Advertisement
ಇದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಆಕ್ರೋಶದ ನುಡಿ. ರೈತ ಹೋರಾಟದ ಭದ್ರಕೋಟೆಯಾಗಿದ್ದ ಮಂಡ್ಯ ಜಿಲ್ಲೆಯಲ್ಲಿ ಕುಮಾರಸ್ವಾಮಿ ಕೇಸರಿ ಶಾಲು ಧರಿಸಿ ಹೋರಾಟಕ್ಕೆ ಇಳಿದಿರುವ ವಿಚಾರಕ್ಕೆ ಸಂಬಂಧಪಟ್ಟಂತೆ “ಉದಯವಾಣಿ’ “ನೇರಾನೇರ’ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಂಡ್ರೆಡ್ ಪರ್ಸೆಂಟ್ ಇದೊಂದು ಚಿತಾವಣೆ. ಸ್ಥಳೀಯ ಯುವಕರು ರಾಷ್ಟ್ರಧ್ವಜ ಹಾರಿಸುತ್ತೇವೆ ಎಂದೇ ನಿರ್ಣಯ ಮಾಡಿ ಅನುಮತಿ ಪಡೆದುಕೊಂಡಿದ್ದರು. ಆದರೆ ಬಿಜೆಪಿ ಹಾಗೂ ಜೆಡಿಎಸ್ ಕುಮ್ಮಕ್ಕಿನಿಂದ ಇಷ್ಟು ದೊಡ್ಡದಾಗಿ ಬೆಳೆದಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳೀಯ ಯುವ ಕರ ಜತೆಗೆ ನಾನು ದೂರವಾಣಿಯಲ್ಲಿ ಮಾತನಾಡಿದ್ದೆ. ಎಲ್ಲರೂ ಸೇರಿ ಸಮಸ್ಯೆ ಬಗೆಹರಿಸೋಣ ಎಂದಿದ್ದಕ್ಕೆ ಒಪ್ಪಿಕೊಂಡಿದ್ದರು. ಆದರೆ ಸುಮ್ಮನಾಗಿದ್ದ ಯುವಕರನ್ನು ಕೆರಳಿಸಿದ್ದು ಯಾರು? ರಾಷ್ಟ್ರ ಧ್ವಜ ಹಾರಿಸಿದ ಬಳಿಕ ಶಾಂತಿ ಕಾಪಾಡುವುದು ನಮ್ಮ ಧರ್ಮ. ಆದರೆ ಬೇರೆ ಧ್ವಜ ಹಾರಿಸಲೇ ಬೇಕು ಎಂದು ಪಟ್ಟು ಹಿಡಿಯುವುದರ ಅರ್ಥ ವೇನು? ರಾಷ್ಟ್ರಧ್ವಜವನ್ನು ಕಿತ್ತು ಹಾಕಬೇಕೆ? ಸಂವಿಧಾನದ ಪ್ರಕಾರ ಇದು ಸಾಧ್ಯವೇ? -ಕುಮಾರಸ್ವಾಮಿ, ಸಿ.ಟಿ.ರವಿ ಕೇಸರಿ ಶಾಲು ಹಾಕಿಕೊಂಡು ಮಂಡ್ಯದಲ್ಲಿ ಕಾಣಿಸಿಕೊಂಡಿದ್ದಾರಲ್ಲ?
ಕಾಣಿಸಿಕೊಳ್ಳಲಿ ಬಿಡಿ. ಆದರೆ ಇವರೆಲ್ಲ ಸಮಾಜಕ್ಕೆ ಯಾವ ಸಂದೇಶ ನೀಡಲು ಹೊರಟಿದ್ದಾರೆ? ರಾಷ್ಟ್ರಧ್ವಜ ಹಾರಾಡುತ್ತಿರುವ ಸ್ಥಳದಲ್ಲಿ ವಿವಾದ ಸೃಷ್ಟಿಸಲು ಹೊರಟಿರುವವರಿಗೆ ಪ್ರಜಾ ಪ್ರಭುತ್ವದ ಬಗ್ಗೆ ಕಿಂಚಿತ್ ಗೌರವ ಇದೆಯಾ? ಕುಮಾರಸ್ವಾಮಿಯವರಿಗೆ ದೇವೇಗೌಡರು ಈ ವಿಚಾರದಲ್ಲಿ ಸಲಹೆ ಕೊಟ್ಟಿದ್ದಾರೋ, ಇಲ್ಲವೋ ಗೊತ್ತಿಲ್ಲ. ನಮ್ಮನ್ನು ಈ ರೀತಿ ಟಾರ್ಗೆಟ್ ಮಾಡಿ ದರೆ ಹೆದರುವುದಿಲ್ಲ. ತಾವು ರಾಜ್ಯದಲ್ಲಿ “ಜೀರೋ’ ಆಗಿದ್ದೇನೆಂಬ ಆತಂಕದಲ್ಲಿ ಕುಮಾರಸ್ವಾಮಿ ಈ ರೀತಿ ಮಾಡಬಹುದು. ಆದರೆ ಭಾವನಾತ್ಮಕ ವಿಚಾರದಲ್ಲಿ ನಾವು ವಿವಾದ ಸೃಷ್ಟಿಸುವುದಿಲ್ಲ.
Related Articles
ಅದರಲ್ಲಿ ಬೇರೆ ಏನಾದರೂ ಅನುಮಾನ ಇದೆಯಾ ಸ್ವಾಮಿ? ಮಂಡ್ಯದಲ್ಲಿ ಜೆಡಿಎಸ್‌ಗೆ ಅಭ್ಯರ್ಥಿಗಳೇ ಇಲ್ಲ. ಆದರೆ ಬಿಜೆಪಿ ರಾಷ್ಟ್ರೀಯ ನಾಯಕರು ಮಂಡ್ಯ ಜೆಡಿಎಸ್‌ನ ಭದ್ರಕೋಟೆ ಎಂದು ಭಾವಿಸಿ ಕುಮಾರಸ್ವಾಮಿಯವರಿಗೆ ಕ್ಷೇತ್ರ ಬಿಟ್ಟುಕೊಡುವ ಲೆಕ್ಕಾಚಾರದಲ್ಲಿ ಇದ್ದಾರೆ. ವಾಸ್ತವವಾಗಿ ಇಲ್ಲಿ ಜೆಡಿಎಸ್ ಕತೆ ಬೇರೆ ಇದೆ. ಇಲ್ಲಿನ ಮಾಜಿ ಶಾಸಕರಿಗೆ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿಲ್ಲ. ಪುಟ್ಟರಾಜು, ಅನ್ನದಾನಿ, ಸುರೇಶ್ ಗೌಡ, ರವೀಂದ್ರ ಶ್ರೀಕಂಠಯ್ಯ ಸೇರಿ ದಂತೆ ಎಲ್ಲ ಮಾಜಿ ಶಾಸಕರ ಮಧ್ಯೆ ಹೊಂದಾಣಿಕೆ ಇಲ್ಲ. ಯಾರೇ ನಿಂತರೂ ಅಡ್ಡಪರಿಣಾಮವಾ ಗಬಹುದೆಂದು ಪ್ರತಿಯೊಬ್ಬರಿಗೂ ಕಲ್ಪನೆ ಇದೆ. ಹೀಗಾಗಿ ಕುಮಾರಸ್ವಾಮಿ ಹಾಗೂ ನಿಖೀಲ್ ಕುಮಾರಸ್ವಾಮಿಯವರನ್ನು ಆಹ್ವಾನಿಸುತ್ತಿದ್ದಾರೆ. ಬರುವಾಗ ಸುಮ್ಮನೆ ಬರುವುದಕ್ಕೆ ಸಾಧ್ಯವೇ? ಅದಕ್ಕಾಗಿ ಇಂಥದೆಲ್ಲ ನಾಟಕ ಹೆಣೆಯುತ್ತಿದ್ದಾರೆ.
Advertisement
-ಹಾಗಾದರೆ ನಿಮ್ಮ ಪ್ರಕಾರ ಇಂಥ ಹೋರಾಟ ಅಥವಾ ನೀವೇ ವ್ಯಾಖ್ಯಾನಿಸಿದ ಪ್ರಕಾರ ಚಿತಾವಣೆಗಳಿಂದ ಜೆಡಿಎಸ್‌ಗೆ ಯಾವುದೇ ಪ್ರಯೋಜನವಿಲ್ಲವೇ ?ಖಂಡಿತ ಇಲ್ಲ. ಕುಮಾರಸ್ವಾಮಿಯವರು ಭ್ರಮೆಯಲ್ಲಿ ಇದ್ದಾರೆ. ಬಾವಿಯಲ್ಲಿ ಬಿದ್ದು ಮೇಲೆ ಬರಲಾಗದೇ ಹತಾಶೆಯಲ್ಲಿ ಇದ್ದವರು ಹರಿದು ಹೋಗುವ ಹಗ್ಗವನ್ನೇ ಹಿಡಿದುಕೊಂಡು ನೇತಾಡುತ್ತಾರಲ್ಲ, ಆ ರೀತಿ ಕುಮಾರಸ್ವಾಮಿ ಕೆರಗೋಡು ಪ್ರಕರಣವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಹಿಡಿದು ನೇತಾಡುತ್ತಿದ್ದಾರೆ. ಇದನ್ನು ಹಿಡಿದುಕೊಂಡು ಮೇಲೆ ಬರುವುದಕ್ಕೆ ಸಾಧ್ಯವೇ ಇಲ್ಲ. -ಅಂದರೆ ಲೋಕಸಭಾ ಚುನಾವಣೆಯಲ್ಲೂ ಮಂಡ್ಯದ ಜನ ಕುಮಾರಸ್ವಾಮಿಯವರನ್ನು ಬೆಂಬಲಿಸುವುದಿಲ್ಲ ಎಂಬುದು ನಿಮ್ಮ ವಿಶ್ಲೇಷಣೆಯೇ ?
ಮಂಡ್ಯ ವಿಚಾರದಲ್ಲಿ ಕುಮಾರಸ್ವಾಮಿಯವರಿಗೆ ಒಂದು ಕಡೆ ಧೈರ್ಯವಿದ್ದರೆ ಇನ್ನೊಂದು ಕಡೆ ಭಯವಿದೆ. ಈ ಜಿಲ್ಲೆಯ ಜನ ಕುಮಾರಸ್ವಾಮಿಯವರಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಆದರೆ ಪ್ರತಿಯಾಗಿ ಕುಮಾರಸ್ವಾಮಿ ಮಂಡ್ಯಕ್ಕೆ ಏನು ಕೊಟ್ಟಿದ್ದಾರೆ? ಎಲ್ಲವನ್ನೂ ಇಲ್ಲಿಂದ ಪಡೆದುಕೊಂಡಿದ್ದಾರಷ್ಟೆ. ಕುಮಾರಸ್ವಾಮಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಅವರ ಸರಳತೆಯನ್ನು ಜನರು ಮೆಚ್ಚಿಕೊಂಡಿದ್ದರು. ಮುಂದೆ ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರಿಸದೇ ದ್ರೋಹ ಮಾಡಿದರೂ ಅವರ ಮೇಲಿಟ್ಟ ಗೌರವ ಕಡಿಮೆಯಾಗಿರಲಿಲ್ಲ. 2018ರಲ್ಲಿ ಸಿದ್ದರಾಮಯ್ಯ ವಿರುದ್ಧ ಅಧಿಕಾರಿಗಳನ್ನು ಎತ್ತಿಕಟ್ಟಿ ಜಾತಿ ಆಧಾರಿತ ರಾಜಕಾರಣ ಮಾಡಿ ಹಳೆ ಮೈಸೂರು ಭಾಗದಲ್ಲಿ 37 ಸ್ಥಾನ ಗೆದ್ದರು. ಆದರೆ ಕಾಂಗ್ರೆಸ್ ಜತೆ ಸೇರಿ 14 ತಿಂಗಳು ಸಿಎಂ ಆಗಿದ್ದ ಸಂದರ್ಭದಲ್ಲಿ ತಮ್ಮ ಸ್ವಯಂಕೃತಾಪರಾಧದಿಂದ ಹೆಸರನ್ನು ನಿರ್ನಾಮ ಮಾಡಿಕೊಂಡರು. 8 ಶಾಸಕರನ್ನು ಗೆಲ್ಲಿಸಿಕೊಟ್ಟರೂ ಈ ಜಿಲ್ಲೆಗೆ ಏನೂ ಮಾಡಲಿಲ್ಲ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಅವರ ಮಗ ನನ್ನು ಸೋಲಿಸಿದರು. ಅದೇ ಆತಂಕ ಈಗಲೂ ಕುಮಾರಸ್ವಾಮಿಯವರನ್ನು ಕಾಡುತ್ತಿದೆ. -ಕಳೆದ ಬಾರಿ ನಿಖೀಲ್ ಸೋಲಿಸುವುದಕ್ಕೆ ನೀವೆಲ್ಲ ಸೇರಿ ಸುಮಲತಾ ಅಂಬರೀಷ್ ಅವರನ್ನು ಬೆಂಬಲಿಸಿದ್ದಿರಿ. ಈ ಬಾರಿ ಏನು ?
ಹೌದು. ಕಳೆದ ಬಾರಿ ಅವರು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ನಾವು ಕುಮಾರಸ್ವಾಮಿಯವ ರನ್ನು ಬೆಂಬಲಿಸುವ ಸ್ಥಿತಿಯಲ್ಲಿ ಇರಲಿಲ್ಲ. ಆದರೆ ಆ ಬಳಿಕ ಅವರು ಬಿಜೆಪಿ ಜತೆ ಗುರುತಿಸಿಕೊಂಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರು ಬಹಿರಂಗವಾಗಿಯೇ ಬಿಜೆಪಿ ಪರವಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ಈ ಬಾರಿ ನಾವು ಅವರನ್ನು ಬೆಂಬಲಿಸುವುದಕ್ಕೆ ಸಾಧ್ಯವೇ ಇಲ್ಲ. -ಹಾಗಾದರೆ ಸುಮಲತಾ ಅವರನ್ನು ಕಾಂಗ್ರೆಸ್‌ಗೆ ಕರೆ ತರುತ್ತೀರಾ ?
ಇಲ್ಲ. ಅಂಥ ಯಾವುದೇ ಪ್ರಯತ್ನಗಳು ನಡೆದಿಲ್ಲ. ಕಾಂಗ್ರೆಸ್ ಕಡೆಯಿಂದ ಯಾರೂ ಕೂಡ ಅವರನ್ನು ಸಂಪರ್ಕಿಸಿಲ್ಲ. ಅವರು ಕೂಡ ನಮ್ಮನ್ನು ಸಂಪರ್ಕಿಸಿಲ್ಲ. ವೈಯಕ್ತಿಕ ಸ್ನೇಹ-ವಿಶ್ವಾಸ ಗಳು ಬೇರೆ. ನಾನು ಬಿಜೆಪಿಯಿಂದ ಸ್ಪರ್ಧಿಸುತ್ತೇನೆ ಎಂದು ಅವರೇ ಹೇಳಿದ್ದಾರೆ. ಬಿಜೆಪಿ ಸ್ಥಳೀಯ ಮುಖಂಡರ ಜತೆಗೆ ಸಭೆ ನಡೆಸಿದ್ದಾರೆ. -ನೀವು ಮಂಡ್ಯದಿಂದ ಬೇರೆ “ನಾಟಿ’ ಅಭ್ಯರ್ಥಿ ಸ್ಪರ್ಧಿಸುತ್ತಾರೆ ಎಂದು ಹೇಳಿದ್ದೀರಿ. ಅದರ ಅರ್ಥವೇನು ?
ನಾನು ಸ್ಥಳೀಯರೇ ಸ್ಪರ್ಧಿಸುತ್ತಾರೆ ಎಂಬ ಅರ್ಥದಲ್ಲಿ ಆ ಶಬ್ದ ಬಳಕೆ ಮಾಡಿದ್ದೇನೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಮೂರು ಜನರ ಹೆಸರು ಪಟ್ಟಿಯಲ್ಲಿದೆ. -ಅಚ್ಚರಿ ಅಭ್ಯರ್ಥಿಯಾಗಿ ರಮ್ಯಾ ಕಣಕ್ಕೆ ಇಳಿಯುತ್ತಾರಾ ?
ಇಲ್ಲ, ಆ ತರದ ಯಾವುದೇ ಬೆಳವಣಿಗೆಯಾಗಿಲ್ಲ. ಹೈಕಮಾಂಡ್ ಸೂಕ್ತ ಹಾಗೂ ಸಮರ್ಥ ವ್ಯಕ್ತಿಯನ್ನು ಕಣಕ್ಕೆ ಇಳಿಸುತ್ತದೆ. ಅವರು ಸ್ಥಳೀಯರೇ ಆಗಿರುತ್ತಾರೆ ಎಂದು ಮಾತ್ರ ಹೇಳಬಲ್ಲೆ. -ನಿಮ್ಮ ಶ್ರೀಮತಿಯವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಲಾಗುತ್ತಿದೆ ಎಂಬ ಮಾತು ದಟ್ಟವಾಗಿದೆಯಲ್ಲ? ಅಂಥ ಮಾತುಕತೆಗಳೇನಾದರೂ ನಡೆದಿವೆಯಾ?
ಇಲ್ಲ, ಇಲ್ಲ, ಇಲ್ಲ. ಆ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಮ್ಮ ಕುಟುಂಬದಿಂದ ಯಾರೂ ಕೂಡ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಹೈಕಮಾಂಡ್ ಸದ್ಯದಲ್ಲೇ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತದೆ. ಉದಯವಾಣಿ ಸಂದರ್ಶನ
~ ರಾಘವೇಂದ್ರ ಭಟ್