ಚಂದಾದಾರರ ಖಾಸಗಿ ಮಾಹಿತಿಗಳು ಸೋರಿಕೆಯಾಗುವ ಆರೋಪಕ್ಕೆ ಗುರಿಯಾಗಿರುವ ಮತ್ತು ಕೆಲವೊಂದು ಪ್ರೈವೆಸಿ ನಿಯಮಾವಳಿಗಳ ಬದಲಾವಣೆ ಹಿನ್ನೆಲೆಯಲ್ಲಿ ವಾಟ್ಸ್ ಆ್ಯಪ್ ಈಗ ಸುದ್ದಿಯಲ್ಲಿದೆ. ಇದಕ್ಕೆ ಪರ್ಯಾಯ ವಾಗಿ ಇತರ ಆ್ಯಪ್‌ಗ್ಳನ್ನು ಬಳಸಬೇಕು ಎಂಬ ಒಂದಷ್ಟು ವಾದಗಳು ಕೇಳಿ ಬರತೊಡಗಿವೆ. ಆದರೆ ವಾಟ್ಸ್‌ಆ್ಯಪ್ ಅನೇಕ ವರ್ಷಗಳಿಂದ ಭಾರತದಲ್ಲಿ ಉತ್ತಮ ಹಿಡಿತವನ್ನು ಕಾಯ್ದುಕೊಂಡಿದೆ. ಪರಿಣಾಮವಾಗಿ 2019ರ ಮಧ್ಯಭಾಗದಲ್ಲಿ ಇದು 40 ಕೋಟಿಗೂ ಹೆಚ್ಚು ಬಳಕೆದಾರರನ್ನು ಸಂಪಾದಿಸಿತ್ತು. ಆ ಸಮಯದಲ್ಲಿ ವಾಟ್ಸ್‌ಆ್ಯಪ್‌ಗೆ ಯೂಟ್ಯೂಬ್ ನಿಕಟ ಪ್ರತಿಸ್ಪರ್ಧಿ ಆಗಿತ್ತು. ಅದು ಭಾರತದಲ್ಲಿ ಸುಮಾರು 26 ಕೋಟಿ ಬಳಕೆದಾರರನ್ನು ಹೊಂದಿತ್ತು. ಈಗ ಯೂಟ್ಯೂಬ್ ಬಳಕೆದಾರರ ಸಂಖ್ಯೆ ವೇಗವಾಗಿ ಹೆಚ್ಚಾಗಿದೆ. ವರದಿಯೊಂದರ ಪ್ರಕಾರ 2020ರ ಡಿಸೆಂಬರ್‌ನಲ್ಲಿ ಭಾರತದಲ್ಲಿ ಆಂಡ್ರಾಯ್ಡ್ ಫೋನ್ ಮತ್ತು ಟ್ಯಾಬ್ಲೆಟ್‌ಗಳಲ್ಲಿ 42.5 ಕೋಟಿ ಸಕ್ರಿಯ ಯೂಟ್ಯೂಬ್ ಬಳಕೆದಾರರು ಇದ್ದರು. ಇದೇ ವೇಳೆ ವ್ಯಾಟ್ಸ್‌ಆ್ಯಪ್ ಬಳಕೆದಾರರ ಸಂಖ್ಯೆ 42.2 ಕೋಟಿ ಆಗಿತ್ತು.
45.9 ಕೋಟಿ ಸಕ್ರಿಯ ವಾಟ್ಸ್‌ಆ್ಯಪ್ ಬಳಕೆದಾರರು :
ವ್ಯಾಟ್ಸ್‌ಆ್ಯಪ್ ಈಗ ಭಾರತದಲ್ಲಿ 45.9 ಕೋಟಿ ಸಕ್ರಿಯ ಬಳಕೆದಾರರನ್ನು ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದೆ. ಪ್ರತಿಸ್ಪರ್ಧಿ ಯೂಟ್ಯೂಬ್ ಕೂಡ ತೀವ್ರ ಪೈಪೋಟಿ ನೀಡಿದ್ದು 45.2 ಕೋಟಿ ಬಳಕೆದಾರರನ್ನು ಹೊಂದಿದೆ. ವರದಿಯ ಪ್ರಕಾರ ಯೂ ಟ್ಯೂಬ್ ಮತ್ತು ವ್ಯಾಟ್ಸ್‌ಆ್ಯಪ್ ಬಳಕೆದಾರರ ಸಂಖ್ಯೆ ಶೀಘ್ರದಲ್ಲಿಯೇ 50 ಕೋಟಿ ತಲುಪಬಹುದು.
60ಕೋಟಿ ಇಂಟರ್ನೆಟ್ ಬಳಕೆದಾರರು :
ಭಾರತ 2010ರಲ್ಲಿ ಭಾರತದಲ್ಲಿ ಸುಮಾರು 5 ಕೋಟಿ ಇಂಟರ್ನೆಟ್ ಬಳಕೆದಾರರನ್ನು ಹೊಂದಿತ್ತು. ಆದರೆ 2020ರ ಅಂತ್ಯದ ವೇಳೆಗೆ ಈ ಸಂಖ್ಯೆ 60 ಕೋಟಿಗಳಿಗೆ ತಲುಪಿದ್ದು ಇಂಟರ್ನೆಟ್ ಬಳಕೆದಾರರ ಸಂಖ್ಯೆ ಈ ಪರಿ ಏರಿಕೆ ಕಾಣಲು ಗೂಗಲ್ ಮತ್ತು ಫೇಸ್‌ಬುಕ್‌ನ ಪಾತ್ರ ಅತೀ ಮಹತ್ವದ್ದಾಗಿದೆ. 400 ರೈಲ್ವೇ ನಿಲ್ದಾಣಗಳಿಗೆ ವೈ-ಫೈ ಸಂಪರ್ಕ ಒದಗಿಸುವ ಯೋಜನೆಯನ್ನು ಗೂಗಲ್ ಕೈಗೆತ್ತಿಕೊಂಡಿದೆ. ಅಲ್ಲದೆ ಇದನ್ನು ಇತರ ಸಾರ್ವಜನಿಕ ಸ್ಥಳಗಳಿಗೆ ತಲುಪಿಸುವ ನಿಟ್ಟಿನಲ್ಲಿಯೂ ಕಾರ್ಯಪ್ರವೃತ್ತವಾಗಿದೆ. ಫೇಸ್‌ಬುಕ್ ಭಾರತದಲ್ಲಿ ಫ್ರೀ ಬೇಸಿಕ್ಸ್ ಅನ್ನು ಪ್ರಾರಂಭಿಸಿದೆ. ಆದರೆ ಇದನ್ನು ಭಾರತದಲ್ಲಿ ನಿಷೇಧಿಸಿದಾಗ ಕಂಪೆನಿಯು ಎಕ್ಸ್‌ಪ್ರೆಸ್ ವೈ-ಫೈ ಅನ್ನು ಪ್ರಾರಂಭಿಸಿತು. ಇತ್ತೀಚೆಗೆ ಈ ಎರಡೂ ಕಂಪೆನಿಗಳು ಮುಖೇಶ್ ಅಂಬಾನಿಯ ಸಂಸ್ಥೆಯ ಜಿಯೋ ಪ್ಲಾಟ್‌ಫಾರ್ಮ್ ಗಳಲ್ಲಿ ಹೂಡಿಕೆ ಮಾಡಿವೆ. ಜಿಯೋ ದೇಶದಲ್ಲಿ 40 ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿದೆ.
100% ಬಳಕೆ :
ದೇಶದಲ್ಲಿ ವಾಟ್ಸ್‌ಆ್ಯಪ್ ಶೇ.100 ಬಳಕೆದಾರ ಸಕ್ರಿಯ ಅಪ್ಲಿಕೇಶನ್ ಆಗಿದೆ. ಭಾರತದಲ್ಲಿ ವಾಟ್ಸ್‌ಆ್ಯಪ್ ಡೌನ್‌ಲೋಡ್ ಈಗ ನಿಧಾನವಾಗಿದ್ದರೂ ಹಳೆಯ ಬಳಕೆದಾರರು ಅದರ ಮೇಲೆ ಇನ್ನೂ ನಂಬಿಕೆ ಉಳಿಸಿಕೊಂಡಿದ್ದಾರೆ. ಭಾರತದಲ್ಲಿ ಅದರ ಮಾಸಿಕ ಶೇ. 95ಕ್ಕಿಂತ ಹೆಚ್ಚು ಸಕ್ರಿಯ ಬಳಕೆದಾರರು ಪ್ರತೀ ದಿನ ವಾಟ್ಸ್‌ಆ್ಯಪ್ ಅನ್ನು ಬಳಸುತ್ತಾರೆ. ಇಷ್ಟಲ್ಲದೇ ಶೇ. 100 ವಾಟ್ಸ್‌ಆ್ಯಪ್ ಬಳಕೆದಾರರು ವಾರಕ್ಕೊಮ್ಮೆಯಾದರೂ ಇದನ್ನು ಬಳಸುತ್ತಾರೆ. ಅದೇ ಸಮಯದಲ್ಲಿ ಭಾರತದಲ್ಲಿ ಯೂಟ್ಯೂಬ್‌ನ ಒಟ್ಟು ಬಳಕೆದಾರರಲ್ಲಿ ಮೂರರಲ್ಲಿ ನಾಲ್ಕು ಭಾಗದಷ್ಟು ಜನರು ಇದನ್ನು ಪ್ರತೀ ದಿನ ಬಳಸುತ್ತಾರೆ.
32.5 ಕೋಟಿ : ಫೇಸ್‌ಬುಕ್ ಸಕ್ರಿಯ ಬಳಕೆದಾರರು :
ಹೆಚ್ಚಿನ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಇನ್‌ಬಿಲ್ಟ್ ಆಗಿ ಗೂಗಲ್ ಕೆಲಸ ಮಾಡುತ್ತದೆ. ಇತ್ತೀಚಿನ ತಿಂಗಳುಗಳಲ್ಲಿ ಭಾರತದಲ್ಲಿ ಕ್ರೋಮ್ ಮತ್ತು ಯೂಟ್ಯೂಬ್ ಮಾಸಿಕ ಸಕ್ರಿಯ ಬಳಕೆದಾರರ ಪ್ರಮಾಣ 40 ಕೋಟಿಗಳನ್ನು ಮೀರಿದೆ. ಕಳೆದ ತಿಂಗಳು ದೇಶದಲ್ಲಿ ಸುಮಾರು 32.5 ಕೋಟಿಗಳಷ್ಟು ಮಂದಿ ಫೇಸ್‌ಬುಕ್‌ನ ಸಕ್ರಿಯ ಬಳಕೆದಾರರಾಗಿದ್ದರು.
ಮಾರುಕಟ್ಟೆ ಆದಾಯದ ಶೇ. 43ರಷ್ಟು ಪಾಲು :
ಸಂಶೋಧನ ವರದಿ “ಮೀಡಿಯಾ ಪಾರ್ಟ್‌ನರ್ ಏಷ್ಯಾ’ ಅಂದಾಜಿನ ಪ್ರಕಾರ ಕಳೆದ ವರ್ಷ ಭಾರತದಲ್ಲಿ ಆನ್‌ಲೈನ್ ವೀಡಿಯೋ ಮಾರುಕಟ್ಟೆ ಆದಾಯದಲ್ಲಿ ಯೂಟ್ಯೂಬ್ ಶೇ. 43ರಷ್ಟು ಪಾಲನ್ನು ಹೊಂದಿದೆ. ಡಿಸ್ನಿ + ಹಾಟ್‌ಸ್ಟಾರ್ ಶೇ. 16 ಮತ್ತು ನೆಟ್‌ಫ್ಲಿಕ್ಸ್ ಶೇ. 14ರಷ್ಟು ಗಳಿಕೆಯನ್ನು ಹೊಂದಿದೆ.