ಕಾಪು : ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾದೂರು ಗ್ರಾಮದ ಐ.ಎಸ್.ಪಿ.ಆರ್.ಎಲ್ ಯೋಜನೆಯ 2 ನೇ ಹಂತದ ಯೋಜನೆಯ 210 ಎಕ್ರೆ ಭೂಸ್ವಾಧೀನ ಪ್ರಕ್ರಿಯೆಗೆ ಹಲವು ತಿಂಗಳ ಹಿಂದೆ ಚಾಲನೆ ದೊರಕಿದ್ದು, ಯಾರಿಗೂ ಮಾಹಿತಿ ನೀಡದೇ ಏಕಾಏಕಿಯಾಗಿ ಸರ್ವೆ ಗೆ ಮುಂದಾದ ಕೆಎಐಡಿಬಿ ಅಧಿಕಾರಿಗಳಿಗೆ ಸ್ಥಳೀಯರು ತಡೆಯೊಡ್ಡಿದ್ದಾರೆ.
ಪಾದೂರು ಯೋಜನೆಯ ಎರಡನೇ ಹಂತದ ವಿಸ್ತರಣೆಗಾಗಿ ಭೂಮಿ ಕಳೆದುಕೊಳ್ಳುವ ಭೂಸಂತ್ರಸ್ತರು ಪಾದೂರು ಗ್ರಾಮದ ಭೂಮಿಯ ಮೌಲ್ಯ ಕಡಿಮೆ ಇರುವುದರಿಂದ ಪಕ್ಕದ ಗ್ರಾಮದ ಭೂಮಿಯ ಮೌಲ್ಯವನ್ನು ಪರಿಗಣಿಸಿ, ಬಳಿಕಷ್ಟೇ ಜೆಎಂಸಿ ಸರ್ವೇ ನಡೆಸಬೇಕೆಂದು ಆಗ್ರಹಿಸಿದ್ದರು.
ಈ ಬಗ್ಗೆ ಶಾಸಕ ಲಾಲಾಜಿ ಆರ್. ಮೆಂಡನ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ , ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಶಿಲ್ಪಾ ಜಿ. ಸುವರ್ಣ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಶಶಿಪ್ರಭಾ ಶೆಟ್ಟಿ, ಸ್ಥಳೀಯ ಗ್ರಾಮ ಪಂಚಾಯತ್ ಹಾಗೂ ಜನಜಾಗೃತಿ ಮತ್ತು ಜನಹಿತ ಸಮಿತಿ ಹಲವಾರು ಬಾರಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದು, ಜಿಲ್ಲಾಧಿಕಾರಿಗಳು ಈ ಬಗ್ಗೆ ವಿಶೇಷ ಸಭೆ ನಡೆಸುವ ಬಗ್ಗೆ ಭರವಸೆ ನೀಡಿದ್ದರು.
ಆದರೆ ಮಂಗಳವಾರ ಕೆಎಐಡಿಬಿ ಅಧಿಕಾರಿಗಳು ಏಕಾಏಕಿ ಗ್ರಾಮ ಪಂಚಾಯತ್ ಗೂ ಹಾಗೂ ಪೋಲಿಸ್ ಠಾಣೆಗೂ ಯಾವುದೇ ಮಾಹಿತಿಯನ್ನು ನೀಡದೆ ಸರ್ವೇ ಕಾರ್ಯ ಆರಂಭಿಸಿದ್ದನ್ನು ಕಂಡ ಸಿಟ್ಟಾದ ಗ್ರಾಮಸ್ಥರು ಸರ್ವೆ ಕಾರ್ಯಕ್ಕೆ ತಡೆಯೊಡ್ಡಿ ಕೆಐಎಡಿಬಿ ಅಧಿಕಾರಿಗಳನ್ನು ವಾಪಾಸು ಕಳಿಸಿರುವ ಘಟನೆ ನಡೆದಿದೆ.
ಈ ಸಂದರ್ಭದಲ್ಲಿ ಮಜೂರು ಗ್ರಾ.ಪಂ ಉಪಾಧ್ಯಕ್ಷರಾದ ಮಧುಸೂಧನ್ ಸಾಲ್ಯಾನ್ , ಮಜೂರು ಗ್ರಾ.ಪಂ ಸದಸ್ಯರಾದ ಸಂದೀಪ್ ರಾವ್ , ಪ್ರಸಾದ್ ಶೆಟ್ಟಿ ವಳದೂರು, ಜನಹಿತ ಸಮಿತಿ ಅಧ್ಯಕ್ಷ ಸುರೇಂದ್ರ ಜೈನ್ , ಸದಸ್ಯರಾದ ಮೇವಿಸ್ ಕೋರ್ಡ , ಮೇಬುಲ್ ಕೋರ್ಡ, ಪ್ರಶಾಂತ್ ರಾವ್, ರಾಘವೇಂದ್ರ ಆಚಾರ್ಯ , ರಿಚ್ಚರ್ಡ್ ಕೋರ್ಡ ಮುಂತಾದ ಸ್ಥಳೀಯರು ಹಾಗೂ ಭೂ ಸಂತ್ರಸ್ತರು ಉಪಸ್ಥಿತರಿದ್ದರು.