Advertisement

ಬಿಎಸ್‌ವೈ ಬದಲಾವಣೆ ಪ್ರಶ್ನೆಯೇ ಇಲ್ಲ, ಜೆಡಿಎಸ್‌ ಜತೆ ನೋ ಫ್ರೆಂಡ್‌ಶಿಪ್‌: ಅರುಣ್‌ ಸಿಂಗ್‌

12:57 AM Jan 03, 2021 | Team Udayavani |

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಅವರು ಬಿಜೆಪಿಯಲ್ಲಿ ಜೆಡಿಎಸ್‌ ವಿಲೀನ ಅಥವಾ ಮೈತ್ರಿಯನ್ನು ಖಡಾಖಂಡಿತವಾಗಿ ನಿರಾಕರಿಸಿದ್ದಾರೆ. ಹಾಗೆಯೇ ಸಿಎಂ ಯಡಿಯೂರಪ್ಪ ಪ್ರಬಲ ನಾಯಕರಾಗಿದ್ದು, ಅವರ ಬದಲಾವಣೆಯ ಪ್ರಶ್ನೆಯೇ ಇಲ್ಲ.
ಅವರ ಪದತ್ಯಾಗಕ್ಕೆ ಯಾವುದೇ ಡೆಡ್‌ಲೈನ್‌ ಇಲ್ಲ ಎಂದು ಹೇಳಿದ್ದಾರೆ. ರಾಜ್ಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ರಾಜ್ಯಕ್ಕೆ ಆಗಮಿಸಿರುವ ಅವರು “ಉದಯವಾಣಿ’ಗೆ ವಿಶೇಷ ಸಂದರ್ಶನ ನೀಡಿದ್ದಾರೆ. ಸಂಪುಟದ ವಿಚಾರದಲ್ಲಿ ಮುಖ್ಯಮಂತ್ರಿಯವರದೇ ಪರಮಾಧಿಕಾರ. ಅವರ ವಿರುದ್ದ ಮಾತನಾಡುವವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡುವುದಾಗಿ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

Advertisement

– ಎರಡು ವರ್ಷ ನಾನೇ ಸಿಎಂ ಆಗಿರುತ್ತೇನೆ ಎಂದು ಬಿಎಸ್‌ವೈ ಏಕೆ ಹೇಳಿಕೊಳ್ಳುತ್ತಿದ್ದಾರೆ?
ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಅನೇಕ ರೀತಿಯ ವದಂತಿಗಳನ್ನು ಹಬ್ಬಿಸಲಾಗುತ್ತಿದೆ. ಹೀಗಾಗಿ ಯಡಿಯೂರಪ್ಪ ಅವರು ತಾವೇ ಮುಖ್ಯಮಂತ್ರಿ ಎಂದು ಹೇಳಿಕೊಂಡಿದ್ದಾರೆ. ವದಂತಿಗಳ ಮೂಲಕ ಪಕ್ಷವನ್ನು ಬಲಹೀನಗೊಳಿಸುವ ಪ್ರಯತ್ನ ನಡೆಸಲಾಗುತ್ತಿದೆ.

– ನಿಮ್ಮದೇ ಪಕ್ಷದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ನಾಯಕತ್ವದ ಬಗ್ಗೆ ಮಾತನಾಡುತ್ತಿದ್ದಾರಲ್ಲಾ?
ನಾನು ಬಸನಗೌಡ ಪಾಟೀಲ್‌ ಅವರ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ರಾಜ್ಯ ಘಟಕಕ್ಕೆ ಸೂಚನೆ ನೀಡುತ್ತೇನೆ. ಅವರಿಗೆ ಏನಾದರೂ ಸಮಸ್ಯೆ ಇದ್ದರೆ, ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸಬಹುದು. ಯತ್ನಾಳ್‌ ಯಾಕೆ ಆ ರೀತಿ ಹೇಳುತ್ತಿದ್ದಾರೆ ಎಂದು ಕಾರಣ ಕೇಳುವಂತೆ ಹೇಳುತ್ತೇನೆ. ಇದು ಪಕ್ಷದ ಸಂಸ್ಕೃತಿಯಲ್ಲ. ಯತ್ನಾಳ್‌ ಹೇಳಿಕೆ ಬಗ್ಗೆ ಸ್ಪಷ್ಟೀಕರಣ ಕೇಳಲು ರಾಜ್ಯ ನಾಯಕರಿಗೆ ಸೂಚಿಸುತ್ತೇನೆ.

– ಯಡಿಯೂರಪ್ಪಗೆ ಅವರಿಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಡೆಡ್‌ಲೈನ್‌ ನೀಡಲಾಗಿದೆಯಾ?
ಇಲ್ಲ. ಯಾವುದೇ ರೀತಿಯ ಡೆಡ್‌ಲೈನ್‌ ಇಲ್ಲ. ಅವರು ನಮ್ಮ ಪಕ್ಷದ ಹಿರಿಯ ನಾಯಕರು, ಜನಪ್ರಿಯ ನಾಯಕರು. ಮುಖ್ಯಮಂತ್ರಿಯಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ.

– ಈ ಸರಕಾರದಲ್ಲಿ ನಮ್ಮ ಕೆಲಸ ಆಗುತ್ತಿಲ್ಲ ಎಂದು ನಿಮ್ಮ ಶಾಸಕರೇ ಹೇಳುತ್ತಿದ್ದಾರಲ್ಲಾ?
ಒಂದು ಮಾತು ನಾನು ಹೇಳುತ್ತೇನೆ. ಕೊರೊನಾದಿಂದ ಆರ್ಥಿಕ ಹೊಡೆತ ಬಿದ್ದಿದೆ. ಈಗ ಸರಕಾರದ ಆದಾಯ ಸಂಗ್ರಹ ಪ್ರಮಾಣ ಹೆಚ್ಚುತ್ತಿದೆ. ಸರಕಾರದ ಆದಾಯ ಹೆಚ್ಚಾದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ನೀಡುತ್ತಾರೆ. ಅಲ್ಲದೆ ಶಾಸಕರ ಭೇಟಿಗೆ ವಿಶೇಷ ವ್ಯವಸ್ಥೆ ಕಲ್ಪಿಸುವಂತೆ ಮುಖ್ಯಮಂತ್ರಿಗಳಿಗೆ ಸೂಚನೆ ನೀಡುತ್ತೇನೆ.

Advertisement

– ಶಾಸಕರು ಶಾಸಕಾಂಗ ಪಕ್ಷದ ಸಭೆ ಕರೆಯು ವಂತೆ ಒತ್ತಾಯಿಸಿದರೂ ಏಕೆ ಕರೆಯುತ್ತಿಲ್ಲ?
ಹಾಗೇನಿಲ್ಲ. ಮುಖ್ಯಮಂತ್ರಿಗಳು ನಿರಂತರವಾಗಿ ಶಾಸಕರ ಸಂಪರ್ಕದಲ್ಲಿದ್ದಾರೆ. ಯಾವುದಾದರೂ ಶಾಸಕರು ಕಳೆದ ಆರು ತಿಂಗಳಿಂದ ತಮಗೆ ಸಿಎಂ ಸಿಕ್ಕಿಯೇ ಇಲ್ಲ ಎಂದು ಹೇಳಿದರೆ, ಈ ಬಗ್ಗೆ ಕಾರಣ ಕೇಳುತ್ತೇನೆ.

– ಸಂಪುಟ ಸಚಿವರ ಕಾರ್ಯ ವೈಖರಿಯ ಬಗ್ಗೆ ನಿಮಗೆ ತೃಪ್ತಿ ಇದೆಯಾ?
ಸಚಿವ ಸಂಪುಟದ ವಿಸ್ತರಣೆ, ಪುನಾರಚನೆ, ಸಚಿವರ ಕಾರ್ಯ ವೈಖರಿ ಎಲ್ಲವನ್ನೂ ಮುಖ್ಯಮಂತ್ರಿಗಳು ನೋಡಿಕೊಳ್ಳುತ್ತಾರೆ. ನಾನು ಪಕ್ಷದ ಸಂಘಟನೆ ಹಾಗೂ ಕೇಂದ್ರದ ಯೋಜನೆಗಳನ್ನು ಸರಿಯಾದ ಮಟ್ಟದಲ್ಲಿ ಜಾರಿಗೆ ತರಲಾಗುತ್ತಿದೆಯಾ ಎಂದು ನೋಡುತ್ತೇನೆ. ಸಚಿವರ ಕಾರ್ಯ ವೈಖರಿಯ ಬಗ್ಗೆ ಪಕ್ಷದ ಕಾರ್ಯಕರ್ತರಿಂದ ಮಾಹಿತಿ ಪಡೆದುಕೊಂಡು, ಅಗತ್ಯ ಬಿದ್ದರೆ, ಸಚಿವರಿಗೆ ಸೂಚನೆ ನೀಡುತ್ತೇನೆ.

– ರಾಜ್ಯ ಬಿಜೆಪಿ ಅಧ್ಯಕ್ಷರ ಕಾರ್ಯವೈಖರಿ ಬಗ್ಗೆ ತೃಪ್ತಿ ಇದೆಯಾ?
ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪಕ್ಷದ ರಾಜಕೀಯ ಚಟುವಟಿಕೆಗಳು ನಿರಂತರ ನಡೆಯುತ್ತಿವೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟಿಸುತ್ತಿದ್ದಾರೆ.

– ಪಕ್ಷದ ರಾಜ್ಯ ನಾಯಕರಿಗೆ ನಿಮ್ಮ ಸಲಹೆ ಏನು ?
ನಾವು ರಾಜ್ಯದ ಯಾವ ಭಾಗದಲ್ಲಿ ದುರ್ಬಲರಾಗಿದ್ದೇವೋ ಆ ಭಾಗದಲ್ಲಿ ಪಕ್ಷ ಬಲವರ್ಧನೆಗೆ ಶ್ರಮಿಸಬೇಕು. ಪ್ರತೀ ಬೂತ್‌ನಲ್ಲಿಯೂ ಕನಿಷ್ಠ 100 ಜನ ಕಾರ್ಯಕರ್ತರಿರಬೇಕು. ಯಾವುದೇ ಪ್ರದೇಶವನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ರಾಜ್ಯದಲ್ಲಿ ಬಿಜೆಪಿಯನ್ನು ಮತ್ತಷ್ಟು ಬಲಗೊಳಿಸಬೇಕು.

– ಪಂಚಾಯತ್‌ ಚುನಾವಣೆಯಲ್ಲಿ  ಪಕ್ಷದ ಸಾಧನೆ ತೃಪ್ತಿ ತಂದಿದೆಯಾ?
ಗ್ರಾಮ ಸ್ವರಾಜ್‌ ಯಾತ್ರೆ ಯಶಸ್ವಿಯಾಗಿ ಮಾಡಿದ್ದರ ಪರಿಣಾಮ ಹಳೇ ಮೈಸೂರು ಭಾಗದಲ್ಲಿಯೂ ಬಿಜೆಪಿ ಬಲಗೊಳ್ಳಲು ಸಾಧ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ, ಅವರು ನೀಡಿರುವ ಜನಧನ್‌, ಪಿಎಂ ಕಿಸಾನ್‌ ಯೋಜನೆ ಹಾಗೂ ಉಚಿತ ಗ್ಯಾಸ್‌ ಯೋಜನೆಗಳು ಗ್ರಾಮೀಣ ಜನರನ್ನು ನೇರವಾಗಿ ತಲುಪಿವೆ.

– ಪರಿಷತ್‌ನಲ್ಲಾದ ಘಟನೆ ಪಕ್ಷಕ್ಕೆ ಮುಜುಗರ ತರಲಿಲ್ಲವೇ?
ಪರಿಷತ್‌ ಘಟನೆ ದುರ್ದೈವ, ಕಾಂಗ್ರೆಸ್‌ ಶಾಸಕರು ಒತ್ತಾಯಪೂರ್ವಕವಾಗಿ ಉಪ ಸಭಾಪತಿಯನ್ನು ಅವರ ಕುರ್ಚಿಯಿಂದ ಎಳೆದು ಹಾಕಿರುವುದು ದೇಶದ ಯಾವುದೇ ಭಾಗದಲ್ಲಿ ನಡೆದಿರಲಿಲ್ಲ. ಇದು ಕಾಂಗ್ರೆಸ್‌ ಸಂಸ್ಕೃತಿ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಈ ಘಟನೆಯನ್ನು ಖಂಡಿಸಲೂ ಇಲ್ಲ. ರಾಜ್ಯಸಭೆಯಲ್ಲಿಯೂ ಕಾಂಗ್ರೆಸ್‌ನ ಕೆಲವು ಸದಸ್ಯರು ನ್ಯೂಸೆನ್ಸ್‌ ಸೃಷ್ಟಿ ಮಾಡಿದ್ದರು. ಅದಕ್ಕೆ ದೇಶದ ಜನರು ಕಾಂಗ್ರೆಸನ್ನು ತಿರಸ್ಕರಿಸಿದ್ದಾರೆ.

– ಕರ್ನಾಟಕದಲ್ಲಿ ಯಡಿಯೂರಪ್ಪ ಇಲ್ಲದೇ ಬಿಜೆಪಿ ಇಲ್ಲ ಎಂಬ ಮಾತಿದೆಯಲ್ಲಾ?
ಯಡಿಯೂರಪ್ಪ ನಮ್ಮ ಪಕ್ಷದ ನಾಯಕರು, ಅವರು ಪವರ್‌ಫ‌ುಲ್‌ ಅಂದರೆ, ಪಕ್ಷ ಪವರ್‌ ಫ‌ುಲ್‌ ಅಲ್ಲವೇ?

ಸಂದರ್ಶನ : ನವೀನ್‌ ಅಮ್ಮೆಂಬಳ/ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next