ ಮಾಡಿಕೊಂಡು ಮುಂದೆ ಸಾಗಿದೆ.

ಪೂಜಾ : ಸಾಹಿತ್ಯದ ರುಚಿ ನಿಮಗೆ ಸಿಕ್ಕಿದ್ದು ಎಲ್ಲಿ ಮತ್ತು ಹೇಗೆ?
-ನಾನು ಎಂಟನೆಯ ತರಗತಿಯಲ್ಲಿದ್ದಾಗ ಪಳಕಳ ಸೀತಾರಾಮ ಭಟ್ಟರು ಎಂಬ ಖ್ಯಾತ ಮಕ್ಕಳ ಸಾಹಿತಿಯೊಬ್ಬರು ನಮಗೆ ಶಿಕ್ಷಕರಾಗಿ ಬಂದರು. ಆಗಿನ ಕಾಲದಲ್ಲಿ ಪದ್ಯ ಬರೆಯುತ್ತಿದ್ದ ಗುರುಗಳೆಂದರೆ ನಮಗೆ ಅವರೊಬ್ಬರೇ. ಆಗ ನನಗೂ ಆ ಬಗ್ಗೆ ಆಸಕ್ತಿ ಹುಟ್ಟಿ ಒಂದು ಹತ್ತು ಸಾಲಿನ ಪದ್ಯ ಬರೆದೆ. ಅಂಜುತ್ತಲೇ ಅವರ ಹತ್ತಿರ ಹೋಗಿ ತೋರಿಸಿದೆ. ಅವರು ಅದನ್ನೋದಿ, “ಇದು ನನ್ನ ಬಳಿಯೇ ಇರಲಿ’ ಎಂದರು. “ಸರಿ’ ಎಂದು ಹೊರಟುಬಂದೆ. ಒಂದು ತಿಂಗಳ ಬಳಿಕ ಅದು ಬಾಲಚಂದ್ರ ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅವರೇ ಅದನ್ನು ಪತ್ರಿಕೆಗೆ ಕಳುಹಿಸಿದ್ದರು. ಅಧ್ಯಾಪಕನಾದ ಬಳಿಕ ಮಕ್ಕಳಿಗಾಗಿ ನಾಟಕ ಬರೆಯಬೇಕಾಯಿತು. ಅರ್ಧ ಅಥವಾ ಒಂದು ಗಂಟೆಯ ನಾಟಕವನ್ನು ಬರೆಯತೊಡಗಿದೆ. ಅಲ್ಲಿಂದ ಸಾಹಿತ್ಯಕ್ಕೆ ಮತ್ತಷ್ಟು ಹತ್ತಿರವಾದೆ.

ಕೌಶಿಕ್‌ : ಸಾಹಿತ್ಯಕ್ಕೂ ನಿಮ್ಮ ಅಧ್ಯಾಪಕ ವೃತ್ತಿಗೂ ಏನಾದರೂ ಸಂಬಂಧ ಇದೆಯಾ? ಅಧ್ಯಾಪಕ ವೃತ್ತಿಯಿಂದ ಸಾಹಿತ್ಯಕ್ಕೆ ನಿಮಗೇನಾದರೂ ಲಾಭವಾಗಿದೆಯಾ?
-ಸಾಹಿತ್ಯ ಮತ್ತು ಅಧ್ಯಾಪನಕ್ಕೆ ಒಂದು ವಿಶೇಷವಾದ ಕೊಂಡಿಯಿದೆ. ಅಧ್ಯಾಪನದಿಂದ ಭಾಷೆ ಉತ್ತಮವಾಗುತ್ತದೆ ಮತ್ತು ಅನುಭವ ವಿಸ್ತಾರವಾಗುತ್ತದೆ. ಸಾಹಿತ್ಯದ ರುಚಿಯಿರುವವರು ಅಧ್ಯಾಪನವನ್ನು ಇನ್ನೂ ಚೆನ್ನಾಗಿ ಮಾಡಬಲ್ಲರು.

Advertisement

ಹರ್ಷಿಣಿ : ನಿಮಗೆ ಅಂಬಾತನಯ ಎಂಬ ಹೆಸರು ಹೇಗೆ ಬಂತು?
-ನನ್ನೂರು ಮುದ್ರಾಡಿಯಲ್ಲಿ ಭದ್ರಕಾಳಿ ದೇವಸ್ಥಾನವಿದೆ. ನಮ್ಮ ತಂದೆ ಮೊದಲು ಅಲ್ಲಿ ಅಮಾವಾಸ್ಯೆಯಿಂದ ಏಕಾದಶಿಯವರೆಗೆ ಹತ್ತು ದಿನ ನಗರ ಭಜನೆ ಮಾಡುತ್ತಿದ್ದರು. ನನಗಾಗ ಸಣ್ಣ ಪ್ರಾಯ. ಭಜನೆಯ ಆರಂಭ ಮತ್ತು ಕೊನೆ ನಾನೇ ಮಾಡುತ್ತಿದ್ದೆ. ಆ ಸಂದರ್ಭದಲ್ಲಿ ಒಂದು ಹಾಡನ್ನು ಎಲ್ಲರ ಸಮ್ಮುಖದಲ್ಲಿ ಹಾಡಿದೆ. ಹಾಡಿದ್ದು ಮೊದಲು, ಬಳಿಕ ಬರೆದದ್ದು. ಹಾಗೆ ಅಲ್ಲಿ ಹಾಡಿನ ಕೊನೆಗೆ ಅಂಬಾತನಯ ಎನ್ನುವ ಹೆಸರಿಟ್ಟಿದ್ದೆ. ಆ ಹೆಸರೇ ಮುಂದುವರೆಸಿದೆ.

ಅಪೇಕ್ಷಾ : ನಿಮ್ಮ ಮೊದಲ ಕೃತಿಗೆ ಎಂ.ಗೋವಿಂದ ಪೈಗಳು ಮುನ್ನುಡಿ ಬರೆದಿದ್ದಾರೆ. ಅವರ ಜೊತೆಗಿನ ಒಡನಾಟ ಹೇಗಿತ್ತು?
-ಅವರು ನನಗಿಂತ ಬಹಳ ಹಿರಿಯರು. ಅವರಿಂದ ಕಲಿಯುವುದು ಕಲಿತದ್ದು, ಸಾಕಷ್ಟಿತ್ತು. ಮನೆಗೆ ಬಂದ ಅತಿಥಿಗಳನ್ನು ಆದರಿಸುವುದರಿಂದ ಹಿಡಿದು ತಿರುಗಿ ವಾಪಾಸು ಹೊರಡುವಾಗಲೂ ಬಸ್ಸಿನ ಬಳಿ ಬಿಟ್ಟು ಹೋಗುವುದು. ಅದು ಭಾರತೀಯ ಸಂಸ್ಕೃತಿ, ಸಂಸ್ಕಾರ. ಅಷ್ಟೇ ಅಲ್ಲ. ಅವರಂಥವರು ಅನೇಕರು ಕಿರಿಯರ ಬೆನ್ನು ತಟ್ಟಿ ಪೋ›ತ್ಸಾಹಿಸುತ್ತಿದ್ದರು. ಈಗ ಕಾಲ ಬದಲಾಗಿದೆ. ಕಿರಿಯರು ಹಿರಿಯರ ಬಳಿಗೆ ಹೋಗುವುದಿಲ್ಲ, ಹಿರಿಯರಿಗೆ ಕಿರಿಯರು ಹತ್ತಿರ ಬಂದರೂ ಆಗುವುದಿಲ್ಲ.

ಪೂಜಾ : ಸಾಹಿತ್ಯ ಕ್ಷೇತ್ರಕ್ಕೆ ಬರುವವರಿಗೇನು ಹೇಳಬಯಸುತ್ತೀರಿ?
-ಅಂಥವರನ್ನು ನಾವೆಲ್ಲರೂ ಪ್ರೋತ್ಸಾಹಿಸಬೇಕಿದೆ. ನಾನು ಮಾಸ್ತರನಾಗಿದ್ದಾಗ ಒಂದು ದಿನ ಪಾಠ ಮಾಡುತ್ತಿದ್ದ ಸಂದರ್ಭ ಒಬ್ಬ ಹಿಂದಿನ ಬೆಂಚಿನಲ್ಲಿ ಕುಳಿತು ಏನೋ ಬರೆಯುತ್ತಿದ್ದ. ಆತನ ಹತ್ತಿರ ಹೋಗಿ ನೋಡಿದರೆ ಅವನು ಚಿತ್ರ ಬಿಡಿಸುತ್ತಿದ್ದ. ಎತ್ತಿಕೊಂಡು ನೋಡುತ್ತೇನೆ ಅದು ನನ್ನದೇ ಚಿತ್ರ! ನನಗೆ ಸಿಟ್ಟು ಬರಲಿಲ್ಲ. ಅವನ ಕಲಾಕೌಶಲ ಕಂಡು ಖುಷಿಪಟ್ಟೆ. ಬೆನ್ನುತಟ್ಟಿ ಪ್ರೋತ್ಸಾಹಿಸುವುದರ ಜೊತೆಗೆ ಒಂದಿಷ್ಟು ಬುದ್ಧಿಮಾತು ಕೂಡ ಹೇಳಿದೆ. ಅದು ಅವನಿಷ್ಟದ ಕಲೆ. ಈಗ ಅದೇ ವ್ಯಕ್ತಿ ಇಂಗ್ಲೆಂಡಿನಲ್ಲಿ¨ªಾನೆ ಮತ್ತು ಈಗಲೂ ಚಿತ್ರಕಲೆಯಲ್ಲಿ ತನ್ನನ್ನು ತಾನು ವಿಶೇಷವಾಗಿ ಗುರುತಿಸಿಕೊಂಡಿ¨ªಾನೆ. ಇದಕ್ಕಿಂತ ಹೆಮ್ಮೆ ಬೇರೇನಿದೆ?

ಓಂಕಾರ್‌ : ಈಗಿನ ಮಕ್ಕಳಿಗೆ, ಯುವಕರಿಗೆ ನೀವೇನು ಹೇಳುತ್ತೀರಿ?
-ಇನ್ನು ಈಗಿನ ಮಕ್ಕಳಿಗೇನು ಹೇಳಬೇಕು ಎನ್ನುವುದಕ್ಕಿಂತಲೂ ಮೊದಲು ಈಗಿನ ತಂದೆ-ತಾಯಿ-ಶಿಕ್ಷಕರಿಗೆ ಒಂದಿಷ್ಟು ಮಾತು ಹೇಳುವ ಅಗತ್ಯವಿದೆ. ತಂದೆ-ತಾಯಿಯರು ಮಕ್ಕಳನ್ನು ಹಣ ಗಳಿಕೆಗಷ್ಟೇ ಸೀಮಿತಗೊಳ್ಳುವ ಶಿಕ್ಷಣ ಕೊಡಿಸುವಲ್ಲೇ ನಿಂತುಬಿಟ್ಟಿದ್ದಾರೆ. ಶಿಕ್ಷಕರಲ್ಲಿ ಅಧ್ಯಯನ ಕೊರತೆಯಿದೆ. ನೋಡಿ, ಉದಾಹರಣೆಗೆ ಕನ್ನಡದಲ್ಲಿ ನಂತರ ಎನ್ನುತ್ತೇವೆ. ನಂತರ ಎನ್ನುವ ಪದವೇ ಕನ್ನಡದಲ್ಲಿಲ್ಲ, ಅದು ಅನಂತರ ಎಂದಾಗಬೇಕು. ತಕ್ಷಣ ಎನ್ನುವುದು ಬೇರೆ ಅರ್ಥ ಕೊಡುತ್ತದೆ, ಅದು ತತ್‌ಕ್ಷಣ ಎಂದಾಗಬೇಕು. ಇದು ಎಷ್ಟು ಜನರಿಗೆ ಗೊತ್ತು? ಇನ್ನೊಬ್ಬರಂತೆ ನಾವಾಗಬೇಕು ಎನ್ನುವ ಹುಚ್ಚುತನ ಬೇಡ. ನಾವು ಹೊರಗಿನ ಜಗತ್ತನ್ನು ಅರಿತಿದ್ದೇವೆ. ಆದರೆ ಒಳಗಿನ ಜಗತ್ತನ್ನು ಅರಿಯಲೇ ಇಲ್ಲ. ಅದನ್ನು ಅರಿಯುವ ಯತ್ನ ಮಾಡೋಣ. ಅನ್ಯರು ಮಾಡಿದ ತಪ್ಪು, ನಾವು ಮಾಡಿದ ಒಳ್ಳೆಯ ಕೆಲಸ ಎರಡನ್ನೂ ಮರೆಯೋಣ. ಇನ್ನು ಶಿಕ್ಷಕರು ನೀಡುವ ಶಿಕ್ಷೆ ಎನ್ನುವುದು ನಿಜಕ್ಕೂ ಶಿಕ್ಷೆ ಅಲ್ಲ, ಅದು ಶಿಕ್ಷಣ. ಅದನ್ನು ಅರಿಯಿರಿ.

ವಿದ್ಯಾರ್ಥಿಗಳು: ಧನ್ಯವಾದಗಳು ಸರ್‌.

ಅರ್ಜುನ್‌ ಶೆಣೈ

Advertisement

Udayavani is now on Telegram. Click here to join our channel and stay updated with the latest news.

Next