Advertisement

ಅಂತಾರಾಜ್ಯ ಟ್ವೆಂಟಿ-20: ದಕ್ಷಿಣ ವಲಯ ಕರ್ನಾಟಕಕ್ಕೆ 14 ರನ್‌ ಗೆಲುವು

03:45 AM Feb 03, 2017 | Team Udayavani |

ಚೆನ್ನೈ: ಮಯಾಂಕ್‌ ಅಗರ್ವಾಲ್‌ ಮತ್ತು ಶ್ರೀನಾಥ್‌ ಅರವಿಂದ್‌ ಅವರ ನೆರವಿನಿಂದ ಕರ್ನಾಟಕ ತಂಡವು ಅಂತಾರಾಜ್ಯ ಟ್ವೆಂಟಿ-20 ಕೂಟದ ದಕ್ಷಿಣ ವಲಯ ವಿಭಾಗದಲ್ಲಿ ಹೈದರಾಬಾದ್‌ ತಂಡದೆದುರು 14 ರನ್ನುಗಳ ಜಯ ಸಾಧಿಸಿದೆ.

Advertisement

ಚೆನ್ನೈಯ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕರ್ನಾಟಕ ತಂಡವು ಮಯಾಂಕ್‌ ಅಗರ್ವಾಲ್‌ ಅವರ ಜವಾಬ್ದಾರಿಯ ಆಟದಿಂದಾಗಿ 7 ವಿಕೆಟಿಗೆ 148 ರನ್‌ ಗಳಿಸಿತು. ಇದಕ್ಕುತ್ತರವಾಗಿ ಹೈದರಾಬಾದ್‌ (ಇಂಡಿಯಾ) ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟಿಗೆ 134 ರನ್‌ ಗಳಿಸಲಷ್ಟೇ ಶಕ್ತವಾಗಿ ಸೋಲನ್ನು ಒಪ್ಪಿಕೊಂಡಿತು.

ಹೈದರಾಬಾದ್‌ನ ಆರಂಭ ಉತ್ತಮವಾಗಿತ್ತು. ಆರಂಭಿಕರು ಮೊದಲ ವಿಕೆಟಿಗೆ 8.3 ಓವರ್‌ಗಳಲ್ಲಿ 66 ರನ್‌ ಪೇರಿಸಿದ್ದರು. ಆದರೆ ಈ ಜೋಡಿ ಮುರಿದ ಬಳಿಕ ತಂಡದ ರನ್‌ವೇಗಕ್ಕೆ ಬ್ರೇಕ್‌ ಬಿತ್ತು. ಕರ್ನಾಟಕದ ಶ್ರೀನಾಥ್‌ ಅರವಿಂದ್‌, ವಿನಯ್‌ ಮತ್ತು ಸುಚಿತ್‌ ನಿಖರವಾಗಿ ದಾಳಿ ಸಂಘಟಿಸಿದ್ದರಿಂದ ಹೈದರಾಬಾದ್‌ ಒತ್ತಡಕ್ಕೆ ಬಿತ್ತು. ಅಂತಿಮವಾಗಿ 14 ರನ್ನುಗಳಿಂದ ಶರಣಾಯಿತು.

ವಿನಯ್‌ ತನ್ನ 4 ಓವರ್‌ಗಳ ದಾಳಿಯಲ್ಲಿ 26 ರನ್‌ ನೀಡಿದರೆ ಅರವಿಂದ್‌ 25 ರನ್ನಿಗೆ 3 ಹಾಗೂ ಸುಚಿತ್‌ 18 ರನ್ನಿಗೆ 2 ವಿಕೆಟ್‌ ಕಿತ್ತು ಮಿಂಚಿದರು.

ಈ ಮೊದಲು ಅಗರ್ವಾಲ್‌ ಅವರ ಏಕಾಂಗಿ ಹೋರಾಟದಿಂದ ಕರ್ನಾಟಕ ಸಾಧಾರಣ ಮೊತ್ತ ದಾಖಲಿಸುವಂತಾಯಿತು. ಅವರಿಗೆ ಉಳಿದ ಯಾವುದೇ ಆಟಗಾರ ಉತ್ತಮ ಬೆಂಬಲ ನೀಡಲಿಲ್ಲ. ನಾಲ್ಕನೇ ವಿಕೆಟಿಗೆ ಪವನ್‌ ದೇಶಪಾಂಡೆ ಜತೆ 63 ರನ್ನುಗಳ ಜತೆಯಾಟ ನಡೆಸಿದ್ದ ಅಗರ್ವಾಲ್‌ ತಂಡವನ್ನು ಆರಂಭಿಕ ಕುಸಿತದಿಂದ ಪಾರು ಮಾಡಿದರು. ಇವರಿಬ್ಬರನ್ನು ಬಿಟ್ಟರೆ ಉಳಿದವರು ಬ್ಯಾಟಿಂಗ್‌ನಲ್ಲಿ ವೈಫ‌ಲ್ಯ ಅನುಭವಿಸಿದರು. ದೇಶಪಾಂಡೆ 32 ರನ್‌ ಹೊಡೆದರೆ ಏಳನೆಯವರಾಗಿ ಔಟಾದ ಅಗರ್ವಾಲ್‌ 55 ಎಸೆತಗಳಿಂದ 7 ಬೌಂಡರಿ ನೆರವಿನಿಂದ 65 ರನ್‌ ಗಳಿಸಿದ್ದರು.

Advertisement

ಸಂಕ್ಷಿಪ್ತ ಸ್ಕೋರು: ಕರ್ನಾಟಕ 7 ವಿಕೆಟಿಗೆ 148 (ಮಯಾಂಕ್‌ ಅಗರ್ವಾಲ್‌ 65, ಪವನ್‌ ದೇಶಪಾಂಡೆ 32, ಮೆಹದಿ ಹಸನ್‌ 16ಕ್ಕೆ 3, ಚಮ ಮಿಲಿಂದ್‌ 19ಕ್ಕೆ 2); ಹೈದರಾಬಾದ್‌ (ಇಂಡಿಯಾ) 8 ವಿಕೆಟಿಗೆ 134 (ತನ್ಮಯ್‌ ಅಗರ್ವಾಲ್‌ 22, ಅಕ್ಷತ್‌ ರೆಡ್ಡಿ 42, ಎಸ್‌. ಬದ್ರಿನಾಥ್‌ 37 ಔಟಾಗದೆ, ಬಾಲಚಂದರ್‌ ಅನಿರುದ್ಧ್ 22, ಶ್ರೀನಾಥ್‌ ಅರವಿಂದ್‌ 25ಕ್ಕೆ 3, ಜಗದೀಶ್‌ ಸುಚಿತ್‌ 18ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next